ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗೋಮೂತ್ರ ಹಾಗೂ ಗಂಗಾಜಲದಿಂದ ಶುದ್ಧೀಕರಿಸಿದ ಕ್ರಮವನ್ನು ಖಂಡಿಸಿ, ಈ ಕೃತ್ಯ ಎಸಗಿದವರನ್ನು ಬಂಧಿಸಬೇಕು ಹಾಗೂ ಇದನ್ನು ಪ್ರಶ್ನಿಸಿದ ಸಂಸದ ರಾಹುಲ್‌ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಇಕ್ಬಾಲ್ ಅಹಮದ್, ದೇಶದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿದ್ದರೂ ಉತ್ತರಾಖಂಡದಲ್ಲಿ ನಡೆದಿರುವ ಘಟನೆ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯ ನಾಯಕರನ್ನೇ ಗುರಿಯಾಗಿಸಿಕೊಂಡು ಇಂತಹ ಕೃತ್ಯ ಎಸಗಿರುವುದು ಸಂಬಂಧಪಟ್ಟವರ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿ ಮತ್ತು ದೌರ್ಜನ್ಯ ನಡೆಯುತ್ತಿದ್ದು, ದೇಶವನ್ನು ಮತ್ತೊಂದು ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.
ದ್ವೇಷದ ರಾಜಕಾರಣ ಹಾಗೂ ಒಡೆದು ಆಳುವ ನೀತಿಯನ್ನು ಪ್ರಶ್ನಿಸುತ್ತಿರುವ ರಾಹುಲ್‌ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಉತ್ತರಾಖಂಡ ಸರ್ಕಾರ ಕೂಡಲೇ ಎಫ್‌ಐಆರ್ ರದ್ದುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ ಅವರು, ಯಾವುದೇ ನೋಟಿಸ್ ನೀಡದೆ ಸರ್ಕಾರಿ ಕಚೇರಿಗಳ ಮೇಲೆ ತಪಾಸಣೆ ನಡೆಸುವುದು ಹಾಗೂ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ, ಇಡಿ, ಸಿಬಿಐ ಮೂಲಕ ದಾಳಿ ನಡೆಸುವುದು ಸೇಡಿನ ರಾಜಕಾರಣದ ಭಾಗವಾಗಿದೆ ಎಂದು ಆರೋಪಿಸಿದರು.
ಗ್ರಾಮಾಂತರ ಮುಖಂಡ ಷಣ್ಮುಗಪ್ಪ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ ಚುನಾವಣೆ ಮುಗಿದ ನಂತರವೂ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮುಂದುವರಿಸುತ್ತಿದೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕರ ಮೇಲೆ ಐಟಿ, ಇಡಿ ದಾಳಿಗಳ ಮೂಲಕ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಅಸ್ಪೃಶ್ಯತೆ ಕಾನೂನುಬಾಹಿರವಾಗಿದ್ದರೂ ಅದನ್ನು ಪ್ರಶ್ನಿಸಿದ ರಾಹುಲ್‌ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದರು.
ಬಿಜೆಪಿಯ ಇಂತಹ ವರ್ತನೆ ಮುಂದಿನ ದಿನಗಳಲ್ಲಿ ಅವರಿಗೆ ಮುಳುವಾಗಲಿದೆ. ಮುಂದಿನ ಚುನಾವಣೆಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರೇವಣ್ಣ ಸಿದ್ದಯ್ಯ, ಗುರುಪ್ರಸಾದ್, ಎಚ್.ಸಿ. ಹನುಮಂತಯ್ಯ, ಶೆಟ್ಟಿಹಳ್ಳಿ ಭಾಗ್ಯಮ್ಮ, ಸೌಭಾಗ್ಯಮ್ಮ, ನಯಾಜ್, ಫೈಯಾಜ್, ಇನಾಯತ್, ಜಿಯಾವುಲ್ಲಾ, ಇರ್ಫಾನ್, ಸುರೇಶ್, ವಿಜಯಗೌಡ, ಜೆಪ್ರುಲ್ಲಾ, ಸೇವಾದಳದ ಅಧ್ಯಕ್ಷ ಬೈಲಸ್ವಾಮಿ, ಅಮ್ಜಾದ್‌ವುಲ್ಲಾ, ಅಂಬರೀಷ್, ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಭಾನುಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಕೆಲಕಾಲ ಟೌನ್‌ಹಾಲ್ ಮುಂಭಾಗದಲ್ಲಿ ಧರಣಿ ನಡೆಸಿ, ರಾಹುಲ್‌ಗಾಂಧಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿದರು.





