ಜನ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ ಜನಪರ ನೀತಿಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನವೆಂಬರ್ 26 ರಿಂದ 28 ರವರೆಗೆ ಮಹಾಧರಣಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ವೆಂಕಟೇಗೌಡ ತಿಳಿಸಿದ್ದಾರೆ.
ತುಮಕುರು ಜಿಲ್ಲೆಯ ಗುಬ್ಬಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ದೆಹಲಿಯಲ್ಲಿ ಸತತ 13 ತಿಂಗಳ ಕಾಲ ರೈತರು ಐತಿಹಾಸಿಕ ಹೋರಾಟ ನಡೆಸಿದ್ದರು. ಹೋರಾಟದ ಪರಿಣಾಮ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೂ ಕನಿಷ್ಠ ಬೆಂಬಲ ಬೆಲೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವು ರೈತರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ.
“ಸರ್ಕಾರದ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ ಸುಳಿಗೆ ಸಿಲುಕಿಸಿದೆ. ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ಕೃಷಿ ಆರ್ಥಿಕ ಬಿಕಟ್ಟಿನಲ್ಲಿ ಸಾಗುತ್ತಿದೆ. ಹಾಗಾಗಿ ದೇಶದ ಸಂಪತ್ತನ್ನು ಸಂರಕ್ಷಿಸಿ ಜನರ ಬದುಕು ಉಳಿಸಲು ಜನಪರ ನೀತಿಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನವಂಬರ್ 26 ರಿಂದ 28 ರವರೆಗೆ ಮೂರು ದಿನಗಳವರೆಗೆ ದೇಶಾದ್ಯಂತ ಎಲ್ಲ ರಾಜಭವನಗಳ ಮುಂದೆ ಸಂಯುಕ್ತ ಕಿಸನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮಹಾಧರಣಿ ನಡೆಸುತ್ತಿವೆ. ಇದರ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಹಾಧರಣಿ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ಶಿವಕುಮಾರ್, ಯತೀಶ್, ಜಗದೀಶ್, ಶಿವಣ್ಣ, ಮಹದೇವು ಇನ್ನಿತರರು ಇದ್ದರು.