ಉಡುಪಿ ನಗರದ ಕರಾವಳಿ ಜಂಕ್ಷನ್‌ನಿಂದ ಕಿನ್ನಿಮೂಲ್ಕಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಗಳು ಹಲವು ತಿಂಗಳುಗಳಿಂದ ಹದಗೆಟ್ಟಿದ್ದರೂ ದುರಸ್ತಿ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗದಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ಗುಂಡಿಗಳು, ಕಿತ್ತುಹೋದ ಡಾಮರು, ಮೇಲೆದ್ದಿರುವ ಜಲ್ಲಿಕಲ್ಲುಗಳು ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯಿಂದ ವಾಹನ ಸವಾರರು ಪ್ರತಿದಿನ ಸಂಚಾರದ ಸಂಕಷ್ಟ ಎದುರಿಸುವಂತಾಗಿದೆ. ಮಳೆಗಾಲದಲ್ಲಿ ನೀರು ನಿಂತು ಕೆರೆಯಂತಾಗುವ ರಸ್ತೆಗಳು ಮಳೆ ಕಡಿಮೆಯಾದ ಬಳಿಕ ಧೂಳಿನಿಂದ ಆವೃತವಾಗುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ತಪ್ಪದಂತಾಗಿದೆ.
ಉಡುಪಿ ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ನಗರದಿಂದ ಮಲ್ಪೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವವರು ಹಾಗೂ ಕಿನ್ನಿಮೂಲ್ಕಿ, ಅಂಬಲಪಾಡಿ ಮತ್ತು ಕರಾವಳಿ ಬೈಪಾಸ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಸರ್ವಿಸ್ ರಸ್ತೆಗಳು ಪ್ರಮುಖ ಸಂಪರ್ಕ ಮಾರ್ಗಗಳಾಗಿವೆ. ಆದರೆ, ರಸ್ತೆಗಳ ದುಸ್ಥಿತಿಯಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕರಾವಳಿ ಬೈಪಾಸ್ ಅಂಡರ್‌ಪಾಸ್‌ನಲ್ಲಿ ಹದಗೆಟ್ಟ ರಸ್ತೆ
ಕರಾವಳಿ ಬೈಪಾಸ್ ಪ್ರದೇಶದ ಅಂಡರ್‌ಪಾಸ್‌ನಲ್ಲಿ ರಸ್ತೆ ತೀರಾ ಹದಗೆಟ್ಟಿದ್ದು, ನಗರದಿಂದ ಮಲ್ಪೆ ಕಡೆಗೆ ತೆರಳುವ ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ರಸ್ತೆಯ ಮೇಲ್ಮೈ ಹಾಳಾಗಿರುವುದರಿಂದ ವಾಹನಗಳು ಗುಂಡಿಗಳನ್ನು ತಪ್ಪಿಸಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ಸಂಚಾರ ಹೆಚ್ಚಿರುವ ಸಂದರ್ಭದಲ್ಲಿ ರಸ್ತೆಯಲ್ಲಿನ ಗುಂಡಿಗಳು ಸಂಚಾರಕ್ಕೆ ಮತ್ತಷ್ಟು ಅಡಚಣೆ ಉಂಟುಮಾಡುತ್ತಿವೆ.
