ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾದಿಗ ಸಮುದಾಯದ ಯುವಕ ಸಿಂಹಾದ್ರಿ ಹತ್ಯೆ ಪ್ರಕರಣ ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಂಹಾದ್ರಿ ಕುಟುಂಬದವರು ಮಾಡಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ಅವರು ಹೆಸರಿಸಿರುವ ಐವರನ್ನೂ ಎಫ್‌ಐಆರ್‌ನಲ್ಲಿ ಸೇರಿಸಿ ವಿಚಾರಣೆ ನಡೆಸಬೇಕು ಎಂದು ನಾಯಕ ಸಮುದಾಯದ ಮುಖಂಡರು, ಜನಪರ ಸಂಘಟನೆಗಳ ಪ್ರಮುಖರು ಹಾಗೂ ಅಧ್ಯಾಪಕರ ತಂಡ ಒತ್ತಾಯಿಸಿದೆ.
ಭಾನುವಾರ ಸಿಂಹಾದ್ರಿ ಅವರ ಮನೆಗೆ ಭೇಟಿ ನೀಡಿದ ತಂಡ, ಕುಟುಂಬಸ್ಥರಿಂದ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿತು. ದುಃಖದಲ್ಲಿದ್ದ ಸಿಂಹಾದ್ರಿ ಅವರ ತಾಯಿಗೆ ಸಾಂತ್ವನ ಹೇಳಿ, “ಈ ಸಂಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ನಾವಿದ್ದೇವೆ” ಎಂದು ಧೈರ್ಯ ತುಂಬಿತು.
ಕುಟುಂಬಸ್ಥರ ಪ್ರಕಾರ, ಹತ್ಯೆಯ ಹಿಂದೆ ಇನ್ನೂ ಕೆಲವರ ಕೈವಾಡವಿರುವ ಶಂಕೆಯಿದ್ದು, ಕುಟುಂಬದವರು ಹೆಸರಿಸಿರುವ ಐವರನ್ನೂ ಪ್ರಕರಣದ ತನಿಖೆಯ ವ್ಯಾಪ್ತಿಗೆ ತರಬೇಕು. ಪ್ರಕರಣದಲ್ಲಿ ಯಾವುದೇ ವ್ಯಕ್ತಿ ತಪ್ಪಿತಸ್ಥನಾಗಿದ್ದರೆ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಘಟನೆಯ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆಯ ಕುರಿತು ಕುಟುಂಬಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಣೇಶ ವಿಸರ್ಜನೆ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಇರಲಿಲ್ಲ. ಪೊಲೀಸರ ವೈಫಲ್ಯ ಮತ್ತು ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎಂಬುದು ಕುಟುಂಬದ ಆರೋಪವಾಗಿದ್ದು, ಈ ಎಲ್ಲ ಅಂಶಗಳನ್ನೂ ತನಿಖೆಯಲ್ಲಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆ ಕುರಿತು ಮಾಧ್ಯಮಗಳ ಮುಂದೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪವನ್ನೂ ಕುಟುಂಬಸ್ಥರು ಮಾಡಿದ್ದಾರೆ. “ಕುಟುಂಬದವರು ನೀಡಿರುವ ಮಾಹಿತಿಯನ್ನು ಕಡೆಗಣಿಸದೆ, ಪ್ರತಿಯೊಂದು ಆರೋಪವನ್ನೂ ಪರಿಶೀಲಿಸಿ ಪಾರದರ್ಶಕ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

ದಲಿತ ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಮಾದಿಗ ಸಮುದಾಯದ ಜನರಲ್ಲಿ ಭದ್ರತೆಯ ಆತಂಕವಿದ್ದರೆ, ಗ್ರಾಮದಲ್ಲಿ ತಕ್ಷಣ ಪೊಲೀಸ್ ರಕ್ಷಣೆ ಒದಗಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನೀಡಿರುವ ಮಾಹಿತಿಯ ಆಧಾರದ ಮೇಲೆ ಕಾನೂನುಬದ್ಧ ತನಿಖೆ ನಡೆಸಬೇಕು ಎಂದರು.
ಅಟ್ರಾಸಿಟಿ ಕಮಿಟಿ ಸದಸ್ಯ ಕುಪ್ಪೂರು ಶ್ರೀಧರ್ ಸ್ಥಳದಿಂದಲೇ ಉಪ ವಿಭಾಗಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕಸಾಪುರ ಗ್ರಾಮದಲ್ಲಿ ತಕ್ಷಣ ಶಾಂತಿಸಭೆ ನಡೆಸುವಂತೆ ಮನವಿ ಮಾಡಿದರು.

“ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಎರಡೂ ಸಮುದಾಯಗಳ ನಡುವೆ ಸೌಹಾರ್ದತೆ ಮೂಡಿಸುವ ಪ್ರಯತ್ನ ನಡೆಯಬೇಕು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.
ವಕೀಲ ರಂಗಧಾಮಯ್ಯ ಮಾತನಾಡಿ, ಸಂತ್ರಸ್ತ ಕುಟುಂಬದೊಂದಿಗೆ ಪೊಲೀಸರು ಮಾನವೀಯವಾಗಿ ನಡೆದುಕೊಳ್ಳಬೇಕು. “ನೋವಿನಲ್ಲಿರುವ ಕುಟುಂಬದವರೊಂದಿಗೆ ಪೊಲೀಸ್ ಭಾಷೆ ಬಳಸಬಾರದು. ಅವರ ನೋವನ್ನು ಮೊದಲು ಆಲಿಸಬೇಕು. ಅವರ ಮಾತುಗಳಿಗೆ ಗೌರವ ನೀಡಬೇಕು. ಸಂಕಷ್ಟದಲ್ಲಿರುವ ಕುಟುಂಬವನ್ನು ಮತ್ತಷ್ಟು ನೋವಿಗೆ ತಳ್ಳುವಂತಹ ವರ್ತನೆ ಯಾರಿಂದಲೂ ಆಗಬಾರದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಮುನೀಂದ್ರಕುಮಾರ್, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು, ಉಪನ್ಯಾಸಕರಾದ ರಾಮಚಂದ್ರಪ್ಪ, ಗುಟ್ಟೆ ಅಶ್ವತ್ ನಾರಾಯಣ್, ರೆಡ್ಡಿಹಳ್ಳಿ ಗಂಗಾಧರ್, ಸಾಮಾಜಿಕ ಹೋರಾಟಗಾರರಾದ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಆದಂ ಖಾನ್, ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾರ್ಥಿಗಳಾದ ಮಾರುತೇಶ್ ಕಸಾಪುರ, ನವೀನ್ ಪೂಜರಹಳ್ಳಿ, ಮಲ್ಲಿಕಾರ್ಜುನ್, ಆಖಿಲ ಭಾರತ ಅಂಬೇಡ್ಕರ್ ಕ್ರೀಯಾ ಸಮಿತಿ ಅಧ್ಯಕ್ಷ ಇಂದ್ರಕುಮಾರ್, ಸಂವಿಧಾನ ರಕ್ಷಣಾ ಸಮಿತಿ ಅಧ್ಯಕ್ಷ ಪ್ರಕಾಶ್,ವಾಲ್ಮೀಕಿ ಮಹಾಸಭಾ ಅಧ್ಯಕ್ಷ ರಮಾಂಜಿ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.




