ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅನುಷ್ಠಾನ, ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಹಾಗೂ ಪುನರ್ವಸತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕ್ರಮ ಕೈಗೊಳ್ಳಲು ರಚಿಸಲಾಗುವ ಜಿಲ್ಲಾ ಮಟ್ಟದ ಜಾಗೃತ ಸಮಿತಿಗೆ ನಾಮನಿರ್ದೇಶಿತ ಸದಸ್ಯರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ಸುತ್ತೋಲೆಯಂತೆ ಸಮಿತಿಗೆ ಪರಿಶಿಷ್ಟ ಜಾತಿಯಿಂದ 3 ಮಂದಿ, ಪರಿಶಿಷ್ಟ ಪಂಗಡದಿಂದ 2 ಮಂದಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರದ ಇತರ ಪ್ರವರ್ಗಗಳಿಂದ 3 ಮಂದಿ ಸೇರಿದಂತೆ ಒಟ್ಟು 8 ಮಂದಿಯನ್ನು ಮೂರು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಲಾಗುತ್ತದೆ.
ಜಿಲ್ಲೆಯ ಆಸಕ್ತ ಸರ್ಕಾರಿ ನೌಕರರಲ್ಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹಾಗೂ ಇತರ ಪ್ರವರ್ಗಗಳಿಗೆ ಸೇರಿದವರು ಸಮಿತಿಯ ಸದಸ್ಯರಾಗಲು ಅರ್ಜಿ ಸಲ್ಲಿಸಬಹುದು.
ಆಸಕ್ತರು ತಮ್ಮ ಸ್ವವಿವರವುಳ್ಳ ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ್ದಲ್ಲಿ ಅದರ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಲಗತ್ತಿಸಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಸ್ಟ್ 21ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, 2ನೇ ಮಹಡಿ, ಬಿ ಬ್ಲಾಕ್, ಮಣಿಪಾಲ ಅವರನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.