ಅಂಡರ್‌ಪಾಸ್ ಪ್ರದೇಶದಲ್ಲಿ ರಸ್ತೆ ದುರಸ್ತಿ ಮಾಡದಿರುವುದು ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ರಸ್ತೆ ಮತ್ತಷ್ಟು ಹದಗೆಡುವ ಸಾಧ್ಯತೆಯಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ತಕ್ಷಣ ದುರಸ್ತಿ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ಕರಾವಳಿ ಬೈಪಾಸ್ ಪ್ರದೇಶದಲ್ಲಿ ಸರ್ವಿಸ್ ರಸ್ತೆಯನ್ನು ವಿಸ್ತರಿಸುವುದರ ಜತೆಗೆ ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಸ್ತೆ ಅಭಿವೃದ್ಧಿಯ ಜತೆಗೆ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ದುರಸ್ತಿ ಮಾಡಿದ ರಸ್ತೆಯೂ ಮತ್ತೆ ಹಾಳಾಗುವ ಸಾಧ್ಯತೆಯಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಅಂಬಲಪಾಡಿ ಓವರ್‌ಪಾಸ್ ಮುಕ್ತವಾದರೂ ಸರ್ವಿಸ್ ರಸ್ತೆಗೆ ದುರಸ್ತಿಯ ಭಾಗ್ಯವಿಲ್ಲ
ಅಂಬಲಪಾಡಿ ಓವರ್‌ಪಾಸ್ ಸಂಚಾರಕ್ಕೆ ಮುಕ್ತಗೊಂಡು ಹಲವು ತಿಂಗಳು ಕಳೆದಿವೆ. ಆದರೆ, ಓವರ್‌ಪಾಸ್‌ನ ಕೆಳಭಾಗದಲ್ಲಿರುವ ಸರ್ವಿಸ್ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾತ್ರ ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ. ಓವರ್‌ಪಾಸ್ ನಿರ್ಮಾಣದಿಂದ ಈ ಭಾಗದ ಸಂಚಾರಕ್ಕೆ ಅನುಕೂಲವಾಗುವ ನಿರೀಕ್ಷೆಯಿದ್ದರೂ, ಸರ್ವಿಸ್ ರಸ್ತೆಯ ದುಸ್ಥಿತಿ ವಾಹನ ಸವಾರರ ಸಂಕಷ್ಟವನ್ನು ಮುಂದುವರಿಸಿದೆ.
ಓವರ್‌ಪಾಸ್ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸರ್ವಿಸ್ ರಸ್ತೆಗಳನ್ನೂ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು. ಓವರ್‌ಪಾಸ್ ಸಂಚಾರಕ್ಕೆ ಮುಕ್ತಗೊಳಿಸುವ ಸಂದರ್ಭದಲ್ಲಿ ಸಂಸದರು ಸೇರಿದಂತೆ ಸಂಬಂಧಪಟ್ಟವರು ಸರ್ವಿಸ್ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಹಲವು ತಿಂಗಳು ಕಳೆದರೂ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭವಾಗದಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯ ಹೆದ್ದಾರಿಯ ಕಾಮಗಾರಿಗಳಿಗೆ ಆದ್ಯತೆ ನೀಡುವ ಸಂದರ್ಭದಲ್ಲಿ ಅದರ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಗಳ ಸಮಸ್ಯೆಯನ್ನೂ ಸಮಾನವಾಗಿ ಪರಿಗಣಿಸಬೇಕು. ಮುಖ್ಯ ರಸ್ತೆಯಲ್ಲಿ ಸುಗಮವಾಗಿ ಸಂಚರಿಸುವ ವಾಹನಗಳು ಸರ್ವಿಸ್ ರಸ್ತೆಗೆ ಬಂದಾಗ ಗುಂಡಿ, ಧೂಳು ಹಾಗೂ ಹದಗೆಟ್ಟ ಮೇಲ್ಮೈಯಿಂದಾಗಿ ತೊಂದರೆ ಅನುಭವಿಸುವಂತಾಗಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕಿನ್ನಿಮೂಲ್ಕಿಯಿಂದ ಕರಾವಳಿ ಜಂಕ್ಷನ್‌ವರೆಗೆ ಜಲ್ಲಿಕಲ್ಲಿನ ಕಿರಿಕಿರಿ
ಕಿನ್ನಿಮೂಲ್ಕಿಯಿಂದ ಕರಾವಳಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಯ ವಿವಿಧ ಭಾಗಗಳಲ್ಲಿ ಡಾಮರು ಕಿತ್ತುಹೋಗಿದ್ದು, ರಸ್ತೆಯ ಮೇಲೆ ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಗಳಿಂದ ಜಲ್ಲಿಕಲ್ಲುಗಳು ಮೇಲೆದ್ದು ರಸ್ತೆಯುದ್ದಕ್ಕೂ ಹರಡಿಕೊಂಡಿವೆ. ಇದರಿಂದ ವಾಹನ ಸವಾರರು ಸುರಕ್ಷಿತವಾಗಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ವಿಶೇಷವಾಗಿ ಘನವಾಹನಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಚಕ್ರಗಳಿಗೆ ಸಿಲುಕುವ ಜಲ್ಲಿಕಲ್ಲುಗಳು ಎಸೆಯಲ್ಪಡುವ ಅಪಾಯವಿದೆ ಎಂದು ಸ್ಥಳೀಯರು ದೂರಿದ್ದಾರೆ. ದ್ವಿಚಕ್ರ ವಾಹನ ಸವಾರರು ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಜಾಗರೂಕತೆಯಿಂದ ಸಂಚರಿಸಬೇಕಾಗಿದ್ದು, ರಸ್ತೆಯ ದುಸ್ಥಿತಿಯಿಂದಾಗಿ ಅಪಘಾತದ ಭೀತಿಯೂ ಎದುರಾಗಿದೆ.
