ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠದಲ್ಲಿ ಸೀತಾನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳುಗಾರಿಕೆ ವಿಚಾರ ಗಂಭೀರ ತಿರುವು ಪಡೆದುಕೊಂಡಿದ್ದು, ಗ್ರಾಮಸ್ಥರು ಮತ್ತು ಅಧಿಕೃತ ಗುತ್ತಿಗೆದಾರರ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಕಳೆದ ಹಲವು ತಿಂಗಳಿಂದ ಹೊಸಾಳ ಗ್ರಾಮದಲ್ಲಿ ಗ್ರಾಮಸ್ಥರ ಪ್ರತಿಭಟನೆ ಮುಂದುವರಿದಿದ್ದು, ಏಪ್ರಿಲ್ 13ರಿಂದ ಅದು ಮತ್ತಷ್ಟು ತೀವ್ರಗೊಂಡಿದೆ. ಇದೀಗ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಇ-ಟೆಂಡರ್ ಮೂಲಕ ಡಿಎಸ್ಬಿ-5ರಲ್ಲಿ 1,13,736 ಮೆಟ್ರಿಕ್ ಟನ್ ಹಾಗೂ ಕೆಆರ್ಡಿಎಲ್ ಡಿಎಸ್ಬಿ-1 ಮೂಲಕ 18,790 ಮೆಟ್ರಿಕ್ ಟನ್ ಸೇರಿ ಒಟ್ಟು ಸುಮಾರು 1.50 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಅನುಮತಿ ನೀಡಿರುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ, “ಯಾವುದೇ ಸಮಗ್ರ ವೈಜ್ಞಾನಿಕ ಸರ್ವೇ ನಡೆಸದೆ ಮರಳಿನ ಪ್ರಮಾಣ ನಿಗದಿ ಮಾಡಲಾಗಿದೆ. ತಜ್ಞರ ಅಧ್ಯಯನದಲ್ಲಿ ಇಲ್ಲಿ ಗರಿಷ್ಠ 10,000 ಮೆಟ್ರಿಕ್ ಟನ್ ಮಾತ್ರ ಮರಳು ಲಭ್ಯವಿದೆ ಎಂದು ತಿಳಿದಿದ್ದರೂ ಅದನ್ನು ಆಡಳಿತ ಪರಿಗಣಿಸಿಲ್ಲ” ಎಂದು ಆರೋಪಿಸಿದ್ದಾರೆ.
ಪರಿಸರ ಅನುಮತಿಯಲ್ಲಿ ಕೇವಲ ಒಂದು ಮೀಟರ್ ಆಳದಲ್ಲಿ ಮಾತ್ರ ಮರಳು ತೆಗೆಯಲು ಅವಕಾಶವಿದ್ದರೂ, ವಾಸ್ತವದಲ್ಲಿ 3ರಿಂದ 4 ಮೀಟರ್ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದ ನದಿದಂಡೆ ಕೊರೆತ ಹೆಚ್ಚಾಗಿ ಕೃಷಿಭೂಮಿಗಳು ಹಾನಿಗೊಳಗಾಗುತ್ತಿದ್ದು, ಸುಮಾರು 150ರಿಂದ 200 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದ್ದಾರೆ.

ಮರಳುಗಾರಿಕೆಯ ಪರಿಣಾಮವಾಗಿ ಮನೆ ಬಾವಿಗಳಲ್ಲಿ ಉಪ್ಪುನೀರು ಕಾಣಿಸಿಕೊಂಡಿದ್ದು, ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿದ ಕುಡಿಯುವ ನೀರಿನ ಬಾವಿಯಲ್ಲಿಯೂ ಉಪ್ಪುನೀರು ಬರುತ್ತಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, ಅನುಮತಿಯಲ್ಲಿ 30 ಕಾರ್ಮಿಕರಿಗೆ ಮಾತ್ರ ಅವಕಾಶವಿದ್ದರೂ, 150ಕ್ಕೂ ಅಧಿಕ ಮಂದಿ ಕಾರ್ಮಿಕರು ಹಾಗೂ 40ಕ್ಕೂ ಅಧಿಕ ದೋಣಿಗಳನ್ನು ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಅಲ್ಲದೆ ಹೊಳೆಬದಿಯಲ್ಲಿ ಮಣ್ಣು ತುಂಬಿಸಿ ಕಾನೂನುಬಾಹಿರವಾಗಿ ಯಾರ್ಡ್ ನಿರ್ಮಿಸಿರುವುದೂ ಗಮನಕ್ಕೆ ಬಂದಿದೆ” ಎಂದು ಗ್ರಾಮಸ್ಥರು ಹೇಳಿದರು.
