ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಮತ್ತು ಸೇನಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾಕು ಹಂದಿಗಳು ಸರಣಿಯಾಗಿ ಸಾವನ್ನಪ್ಪುತ್ತಿರುವ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಈ ಸಾವುಗಳ ಹಿಂದಿರುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಾರದಿರುವುದರಿಂದ ಪಶುಸಂಗೋಪನಾ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ಆಫ್ರಿಕನ್ ಸ್ವೈನ್ ಫೀವರ್ (ASF) ಸೋಂಕಿನ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿಲ್ಲ.
ಈಗಾಗಲೇ ಎರಡು ಕಾಡು ಹಂದಿ ಹಾಗೂ ಒಂದು ಸಾಕು ಹಂದಿಯ ಮಾದರಿಗಳನ್ನು ಮಂಗಳೂರು ಮತ್ತು ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಹಾಗೂ ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಜನರಲ್ಲಿ ಕಾಣಿಸಿಕೊಳ್ಳುವ “ಸ್ವೈನ್ ಫ್ಲೂ” ಮತ್ತು ಹಂದಿಗಳಲ್ಲಿ ಕಂಡುಬರುವ ಆಫ್ರಿಕನ್ ಸ್ವೈನ್ ಫೀವರ್ ಸಂಪೂರ್ಣ ವಿಭಿನ್ನ ಕಾಯಿಲೆಗಳು. ಈ ವೈರಸ್ ಮನುಷ್ಯರಿಗೆ ಅಥವಾ ಇತರ ಪ್ರಾಣಿಗಳಿಗೆ ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ ಯಾವುದೇ ಅಸಹಜ ಹಂದಿ ಸಾವು ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಆಫ್ರಿಕನ್ ಸ್ವೈನ್ ಫೀವರ್ ಎಂದರೇನು?
ಹಂದಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಮುಖ ಮೂರು ಕಾಯಿಲೆಗಳೆಂದರೆ ಆಫ್ರಿಕನ್ ಸ್ವೈನ್ ಫೀವರ್, ಕ್ಲಾಸಿಕಲ್ ಸ್ವೈನ್ ಫೀವರ್ ಮತ್ತು ಹೆಮರೇಜಿಕ್ ಸೆಪ್ಟಿಸೀಮಿಯಾ (ಗರಳೆ ರೋಗ). ಇವುಗಳಲ್ಲಿ ಕ್ಲಾಸಿಕಲ್ ಸ್ವೈನ್ ಫೀವರ್ ಮತ್ತು ಗರಳೆ ರೋಗಕ್ಕೆ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿದ್ದರೂ, ಆಫ್ರಿಕನ್ ಸ್ವೈನ್ ಫೀವರ್ಗೆ ಇದುವರೆಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ.
ಈ ವೈರಸ್ ಮೊದಲು ಆಫ್ರಿಕಾದಲ್ಲಿ ಪತ್ತೆಯಾಗಿದ್ದರಿಂದ ಈ ಹೆಸರು ಬಂದಿದೆ. ಭಾರತದಲ್ಲಿ ಮೊದಲ ಬಾರಿಗೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ನಂತರ ದೇಶದ ಹಲವು ಭಾಗಗಳಿಗೆ ಹರಡಿದ್ದು, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆ ಭಾಗದಲ್ಲಿಯೂ ನಾಲ್ಕು ವರ್ಷಗಳ ಹಿಂದೆ ಹಂದಿ ಫಾರ್ಮ್ನಲ್ಲಿ ಸೋಂಕು ಪತ್ತೆಯಾಗಿದ್ದ ಪ್ರಕರಣ ದಾಖಲಾಗಿತ್ತು.
ರೋಗದ ಲಕ್ಷಣಗಳು
ಸೋಂಕಿತ ಹಂದಿಗಳಲ್ಲಿ ಮೊದಲಿಗೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ನಿಶ್ಯಕ್ತಿ, ಉಸಿರಾಟದ ತೊಂದರೆ, ಆಹಾರ ಸೇವನೆ ನಿಲ್ಲುವುದು, ಕೆಲವೊಮ್ಮೆ ಬೇಧಿ ಕಾಣಿಸಿಕೊಳ್ಳುತ್ತದೆ. ಈ ರೋಗ ತಗುಲಿದ ಹಂದಿಗಳು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದ್ದು, ಬೆಳಗ್ಗೆ ಅಸ್ವಸ್ಥಗೊಂಡ ಹಂದಿ ಸಂಜೆ ವೇಳೆಗೆ ಮೃತಪಟ್ಟಿರುವ ಉದಾಹರಣೆಗಳಿವೆ.
