ಸ್ವಂತ ಮನೆ ಎನ್ನುವುದು ಪ್ರತಿಯೊಂದು ಬಡ ಕುಟುಂಬದ ಬಹುದಿನಗಳ ಕನಸು. ಬಾಡಿಗೆ ಮನೆ, ಶಿಥಿಲಗೊಂಡ ಮನೆ ಅಥವಾ ಸ್ವಂತ ನಿವೇಶನವಿದ್ದರೂ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ಸರ್ಕಾರದ ವಸತಿ ಯೋಜನೆಗಳು ಹೊಸ ಭರವಸೆಯನ್ನು ಮೂಡಿಸುತ್ತವೆ. ಆದರೆ, ಯೋಜನೆಗೆ ಅರ್ಜಿ ಸಲ್ಲಿಸಿ, ಮುಂಗಡ ಹಣ ಪಾವತಿಸಿ ಮನೆ ಸಿಗುವ ನಿರೀಕ್ಷೆಯಲ್ಲಿರುವ ಕುಟುಂಬಗಳು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದೆ ಆತಂಕದಲ್ಲಿರುವ ಪರಿಸ್ಥಿತಿ ಕಾರ್ಕಳದಲ್ಲಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಪುರಸಭಾ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪತ್ತೊಂಜಿಕಟ್ಟೆಯಲ್ಲಿ 250 ಗುಂಪು ಮನೆಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ‘ಸರ್ವರಿಗೂ ಸೂರು’ ಎಂಬ ಆಶಯದಡಿ ರೂಪುಗೊಂಡಿರುವ ಈ ಯೋಜನೆ, ವಸತಿ ಇಲ್ಲದ ಬಡ ಕುಟುಂಬಗಳಿಗೆ ಹೊಸ ಬದುಕಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಆದರೆ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮಗೊಳ್ಳದಿರುವುದು ಯೋಜನೆಯ ಮುಂದಿನ ಪ್ರಕ್ರಿಯೆಗೆ ಅಡ್ಡಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ ಈ ಬಗ್ಗೆ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಧರಣೆಯನ್ನು ಸಹ ನಡೆಸಲಾಗಿದೆ.
ಬಡವರ ಸ್ವಂತ ಮನೆ ಕನಸು
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಂತ ಮನೆ ಇಲ್ಲದೆ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಅನೇಕ ಕುಟುಂಬಗಳು ಆಶ್ರಯ ಮನೆ ಯೋಜನೆಯ ಮೇಲೆ ನಿರೀಕ್ಷೆ ಇಟ್ಟುಕೊಂಡಿವೆ. ಮನೆ ನಿರ್ಮಾಣಕ್ಕೆ ಬೇಕಾಗುವ ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಾಗದ ಕುಟುಂಬಗಳಿಗೆ ಸರ್ಕಾರದ ನೆರವಿನ ಮೂಲಕ ಕಡಿಮೆ ಮೊತ್ತದಲ್ಲಿ ಮನೆ ದೊರೆಯುವ ಅವಕಾಶ ಈ ಯೋಜನೆಯಿಂದ ಸೃಷ್ಟಿಯಾಗಿದೆ.
ರಾಜ್ಯ ಸರ್ಕಾರದ ಹೊಸ ನಿಯಮದಂತೆ ಒಂದು ಲಕ್ಷ ರೂಪಾಯಿ ಮೊತ್ತದಲ್ಲಿ ಮನೆ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಆರಂಭಿಕವಾಗಿ ಕೇವಲ 10 ಸಾವಿರ ರೂಪಾಯಿ ಮುಂಗಡ ಪಾವತಿಸಲು ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ಅರ್ಜಿದಾರರು ತಮ್ಮ ಪಾಲಿನ ಮುಂಗಡ ಹಣವನ್ನು ಪಾವತಿಸಿ ಮನೆ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅರ್ಹ ಫಲಾನುಭವಿಗಳ ಆಯ್ಕೆ ಅಂತಿಮವಾಗದ ಕಾರಣ ಮುಂದಿನ ಹಂತದ ಹಣ ಪಾವತಿ ಸೇರಿದಂತೆ ಯೋಜನೆಯ ಪ್ರಕ್ರಿಯೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂಬುದು ಕಾಂಗ್ರೆಸ್‌ನ ಪ್ರಮುಖ ಆರೋಪವಾಗಿದೆ.

