ಬೈಂದೂರು ತಾಲೂಕಿನ ನಾಡ ಗ್ರಾಮದ ಸರ್ವೆ ನಂ.183ರ 278.03 ಎಕರೆ ಜಮೀನಿನ ಪೊಡಿ ದುರಸ್ತಿ ಸಮಸ್ಯೆ ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿದ್ದು, ಇದರ ಪರಿಣಾಮವಾಗಿ ಕೊರಗ ಸಮುದಾಯದ ಸುಮಾರು 15 ಕುಟುಂಬಗಳು, ದಲಿತ ಸಮುದಾಯದ 30ಕ್ಕೂ ಅಧಿಕ ಕುಟುಂಬಗಳು ಸೇರಿದಂತೆ ನೂರಾರು ರೈತ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ.
ಒಂದೇ ಸರ್ವೆ ಸಂಖ್ಯೆಯಲ್ಲಿರುವ ಭೂಮಿಗಳಿಗೆ ನಿಖರವಾದ ವಿಸ್ತೀರ್ಣ ಹಾಗೂ ಪ್ರತ್ಯೇಕ ದಾಖಲೆಗಳು ಲಭ್ಯವಾಗದ ಕಾರಣ ಕೃಷಿ ಸಾಲ, ಗೃಹ ಸಾಲ, ಬೆಳೆ ವಿಮೆ, ಸರ್ಕಾರಿ ಯೋಜನೆಗಳ ಸೌಲಭ್ಯ ಸೇರಿದಂತೆ ವಿವಿಧ ಆರ್ಥಿಕ ನೆರವುಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಇದೇ ಸರ್ವೆ ಸಂಖ್ಯೆಯಲ್ಲಿ ವಾಸವಿರುವ ಎರಡು ಕೊರಗ ಕುಟುಂಬಗಳು ಕಳೆದ ಮೂರು ವರ್ಷಗಳಿಂದ ಗೃಹಸಾಲಕ್ಕಾಗಿ ಕಾಯುತ್ತಿದ್ದು, ಇಂದಿಗೂ ಸಮಸ್ಯೆ ಪರಿಹಾರವಾಗಿಲ್ಲ.
2023ರ ಜುಲೈ 5ರಂದು ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ವಿಶೇಷ ಸಭೆಯನ್ನು ಕುಂದಾಪುರ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಸಭೆಯಲ್ಲಿ ಸರ್ವೆ ನಂ.183ರಲ್ಲಿ ಮಂಜೂರಾಗಿ ಸ್ವಾಧೀನದಲ್ಲಿರುವ ಭೂಮಿಗಳ ಪೊಡಿ ದುರಸ್ತಿಯನ್ನು ತುರ್ತಾಗಿ ಕೈಗೊಳ್ಳುವಂತೆ ಸೇರಿದಂತೆ ಹಲವು ತೀರ್ಮಾನಗಳನ್ನು ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಸುಮಾರು ಮೂರು ವರ್ಷಗಳು ಕಳೆದರೂ ಬಹುತೇಕ ತೀರ್ಮಾನಗಳು ಅನುಷ್ಠಾನಗೊಂಡಿಲ್ಲ.
ಕಳೆದ ಎರಡು ವರ್ಷಗಳಿಂದ ನಾಡ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳು ಪೊಡಿ ದುರಸ್ತಿ ಕಡತವನ್ನು ಸಿದ್ಧಪಡಿಸಿ ತಾಲೂಕು ಕಚೇರಿಗೆ ಸಲ್ಲಿಸಿದ್ದರೂ, ಭೂಮಿಯ ವಿಸ್ತೀರ್ಣ ಹಾಗೂ ದಾಖಲೆಗಳ ತಾಳೆಯಾಗದ ಹಿನ್ನೆಲೆಯಲ್ಲಿ ಕಡತವನ್ನು ಮರು ಪರಿಶೀಲನೆಗಾಗಿ ಹಿಂದಿರುಗಿಸಲಾಗಿದೆ. ಈ ಮಧ್ಯೆ ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ವರ್ಗಾವಣೆಯಾಗಿದ್ದು, ಪ್ರಸ್ತುತ ಅಧಿಕಾರಿಗಳು ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದರೂ ಕಡತದ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಆಡಳಿತಾತ್ಮಕ ವಿಳಂಬ ಮತ್ತು ನಿರ್ಲಕ್ಷ್ಯದಿಂದ ನಾಡ ಗ್ರಾಮದ ರೈತರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ವರ್ಷಗಳಿಂದ ಅಲೆದಾಡುವಂತಾಗಿದೆ. ಆದ್ದರಿಂದ ಸರ್ಕಾರ ಹಾಗೂ ಕಂದಾಯ ಇಲಾಖೆ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸರ್ವೆ ನಂ.183ರ ಪೊಡಿ ದುರಸ್ತಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕೊರಗ, ದಲಿತ ಸಮುದಾಯ ಸೇರಿದಂತೆ ನೂರಾರು ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಆಗ್ರಹಿಸಿದ್ದಾರೆ.






