ಮಾಜಿ ಸಚಿವ ಸಿ.ವೀರಣ್ಣ ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ನೋವುಂಟು ಮಾಡಿದೆ. ಅವರ ಸರಳತೆ, ಪ್ರಾಮಾಣಿಕತೆ ಮತ್ತು ರಾಜಕೀಯ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಜೊತೆಗೆ, ಅವರ ಹೆಸರು ತುಮಕೂರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ವೀರಣ್ಣನವರ ಅಭಿಮಾನಿ ಬಳಗ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಮಾಜಿ ಸಚಿವ ಸಿ.ವೀರಣ್ಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಣ್ಣನವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಂಡವರಲ್ಲ. ಅತ್ಯಂತ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಬದುಕಿದ ಅಪರೂಪದ ರಾಜಕಾರಣಿ ಎಂದರು.
ತಾವು ವಿದೇಶದಿಂದ ಬಂದ ಸಂದರ್ಭದಲ್ಲಿ ತಂದೆಯವರು ವೀರಣ್ಣನವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ವೀರಣ್ಣನವರು ಸಣ್ಣ ಉಳಿತಾಯ ಸಚಿವರಾಗಿದ್ದರು. ಸಚಿವರಾಗಿದ್ದರೂ ಗಾಂಧಿನಗರದ ಸಾಮಾನ್ಯ ಶೆಡ್ನಲ್ಲಿ ವಾಸಿಸುತ್ತಿದ್ದರು. ಮನೆಗೆ ಅತಿಥಿಗಳು ಬಂದಾಗ ಒಳಗೆ ಕುಳಿತುಕೊಳ್ಳಲು ಜಾಗವಿಲ್ಲದೆ ಹೊರಗೆ ಕುರ್ಚಿ ಹಾಕಿ ಮಾತನಾಡಿಸುತ್ತಿದ್ದರು. ಅವರ ಸರಳತೆ ಅಂದೇ ತಮ್ಮಲ್ಲಿ ಅಚ್ಚರಿ ಮೂಡಿಸಿತ್ತು ಎಂದು ಪರಮೇಶ್ವರ್ ಸ್ಮರಿಸಿದರು.
1989ರ ಚುನಾವಣೆಯ ಸಂದರ್ಭದಲ್ಲಿ ವೀರಣ್ಣನವರೊಂದಿಗಿನ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡ ಅವರು, ಮತ ಎಣಿಕೆ ವೇಳೆ 800 ಮತಗಳಿಂದ ಹಿಂದೆ ಇದ್ದಾಗ ಮರು ಎಣಿಕೆಗೆ ಆಗ್ರಹಿಸಿ ವೀರಣ್ಣನವರು ಗಲಾಟೆ ಮಾಡಿದ್ದರು. ತಾವು ಅವರನ್ನು ಸಮಾಧಾನಪಡಿಸಿ ಮರು ಎಣಿಕೆ ಮಾಡಿಸಿಕೊಳ್ಳುವಂತೆ ಹೇಳಿದ್ದಾಗಿ ತಿಳಿಸಿದರು.
“ವೀರಣ್ಣನವರು ನಿಧನರಾಗುವ ಸುಮಾರು 20 ದಿನಗಳ ಮುನ್ನ ಅವರ ಮನೆಗೆ ಭೇಟಿ ನೀಡಿದ್ದೆ. ಮಾತುಗಳು ಸ್ಪಷ್ಟವಾಗಿ ಬರುತ್ತಿರಲಿಲ್ಲ. ‘ಪರಮೇಶ್ವರ, ಪ್ರಾಮಾಣಿಕವಾಗಿ ಇದ್ದಿದ್ದಕ್ಕೆ ಹೇಗಿದ್ದೇನೆ ನೋಡಿದ್ರಾ’ ಎಂದು ಕೇಳಿದರು. ಆ ಮಾತು ಬಹಳ ನೋವುಂಟು ಮಾಡಿತು. ತಮ್ಮ ಮಗನಿಗೆ ಕೆಲಸ ಕೊಡಿಸುವಂತೆ ಕೇಳಲೂ ಅವರು ಮುಜುಗರಪಟ್ಟಿದ್ದರು. ನಾನು ನಿಮ್ಮ ಮಗನಿದ್ದಂತೆ, ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದ್ದೆ” ಎಂದು ಭಾವುಕರಾಗಿ ಹೇಳಿದರು.
ಇಂದಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣನವರಂತಹ ವ್ಯಕ್ತಿತ್ವದ ಅಗತ್ಯವಿದೆ. ಹಣದ ಮುಂದೆ ಪ್ರಾಮಾಣಿಕತೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಎದುರಾಗಿರುವ ಸಂದರ್ಭದಲ್ಲಿ ವೀರಣ್ಣನವರ ಸರಳತೆ ಮತ್ತು ಪ್ರಾಮಾಣಿಕತೆಗೆ ಯಾವುದೇ ರೇಟಿಂಗ್ ನೀಡಲು ಸಾಧ್ಯವಿಲ್ಲ ಎಂದರು.
ವೀರಣ್ಣನವರು 2013ರ ಚುನಾವಣೆಯಲ್ಲಿ ನೇರವಾಗಿ ತಮ್ಮೊಂದಿಗೆ ಪ್ರಚಾರಕ್ಕೆ ಬರದಿದ್ದರೂ, “ಪರಮೇಶ್ವರ್ ಒಳ್ಳೆಯವನು, ಅವನಿಗೆ ಮತ ನೀಡಿ” ಎಂದು ಸ್ನೇಹಿತರು ಹಾಗೂ ಮುಖಂಡರಿಗೆ ಹೇಳುವ ಮೂಲಕ ತಮ್ಮೊಂದಿಗೆ ನಿಂತಿದ್ದರು. ಅವರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.
ಇಂದಿನ ಯುವಕರ ಆಲೋಚನೆಗಳು ಬದಲಾಗುತ್ತಿವೆ. ಜಾತಿ, ಧರ್ಮ, ಭಾಷೆಗಿಂತ ಭವಿಷ್ಯದ ಬಗ್ಗೆ ಅವರು ಚಿಂತಿಸುತ್ತಿದ್ದಾರೆ. ಯುವಕರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕಿದೆ. ಬಡವ ಬಡವನಾಗಿಯೇ ಉಳಿಯಬಾರದು. ವೀರಣ್ಣನವರಂತಹ ಪ್ರಾಮಾಣಿಕ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಸಮಾಜದ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಸಮಾಜದ ದುರ್ಬಲ ವರ್ಗಗಳಿಗೆ ಶಕ್ತಿ ನೀಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ದೇವರಾಜ ಅರಸು ಅವರು ಧ್ವನಿ ಇಲ್ಲದವರಿಗೆ ಧ್ವನಿ ನೀಡಿದರೆ, ಸಿದ್ದರಾಮಯ್ಯ ಅವರು ದುರ್ಬಲ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಸಿದ್ದರಾಮಯ್ಯ ಅವರೊಂದಿಗೆ ಒಂದೇ ರೀತಿಯ ಚಿಂತನೆಯೊಂದಿಗೆ ಕೆಲಸ ಮಾಡಿದ್ದು, ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬಂದಿರಲಿಲ್ಲ ಎಂದರು.
ತುಮಕೂರು ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರು ಇಡುವ ವಿಚಾರದಲ್ಲಿ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು, ರಾತ್ರೋರಾತ್ರಿ ಫಲಕ ಅಳವಡಿಸಿ ಮರುದಿನ ಉದ್ಘಾಟನೆ ಮಾಡಿಸಿದ ಘಟನೆಯನ್ನೂ ಪರಮೇಶ್ವರ್ ನೆನಪಿಸಿಕೊಂಡರು.
“ಸಮಾಜದ ಬದಲಾವಣೆಯ ದೃಷ್ಟಿಯಿಂದ ನಾವೆಲ್ಲರೂ ಒಂದು ಹೆಜ್ಜೆ ಮುಂದೆ ಯೋಚಿಸಬೇಕು. ಸಿ.ವೀರಣ್ಣನವರ ಹೆಸರು ತುಮಕೂರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡುತ್ತೇವೆ” ಎಂದು ಅವರು ಭರವಸೆ ನೀಡಿದರು.