ಆಯ್ಕೆ ಪ್ರಕ್ರಿಯೆಯೇ ಪ್ರಮುಖ ಹಂತ
250 ಮನೆಗಳ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಂತಿಮ ಪಟ್ಟಿ ಸಿದ್ಧಪಡಿಸುವುದು ಅತ್ಯಂತ ಮಹತ್ವದ ಹಂತವಾಗಿದೆ. ನಿಜವಾದ ವಸತಿ ರಹಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಯೋಜನೆಯ ಪ್ರಯೋಜನ ತಲುಪಬೇಕಾದರೆ ಪಾರದರ್ಶಕವಾಗಿ ಅರ್ಹರನ್ನು ಆಯ್ಕೆ ಮಾಡಬೇಕಾಗಿದೆ. ಆದರೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದರಿಂದ ಮನೆ ಪಡೆಯುವ ನಿರೀಕ್ಷೆಯಲ್ಲಿರುವ ಕುಟುಂಬಗಳು ಅನಿಶ್ಚಿತತೆಯಲ್ಲಿವೆ ಎಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ.
ಶಾಸಕ ಸುನಿಲ್ ಕುಮಾರ್ ಅವರು ಈ ವಿಚಾರದಲ್ಲಿ ಇದುವರೆಗೆ ಕೇವಲ ಒಂದು ಬಾರಿ ಆಶ್ರಯ ಸಮಿತಿ ಸಭೆ ನಡೆಸಿದ್ದು, ಅದೂ ಕಾಟಾಚಾರದ ಸಭೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಫಲಾನುಭವಿಗಳ ಆಯ್ಕೆ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ವೇಗಗೊಳಿಸುವಲ್ಲಿ ಶಾಸಕರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದು ಕಾಂಗ್ರೆಸ್‌ನ ಆಕ್ಷೇಪವಾಗಿದೆ.

ಹಣ ಪಾವತಿಸಿದರೂ ಮನೆ ಯಾವಾಗ?
ಈ ಯೋಜನೆಯಡಿ ಮನೆ ಪಡೆಯುವ ನಿರೀಕ್ಷೆಯಲ್ಲಿ ಈಗಾಗಲೇ ಮುಂಗಡ ಹಣ ಪಾವತಿಸಿರುವ ಬಡ ಕುಟುಂಬಗಳ ಮುಂದೆ ಇದೀಗ ‘ಮನೆ ಯಾವಾಗ ಸಿಗಲಿದೆ?’ ಎಂಬ ಪ್ರಶ್ನೆ ಎದುರಾಗಿದೆ. ಸ್ವಂತ ಮನೆಗಾಗಿ ವರ್ಷಗಳಿಂದ ಕಾಯುತ್ತಿರುವ ಕುಟುಂಬಗಳು ತಮ್ಮ ಕೈಲಾದಷ್ಟು ಹಣ ಹೊಂದಿಸಿ ಸರ್ಕಾರದ ನಿಯಮದಂತೆ ಮುಂಗಡ ಮೊತ್ತ ಪಾವತಿಸಿವೆ. ಮನೆ ನಿರ್ಮಾಣ ಪ್ರಕ್ರಿಯೆ ಮುಂದುವರಿದು ಶೀಘ್ರದಲ್ಲಿ ಹಕ್ಕುಪತ್ರ ಅಥವಾ ಮನೆ ಹಸ್ತಾಂತರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಫಲಾನುಭವಿಗಳ ಆಯ್ಕೆ ವಿಳಂಬವಾಗಿರುವುದು ನಿರಾಸೆ ಮೂಡಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಒಂದು ಕಡೆ ಬಾಡಿಗೆ ಮನೆಗಳ ವೆಚ್ಚ, ಮತ್ತೊಂದೆಡೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದ ಆರ್ಥಿಕ ಪರಿಸ್ಥಿತಿ. ಇಂತಹ ಕುಟುಂಬಗಳಿಗೆ ಸರ್ಕಾರದ ಆಶ್ರಯ ಮನೆ ಯೋಜನೆ ಕೇವಲ ಕಟ್ಟಡ ನಿರ್ಮಾಣದ ಯೋಜನೆಯಲ್ಲ; ಅದು ಸ್ವಾಭಿಮಾನದಿಂದ ಬದುಕಲು ದೊರೆಯುವ ಅವಕಾಶ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್, ಕಾರ್ಕಳಕ್ಕೆ ಮನೆಗಳೇ ಬಿಡುಗಡೆಯಾಗಿಲ್ಲ ಎಂದು ವಿಧಾನಸೌಧದಲ್ಲಿ ಶಾಸಕರು ಮಾಡಿರುವ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಕಾರ್ಕಳದಲ್ಲಿ ನಡೆಯುತ್ತಿರುವ ವಸತಿ ಯೋಜನೆಯ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಕಣ್ಣಾರೆ ನೋಡಬೇಕು. ಶಾಸಕರು ಕಾರ್ಕಳದಲ್ಲೇ ಇರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ. ಪತ್ತೊಂಜಿಕಟ್ಟೆಯಲ್ಲಿರುವ ಈ ಸೈಟ್‌ನಲ್ಲಿ ಸುಮಾರು 250 ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಬಡ ಕುಟುಂಬಗಳಿಗೆ ಮನೆ ಹಸ್ತಾಂತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
2018ರಿಂದಲೇ ಅರ್ಜಿದಾರರು ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. 2020–21ರ ಅವಧಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 72 ಮನೆಗಳು ಸಂಪೂರ್ಣವಾಗಿ ನಿರ್ಮಾಣಗೊಂಡಿವೆ. ಉಳಿದ ಮನೆಗಳ ಪೈಕಿ ಸುಮಾರು ಶೇ.90ರಷ್ಟು ಕಾಮಗಾರಿಯೂ ಪೂರ್ಣಗೊಂಡಿದೆ. ಇಷ್ಟೊಂದು ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಫಲಾನುಭವಿಗಳ ಆಯ್ಕೆ ಮಾತ್ರ ಇನ್ನೂ ನಡೆಯದಿರುವುದು ದುರದೃಷ್ಟಕರ ಎಂದು ಶುಭದರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ತಮ್ಮ ಕರ್ತವ್ಯವನ್ನು ನಿರ್ವಹಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದರೆ, 250 ಬಡ ಕುಟುಂಬಗಳು ಈಗಾಗಲೇ ಸ್ವಂತ ಮನೆ ಹೊಂದುವಂತಾಗುತ್ತಿತ್ತು. ವರ್ಷಗಳಿಂದ ಸ್ವಂತ ಮನೆಗಾಗಿ ಕಾಯುತ್ತಿರುವ ಕುಟುಂಬಗಳ ಕನಸು ನನಸಾಗುತ್ತಿತ್ತು. ಆದರೆ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರಿಗೆ ಮನೆ ಸಿಗಬಾರದು ಎಂಬ ಉದ್ದೇಶದಿಂದಲೇ ಶಾಸಕರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆಯೇ ಎಂಬ ಅನುಮಾನ ನಮ್ಮಲ್ಲಿ ಮೂಡುತ್ತಿದೆ. ಜನರಿಗೆ ಮನೆ ದೊರಕಿಸುವುದು ರಾಜಕೀಯ ವಿಚಾರವಲ್ಲ; ಅದು ಬಡ ಕುಟುಂಬಗಳ ಬದುಕಿನ ಪ್ರಶ್ನೆಯಾಗಿದೆ. ವರ್ಷಗಳಿಂದ ಮನೆಗಾಗಿ ಕಾಯುತ್ತಿರುವ ಅರ್ಜಿದಾರರ ನೋವನ್ನು ಅರ್ಥಮಾಡಿಕೊಂಡು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿ ನಾವು ಜನಪರ ಹೋರಾಟಕ್ಕೆ ಬದ್ಧರಾಗಿದ್ದೇವೆ. ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವ ಪ್ರತಿಯೊಬ್ಬ ಅರ್ಜಿದಾರರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇವೆ. 250 ಬಡ ಕುಟುಂಬಗಳ ಸ್ವಂತ ಮನೆಯ ಕನಸನ್ನು ನನಸು ಮಾಡಲು ಅಗತ್ಯವಿರುವ ಎಲ್ಲ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಮತ್ತಷ್ಟು ವಿಳಂಬ ಮಾಡದೆ ಶಾಸಕ ಸುನೀಲ್ ಕುಮಾರ್ ಅವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒಕ್ಕೊರಲ ಆಗ್ರಹವಾಗಿದೆ. ಬಡ ಕುಟುಂಬಗಳ ಬದುಕಿನೊಂದಿಗೆ ಚೆಲ್ಲಾಟವಾಡದೆ, ವರ್ಷಗಳಿಂದ ಕಾಯುತ್ತಿರುವ ಅರ್ಜಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇನ್ನೂ ವಿಳಂಬದ ಧೋರಣೆ ಮುಂದುವರಿದರೆ, ಅರ್ಜಿದಾರರೆಲ್ಲರನ್ನು ಒಗ್ಗೂಡಿಸಿಕೊಂಡು ಶಾಸಕರ ಮನೆ ಅಥವಾ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ. ಬಡ ಕುಟುಂಬಗಳಿಗೆ ಸ್ವಂತ ಮನೆ ದೊರಕುವವರೆಗೆ ಕಾಂಗ್ರೆಸ್ ಜನಪರ ಹೋರಾಟವನ್ನು ಮುಂದುವರಿಸಲಿದೆ ಎಂದು ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದರು.
ಸರ್ಕಾರದ ಯೋಜನೆ ಫಲಾನುಭವಿಗಳಿಗೆ ತಲುಪಬೇಕು
ಸರ್ಕಾರ ಬಡವರಿಗಾಗಿ ಯೋಜನೆ ರೂಪಿಸುವುದಷ್ಟೇ ಸಾಕಾಗುವುದಿಲ್ಲ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಪ್ರಯೋಜನವನ್ನು ನಿಗದಿತ ಅವಧಿಯಲ್ಲಿ ಅವರಿಗೆ ತಲುಪಿಸುವ ಜವಾಬ್ದಾರಿಯೂ ಸಂಬಂಧಪಟ್ಟ ವ್ಯವಸ್ಥೆಯ ಮೇಲಿದೆ. ಪತ್ತೊಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ 252 ಮನೆಗಳು ಪೂರ್ಣಗೊಂಡು ಅರ್ಹ ಬಡ ಕುಟುಂಬಗಳಿಗೆ ಹಸ್ತಾಂತರವಾದರೆ ಕಾರ್ಕಳ ಪುರಸಭಾ ವ್ಯಾಪ್ತಿಯ ಹಲವು ಕುಟುಂಬಗಳ ಬಹುದಿನಗಳ ವಸತಿ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಹೀಗಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಈಗಾಗಲೇ ಹಣ ಪಾವತಿಸಿರುವ ಅರ್ಜಿದಾರರಿಗೆ ಮುಂದಿನ ಹಂತದ ಪ್ರಕ್ರಿಯೆಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

“ಬಡವರ ಸ್ವಂತ ಸೂರಿನ ಕನಸು ನನಸಾಗಿಸುವುದು ನಮ್ಮ ಬದ್ಧತೆ”
