ಉಡುಪಿ ನೂತನ ಜಿಲ್ಲಾಸ್ಪತ್ರೆ ಸಿದ್ಧ, ಉದ್ಘಾಟನೆಗೆ ಮೀನಮೇಷ, ಹೋರಾಟದ ಎಚ್ಚರಿಕೆ

Date:

ಹಲವು ವರ್ಷಗಳ ನಿರೀಕ್ಷೆಯ ಬಳಿಕ ನಿರ್ಮಾಣಗೊಂಡಿರುವ ಉಡುಪಿ ನೂತನ ಜಿಲ್ಲಾ ಆಸ್ಪತ್ರೆ ಇನ್ನೂ ಸಾರ್ವಜನಿಕರ ಸೇವೆಗೆ ಲಭ್ಯವಾಗದಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು, ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಘಟಕ ಅಕ್ಟೋಬರ್ 1ರಿಂದ ಒಂದು ವಾರ ಕಾಲ ಅಹೋರಾತ್ರಿ ಪ್ರತಿಭಟನಾ ಸಭೆ ನಡೆಸಲು ಮುಂದಾಗಿದೆ.

- Advertisement -

ಅಜ್ಜರಕಾಡಿನ ನೂತನ ಜಿಲ್ಲಾ ಆಸ್ಪತ್ರೆಯ ಆವರಣದ ಬಳಿ ಅಕ್ಟೋಬರ್ 1ರಿಂದ 7ರವರೆಗೆ ಹೋರಾಟ ನಡೆಯಲಿದೆ. ಆರಂಭದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಹೋರಾಟದ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದ್ದು, ಮೊದಲ ಮೂರು ದಿನ ಸಾಮಾನ್ಯ ಪ್ರತಿಭಟನೆ ಹಾಗೂ ನಂತರದ ನಾಲ್ಕು ದಿನ ಉಪವಾಸ ಸತ್ಯಾಗ್ರಹ ನಡೆಸುವ ಕುರಿತು ಸಂಘಟನೆ ಚಿಂತನೆ ನಡೆಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...
WhatsApp Image 2026 09 30 at 7.11.06 PM

ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯ

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಗೌರವಾಧ್ಯಕ್ಷ ಅನ್ಸರ್ ಅಹಮದ್, ಕಳೆದ ತಿಂಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸೆಪ್ಟೆಂಬರ್ 30ರೊಳಗೆ ನೂತನ ಜಿಲ್ಲಾ ಆಸ್ಪತ್ರೆಯನ್ನು ಅಗತ್ಯ ಸೌಲಭ್ಯಗಳೊಂದಿಗೆ ಆರಂಭಿಸಿ ಜನರ ಸೇವೆಗೆ ಸಮರ್ಪಿಸಬೇಕು ಎಂದು ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ ಗಡುವು ಮುಕ್ತಾಯವಾಗುತ್ತ ಬಂದರೂ ಆಸ್ಪತ್ರೆ ಯಾವಾಗ ಕಾರ್ಯಾರಂಭ ಮಾಡಲಿದೆ ಎಂಬ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ ಎಂದು ಹೇಳಿದರು.

“ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಯಾವುದೇ ಪ್ರಮುಖ ಕಾಮಗಾರಿ ಬಾಕಿ ಇಲ್ಲ. ಅಗತ್ಯ ವೈದ್ಯರು, ದಾದಿಯರು ಹಾಗೂ ಯಂತ್ರೋಪಕರಣಗಳನ್ನು ಒದಗಿಸಿ ಆಸ್ಪತ್ರೆ ಕಾರ್ಯಾರಂಭಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರಕ್ಕೆ ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ಜನರಿಗೆ ಸ್ಪಷ್ಟವಾಗಿ ತಿಳಿಸಲಿ. ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ರೀತಿಯಲ್ಲಿ ತಪ್ಪು ಮಾಹಿತಿ ನೀಡಬಾರದು,” ಎಂದು ಅವರು ಆಗ್ರಹಿಸಿದರು.