ಆರು ತಿಂಗಳ ಹಿಂದೆ ಪ್ರತಿಭಟನೆ ಹಿನ್ನೆಲೆ ಮರಳುಗಾರಿಕೆ ನಿಲ್ಲಿಸಲಾಗಿದ್ದರೂ, ಇದೀಗ ಪೊಲೀಸ್ ಭದ್ರತೆಯಲ್ಲಿ ಮತ್ತೆ ಪ್ರಾರಂಭಗೊಂಡಿದೆ. ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ, ಹೊಸಾಳ ಗ್ರಾಮದ ನಾಗರಮಠದ ಸೀತಾನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳುಗಾರಿಕೆ ಕುರಿತಾಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ಗಣಿ ಮತ್ತು ಭೂವಿಜ್ಞಾನ ಇಲಾಖೆ ಇ-ಟೆಂಡರ್ ಮೂಲಕ ಡಿಎಸ್ಬಿ-5ರಲ್ಲಿ 1,13,736 ಮೆಟ್ರಿಕ್ ಟನ್ ಹಾಗೂ ಕೆಆರ್ಡಿಎಲ್ ಡಿಎಸ್ಬಿ-1 ಮೂಲಕ 18,790 ಮೆಟ್ರಿಕ್ ಟನ್ ಸೇರಿ ಒಟ್ಟು ಸುಮಾರು 1.50 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಅವಕಾಶ ನೀಡಿದೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ವೈಜ್ಞಾನಿಕ ಸರ್ವೇ ನಡೆಸದೆ ಮರಳಿನ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮಸ್ಥರು ಮಣಿಪಾಲ ಎಂಐಟಿಯ ನಿವೃತ್ತ ಭೂವಿಜ್ಞಾನಿ ಡಾ. ಉದಯಶಂಕರ್ ಅವರಿಂದ ಸರ್ವೇ ನಡೆಸಿದಾಗ, ಇಲ್ಲಿ ಗರಿಷ್ಠ 10,000 ಮೆಟ್ರಿಕ್ ಟನ್ ಮಾತ್ರ ಮರಳು ಲಭ್ಯವಿರುವುದಾಗಿ ತಿಳಿದುಬಂದಿದೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ, ಅವರು ಗ್ರಾಮಸ್ಥರ ಮಾತು ಆಲಿಸಲು ನಿರಾಕರಿಸಿ, ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಿದ್ದಾರೆ” ಎಂದು ದಿನೇಶ್ ಗಾಣಿಗ ಆರೋಪಿಸಿದರು.
“ಇನ್ನು, 2024ರ ಜನವರಿ 18ರಂದು ಸರ್ವೇ ನಂ. 91ರಲ್ಲಿ ಆರು ಎಕರೆ ಪ್ರದೇಶಕ್ಕೆ ಇ-ಟೆಂಡರ್ ಕರೆಯಲಾಗಿತ್ತು. 15 ಮಂದಿ ಬಿಡ್ ಮಾಡಿದವರಲ್ಲಿ ನವೆಂಬರ್ ತಿಂಗಳಲ್ಲಿ ಬಿ. ಕುಶಕುಮಾರ್ ಅವರಿಗೆ ಆಶಯಪತ್ರ ನೀಡಲಾಗಿತ್ತು. ಆದರೆ ನಂತರ ಕೇವಲ ಮೂರು ತಿಂಗಳಲ್ಲಿ ಜಿಲ್ಲಾಧಿಕಾರಿಗಳು ತಿದ್ದುಪಡಿ ಮಾಡಿ, ಸರ್ವೇ ನಂ. 91 ಬದಲಾಗಿ ಸರ್ವೇ ನಂ. 114 ಮತ್ತು 140ರಲ್ಲಿ 8.90 ಎಕರೆ ಪ್ರದೇಶಕ್ಕೆ ಅನುಮತಿ ನೀಡಿರುವುದು ಕಾನೂನುಬಾಹಿರವಾಗಿದೆ” ಎಂದು ಹೇಳಿದ್ದಾರೆ.