ವೈರಸ್ ನೀರು, ದೈಹಿಕ ಸಂಪರ್ಕ ಹಾಗೂ ಸೋಂಕಿತ ವಸ್ತುಗಳ ಮೂಲಕ ಒಂದು ಹಂದಿಯಿಂದ ಮತ್ತೊಂದು ಹಂದಿಗೆ ವೇಗವಾಗಿ ಹರಡುತ್ತದೆ.
ಹೇಗೆ ಹರಡುತ್ತದೆ?
ಹವಾಮಾನ ವೈಪರೀತ್ಯ, ರೋಗನಿರೋಧಕ ಶಕ್ತಿ ಕುಂದುವುದು, ಕಲುಷಿತ ನೀರು ಮತ್ತು ಸೋಂಕಿತ ಹಂದಿಗಳ ಸಂಪರ್ಕದಿಂದ ವೈರಸ್ ಹರಡಬಹುದು. ಸೋಂಕಿನಿಂದ ಮೃತಪಟ್ಟ ಸಾಕು ಹಂದಿಗಳನ್ನು ಅರಣ್ಯ ಪ್ರದೇಶದಲ್ಲಿ ಎಸೆದರೆ, ಅದರ ಮೂಲಕ ಕಾಡು ಹಂದಿಗಳಿಗೂ ವೈರಸ್ ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪಶ್ಚಿಮ ಘಟ್ಟಕ್ಕೂ ಅಪಾಯ?
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಮಾರು 15 ರಿಂದ 20 ಸಾವಿರ ಕಾಡು ಹಂದಿಗಳಿವೆ ಎಂದು ಅಂದಾಜಿಸಲಾಗಿದೆ. ಬೈಂದೂರು ಮತ್ತು ಕುಂದಾಪುರ ಭಾಗಗಳಲ್ಲಿ ಇತ್ತೀಚೆಗೆ ಹತ್ತಾರು ಹಂದಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ವರದಿಯಲ್ಲಿ ASF ದೃಢಪಟ್ಟರೆ ಸೋಂಕು ಇಡೀ ಪಶ್ಚಿಮ ಘಟ್ಟದ ಕಾಡು ಹಂದಿಗಳಿಗೂ ಹರಡುವ ಅಪಾಯವಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಸೋಂಕು ದೃಢಪಟ್ಟರೆ ಏನು ಕ್ರಮ?
ಆಫ್ರಿಕನ್ ಸ್ವೈನ್ ಫೀವರ್ ದೃಢಪಟ್ಟರೆ ಸೋಂಕಿತ ಫಾರ್ಮ್ನಲ್ಲಿರುವ ಎಲ್ಲಾ ಹಂದಿಗಳನ್ನು ಕಲ್ಲಿಂಗ್ ಮಾಡಬೇಕಾಗುತ್ತದೆ. ಮೃತ ಹಂದಿಗಳನ್ನು ಸುಮಾರು ಎಂಟು ಅಡಿ ಆಳದಲ್ಲಿ ರಾಸಾಯನಿಕ ಬಳಸಿ ಹೂಳಲಾಗುತ್ತದೆ.
ಇದರ ಜೊತೆಗೆ ಸೋಂಕಿತ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಸಾಕು ಹಂದಿಗಳನ್ನೂ ಕಲ್ಲಿಂಗ್ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ. ಹತ್ತು ಕಿಲೋಮೀಟರ್ ವ್ಯಾಪ್ತಿಯನ್ನು ಬಫರ್ ವಲಯ ಎಂದು ಘೋಷಿಸಿ ಪಶುಸಂಗೋಪನಾ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ನಿಗಾ ವಹಿಸುತ್ತವೆ. ಪ್ರತಿಯೊಂದು ಹಂದಿ ಫಾರ್ಮ್ಗೆ ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುವ ಜೊತೆಗೆ ಆರೋಗ್ಯವಂತ ಹಂದಿಗಳ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗುತ್ತದೆ.
ಸದ್ಯ ಪ್ರಯೋಗಾಲಯದ ವರದಿ ಬಾಕಿ ಇರುವುದರಿಂದ ಹಂದಿಗಳ ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ವರದಿ ಬರುವವರೆಗೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ನಿಗಾ ಮುಂದುವರಿಸಿದ್ದಾರೆ.





