ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯತ್ವದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
ಜಮ್ಮುವಿನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಫಮರ್ ಅಬ್ದುಲ್ಲಾ, “ನಾವು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೆ ಆಗಲ್ಲ ಎನ್ನುತ್ತಾರೆ, ಪ್ರತಿಭಟನೆ ಮಾಡಿದರೆ ಆಗಲ್ಲ ಎನ್ನುತ್ತಾರೆ, ಈಗ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಿದರೂ ರಾಜ್ಯತ್ವ ಸಿಗುವುದಿಲ್ಲ ಎನ್ನುತ್ತಾರೆ. ಹಾಗಾದರೆ, ರಾಜ್ಯತ್ವಕ್ಕಾಗಿ ನಾನು ವೈಟ್ ಹೌಸ್ಗೆ ಹೋಗಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಬೇಕೇ?” ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯನ್ನು ಗೌರವಿಸಬೇಕು ಮತ್ತು ರಾಜ್ಯತ್ವ ನೀಡಲು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರದ ವಿಳಂಬ ನೀತಿಯನ್ನು ಲೇವಡಿ ಮಾಡಲು ಓಮರ್ ಅಬ್ದುಲ್ಲಾ ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೆಸರಿನ ಅಣಕು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಟ್ರಂಪ್ ಅವರು ಜಮ್ಮು-ಕಾಶ್ಮೀರದ ರಾಜ್ಯತ್ವವನ್ನು ಬೆಂಬಲಿಸುತ್ತಿರುವಂತೆ ಮತ್ತು ಓಮರ್ ಅಬ್ದುಲ್ಲಾ ಅವರನ್ನು ಶ್ಲಾಘಿಸುತ್ತಿರುವಂತೆ ಈ ವ್ಯಂಗ್ಯಾತ್ಮಕ ಪೋಸ್ಟ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ಇದಕ್ಕೆ “If Only” (ಒಂದು ವೇಳೆ ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು) ಎಂಬ ಶೀರ್ಷಿಕೆಯನ್ನು ಒಮರ್ ನೀಡಿದ್ದಾರೆ.

ಜುಲೈ 20 ರಂದು, ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ದಿನದಂದು ನವದೆಹಲಿಯ ಜಂತರ್ ಮಂತರ್ನಲ್ಲಿ ರಾಷ್ಟ್ರೀಯ ಸಮ್ಮೇಳನ (ನ್ಯಾಷನಲ್ ಕಾನ್ಫರೆನ್ಸ್) ಪಕ್ಷವು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಅಬ್ದುಲ್ಲಾ ಘೋಷಿಸಿದ್ದಾರೆ. 2019 ರಲ್ಲಿ ಆರ್ಟಿಕಲ್ 370 ರದ್ದುಪಡಿಸಿದ ನಂತರ, ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದ್ದು, ರಾಜ್ಯತ್ವ ಮರುಸ್ಥಾಪನೆಯು ಅಲ್ಲಿನ ಪ್ರಮುಖ ರಾಜಕೀಯ ಬೇಡಿಕೆಯಾಗಿದೆ.
ಇದನ್ನೂ ಓದಿ: ರಷ್ಯಾ ಮೇಲಿನ ಅಮೆರಿಕ ಸುಂಕ 500%ರಿಂದ 100%ಗೆ ಇಳಿಕೆ: ಭಾರತ, ಚೀನಾಗೆ ನಿರಾಳತೆ
ರಾಜ್ಯ ಸ್ಥಾನಮಾನ ವಿಚಾರದ ಜೊತೆಗೆ ಮತ್ತೊಂದು ರಾಜಕೀಯ ಸಂಘರ್ಷವೂ ಭುಗಿಲೆದ್ದಿದೆ. ತನ್ನ ಪಕ್ಷದ ಶಾಸಕರನ್ನು ಹಣ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಓಮರ್ ಅಬ್ದುಲ್ಲಾ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ, ಈ ಆರೋಪಕ್ಕೆ ಸಾಕ್ಷಿ ಒದಗಿಸುವಂತೆ ಅಥವಾ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಬಿಜೆಪಿ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆಯೊಂದಿಗೆ ಕಾನೂನು ನೋಟಿಸ್ ನೀಡಿದೆ. ಈ ನೋಟಿಸ್ ಅನ್ನು ಓಮರ್ ಅಬ್ದುಲ್ಲಾ “ಬಿಜೆಪಿಯಿಂದ ಬಂದ ಲವ್ ಲೆಟರ್” ಎಂದು ವ್ಯಂಗ್ಯವಾಗಿ ಕರೆದಿದ್ದಾರೆ.
ಜಮ್ಮು & ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ರಾಜಕೀಯ ಹಗ್ಗಜಗ್ಗಾಟವನ್ನು ತೀವ್ರಗೊಳಿಸಿರುವ ಓಮರ್ ಅಬ್ದುಲ್ಲಾ, ಸಂಸತ್ತಿನ ಅಧಿವೇಶನದ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಒತ್ತಡ ಹೇರಲು ಸಜ್ಜಾಗಿದ್ದಾರೆ.