“ಅದೇ ರೀತಿ, ಪರಿಸರ ವಿಮೋಚನಾ ಪತ್ರದಲ್ಲಿ ಒಂದು ಮೀಟರ್ ಆಳದೊಳಗೆ ಮಾತ್ರ ಮರಳು ತೆಗೆಯಲು ಅನುಮತಿ ಇದ್ದರೂ, ವಾಸ್ತವದಲ್ಲಿ 3ರಿಂದ 4 ಮೀಟರ್ ಆಳದವರೆಗೆ ಮರಳು ತೆಗೆಯಲಾಗುತ್ತಿದೆ. ಸೀತಾನದಿ ಪಾತ್ರದ ಕೆಲವೆಡೆ 2ರಿಂದ 6 ಮೀಟರ್ ಆಳದಲ್ಲಿ ಮರಳು ಇರುವುದರಿಂದ, ಅದನ್ನು ತೆಗೆಯುವುದು ಕಾನೂನುಬಾಹಿರವಾಗಿದೆ” ಎಂದರು.

ಈ ದಿನ.ಕಾಮ್ ಜತೆ ಮಾತನಾಡಿದ ಸ್ಥಳೀಯರು ಹಾಗೂ ಹೋರಾಟಗಾರ ಚಂದ್ರ ಕಾಂಚನ್, “ಇಲ್ಲಿ ಸಾಂಪ್ರದಾಯಿಕವಾಗಿ 30 ಮಂದಿ ಕಾರ್ಮಿಕರನ್ನು ಬಳಸಿಕೊಂಡು ಸಣ್ಣ ಪ್ರಮಾಣದಲ್ಲಿ ದೋಣಿಗಳ ಮೂಲಕ ಮರಳುಗಾರಿಕೆ ಮಾಡಲು ಮಾತ್ರ ಅನುಮತಿ ಇದ್ದರೂ, ಗುತ್ತಿಗೆದಾರರು ನಿಯಮ ಉಲ್ಲಂಘಿಸಿ 40ರಿಂದ 50 ದೊಡ್ಡ ದೋಣಿಗಳನ್ನು ಬಳಸಿಕೊಂಡು 150ಕ್ಕೂ ಹೆಚ್ಚು ಕಾರ್ಮಿಕರನ್ನು ತೊಡಗಿಸಿಕೊಂಡು ಭಾರೀ ಪ್ರಮಾಣದಲ್ಲಿ ಮರಳು ತೆಗೆಯುತ್ತಿದ್ದಾರೆ. ಹೊಳೆಬದಿಯಲ್ಲಿ ಕೆಂಪು ಮಣ್ಣು ತುಂಬಿಸಿ ಯಾರ್ಡ್ಗಳನ್ನು ನಿರ್ಮಿಸಿರುವುದೂ ಕಾನೂನುಬಾಹಿರವಾಗಿದೆ” ಎಂದು ಆರೋಪಿಸಿದರು.
“ಅಕ್ರಮವಾಗಿ ಆಳದಲ್ಲಿ ಮರಳು ತೆಗೆಯುತ್ತಿರುವ ಪರಿಣಾಮವಾಗಿ, ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಡಿಯುವ ನೀರಿನ ಬಾವಿಯಲ್ಲಿ ಉಪ್ಪು ನೀರು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಚಂದ್ರ ಕಾಂಚನ್ ದೂರಿದರು.