ರಸ್ತೆಯಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಷ್ಟೇ ಅಲ್ಲದೆ, ಹದಗೆಟ್ಟಿರುವ ಭಾಗಗಳಿಗೆ ಗುಣಮಟ್ಟದ ಡಾಮರು ಹಾಕಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮೇಲ್ಮೈ ಕಿತ್ತುಹೋಗಿರುವ ಪ್ರದೇಶಗಳನ್ನು ಗುರುತಿಸಿ ಸಮಗ್ರ ದುರಸ್ತಿ ಕೈಗೊಂಡರೆ ಮಾತ್ರ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಬ್ರಹ್ಮಗಿರಿ ರಸ್ತೆ ಸೇರುವಲ್ಲೇ ಬೃಹತ್ ಹೊಂಡಗಳು
ಅಂಬಲಪಾಡಿಯಲ್ಲಿ ಬ್ರಹ್ಮಗಿರಿ ರಸ್ತೆ ಸರ್ವಿಸ್ ರಸ್ತೆಗೆ ಸೇರುವ ಸ್ಥಳದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಈ ಭಾಗದಲ್ಲಿ ವಾಹನಗಳು ತಿರುವು ಪಡೆಯುವಾಗ ಹಾಗೂ ಮುಖ್ಯ ರಸ್ತೆಗೆ ಸೇರುವಾಗ ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ಇದೆ. ರಸ್ತೆ ಹದಗೆಟ್ಟಿರುವುದರ ಜತೆಗೆ ರಸ್ತೆಯ ಬದಿಯಲ್ಲಿ ಘನವಾಹನಗಳು ಮತ್ತು ಕಾರುಗಳನ್ನು ನಿಲ್ಲಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗುತ್ತಿದೆ.
ಇದರಿಂದ ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ. ಸರ್ವಿಸ್ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಯಂತ್ರಿಸುವುದರ ಜತೆಗೆ ಹೊಂಡಗಳನ್ನು ಮುಚ್ಚಿ ಸಂಚಾರಕ್ಕೆ ಅಗತ್ಯವಾದ ಸ್ಥಳಾವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ಕೆರೆಯಂತಾಗುವ ರಸ್ತೆ; ಚರಂಡಿ ವ್ಯವಸ್ಥೆಯೇ ಇಲ್ಲ
ಸರ್ವಿಸ್ ರಸ್ತೆಗಳ ದುಸ್ಥಿತಿಗೆ ಪ್ರಮುಖ ಕಾರಣಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯೂ ಒಂದಾಗಿದೆ. ರಸ್ತೆಯ ಬದಿಯಲ್ಲಿ ಮಳೆನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಬಂದಾಗ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಕೆಲವು ಪ್ರದೇಶಗಳಲ್ಲಿ ನೀರು ನಿಂತು ರಸ್ತೆ ಕೆರೆಯಂತಾಗುತ್ತದೆ. ಇದರಿಂದ ವಾಹನ ಸವಾರರು ಗುಂಡಿಗಳ ಆಳವನ್ನು ಗುರುತಿಸಲಾಗದೆ ಸಂಕಷ್ಟ ಅನುಭವಿಸುವಂತಾಗುತ್ತದೆ.