‘ಗಡುವು ನೀಡಿದರೆ ಹೋರಾಟ ಸ್ಥಗಿತ’

ಅಕ್ಟೋಬರ್ 1ರಿಂದ ಒಂದು ವಾರ ಕಾಲ ನಡೆಯುವ ಹೋರಾಟದ ಸಂದರ್ಭದಲ್ಲಿ ಸರ್ಕಾರವು ಜಿಲ್ಲಾ ಆಸ್ಪತ್ರೆ ಯಾವ ದಿನಾಂಕದಿಂದ ಕಾರ್ಯಾರಂಭವಾಗಲಿದೆ ಎಂಬ ಕುರಿತು ಸ್ಪಷ್ಟ ಹಾಗೂ ತೃಪ್ತಿಕರ ಗಡುವು ನೀಡಿದರೆ ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಸಂಘಟನೆ ತಿಳಿಸಿದೆ. ಇಲ್ಲವಾದರೆ ಮುಂದಿನ ಹಂತದ ಹೋರಾಟವನ್ನು ಘೋಷಿಸಲಾಗುವುದು ಎಂದು ಅನ್ಸರ್ ಅಹಮದ್ ಹೇಳಿದರು.

ಸರ್ಕಾರದ ಗಮನ ಸೆಳೆಯಲು ಪ್ರತಿದಿನವೂ ವಿಭಿನ್ನ ರೀತಿಯ ಪ್ರತಿಭಟನೆಗಳನ್ನು ನಡೆಸುವ ಕುರಿತು ಚಿಂತಿಸಲಾಗಿದೆ. ಸರ್ಕಾರದ ಬಳಿ ಹಣದ ಕೊರತೆ ಇದೆ ಎಂಬ ಕಾರಣ ನೀಡಿದರೆ ಸಾರ್ವಜನಿಕರಿಂದ ಭಿಕ್ಷೆ ಸಂಗ್ರಹಿಸಿ ಸರ್ಕಾರಕ್ಕೆ ನೀಡುವುದು, ಜಿಲ್ಲಾ ಆಸ್ಪತ್ರೆಗೆ ಬರುವವರ ಪಾದರಕ್ಷೆಗಳನ್ನು ಪಾಲಿಶ್ ಮಾಡಿ ಅದರಿಂದ ಸಂಗ್ರಹವಾಗುವ ಹಣವನ್ನು ಸರ್ಕಾರಕ್ಕೆ ಕಳುಹಿಸುವಂತಹ ವಿನೂತನ ಪ್ರತಿಭಟನೆಗಳನ್ನೂ ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.

‘ಮನವಿ ಮಾತ್ರವಲ್ಲ, ಫಾಲೋಅಪ್ ಅಗತ್ಯ’

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಆರೋಗ್ಯ ಸಚಿವರಿಗೆ ಜಿಲ್ಲಾ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುವಂತೆ ಮನವಿ ಮಾಡಿರುವುದನ್ನು ಸ್ವಾಗತಿಸಿದ ಅನ್ಸರ್ ಅಹಮದ್, ಮನವಿ ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾಗದೆ ಅದರ ಮುಂದಿನ ಪ್ರಕ್ರಿಯೆಯನ್ನು ವೈಯಕ್ತಿಕ ಮುತುವರ್ಜಿಯಿಂದ ಫಾಲೋಅಪ್ ಮಾಡಿ ಆಸ್ಪತ್ರೆ ಶೀಘ್ರ ಜನರ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನೂ ನಾಲ್ಕು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂಬ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಹೇಳಿಕೆ ತೃಪ್ತಿ ತಂದಿಲ್ಲ ಎಂದ ಅವರು, ಆಸ್ಪತ್ರೆ ಆರಂಭಕ್ಕೆ ಬೇಕಾದ ವೈದ್ಯರು, ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

WhatsApp Image 2026 09 30 at 6.45.31 PM 1

‘ಖಾಸಗಿ ಆಸ್ಪತ್ರೆಗಳ ಅವಲಂಬನೆ ಬಡವರಿಗೆ ಹೊರೆ’

ಈ ದಿನ.ಕಾಮ್‌ ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಮಾ ಆಚಾರ್ಯ, “ಅಜ್ಜರಕಾಡಿನ ಹೊಸ ಆಸ್ಪತ್ರೆಯ ಕೆಲಸಗಳು ಮುಗಿದ ಬಳಿಕವೂ ಉದ್ಘಾಟನೆ ಆಗದಿರುವುದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸರ್ಕಾರದಿಂದ ಅಗತ್ಯ ಹಣ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ ನಮಗೆ ದೊರೆತಿತ್ತು. ಆದರೆ ‘ಆಗುತ್ತದೆ, ಆಗುತ್ತದೆ’ ಎಂದು ಕಾಯುತ್ತಾ ಬಂದರೂ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ,” ಎಂದು ಹೇಳಿದರು.