ಇದಲ್ಲದೆ, ಸುಮಾರು ಆರು ತಿಂಗಳ ಹಿಂದೆ ನಾಗರಮಠದಲ್ಲಿ ಮರಳುಗಾರಿಕೆ ಆರಂಭಿಸಲು ಮಾಡಿದ ಪ್ರಯತ್ನವನ್ನು ಗ್ರಾಮಸ್ಥರು ತೀವ್ರ ಪ್ರತಿಭಟನೆ ಮೂಲಕ ತಡೆದಿದ್ದರು. ಆದರೆ ಈಗ ಕಳೆದ 10 ದಿನಗಳಿಂದ ಭಾರೀ ಪೊಲೀಸ್ ಭದ್ರತೆಯೊಂದಿಗೆ ಮತ್ತೆ ಮರಳುಗಾರಿಕೆ ನಡೆಯುತ್ತಿದೆ ಎಂದು ಅವರು ಹೇಳಿದರು. 150ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಗುತ್ತಿಗೆದಾರರಿಗೆ ರಕ್ಷಣೆ ನೀಡಲಾಗುತ್ತಿದೆ. ಈ ಅಕ್ರಮದ ವಿರುದ್ಧ ಧ್ವನಿ ಎತ್ತಿದ ಗ್ರಾಮಸ್ಥರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಲಾಗುತ್ತಿದೆ ಎಂಬುದಾಗಿ ಅವರು ಆರೋಪಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಗ್ರಾಮದ ಗಿರಿಜಾ ರಂಗ ಮರಕಾಲ ಅವರು, “ಆದೇಶದಲ್ಲಿ ಭೂಸವಕಳಿ ಪ್ರದೇಶಗಳಲ್ಲಿ ಮರಳುಗಾರಿಕೆ ನಡೆಸಬಾರದೆಂದು ಸ್ಪಷ್ಟ ಸೂಚನೆ ಇದ್ದರೂ, ಸೀತಾನದಿಯ ಎಡದಂಡೆಯಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಇದರ ಪರಿಣಾಮವಾಗಿ ಕೃಷಿಭೂಮಿಗಳು ಹೊಳೆಗೆ ಕೊಚ್ಚಿಕೊಂಡು ಹೋಗಿದ್ದು, ಪರಿಸರದ 150ರಿಂದ 200 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ” ಎಂದು ಹೇಳಿದರು.
“ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವುದರ ಪರಿಣಾಮ ಪರಿಸರದ ಮನೆಗಳ ಬಾವಿಗಳಲ್ಲಿ ಉಪ್ಪುನೀರು ಸೇರ್ಪಡೆಯಾಗಿ, ಕುಡಿಯಲು ಸೇರಿದಂತೆ ದೈನಂದಿನ ಬಳಕೆಗೆ ಅಯೋಗ್ಯವಾಗಿವೆ” ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕೃತ ಗುತ್ತಿಗೆದಾರ ಬಿ. ಕುಶಕುಮಾರ್, ಎಲ್ಲ ಆರೋಪಗಳನ್ನು ತಳ್ಳಿಹಾಕಿ ಮರಳುಗಾರಿಕೆ ಸಂಪೂರ್ಣ ಕಾನೂನುಬದ್ಧವಾಗಿದ್ದು, ಇ-ಟೆಂಡರ್ ಪ್ರಕ್ರಿಯೆಯ ಮೂಲಕವೇ ಗುತ್ತಿಗೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
“ನದಿಯಲ್ಲಿ ಮರಳು ದಿಬ್ಬ ರಚನೆಯಾಗಿ ನೀರಿನ ಹರಿವು ಅಡ್ಡಿಯಾಗುತ್ತಿರುವುದರಿಂದ ಅದನ್ನು ತೆರವುಗೊಳಿಸುವುದು ಅಗತ್ಯ. ಕೆಲವರು ಸ್ವಹಿತಾಸಕ್ತಿಯಿಂದ ಸುಳ್ಳು ಆರೋಪ ಮಾಡಿ ಸ್ಥಳೀಯರನ್ನು ಪ್ರಚೋದಿಸುತ್ತಿದ್ದಾರೆ” ಎಂದು ದೂರಿದ್ದಾರೆ.
