ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು-ಗಿಳಿಯಾರು-ಚಿತ್ರಪಾಡಿ-ಬನ್ನಾಡಿ ಕಾರ್ಕಡ ಗ್ರಾಮದಲ್ಲಿ ಪ್ರತಿ ಮಳೆಗಾಲದಲ್ಲೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಕೃಷಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಪ್ರತಿ ಬಾರಿ ಸರ್ಕಾರಕ್ಕೆ ಮನವಿ ನೀಡಿದ ಹೊರತಾಗಿಯೂ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಕೃತಕ ನೆರೆ ಬಂದು ನೂರಾರು ಎಕರೆ ಕೃಷಿಭೂಮಿ ನಾಶವಾಗುತ್ತಿದೆ.
ಈ ಭಾಗದಲ್ಲಿ ಅಸ್ತಿತ್ವದಲ್ಲಿರುವ ಸಣ್ಣ ವ್ಯಾಸದ ತೂಬು ಸೇತುವೆಗಳನ್ನು ತೆರವುಗೊಳಿಸಿ ನಾಲ್ಕು ಪಿಲ್ಲರ್ ಸೇತುವೆ ನಿರ್ಮಾಣ ಆಗಬೇಕಾಗಿದೆ. ತಕ್ಷಣದ ಪರಿಹಾರವೆಂಬಂತೆ ಹೊಳೆಯ ಹೂಳು ತೆರವುಗೊಳಿಸಬೇಕಾಗಿದೆ. ಈ ಹಿಂದೆ ಹಲವು ಬಾರಿ ಮನವಿ ನೀಡಿ ಪರಿಹಾರಕ್ಕಾಗಿ ಒತ್ತಾಯಿಸಿದರು ಕೂಡ ಯಾವುದೇ ಪರಿಹಾರ ದೊರತಿಲ್ಲವೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಊರಿನ ರೈತರು ಒಗ್ಗೂಡಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಸಾಮಾಜಿಕ ಹೋರಾಟಗಾರ, ಅಡ್ವಕೇಟ್ ಮಂಜುನಾಥ್ ಗಿಳಿಯಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ನಡೆಸುತ್ತಿರುವ ಹೊರಾಟ ರೈತರ ಉಳಿವಿಗಾಗಿಯೇ ಹೊರತು, ಯಾವುದೇ ರಾಜಕೀಯಕ್ಕಾಗಿ ಅಲ್ಲ. ಪ್ರಸ್ತುತ ಕೃಷಿ ಮಾಡುವುದೇ ಕಷ್ಟಕರ, ಕೂಲಿಯಾಳು ಸಮಸ್ಯೆ ಇದೆ. ಗಿಳಿಯಾರು ಭಾಗದಲ್ಲಿ ಕೃಷಿ ಭೂಮಿಯಿದೆ. ಈಗ ಈ ಕೃತಕ ನೆರೆಯ ಕಾರಣಕ್ಕೆ ಭತ್ತ ಬೆಳೆ ನಾಟಿ ಮಾಡಿರುವುದು ಕೊಳೆತು ಹೋಗುತ್ತದೆ” ಎಂದ ಹೇಳಿದರು.
ರೈತ ಜಯರಾಮ್ ಶೆಟ್ಟಿ ಮಾತನಾಡಿ, “ಪ್ರತಿವರ್ಷ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಮನವಿಗೆ ಯಾವುದೇ ಸ್ಪಂದನೆ ಇಲ್ಲ. ಇದು ಯಾರ ವಿರುದ್ಧದ ಪ್ರತಿಭಟನೆಯಲ್ಲ. ಇದು ನಮ್ಮ ನೋವಿನ ಪರಿಹಾರಕ್ಕಾಗಿ ಗ್ರಾಮಸ್ಥರು ನಡೆಸುವ ಹೋರಾಟವಾಗಿದೆ. ಪರಿಹಾರ ಸಮಸ್ಯೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಂವರೆಗೆ, ಸೂಲಡ್ಡು-ಮಡಿವಾಳಸಾಲು ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು. ಮಣೂರು ಗ್ರಾಮದ ಕೈಕೂರು, ಗಿಳಿಯಾರು ಗ್ರಾಮದ ಸೂಲಡ್ಡು, ಚಿತ್ರಪಾಡಿ ಗ್ರಾಮದ ಕೋಟ-ಸ್ವಾಬ್ರಕಟ್ಟೆ ರಸ್ತೆ ಮತ್ತು ಬೈಕೂರು ಬೈಲು ಎಂಬಲ್ಲಿ ಈಗಿರುವ ಅತಿ ಕಡಿಮೆ ವ್ಯಾಸದ ತೂಬು ಸೇತುವೆಗಳನ್ನು ತೆಗೆದು, ಪಿಲ್ಲರ್ ಸೇತುವೆಗಳನ್ನು ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಮಕೃಷ್ಣ ಆಶ್ರಮದಲ್ಲಿ ಮತ್ತೊಬ್ಬ ಬಾಲಕನ ಮೇಲೆ ಹಲ್ಲೆ; ವೇಣುಗೋಪಾಲ ಎಂಬಾತನ ವಿಚಾರಣೆ
“ಕಾರ್ಕಡ ಗ್ರಾಮದ ಕುದ್ರುಮನೆ ಡ್ಯಾಂ ಮತ್ತು ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಂಗಳಿಗೆ ಅಳವಡಿಸಿರುವ ಹಲಗೆಗಳನ್ನು ಸಂಪೂರ್ಣವಾಗಿ ಮಳೆಗಾಲದಲ್ಲಿ ತೆರವು ಮಾಡಬೇಕು. ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರಕ್ಕೆ ಪರಿಣಿತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ, ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕೃತಕ ನೆರೆಯಿಂದ ಕೃಷಿನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.