ಈ ಕಾರಣದಿಂದಲೇ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ ನೀಡಲಾಗಿತ್ತು. ಇದೀಗ ಅಕ್ಟೋಬರ್ 1ರಿಂದ ಮೊದಲ ಹಂತದ ಹೋರಾಟ ಆರಂಭಿಸಲಾಗುತ್ತಿದ್ದು, ಇಲಾಖೆಯವರು ಸ್ಪಂದಿಸದಿದ್ದರೆ ಮುಂದಿನ ಹಂತದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

“ಉಡುಪಿ ದೊಡ್ಡ ಜಿಲ್ಲೆ. ಇಲ್ಲಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಸಾಕಷ್ಟು ಮಂದಿ ಆರೋಗ್ಯ ಸೇವೆಗಾಗಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗುವ ಕುಟುಂಬಗಳಿವೆ. ಜಿಲ್ಲಾ ಆಸ್ಪತ್ರೆ ಆರಂಭವಾದರೆ ಇಂತಹ ಕುಟುಂಬಗಳಿಗೆ ದೊಡ್ಡ ನೆರವಾಗಲಿದೆ,” ಎಂದು ಸುಮಾ ಆಚಾರ್ಯ ಹೇಳಿದರು.

WhatsApp Image 2026 09 30 at 6.45.31 PM

‘ಟಿಬಿ ರೋಗಿಗೂ ಸೂಕ್ತ ವಾರ್ಡ್ ಇಲ್ಲದ ಸ್ಥಿತಿ’

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ದೇವಕಿ ಬಾರಕೂರು ಮಾತನಾಡಿ, ಹೊಸ ಜಿಲ್ಲಾ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಮಾಡದಿರುವುದಕ್ಕೆ ಕಾರಣವೇನು ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳು ಇನ್ನೂ ಇವೆ. ಉದಾಹರಣೆಗೆ, ಟಿಬಿ ರೋಗಿಯೊಬ್ಬರು ಆಸ್ಪತ್ರೆಗೆ ಬಂದಾಗ ಸೂಕ್ತ ವಾರ್ಡ್ ಇಲ್ಲದ ಕಾರಣ ಬೇರೆಡೆಗೆ ಕರೆದುಕೊಂಡು ಹೋಗುವಂತೆ ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆ ರೋಗಿ ಎಲ್ಲಿಗೆ ಹೋಗಬೇಕು? ಯಾರೂ ಇಲ್ಲದ ಬಡ ರೋಗಿಗಳ ಪರಿಸ್ಥಿತಿ ಏನು?” ಎಂದು ಅವರು ಪ್ರಶ್ನಿಸಿದರು.

ಆಯುಷ್ಮಾನ್ ಕಾರ್ಡ್ ಸೇರಿದಂತೆ ಹಲವು ವಿಚಾರಗಳಲ್ಲಿ ಜನರಿಗೆ ಸಮಸ್ಯೆ ಎದುರಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಸುಲಭವಾಗಿ ದೊರೆಯುವ ವ್ಯವಸ್ಥೆ ಬೇಕಾಗಿದೆ ಎಂದು ಅವರು ಹೇಳಿದರು.

“ಹೊಸ ಜಿಲ್ಲಾ ಆಸ್ಪತ್ರೆಯನ್ನು ಆದಷ್ಟು ಬೇಗ ಉದ್ಘಾಟಿಸಿ ಜನರ ಸೇವೆಗೆ ನೀಡಬೇಕು. ಖಾಸಗಿ ಆಸ್ಪತ್ರೆಗಳ ಒತ್ತಡದಿಂದಾಗಿ ಆಸ್ಪತ್ರೆ ಆರಂಭವಾಗದೆ ಉಳಿದಿದೆಯೇ ಎಂಬ ಅನುಮಾನವೂ ಜನರಲ್ಲಿ ಮೂಡಿದೆ. ಸರ್ಕಾರ ಸ್ಪಷ್ಟತೆ ನೀಡಬೇಕು. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೂ ನಾವು ಸಿದ್ಧ,” ಎಂದು ದೇವಕಿ ಬಾರಕೂರು ಹೇಳಿದರು.