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಶೆಟ್ಟಿ, ಬಡ ಜನರ ಸ್ವಂತ ಸೂರಿನ ಕನಸು ನನಸಾಗಿಸುವುದು ತಮ್ಮ ಬದ್ಧತೆಯಾಗಿದೆ. ಆಶ್ರಯ ಮನೆ ಯೋಜನೆಗೆ ಸಂಬಂಧಿಸಿದ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತರಲಾಗುವುದು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ಅರ್ಹರಿಗೆ ಶೀಘ್ರವಾಗಿ ಮನೆ ದೊರೆಯುವಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಅರ್ಜಿದಾರರಾದ ರಾಜಲಕ್ಷ್ಮೀ, “ಮನೆಗಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಎಂಟು ವರ್ಷಗಳು ಕಳೆದಿವೆ. ಈವರೆಗೆ ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಒಂದು ದಿನವಾದರೂ ಸ್ವಂತ ಮನೆಯೊಂದರಲ್ಲಿ ನೆಮ್ಮದಿಯಿಂದ ಬದುಕಬೇಕು ಎಂಬ ಆಸೆಯಿಂದ ಕಳೆದ ಎಂಟು ವರ್ಷಗಳಿಂದ ಕಾಯುತ್ತಲೇ ಇದ್ದೇವೆ. ಇವತ್ತು ಆಗಬಹುದು, ನಾಳೆ ಆಗಬಹುದು ಎಂಬ ನಿರೀಕ್ಷೆಯಲ್ಲೇ ದಿನಗಳನ್ನು ದೂಡುತ್ತಿದ್ದೇವೆ. ಆದರೆ ಇದುವರೆಗೂ ಸ್ವಂತ ಮನೆ ದೊರೆಯುವ ಭಾಗ್ಯ ಸಿಕ್ಕಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡರು.
250 ಮನೆಗಳು, ನೂರಾರು ನಿರೀಕ್ಷೆಗಳು
ಪತ್ತೊಂಜಿಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ 250 ಮನೆಗಳು ಕೇವಲ ಸಂಖ್ಯೆಯಲ್ಲ. ಅವುಗಳ ಹಿಂದೆ ಸ್ವಂತ ಸೂರು ಹೊಂದಬೇಕೆಂಬ ಕನಸು ಕಾಣುತ್ತಿರುವ ನೂರಾರು ಕುಟುಂಬಗಳ ಬದುಕಿದೆ. ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಬದುಕುತ್ತಿರುವವರು, ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದವರು ಹಾಗೂ ವಸತಿ ಸಮಸ್ಯೆ ಎದುರಿಸುತ್ತಿರುವ ಬಡ ಕುಟುಂಬಗಳಿಗೆ ಈ ಯೋಜನೆ ದೊಡ್ಡ ಆಶಾಕಿರಣವಾಗಿದೆ.
ಆದ್ದರಿಂದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ ವಿಳಂಬ ನಿವಾರಿಸಿ, ಅರ್ಹರನ್ನು ಶೀಘ್ರ ಅಂತಿಮಗೊಳಿಸಿ, ಮನೆ ನಿರ್ಮಾಣ ಹಾಗೂ ಹಸ್ತಾಂತರದ ಮುಂದಿನ ಪ್ರಕ್ರಿಯೆಗೆ ವೇಗ ನೀಡಬೇಕಿದೆ. ಬಡವರ ಪಾಲಿಗೆ ‘ಸರ್ವರಿಗೂ ಸೂರು’ ಎನ್ನುವುದು ಕೇವಲ ಸರ್ಕಾರದ ಘೋಷಣೆಯಾಗದೆ, ಅವರ ಬದುಕಿನಲ್ಲಿ ನಿಜವಾದ ಸ್ವಂತ ಮನೆಯಾಗಿ ರೂಪುಗೊಳ್ಳಬೇಕಿದೆ. ಅದಕ್ಕಾಗಿ ಫಲಾನುಭವಿಗಳ ಆಯ್ಕೆ ಸೇರಿದಂತೆ ಉಳಿದಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






