ಉಡುಪಿ ಜಿಲ್ಲೆಯಲ್ಲಿ ಜಲಕ್ಷಾಮದ ಆತಂಕ: 123 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ

Date:

ಎಲ್‌ ನಿನೊ ಪ್ರಭಾವ, ಮಳೆಯ ಕೊರತೆ ಹಾಗೂ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕುಡಿಯುವ ನೀರಿನ ಅಭಾವದ ಆತಂಕ ಎದುರಾಗಿದೆ. 2026ರ ನವೆಂಬರ್‌ನಿಂದ 2027ರ ಮೇ ವರೆಗೆ ಜಿಲ್ಲೆಯ 123 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು, ನದಿಗಳ ಒಳಹರಿವು ಕಡಿಮೆಯಾಗುತ್ತಿರುವುದು ಹಾಗೂ ಜಲಮೂಲಗಳ ಮೇಲಿನ ಒತ್ತಡ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

- Advertisement -

ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಲಭ್ಯತೆಯ ಕುರಿತು ಚರ್ಚೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಹೇಗೆ ಸುರಿಯಲಿದೆ ಎಂಬುದರ ಮೇಲೆ ಜಲಕ್ಷಾಮದ ತೀವ್ರತೆ ನಿರ್ಧಾರವಾಗಲಿದೆ. ಪರಿಸ್ಥಿತಿ ಕೈಮೀರುವ ಮೊದಲೇ ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸುವುದು, ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧಪಡಿಸುವುದು ಹಾಗೂ ಅಗತ್ಯವಿರುವ ಗ್ರಾಮಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಶೇ.32ರಷ್ಟು ಮಳೆ ಕೊರತೆ

ಜೂನ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 400.8 ಸೆಂ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ 273.6 ಸೆಂ.ಮೀ. ಮಳೆಯಷ್ಟೇ ದಾಖಲಾಗಿದ್ದು, ಶೇ.32ರಷ್ಟು ಮಳೆ ಕೊರತೆಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಮೂಲಗಳು ತಿಳಿಸಿವೆ.

ಈ ಬಾರಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಬಿಸಿಲಿನ ವಾತಾವರಣವೇ ಹೆಚ್ಚಾಗಿತ್ತು. ಆಗಸ್ಟ್‌ನ ಮೊದಲ ಎರಡು ವಾರಗಳಲ್ಲಿ ಮಳೆಯಾಗಿದ್ದರೂ, ಬಳಿಕ ಮತ್ತೆ ಬಿಸಿಲು ಮುಂದುವರಿದಿತ್ತು. ಸೆಪ್ಟೆಂಬರ್‌ನಲ್ಲಿಯೂ ತಾಪಮಾನ ಏರಿಕೆಯಾಗಿದ್ದು, ಸೆ.21ರಂದು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ಮಳೆಯ ಕೊರತೆ ಮತ್ತು ನಿರಂತರ ಬಿಸಿಲಿನಿಂದಾಗಿ ನದಿಗಳು, ಕೆರೆಗಳು ಹಾಗೂ ಇತರ ಜಲಮೂಲಗಳಿಗೆ ನೀರಿನ ಮರುಪೂರಣ ಕಡಿಮೆಯಾಗುವ ಆತಂಕವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನದಿಗಳಲ್ಲಿ ಒಳಹರಿವು ಈಗಾಗಲೇ ಕುಸಿಯುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ.

ಭತ್ತದ ಇಳುವರಿಗೂ ಬಿಸಿಲಿನ ಹೊಡೆತ

ಮಳೆಯ ಕೊರತೆ ಕುಡಿಯುವ ನೀರಿನ ಮೇಲಷ್ಟೇ ಅಲ್ಲದೆ ಕೃಷಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಭತ್ತದ ಕಾಳು ಕಟ್ಟುವ ಹಂತದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದರಿಂದ ಇಳುವರಿ ಕುಸಿಯುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್‌ನಲ್ಲೇ ಹೆಚ್ಚಿದ ತಾಪಮಾನ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲಾದ್ಯಂತ ಸಾಧಾರಣ ಮಳೆಯಾಗುತ್ತಿರುವುದು ಸ್ವಲ್ಪ ಆಶಾಭಾವನೆ ಮೂಡಿಸಿದೆ. ಹಿಂಗಾರು ಮಳೆ ಉತ್ತಮವಾಗಿ ಸುರಿದರೆ ನದಿಗಳ ಒಳಹರಿವು ಹೆಚ್ಚಾಗಿ ಜಲಮೂಲಗಳಿಗೆ ಮರುಪೂರಣವಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ ಮಳೆ ಕೈಕೊಟ್ಟರೆ ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ.

ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಅಳವಡಿಕೆ

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಪೂರಕವಾಗಿರುವ ಕಿಂಡಿ ಅಣೆಕಟ್ಟೆಗಳಿಗೆ ಹಲಗೆ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ 691 ಕಿಂಡಿ ಅಣೆಕಟ್ಟೆಗಳ ಪೈಕಿ ಶೇ.50ರಷ್ಟು ಅಣೆಕಟ್ಟೆಗಳಿಗೆ ಈಗಾಗಲೇ ಹಲಗೆ ಅಳವಡಿಸಲಾಗಿದೆ ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅರುಣ್‌ ಭಂಡಾರಿ ತಿಳಿಸಿದ್ದಾರೆ.

ಹಲಗೆ ಅಳವಡಿಸಿದ ಬಳಿಕ ಭಾರಿ ಮಳೆಯಾದರೆ ನೀರಿನ ಹರಿವಿಗೆ ಅನುಕೂಲವಾಗುವಂತೆ ಅವುಗಳನ್ನು ಮತ್ತೆ ತೆಗೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ರೈತರು ಹಲಗೆ ತೆಗೆಯಲು ಒತ್ತಾಯಿಸುವುದರಿಂದ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಕಿಂಡಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ಧಿಗೆ ನೆರವಾಗಬಹುದು. ಹೀಗಾಗಿ ಮಳೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ನೀರಿನ ಸಂಗ್ರಹ ಮತ್ತು ಹರಿವಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.

Screenshot 2026 10 25 231438

ಬಜೆ ಅಣೆಕಟ್ಟೆಗೆ ಬಂಡ್‌ ನಿರ್ಮಾಣ ಪೂರ್ಣ

ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ಬಜೆ ಅಣೆಕಟ್ಟೆಯಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಳಹರಿವು ಕಡಿಮೆಯಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಜೆ ಅಣೆಕಟ್ಟೆಗೆ ಬಂಡ್‌ ನಿರ್ಮಿಸುವ ಕಾರ್ಯವನ್ನು ನಿಗದಿತ ಅವಧಿಗಿಂತ ಎರಡು ತಿಂಗಳು ಮುಂಚಿತವಾಗಿ ಕೈಗೊಂಡು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಚಿತವಾಗಿಯೇ ಬಂಡ್‌ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ನಗರಕ್ಕೆ ವಾರಾಹಿ ನೀರನ್ನು ಶೀಘ್ರವಾಗಿ ಪೂರೈಸುವಂತೆಯೂ ಸೂಚಿಸಲಾಗಿದೆ. ಕಾರ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾದರೆ ಬಜೆ ಅಣೆಕಟ್ಟೆಯ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ. ವಾರಾಹಿ ನೀರಿನ ಲಭ್ಯತೆಯಿಂದ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ ಅಂತ್ಯಕ್ಕೆ ಸಮಸ್ಯೆ ಸಾಧ್ಯತೆ

ಜಿಲ್ಲೆಯಲ್ಲಿ ಸದ್ಯ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೊಳವೆಬಾವಿಗಳಲ್ಲಿನ ನೀರಿನ ಮಟ್ಟವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌ ತಿಳಿಸಿದ್ದಾರೆ.

Screenshot 2026 10 25 231616

ಮಳೆ ಮುಂದುವರಿಯದಿದ್ದರೆ ಡಿಸೆಂಬರ್‌ ಅಂತ್ಯದ ವೇಳೆಗೆ ನೀರಿನ ಸಮಸ್ಯೆ ಎದುರಾಗಬಹುದು. ಕಳೆದ ವರ್ಷ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾತ್ರ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗಿತ್ತು. ಈ ಬಾರಿ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಖಾಸಗಿ ಬಾವಿ ಮತ್ತು ಕೊಳವೆಬಾವಿಗಳನ್ನು ಗ್ರಾಮ ಪಂಚಾಯಿತಿಗಳು ಈಗಾಗಲೇ ಗುರುತಿಸಿವೆ. ಅಗತ್ಯಬಿದ್ದರೆ ಅವುಗಳಿಂದ ನೀರು ಪಡೆದು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

₹2.5 ಕೋಟಿ ಅನುದಾನದಲ್ಲಿ 236 ಕಾಮಗಾರಿ

ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಸರ್ಕಾರದಿಂದ ₹2.5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅನುದಾನದಡಿ 236 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಹೊಸ ಬಾವಿ ಮತ್ತು ಕೊಳವೆಬಾವಿ ಕೊರೆಯುವುದು, ಹಾಲಿ ಬಾವಿ ಹಾಗೂ ಕೊಳವೆಬಾವಿಗಳ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಕಾರ್ಯಪಡೆಯನ್ನೂ ಸಿದ್ಧವಾಗಿಡಲಾಗಿದೆ.

ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಬೇಸಿಗೆಯಲ್ಲಿ ಸಂಕಷ್ಟ

ಜಿಲ್ಲೆಯಲ್ಲಿ 123 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಮಳೆ ಮುಗಿಯುವವರೆಗೆ ಕಾಯದೆ ಈಗಿನಿಂದಲೇ ಸಮಗ್ರ ಯೋಜನೆ ರೂಪಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಮಸ್ಯೆ ತಲೆದೋರಿದ ಬಳಿಕ ಟ್ಯಾಂಕರ್‌ ಮೂಲಕ ನೀರು ಪೂರೈಸುವುದಕ್ಕಿಂತ ಮುಂಚಿತವಾಗಿಯೇ ನೀರಿನ ಮೂಲಗಳನ್ನು ಗುರುತಿಸಿ, ಅವುಗಳ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಪರ್ಯಾಯ ಮೂಲಗಳನ್ನು ಸಿದ್ಧಪಡಿಸುವುದು ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಿನಲ್ಲಿ, ಹಿಂಗಾರು ಮಳೆಯ ನಿರೀಕ್ಷೆಯ ನಡುವೆಯೇ ಉಡುಪಿ ಜಿಲ್ಲೆಯಲ್ಲಿ ಮುಂದಿನ ಬೇಸಿಗೆಯ ಕುಡಿಯುವ ನೀರಿನ ಲಭ್ಯತೆ ಮಹತ್ವದ ಪ್ರಶ್ನೆಯಾಗಿದೆ. ಮಳೆ ಉತ್ತಮವಾಗಿ ಸುರಿದರೆ ಪರಿಸ್ಥಿತಿ ಸುಧಾರಿಸಬಹುದು. ಇಲ್ಲದಿದ್ದರೆ ಗ್ರಾಮೀಣ ಪ್ರದೇಶಗಳ ಜತೆಗೆ ನಗರ ಪ್ರದೇಶಗಳ ಮೇಲೂ ನೀರಿನ ಒತ್ತಡ ಹೆಚ್ಚುವ ಸಾಧ್ಯತೆಯಿದೆ. ಹೀಗಾಗಿ ಲಭ್ಯವಿರುವ ಜಲಮೂಲಗಳ ಸಂರಕ್ಷಣೆ, ಸಮರ್ಪಕ ನೀರಿನ ನಿರ್ವಹಣೆ ಮತ್ತು ತುರ್ತು ಪೂರೈಕೆ ವ್ಯವಸ್ಥೆಗಳ ಸಿದ್ಧತೆಯೇ ಮುಂಬರುವ ತಿಂಗಳುಗಳಲ್ಲಿ ನಿರ್ಣಾಯಕವಾಗಲಿದೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಸಾಮಾಜಿಕ, ಶೈಕ್ಷಣಿಕ ಸೇವೆಗಳಿಗೆ ಸಹಕಾರಿ ಸಂಸ್ಥೆಗಳು ಆದ್ಯತೆ ನೀಡಲಿ: ದುಗ್ಗಣ್ಣ ಸಾವಂತ್

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ...

ರಾಯಚೂರು | ದಸರಾ ವೇಳೆ ದಲಿತ ಸಚಿವರನ್ನು ತಡೆದ ಆರೋಪ: ಮೈಸೂರು ಎಸ್‌ಪಿ ವಿರುದ್ಧ ಕ್ರಮಕ್ಕೆ ಹನುಮಂತಪ್ಪ ಮನ್ನಾಪುರಿ ಆಗ್ರಹ

ಮೈಸೂರಿನ ದಸರಾ ಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ತೆರಳುತ್ತಿದ್ದ...

ಚಿಕ್ಕಮಗಳೂರು | ಮರ ಎಳೆಯಲು ಕಟ್ಟಿದ್ದ ಹಗ್ಗದಿಂದ ಸವಾರ ಸಾವು 

ಚಿಕ್ಕಮಗಳೂರು ತಾಲೂಕಿನ ಹೊರವಲಯದ ತೇಗೂರು ಗ್ರಾಮದ ಬಳಿ ಟ್ರ್ಯಾಕ್ಟರ್‌ಗೆ ಕಟ್ಟಿದ್ದ ಹಗ್ಗ...

ಉಡುಪಿ | ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ, ‘ಯುವ ರಂಗ ಸಂಗಮ’ ಪೋಸ್ಟರ್ ಬಿಡುಗಡೆ

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಪ್ರಯುಕ್ತ...