ಕರಾವಳಿಯ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಕುರಿತು ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಹರ್ಷ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ನಿರ್ಧಾರವನ್ನು ಪ್ರಕಟಿಸಿದ್ದು, ಹಲವು ದಶಕಗಳಿಂದ ನಡೆಯುತ್ತಿದ್ದ ತುಳು ಭಾಷಾ ಹೋರಾಟಕ್ಕೆ ಇದು ಮಹತ್ವದ ಮೈಲಿಗಲ್ಲು ಎಂದು ತುಳುಪರ ಸಂಘಟನೆಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ತುಳು ಕೇವಲ ಸಂವಹನದ ಭಾಷೆಯಲ್ಲ. ಕರಾವಳಿಯ ಜನಜೀವನ, ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ, ಪಾಡ್ದನ, ಜನಪದ ಕಲೆ, ಸಾಹಿತ್ಯ, ಆಚರಣೆಗಳು ಹಾಗೂ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಜೀವಂತ ಭಾಷೆಯಾಗಿದೆ. ಹೀಗಾಗಿ ತುಳುವಿಗೆ ಆಡಳಿತಾತ್ಮಕ ಮಾನ್ಯತೆ ದೊರೆಯುವುದು ಭಾಷೆಯ ಬಳಕೆಯ ವಿಸ್ತರಣೆಯ ಜೊತೆಗೆ ಕರಾವಳಿಯ ಸಾಂಸ್ಕೃತಿಕ ಅಸ್ಮಿತೆಯ ಸಂರಕ್ಷಣೆಯ ದೃಷ್ಟಿಯಿಂದಲೂ ಮಹತ್ವದ ಬೆಳವಣಿಗೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ತುಳು ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ತುಳು ಭಾಷಾಭಿಮಾನಿಗಳಿಂದ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರವು ದೀರ್ಘಕಾಲದ ಹೋರಾಟಕ್ಕೆ ದೊರೆತ ಫಲ ಎಂದು ಹಲವು ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

‘ತುಳುವರ ಹಲವು ವರ್ಷಗಳ ಕನಸು ನನಸಾಗಿದೆ’ — ಫ್ರ್ಯಾಂಕಿ ಡಿಸೋಜ ಕೊಳಲಗಿರಿ
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ತುಳುವರ ಹಲವು ವರ್ಷಗಳ ಕನಸು ನನಸಾದ ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ.
ತುಳು ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಯ ಸಂರಕ್ಷಣೆಗೆ ಸರ್ಕಾರದ ಈ ನಿರ್ಧಾರ ಹೊಸ ಶಕ್ತಿ ನೀಡಲಿದೆ. ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇದೀಗ ಮಹತ್ವದ ಮಾನ್ಯತೆ ದೊರೆತಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತುಳು ಭಾಷೆಯ ಅಭಿವೃದ್ಧಿ, ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಭಾಷೆಯ ಪರಂಪರೆಯನ್ನು ತಲುಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ತಿಳಿಸಿದ್ದಾರೆ.

‘ತುಳುವರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಗೌರವ’ — ಸುರೇಂದ್ರ ಪೂಜಾರಿ
ಈ ದಿನ.ಕಾಮ್ ಜೊತೆ ಮಾತನಾಡಿದ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಹಾಗೂ ತುಳು ಭಾಷಾಭಿಮಾನಿಗಳು ನಿರಂತರವಾಗಿ ನಡೆಸಿಕೊಂಡು ಬಂದ ಹೋರಾಟಕ್ಕೆ ಇದೀಗ ಫಲ ದೊರೆತಿದೆ ಎಂದು ಹೇಳಿದ್ದಾರೆ.
ಇದು ಕೇವಲ ಸರ್ಕಾರದ ನಿರ್ಧಾರವಲ್ಲ; ತುಳುವರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಗೌರವವಾಗಿದೆ. ಹಲವು ವರ್ಷಗಳಿಂದ ವಿವಿಧ ಹಂತಗಳಲ್ಲಿ ನಡೆದ ಭಾಷಾ ಹೋರಾಟ, ಮನವಿ, ಅಭಿಯಾನ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಪರಿಣಾಮವಾಗಿ ತುಳುವಿನ ಬೇಡಿಕೆ ಸರ್ಕಾರದ ಗಮನಕ್ಕೆ ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಡಳಿತ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಭಾಷೆಯ ಬಳಕೆ ಮತ್ತಷ್ಟು ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ’ — ಪ್ರಸಾದ್ ರಾಜ್ ಕಾಂಚನ್
ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಕರಾವಳಿಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವುದು ಸಂತಸದ ಸಂಗತಿ. ತುಳು ಭಾಷೆ ಕರಾವಳಿಯ ಜನರ ಇತಿಹಾಸ, ಸಂಸ್ಕೃತಿ, ಪರಂಪರೆ, ಆಚರಣೆ, ಸಾಹಿತ್ಯ ಹಾಗೂ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಅವರು ಹೇಳಿದ್ದಾರೆ.

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ತುಳು ಸಾಹಿತ್ಯ ಅಕಾಡೆಮಿ, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ತುಳುಪರ ಸಂಘಟನೆಗಳಿಂದ ವ್ಯಕ್ತವಾಗುತ್ತಿತ್ತು. ಇದೀಗ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.
ಆಡಳಿತಾತ್ಮಕ ಬಳಕೆಯ ಜತೆಗೆ ತುಳು ಸಾಹಿತ್ಯ, ಶಿಕ್ಷಣ, ಸಂಶೋಧನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಕರಾವಳಿಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸರ್ಕಾರಕ್ಕೆ ಕರಾವಳಿಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.

‘ತುಳುನಾಡಿನ ಜನರ ಭಾವನೆಗೆ ಸರ್ಕಾರ ಬೆಲೆ ನೀಡಿದೆ’ — ರಮೇಶ್ ಕಾಂಚನ್
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರು, ಕರಾವಳಿ ಜನರ ಹಲವು ದಶಕಗಳ ಕನಸಾಗಿರುವ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಮಾನ್ಯತೆ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಗಂಭೀರವಾಗಿ ಸ್ಪಂದಿಸಿರುವುದು ತುಳುನಾಡಿನ ಪಾಲಿಗೆ ಮಹತ್ವದ ದಿನ ಎಂದು ಹೇಳಿದ್ದಾರೆ.
ತುಳು ಭಾಷೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಹಾಗೂ ವಿಶಿಷ್ಟ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಟ್ಟಿರುವ ಈ ಹೆಜ್ಜೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಮಸ್ತ ತುಳುವರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ತುಳು ಕೇವಲ ಒಂದು ಭಾಷೆಯಲ್ಲ. ಅದು ಕರಾವಳಿಯ ಜನರ ಬದುಕು, ಸಂಸ್ಕೃತಿ, ಆಚರಣೆ, ಜಾನಪದ, ಯಕ್ಷಗಾನ, ಭೂತಾರಾಧನೆ, ಕಂಬಳ, ಪಾಡ್ದನ ಹಾಗೂ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಭಾಷೆಯಾಗಿದೆ. ಆಡಳಿತಾತ್ಮಕವಾಗಿ ಹೆಚ್ಚಿನ ಮಾನ್ಯತೆ ದೊರೆಯುವುದು ತುಳು ಭಾಷೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ವರ್ಗಾವಣೆಗೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಕಚೇರಿಗಳು, ಸ್ಥಳೀಯ ಆಡಳಿತ, ಸಾರ್ವಜನಿಕ ಸೇವೆಗಳು ಹಾಗೂ ಸರ್ಕಾರ–ಜನರ ನಡುವಿನ ಸಂಪರ್ಕದಲ್ಲಿ ತುಳು ಭಾಷೆಯ ಬಳಕೆಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗಬಹುದು. ತುಳು ಸಾಹಿತ್ಯ, ಸಂಶೋಧನೆ, ಅನುವಾದ, ಪ್ರಕಟಣೆ, ಶಿಕ್ಷಣ ಹಾಗೂ ಡಿಜಿಟಲ್ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರೋತ್ಸಾಹ ದೊರೆಯುವ ನಿರೀಕ್ಷೆಯಿದೆ ಎಂದು ರಮೇಶ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ.

