ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಕಾನೂನುಬದ್ಧವಾಗಿ ನೋಂದಣಿ ಮಾಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯು ಭಾಲ್ಕಿ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
“100 ವರ್ಷಗಳ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್ ಇನ್ನೂ ನೋಂದಣಿ ಆಗಿಲ್ಲ ಎಂಬ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಅದರ ಆದಾಯದ ಮೂಲ ಹಾಗೂ ಕಾನೂನುಬದ್ಧ ಸ್ಥಿತಿಗತಿ ಕುರಿತು ಸ್ಪಷ್ಟತೆ ಅಗತ್ಯವಿದೆ. ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಂಘ-ಸಂಸ್ಥೆಗಳು ಮತ್ತು ಸಂಘಟನೆಗಳು ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕೆಂಬುದು ಸರ್ಕಾರದ ನಿಲುವಾಗಿದ್ದು, ಇದೇ ನಿಯಮ ಆರ್‌ಎಸ್‌ಎಸ್‌ಗೂ ಅನ್ವಯವಾಗಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
“ಆರ್‌ಎಸ್‌ಎಸ್‌ನ್ನು ಈ ಹಿಂದೆ ಮೂರು ಬಾರಿ ನಿಷೇಧಿಸಲಾಗಿದ್ದು, ನಂತರ ನಿಷೇಧ ತೆರವುಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಆರ್‌ಎಸ್‌ಎಸ್ ನೋಂದಣಿ ಯಾಕೆ ಆಗಿಲ್ಲ ಹಾಗೂ ಅದರ ಆರ್ಥಿಕ ಮೂಲಗಳ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಪತ್ರ ಬರೆದು ಕೆಲವು ಪ್ರಶ್ನೆಗಳನ್ನು ಕೇಳಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಉತ್ತರಿಸುವ ಬದಲು ಅವರನ್ನು ನಿಂದಿಸುವುದು, ‘ದಲಿತರಿಗೆ ಏಕೆ ಬೇಕು ಆರ್‌ಎಸ್‌ಎಸ್ ಉಸಾಬರಿ’ ಎನ್ನುವ ಮಾತುಗಳನ್ನು ಜನರಿಂದ ಆಯ್ಕೆಯಾದ ಸಂಸದರೊಬ್ಬರು ಹೇಳಿರುವುದು ವಿಷಾದನೀಯ” ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ದೇಶದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಂಘ-ಸಂಸ್ಥೆ, ರಾಜಕೀಯ ಪಕ್ಷ, ಟ್ರಸ್ಟ್ ಅಥವಾ ಕಂಪನಿಗಳು ಕಾನೂನುಬದ್ಧವಾಗಿ ನೋಂದಣಿ ಹೊಂದಿರಬೇಕು ಮತ್ತು ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪದೇ ಪದೇ ಹೇಳುತ್ತಿವೆ. ಇದೇ ನಿಯಮ ದೇಶದ ಎಲ್ಲ ಸಂಘಟನೆಗಳಿಗೂ ಅನ್ವಯವಾಗುವಂತೆ ಆರ್‌ಎಸ್‌ಎಸ್‌ಗೂ ಅನ್ವಯವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಸ್ಥಾಪಕ ಅಧ್ಯಕ್ಷ ಗಗನ ಫುಲೆ ಮಾತನಾಡಿ, “ಭಾರತದ ಸಂವಿಧಾನ ಮತ್ತು ಕಾನೂನನ್ನು ಗೌರವಿಸುವ ಪ್ರತಿಯೊಬ್ಬ ನಾಗರಿಕ ಮತ್ತು ಸಂಘಟನೆಗೆ ತಮ್ಮ ಚಟುವಟಿಕೆಗಳನ್ನು ನಡೆಸುವ ಸ್ವಾತಂತ್ರ್ಯವಿದೆ. ಆದರೆ ಆ ಸ್ವಾತಂತ್ರ್ಯವು ಕಾನೂನಿನ ವ್ಯಾಪ್ತಿಯೊಳಗೇ ಇರಬೇಕು. ದೇಶದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆ ಎಂದು ಹೇಳಲಾಗುವ ಆರ್‌ಎಸ್‌ಎಸ್ ಕೂಡ ಕಾನೂನುಬದ್ಧ ನೋಂದಣಿ ಪ್ರಕ್ರಿಯೆಗೆ ಒಳಪಡುವುದು ಅಗತ್ಯವಾಗಿದೆ” ಎಂದರು.
“ಒಂದು ವೇಳೆ 100 ವರ್ಷಗಳ ಇತಿಹಾಸ ಹೊಂದಿರುವ ಸಂಘಟನೆ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದರೆ, ಇತರ ಸಂಘಟನೆಗಳೂ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸಬಹುದು ಎಂಬ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಇದು ಕಾನೂನು ಪಾಲನೆಗೆ ಧಕ್ಕೆಯುಂಟುಮಾಡುವ ಜೊತೆಗೆ ಅನಗತ್ಯ ಗೊಂದಲಗಳಿಗೆ ಕಾರಣವಾಗಬಹುದು” ಎಂದು ತಿಳಿಸಿದರು.
ಇದನ್ನೂ ಓದಿ : ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹ
ಈ ಸಂದರ್ಭದಲ್ಲಿ ಪ್ರಮುಖರಾದ ಲೋಕೇಶ ಕಾಂಬಳೆ, ಜೈವರ್ಧನ ಫುಲೆ, ಶ್ರೀಮಂತ ಚಿಕಲಚಂದಾ, ಆದೇಶ ಭಾವಿಕಟ್ಟೆ, ಶ್ರೀನಿವಾಸ ಬ್ಯಾಲಹಳ್ಳಿ ಇದ್ದರು.