ಈ ಸಂಬಂಧ ಹಸಿರು ಪೀಠ ಹಾಗೂ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದರೂ ಯಾವುದೇ ತಡೆ ನೀಡಲಾಗಿಲ್ಲ. ಅಕ್ರಮವಾಗಿ ಮರಳುಗಾರಿಕೆ ನಡೆಸುವವರೇ ಈ ವಿರೋಧದ ಹಿಂದೆ ಇದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸ್ ಭದ್ರತೆ ಕುರಿತು ಪ್ರತಿಕ್ರಿಯಿಸಿ, ಅನಾಹುತ ತಪ್ಪಿಸಲು ಮುಂಜಾಗ್ರತೆಯ ಕ್ರಮವಾಗಿ ಭದ್ರತೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮರಳುಗಾರಿಕೆ ನಿಲ್ಲಿಸಿದರೆ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೊಡೆತ ಬೀಳಲಿದ್ದು, ಕಾರ್ಮಿಕರು ಹಾಗೂ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಗುತ್ತಿಗೆದಾರರು ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಈ ದಿನ.ಕಾಮ್ ಜತೆ ಮಾತನಾಡಿದ ಸ್ಥಳೀಯ ಗ್ರಾಮಸ್ಥರ ಪರ ಹೋರಾಟಗಾರ ಚಂದ್ರ ಕಾಂಚನ್ ಅವರು, “ಏಪ್ರಿಲ್ 13 ಮತ್ತು 14ರಂದು ಮರಳುಗಾರಿಕಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಏಪ್ರಿಲ್ 15ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಸಂತ್ರಸ್ಥ ಗ್ರಾಮಸ್ಥರೆಲ್ಲ ಸೇರಿ ಧರಣಿ ನಡೆಸುವುದಾಗಿ ಮೊದಲೇ ಘೋಷಿಸಲಾಗಿತ್ತು. ಆದರೆ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಅಂದು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ʼತಾವು ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ವಿಷಯದ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಲ್ಲದೆ, ಅವರ ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳೋಣ. ಜಿಲ್ಲಾಧಿಕಾರಿಗಳು ಒಪ್ಪದಿದ್ದರೆ ತಾನೂ ಧರಣಿಯಲ್ಲಿ ಭಾಗವಹಿಸುತ್ತೇನೆʼ ಎಂಬ ಭರವಸೆ ನೀಡಿದ್ದರು” ಎಂದರು.
“ಶಾಸಕರ ಭರವಸೆಯ ಹಿನ್ನೆಲೆಯಲ್ಲಿ, ಮಣಿಪಾಲದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದ್ದು, ನಾಗರಮಠದಲ್ಲೇ ಧರಣಿ ಮುಂದುವರಿಸಿ ಶಾಸಕರ ಆಗಮನಕ್ಕಾಗಿ ಕಾದು ಕುಳಿತೆವು. ಆದರೆ, ಕೊಟ್ಟ ಮಾತಿನಂತೆ ದಿನವಿಡೀ ಸ್ಥಳಕ್ಕೆ ಆಗಮಿಸದ ಶಾಸಕರು, ದೂರವಾಣಿ ಮೂಲಕ ಸಂಪರ್ಕಿಸಲು ಸತತವಾಗಿ ಪ್ರಯತ್ನಿಸಿದರೂ ಕರೆ ಸ್ವೀಕರಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, “ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದ್ದರೂ, ಅವರಿಂದಲೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಹೀಗಾಗಿ, ಇಂದು ತೀವ್ರ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದ್ದು, ಸುಮಾರು 10 ದಿನಗಳ ಹಿಂದೆ ಶಾಸಕರು ಮತ್ತು ಸಂಸದರ ನೇತೃತ್ವದಲ್ಲಿ ಸ್ಥಳೀಯರು ಸಲ್ಲಿಸಿದ ಮನವಿಗೂ ಜಿಲ್ಲಾಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲ” ಎಂದರು.
ಒಟ್ಟಾರೆ, ನಾಗರಮಠದಲ್ಲಿ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಚಟುವಟಿಕೆಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ವಿವಾದಕ್ಕೆ ಜಿಲ್ಲಾಡಳಿತ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