‘ತುಳುವಿಗೆ ದೊರೆತ ಮಾನ್ಯತೆ ಐತಿಹಾಸಿಕ ಕ್ಷಣ’ — ಹಬೀಬ್ ಅಲಿ
ತುಳು ಭಾಷೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಹಬೀಬ್ ಅಲಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆತಿರುವುದು ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಗೆ ದೊರೆತ ಮಹತ್ವದ ಸ್ಪಂದನೆಯಾಗಿದ್ದು, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಈ ನಿರ್ಧಾರ ಹೊಸ ಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ತುಳು ಭಾಷೆಯ ಮಾನ್ಯತೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿದ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಭಾಷಾ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ತುಳು ಭಾಷಾಭಿಮಾನಿಗಳ ಹೋರಾಟಕ್ಕೆ ಈ ನಿರ್ಧಾರ ಗೌರವ ತಂದಿದೆ ಎಂದು ಹಬೀಬ್ ಅಲಿ ಹೇಳಿದ್ದಾರೆ. ತುಳು ಭಾಷೆಯ ಅಭಿವೃದ್ಧಿಯೊಂದಿಗೆ ಕನ್ನಡ ಸೇರಿದಂತೆ ಕರ್ನಾಟಕದ ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡುವ ಮೂಲಕ ಭಾಷಾ ಸೌಹಾರ್ದತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಮತ್ತಷ್ಟು ಬಲಪಡಿಸಬೇಕು. ಈ ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

‘ಸರ್ಕಾರ ನುಡಿದಂತೆ ನಡೆದುಕೊಂಡಿದೆ’ — ಬಿ. ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ತುಳುಕೂಟ ಮತ್ತು ಸಮಸ್ತ ತುಳುವರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮೂಲಕ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ, ಸರ್ಕಾರದ ಮುಂದೆ ಈ ವಿಚಾರವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಗೂ ಆಗ್ರಹ ವ್ಯಕ್ತಪಡಿಸಿದ ಅಖಿಲ ಭಾರತ ತುಳುಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ದೇಶ-ವಿದೇಶಗಳ ತುಳು ಸಂಘ-ಸಂಸ್ಥೆಗಳಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಸಮಸ್ತ ತುಳುವರಿಗೆ ಇದೊಂದು ಚಾರಿತ್ರಿಕ ದಿನವಾಗಿದ್ದು, ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಮಹತ್ವದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಡಾ. ಎಂ. ಮೋಹನ್ ಆಳ್ವ ಅವರು ಸಲ್ಲಿಸಿದ್ದ ವರದಿ ಹಾಗೂ ಬಳಿಕ ಸಿದ್ದರಾಮಯ್ಯ ಸರ್ಕಾರ ರಚಿಸಿದ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿರ್ಧಾರ ಕೈಗೊಂಡಿರುವುದು ತುಳುವರಿಗೆ ಹೆಮ್ಮೆಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಭಾಷೆಯ ಬಳಕೆಗೆ ಹೊಸ ಅವಕಾಶಗಳು’
ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಾಷೆಯ ಬಳಕೆಯನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸುವ ಅಗತ್ಯವೂ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಶಾಲಾ–ಕಾಲೇಜುಗಳಲ್ಲಿ ತುಳು ಭಾಷೆಯ ಅಧ್ಯಯನ, ತುಳು ಸಾಹಿತ್ಯದ ಸಂಶೋಧನೆ, ಹಳೆಯ ಕೃತಿಗಳ ಸಂರಕ್ಷಣೆ, ಅನುವಾದ ಕಾರ್ಯ, ಡಿಜಿಟಲ್ ವಿಷಯಗಳ ಸೃಷ್ಟಿ, ಆಡಳಿತಾತ್ಮಕ ಪದಸಂಪದ ಅಭಿವೃದ್ಧಿ ಹಾಗೂ ತುಳು ಲಿಪಿ ಮತ್ತು ಭಾಷಾ ಪರಂಪರೆಯ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕೆಂಬ ಬೇಡಿಕೆಗಳು ಕೇಳಿಬಂದಿವೆ.
ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನವು ಪ್ರಾಯೋಗಿಕವಾಗಿ ಯಾವ ರೀತಿಯಲ್ಲಿ ಜಾರಿಯಾಗಲಿದೆ, ಯಾವ ಸರ್ಕಾರಿ ಸೇವೆಗಳಲ್ಲಿ ತುಳು ಬಳಕೆಯಾಗಲಿದೆ, ಅನುವಾದ ಮತ್ತು ಸಿಬ್ಬಂದಿ ತರಬೇತಿ ಹೇಗೆ ನಡೆಯಲಿದೆ ಎಂಬುದನ್ನು ಸರ್ಕಾರ ಮುಂದಿನ ಹಂತದಲ್ಲಿ ಸ್ಪಷ್ಟಪಡಿಸುವ ಅಗತ್ಯವಿದೆ ಎಂಬುದು ಭಾಷಾ ಕ್ಷೇತ್ರದ ಆಸಕ್ತರ ಅಭಿಪ್ರಾಯವಾಗಿದೆ.

ದಶಕಗಳ ಹೋರಾಟಕ್ಕೆ ಹೊಸ ತಿರುವು
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕೆಂಬ ಬೇಡಿಕೆ ಒಂದೇ ದಿನದಲ್ಲಿ ಹುಟ್ಟಿಕೊಂಡದ್ದಲ್ಲ. ತುಳುಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಸಂಶೋಧಕರು, ಭಾಷಾ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಹಲವು ವರ್ಷಗಳಿಂದ ವಿವಿಧ ವೇದಿಕೆಗಳಲ್ಲಿ ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಬಂದಿದ್ದಾರೆ. ಸರ್ಕಾರದ ಇತ್ತೀಚಿನ ನಿರ್ಧಾರದಿಂದ ಆ ಹೋರಾಟಕ್ಕೆ ಹೊಸ ತಿರುವು ದೊರೆತಿದ್ದು, ಮುಂದಿನ ಹಂತದಲ್ಲಿ ಮಾನ್ಯತೆಯ ಪ್ರಾಯೋಗಿಕ ಅನುಷ್ಠಾನ ಮತ್ತು ಭಾಷೆಯ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸುವ ಅಗತ್ಯ ಎದುರಾಗಿದೆ.
ತುಳು ಭಾಷೆ ಕರಾವಳಿಯ ಜನರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಭಾಗವಾಗಿರುವ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಮಾನ್ಯತೆಯೊಂದಿಗೆ ಭಾಷಾ ಸಂರಕ್ಷಣೆ, ಶಿಕ್ಷಣ, ಸಾಹಿತ್ಯ, ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೈಗೊಳ್ಳುವ ಕ್ರಮಗಳು ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ತುಳುವಿಗೆ ದೊರೆತಿರುವ ಆಡಳಿತಾತ್ಮಕ ಮಾನ್ಯತೆ ಭಾಷೆಯ ಬಳಕೆಯ ವಿಸ್ತರಣೆಗೆ ಯಾವ ರೀತಿಯ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ಅನುಷ್ಠಾನ ಕ್ರಮಗಳ ಮೇಲೆ ಅವಲಂಬಿತವಾಗಿರಲಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