WhatsApp Image 2026 09 30 at 7.11.07 PM 1

ಉಡುಪಿಗೂ ವೈದ್ಯಕೀಯ ಕಾಲೇಜು: ಆಗ್ರಹ

ಇದೇ ವೇಳೆ, ಇತ್ತೀಚೆಗೆ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರವಾಗಿರುವುದನ್ನು ಸ್ವಾಗತಿಸಿದ ಅನ್ಸರ್ ಅಹಮದ್, ಉಡುಪಿ ಜಿಲ್ಲೆಗೂ ಹಲವು ವರ್ಷಗಳಿಂದ ವೈದ್ಯಕೀಯ ಕಾಲೇಜಿನ ಬೇಡಿಕೆ ಇದೆ. ಹೀಗಾಗಿ ಪುತ್ತೂರಿನ ಜೊತೆಗೆ ಉಡುಪಿಗೂ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

WhatsApp Image 2026 09 30 at 7.11.07 PM

‘ಇದು ಸಂಘಟನೆಯ ಹೋರಾಟವಲ್ಲ, ಜನರ ಆರೋಗ್ಯದ ಪ್ರಶ್ನೆ’

ಉಡುಪಿ ಜಿಲ್ಲಾ ಆಸ್ಪತ್ರೆಯ ಸಮಸ್ಯೆ ಒಬ್ಬರು ಅಥವಾ ಇಬ್ಬರಿಗೆ ಸೀಮಿತವಾದದ್ದಲ್ಲ. ಇದು ಜಿಲ್ಲೆಯ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಎಂದು ಸಂಘಟನೆ ಹೇಳಿದೆ.

ಜಿಲ್ಲಾ ಆಸ್ಪತ್ರೆ ಶೀಘ್ರ ಕಾರ್ಯಾರಂಭಗೊಂಡರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಆರೋಗ್ಯ ಸೇವೆ ಸುಲಭವಾಗಿ ದೊರೆಯಲಿದೆ. ಹೀಗಾಗಿ ಆಸ್ಪತ್ರೆ ಆರಂಭಕ್ಕೆ ಅಗತ್ಯವಿರುವ ವೈದ್ಯರು, ದಾದಿಯರು, ತಾಂತ್ರಿಕ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ತಕ್ಷಣ ಒದಗಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು ಎಂಬುದು ಸಂಘಟನೆಯ ಪ್ರಮುಖ ಆಗ್ರಹವಾಗಿದೆ.

ಅಕ್ಟೋಬರ್ 1ರಿಂದ ಆರಂಭವಾಗಲಿರುವ ಒಂದು ವಾರದ ಹೋರಾಟದತ್ತ ಇದೀಗ ಸರ್ಕಾರದ ಗಮನ ನೆಟ್ಟಿದೆ. ಈ ಅವಧಿಯಲ್ಲಿ ಸರ್ಕಾರ ಸ್ಪಷ್ಟ ಗಡುವು ನೀಡುತ್ತದೆಯೇ ಅಥವಾ ಹೋರಾಟ ಮುಂದಿನ ಹಂತಕ್ಕೆ ವಿಸ್ತರಿಸಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

WhatsApp Image 2026 09 30 at 6.21.33 PM
WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಸ್ಮಶಾನಕ್ಕೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ವಿಜಯಪುರ ನಗರದ ಬೊಂಬಳ ಆಗಸಿ ಪ್ರದೇಶದಲ್ಲಿರುವ ಚಲವಾದಿ ಸಮಾಜದ ಸ್ಮಶಾನಕ್ಕೆ ಅಗತ್ಯ...

ಕಾರವಾರ | ಫ್ಲೈ ಓವರ್ ಕೆಳಗಿನ ಸರ್ಕಾರಿ ಜಾಗದಲ್ಲಿ ಅನಧಿಕೃತ ನರ್ಸರಿ

ಉತ್ತರ ಕನ್ನಡ ಜಿಲ್ಲೆ ಕಾರವಾರ ನಗರದ ಹೆದ್ದಾರಿ ಫ್ಲೈ ಓವರ್ ಕೆಳಭಾಗದ...

ಕೋಲಾರ | ಜಿಲ್ಲೆಗೆ ₹600 ಕೋಟಿ‌ ಬರ ಪರಿಹಾರ ನೀಡಲು ಜೆಡಿಎಸ್ ಆಗ್ರಹ

ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರೈತರಿಗೆ ಸಮರ್ಪಕ ಬರ ಪರಿಹಾರ...

ಕೋಲಾರ | ಎಸ್ಐಆರ್ ವಿರುದ್ಧ ಸಿಪಿಐಎಂ ಪ್ರತಿಭಟನೆ: ಜ್ಞಾನೇಶ್ ಕುಮಾರ್ ವಜಾಕ್ಕೆ ಒತ್ತಾಯ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಚುನಾವಣಾ...