ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಸಂಸದರ ನಿರ್ಲಕ್ಷದಿಂದಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರವೇ ತಮಿಳುನಾಡು ರೀತಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ನಿರ್ಲಕ್ಷ್ಯ ತೋರಿದ್ದು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28ಜನ ಸಂಸದರು ಕೊಬ್ಬರಿ ಬೆಳೆಗಾರರ ಹಿತ ಮರೆತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ರೈತ ಸಂಘ ಮತ್ತು ಹಸಿರುಸೇನೆ ಕೊಬ್ಬರಿ ಕೊಳ್ಳಲು ನಫೆಡ್ ಕೇಂದ್ರ ತೆರೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಯೋಜಿಸಿರುವ ಅಹೋರಾತ್ರಿ ಧರಣಿಯ 11ನೇ ದಿನ ಪೂರೈಸಿದ್ದು, ಜ.18ರಂದು ನಡೆದ ಟ್ರಾಕ್ಟರ್ ರ್ಯಾಲಿಯಲ್ಲಿ ಅವರು ಭಾಗಿಯಾಗಿದ್ದರು.
ಜಿಲ್ಲಾಧಿಕಾರಿಗಳಿಗೆ ಈ ವಿಷಯವಾಗಿ ಮನವಿ ಸಲ್ಲಿಸಿ ಅವರು ಮಾತನಾಡಿದರು, ತಮಿಳು ನಾಡಿನ ಸಂಸದ ಒತ್ತಾಸೆಯ ಮೇರೆಗೆ ಕೇಂದ್ರ ಸರ್ಕಾರವೇ ನೇರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು 88 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಮುಂದಾಗಿದೆ. ಆದರೆ, ಕರ್ನಾಟಕಕ್ಕೆ ಮಾತ್ರ ಈ ಅವಕಾಶ ದೊರೆತ್ತಿಲ್ಲ. ಕೊಬ್ಬರಿ ಬೆಂಬಲ ಬೆಲೆ ಕುರಿತು ನಮ್ಮ ರಾಜ್ಯದ ಒಬ್ಬನೇ ಒಬ್ಬ ಸಂಸದ ಸಹ ಮಾತನಾಡಿಲ್ಲ. ಇದು ರಾಜ್ಯದ ದುರಂತ ಎಂದರು.
ತಮಿಳುನಾಡಿನಲ್ಲಿ ಶೇ. 30ರಷ್ಟು ಮಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅವಕಾಶ ನೀಡಿದೆ. ಆದರೆ, ಕರ್ನಾಟಕಕ್ಕೆ ಮಾತ್ರ ಈ ಅವಕಾಶ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯಸರಕಾರವೂ ನಿಷ್ಕ್ರೀಯವಾಗಿದೆ. ಹಾಗೆಯೇ ಸಂಸದರ ಬಾಯಿಗಳು ಬಂದ್ ಆಗಿವೆ. ಹೊಳು ಕೊಬ್ಬರಿ ಖರೀದಿಗೆ ಅವಕಾಶ ನೀಡಿದರೆ, ಕರ್ನಾಟಕದಲ್ಲಿ ಇರುವ ಸಣ್ಣದು ಮತ್ತು ಸುಕ್ಕು ಕೊಬ್ಬರಿ ಎಲ್ಲವೂ ಸಹ ಮಾರಾಟವಾಗುತ್ತದೆ. ಈ ಅವಕಾಶ ಕಲ್ಪಿಸುವುದು ಸಂಸದರ ಜವಾಬ್ದಾರಿ. ಆದರೆ, ನಮ್ಮ ಸಂಸದರೇನು ಕತ್ತೆ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಇಡೀ ನಾಡಿಗೆ ನಾಡೇ ಸಂಕ್ರಾತಿ ಹಬ್ಬ ಮಾಡುವಾಗ ರೈತ ಸಂಘದ ಸದಸ್ಯರು ಬೀದಿಯಲ್ಲಿ ಹೋರಾಟದಲ್ಲಿ ನಿರತರಾಗಿದ್ದೇವು. ಸೌಜನ್ಯಕ್ಕೂ ಜಿಲ್ಲೆಯ ಶಾಸಕರಾಗಲಿ, ಸಚಿವರಾಗಲಿ ಮಾತನಾಡಿಸಲಿಲ್ಲ .ಅವರಲ್ಲಿ ಮನುಷ್ಯತ್ವ ಅನ್ನುವುದು ಸತ್ತು ಹೋಗಿದೆ. ಜಾತಿವಾರು ಕಾರ್ಯಕ್ರಮಗಳಾದರೆ ದಂಡನ್ನೇ ಕರೆದುಕೊಂಡು ಹೋಗುವ ಸಚಿವರು, ಸಂಸದರು, ಶಾಸಕರುಗಳು ಕಳೆದ 11ದಿನಗಳಿಂದ ರೈತರು ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ತಿರುಗಿಯೂ ನೋಡಿಲ್ಲ. ಇಂತಹವರಿಗೆ ರೈತರು ಸರಿಯಾದ ಪಾಠ ಕಲಿಸಬೇಕು. ಕಳೆದ ಎರಡು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಬೆಂಬಲಬೆಲೆಯಲ್ಲಿ ಖರೀದಿಸಲು ಅವಕಾಶ ನೀಡಿದೆ. ರಾಜ್ಯ ಸರ್ಕಾರ ಪ್ರತಿಕ್ವಿಂಟಾಲ್‌ಗೆ 3ಸಾವಿರ ರೂ. ನೀಡಿ ಖರೀದಿ ಮಾಡಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ, ತಿಪಟೂರಿನ ಕೆ.ಟಿ.ಶಾಂತಕುಮಾರ್, ಹಾಸನ ಜಿಲ್ಲಾಧ್ಯಕ್ಷ ಬಾಬು, ಆನೆಕೆರೆ ಬಾಬು, ಮಲ್ಲಿಕಾರ್ಜುನಯ್ಯ, ನಾಗೇಂದ್ರ, ಶಿವರತ್ನಮ್ಮ, ಪ್ರಕಾಶ್, ಶಶಿಕಲಾ, ರಾಜಣ್ಣ,ಕೊರಟಗೆರೆ ಸಿದ್ದರಾಜು, ಸೇರಿದಂತೆ ಸಾವಿರಾರು ರೈತರು ತಮ್ಮ ಟ್ರಾಕ್ಟರ್ ಮತ್ತಿತರರ ವಾಹನಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಸ್ವಾತಂತ್ರ ಚೌಕದಿಂದ ಹೊರಟ ರೈತರ ಮೆರವಣಿಗೆ ಮಂಡಿಪೇಟೆ ರಸ್ತೆ, ಜೆಸಿ ರಸ್ತೆ ಮೂಲಕ ಟೌನ್‌ಹಾಲ್ ತಲುಪಿ, ಕೆಲ ಕಾಲ ಧರಣಿ ನಡೆಸಿದರು. ಶ್ರೀಶಿವಕುಮಾರಸ್ವಾಮೀಜಿ ಸರ್ಕಲ್, ಬಟವಾಡಿ ತಲುಪಿ, ತದನಂತರ ಕೋತಿ ತೋಪು ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಷಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಮುಕ್ತಾಯಗೊಂಡಿದ್ದು, ಆಹೋರಾತ್ರಿ ಧರಣಿ ಮುಂದುವರಿದಿದೆ.