ಅಂಬಲಪಾಡಿ ಬೈಪಾಸ್ ಹಾಗೂ ಕರಾವಳಿ ಬೈಪಾಸ್ ಪ್ರದೇಶಗಳಲ್ಲಿ ಮಳೆಯ ಸಂದರ್ಭದಲ್ಲಿ ರಸ್ತೆ ಮೇಲೆ ನೀರು ನಿಲ್ಲುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ನೀರು ಹರಿಯುವುದರಿಂದ ರಸ್ತೆಯ ಡಾಮರು ಸಡಿಲಗೊಂಡು ಕಿತ್ತುಹೋಗುವ ಸಾಧ್ಯತೆಯೂ ಹೆಚ್ಚುತ್ತದೆ. ಹೀಗಾಗಿ ರಸ್ತೆಯ ಮೇಲ್ಮೈ ದುರಸ್ತಿ ಮಾಡುವುದರ ಜತೆಗೆ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವುದು ಅತ್ಯಗತ್ಯವಾಗಿದೆ.
ಕರಾವಳಿ ಬೈಪಾಸ್‌ನಲ್ಲಿ ಸರ್ವಿಸ್ ರಸ್ತೆಯನ್ನು ಅಗತ್ಯಕ್ಕೆ ತಕ್ಕಂತೆ ವಿಸ್ತರಿಸಿ, ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಮಳೆನೀರು ರಸ್ತೆಯಲ್ಲಿ ನಿಲ್ಲದಂತೆ ವೈಜ್ಞಾನಿಕ ರೀತಿಯಲ್ಲಿ ನೀರು ಹರಿದುಹೋಗುವ ವ್ಯವಸ್ಥೆ ರೂಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಳೆ ನಿಂತರೂ ಧೂಳಿನ ಸಮಸ್ಯೆ ತಪ್ಪಿಲ್ಲ
ಅಂಬಲಪಾಡಿ ಬೈಪಾಸ್‌ನಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಕಡೆಗೆ ಸಾಗುವ ಮಾರ್ಗದಲ್ಲಿ ಸರ್ವಿಸ್ ರಸ್ತೆಯ ಡಾಮರು ಕಿತ್ತುಹೋಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮಳೆ ಕಡಿಮೆಯಾದ ಬಳಿಕ ರಸ್ತೆಯ ಮೇಲಿರುವ ಮಣ್ಣು ಮತ್ತು ಸಡಿಲಗೊಂಡಿರುವ ಕಲ್ಲುಗಳಿಂದ ಧೂಳು ವ್ಯಾಪಕವಾಗಿ ಏಳುತ್ತಿದೆ.
ವಾಹನಗಳು ಸಂಚರಿಸುವಾಗ ಧೂಳು ಗಾಳಿಯಲ್ಲಿ ಹರಡುತ್ತಿದ್ದು, ದ್ವಿಚಕ್ರ ವಾಹನ ಸವಾರರು ಕಣ್ಣಿಗೆ ಧೂಳು ಬೀಳುವ ಸಮಸ್ಯೆ ಎದುರಿಸುತ್ತಿದ್ದಾರೆ. ಧೂಳಿನಿಂದಾಗಿ ರಸ್ತೆಯ ಮೇಲಿನ ದೃಶ್ಯ ಸ್ಪಷ್ಟತೆ ಕಡಿಮೆಯಾಗುವ ಸಂದರ್ಭಗಳಲ್ಲಿ ವಾಹನ ಚಾಲನೆ ಕಷ್ಟಕರವಾಗಬಹುದು. ಪಾದಚಾರಿಗಳಿಗೂ ಧೂಳಿನ ಕಿರಿಕಿರಿ ತಪ್ಪುತ್ತಿಲ್ಲ.
ರಸ್ತೆಯ ದುಸ್ಥಿತಿ ಮಳೆಗಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಮಳೆ ಬಂದಾಗ ನೀರು ನಿಲ್ಲುವುದು, ಮಳೆ ಕಡಿಮೆಯಾದಾಗ ಧೂಳು ಏಳುವುದು ಹೀಗೆ ವರ್ಷಪೂರ್ತಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ತಾತ್ಕಾಲಿಕ ಕ್ರಮಗಳ ಬದಲಿಗೆ ರಸ್ತೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

64 ಕಿ.ಮೀ. ಸರ್ವಿಸ್ ರಸ್ತೆ ಕಾಮಗಾರಿಗೆ ಮಂಜೂರಾತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹೆಜಮಾಡಿ ಟೋಲ್ ಬಳಿಯಿಂದ ಕುಂದಾಪುರದ ಸಂಗಮ್‌ವರೆಗೆ ಒಟ್ಟು 64 ಕಿ.ಮೀ. ಉದ್ದದ ಸರ್ವಿಸ್ ರಸ್ತೆ ಕಾಮಗಾರಿಗೆ ಈಗಾಗಲೇ ಮಂಜೂರಾತಿ ದೊರೆತಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಯೋಜನೆಯಲ್ಲಿ 34 ಕಿ.ಮೀ. ಸರ್ವಿಸ್ ರಸ್ತೆ ಕಾಮಗಾರಿ ಸೇರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 30 ಕಿ.ಮೀ. ರಸ್ತೆ ಸೇರ್ಪಡೆಯಾಗಿದ್ದು, ಒಟ್ಟು 64 ಕಿ.ಮೀ. ಉದ್ದದ ಸರ್ವಿಸ್ ರಸ್ತೆ ಅಭಿವೃದ್ಧಿಗೆ ಅವಕಾಶ ದೊರೆತಿದೆ ಎಂದು ಅವರು ಹೇಳಿದ್ದಾರೆ.
ತೆಕ್ಕಟ್ಟೆ, ಕುಂಭಾಶಿ, ಕೋಟೇಶ್ವರ, ಸಾಲಿಗ್ರಾಮದಿಂದ ಅಂಬಾಗಿಲು ಹಾಗೂ ಬಲಾಯಿಪಾದೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈಗ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಹೊಸ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ 64 ಕಿ.ಮೀ. ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ವೇಗ ನೀಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.
ಅಲ್ಲದೆ, ಕರಾವಳಿ ಜಂಕ್ಷನ್‌ನಿಂದ ಕಿನ್ನಿಮೂಲ್ಕಿವರೆಗಿನ ಸರ್ವಿಸ್ ರಸ್ತೆಯ ದುರಸ್ತಿಗೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಂಸದರ ಈ ಹೇಳಿಕೆಯಿಂದ ಸರ್ವಿಸ್ ರಸ್ತೆ ಅಭಿವೃದ್ಧಿಯ ನಿರೀಕ್ಷೆ ಮತ್ತಷ್ಟು ಹೆಚ್ಚಿದೆಯಾದರೂ, ಈಗಾಗಲೇ ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ತಕ್ಷಣದ ಪರಿಹಾರದ ಅಗತ್ಯವಿದೆ. ದೀರ್ಘಾವಧಿಯ ಕಾಮಗಾರಿಗಳು ಆರಂಭವಾಗುವವರೆಗೆ ಕಾಯದೆ, ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸಂಚಾರಯೋಗ್ಯವಾಗಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಭರವಸೆಗಿಂತ ಕಾರ್ಯರೂಪಕ್ಕೆ ಕ್ರಮ ಅಗತ್ಯ: ರಾಘವೇಂದ್ರ ಅಂಬಲಪಾಡಿ
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯರಾದ ರಾಘವೇಂದ್ರ ಅಂಬಲಪಾಡಿ, ರಸ್ತೆಯ ದುಸ್ಥಿತಿಯಿಂದಾಗಿ ಪ್ರತಿದಿನ ವಾಹನ ಸವಾರರು ಅಪಾಯದ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅಂಬಲಪಾಡಿ ಓವರ್‌ಪಾಸ್ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದಿದ್ದರೂ ಕೆಳಗಿನ ಸರ್ವಿಸ್ ರಸ್ತೆಯ ಗುಂಡಿಗಳನ್ನು ಮುಚ್ಚಲು ಯಾರೂ ಮುಂದಾಗಿಲ್ಲ. ಮಳೆ ಬಂದಾಗ ಕೆರೆಯಂತಾಗುವ ರಸ್ತೆ, ಈಗ ಧೂಳಿನಿಂದ ತುಂಬಿಹೋಗಿದೆ. ದ್ವಿಚಕ್ರ ವಾಹನ ಸವಾರರು ಪ್ರತಿದಿನ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಇದೆ. ರಸ್ತೆಯ ದುಸ್ಥಿತಿಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಜನಪ್ರತಿನಿಧಿಗಳು ಕೇವಲ ಭರವಸೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ತಕ್ಷಣ ದುರಸ್ತಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಸರ್ವಿಸ್ ರಸ್ತೆಯ ಗುಂಡಿಗಳನ್ನು ಮುಚ್ಚಿ, ಡಾಮರು ಹಾಕಿ, ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಜನರ ದೈನಂದಿನ ಸಂಚಾರಕ್ಕೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ನಿರೀಕ್ಷೆ: ತುರ್ತು ದುರಸ್ತಿ ಯಾವಾಗ?
ಕರಾವಳಿ ಜಂಕ್ಷನ್‌ನಿಂದ ಕಿನ್ನಿಮೂಲ್ಕಿವರೆಗಿನ ಸರ್ವಿಸ್ ರಸ್ತೆಗಳ ದುಸ್ಥಿತಿ ಈಗ ಸಾರ್ವಜನಿಕರ ದೈನಂದಿನ ಸಮಸ್ಯೆಯಾಗಿ ಪರಿಣಮಿಸಿದೆ. ಅಂಬಲಪಾಡಿ ಓವರ್‌ಪಾಸ್ ಕೆಳಗಿನ ರಸ್ತೆ, ಕರಾವಳಿ ಬೈಪಾಸ್ ಅಂಡರ್‌ಪಾಸ್, ಬ್ರಹ್ಮಗಿರಿ ರಸ್ತೆ ಸೇರುವ ಸ್ಥಳ ಹಾಗೂ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಕಡೆಗಿನ ಮಾರ್ಗಗಳಲ್ಲಿ ತಕ್ಷಣದ ಗಮನ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಒಂದೆಡೆ 64 ಕಿ.ಮೀ. ಸರ್ವಿಸ್ ರಸ್ತೆ ಅಭಿವೃದ್ಧಿ ಯೋಜನೆಗೆ ಮಂಜೂರಾತಿ ದೊರೆತಿರುವುದಾಗಿ ಸಂಸದರು ತಿಳಿಸಿದ್ದಾರೆ. ಮತ್ತೊಂದೆಡೆ, ಈಗಾಗಲೇ ಹದಗೆಟ್ಟಿರುವ ರಸ್ತೆಗಳಲ್ಲಿ ವಾಹನ ಸವಾರರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ದೀರ್ಘಾವಧಿಯ ಅಭಿವೃದ್ಧಿ ಯೋಜನೆಗಳ ಜತೆಗೆ ತುರ್ತು ದುರಸ್ತಿ ಕಾಮಗಾರಿಗೂ ಆದ್ಯತೆ ನೀಡಬೇಕಾಗಿದೆ.
ಗುಂಡಿಗಳನ್ನು ಮುಚ್ಚುವುದು, ಕಿತ್ತುಹೋದ ಡಾಮರನ್ನು ಸರಿಪಡಿಸುವುದು, ರಸ್ತೆಯ ಮೇಲೆ ಹರಡಿರುವ ಜಲ್ಲಿಕಲ್ಲುಗಳನ್ನು ತೆರವುಗೊಳಿಸುವುದು, ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಯಂತ್ರಿಸುವುದು ಹಾಗೂ ಮಳೆನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಕಲ್ಪಿಸುವುದು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳಾಗಿವೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಆರಂಭಿಸಬೇಕು ಎಂಬುದು ಜನರ ಒತ್ತಾಯವಾಗಿದೆ. ಸಂಸದರು ನೀಡಿರುವ ಭರವಸೆ ಯಾವಾಗ ಕಾರ್ಯರೂಪಕ್ಕೆ ಬರಲಿದೆ ಮತ್ತು ಸರ್ವಿಸ್ ರಸ್ತೆಗಳ ದುಸ್ಥಿತಿಗೆ ಯಾವಾಗ ಮುಕ್ತಿ ದೊರೆಯಲಿದೆ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






