ಗುಬ್ಬಿ ಪಟ್ಟಣದ ಹೊರವಲಯದ ರಾಯವಾರ ಗ್ರಾಮದ ಮನೆಯೊಂದರ ಬಳಿ ಚಿರತೆ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗುಬ್ಬಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರಲ್ಲಿ ಆತಂಕ ಮೂಡಿದೆ.
ರಾಯವಾರ ಗ್ರಾಮದ ವರುಣ್ ಎಂಬುವವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಾ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಚಿರತೆ ಹಾವಳಿ ಹೆಚ್ಚಾಗಿದ್ದು, ಕುರಿ, ಮೇಕೆ, ದನಕರು ಹಾಗೂ ಸಾಕು ನಾಯಿಗಳು ನಾಪತ್ತೆಯಾಗುತ್ತಿರುವ ಘಟನೆಗಳಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇದೀಗ ಪಟ್ಟಣದ ಸಮೀಪವೇ ಚಿರತೆ ಓಡಾಟ ಕಂಡುಬಂದಿರುವುದು ನಾಗರಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಚಿರತೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.





