ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್‌ನಲ್ಲಿನ ಅವ್ಯವಸ್ಥೆ ಹಾಗೂ ಮೂಲಸೌಕರ್ಯ ಕೊರತೆಗೆ ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆಯನ್ನು ಆಡಳಿತ ನಡೆಸಿದ ಬಿಜೆಪಿ ಕಾರಣ ಎಂದು ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.
ಉಡುಪಿಯ ಇತಿಹಾಸದಲ್ಲೇ ಅತ್ಯಧಿಕ ಅವಧಿಗೆ ಬಿಜೆಪಿ ನಗರಸಭೆಯ ಆಡಳಿತ ನಡೆಸಿದ್ದು, ಇಂದು ನಗರದ ಪ್ರಮುಖ ಸಮಸ್ಯೆಗಳ ಹಿಂದೆ ಅವರ ಆಡಳಿತ ವೈಫಲ್ಯವೇ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಸರ್ವಿಸ್ ಬಸ್ ಸ್ಟ್ಯಾಂಡ್‌ನ ದುಸ್ಥಿತಿ ಕಳೆದ ಐದು ವರ್ಷಗಳಿಂದ ಬಿಜೆಪಿ ನಾಯಕರ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅಗತ್ಯ ಅನುದಾನ ತಂದು ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದ್ದಾರೆ.
ಬಿಜೆಪಿ ಆಡಳಿತದ ಅವಧಿಯಲ್ಲಿ ನಗರಸಭೆ ಸರ್ವಿಸ್ ಬಸ್ ಸ್ಟ್ಯಾಂಡ್ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರಿದೆ. ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಆಸಕ್ತಿ ತೋರದ ಬಿಜೆಪಿ ನಾಯಕರು ಇದೀಗ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವುದು ವಿಪರ್ಯಾಸ ಎಂದು ಸುರೇಶ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಶಾಸಕರು, ಸಂಸದರು ಹಾಗೂ ಬಿಜೆಪಿ ಉಸ್ತುವಾರಿ ಸಚಿವರು ಈ ಸಮಸ್ಯೆಗೆ ತಮ್ಮ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕು. ನಗರಸಭೆಯನ್ನು ದೀರ್ಘಕಾಲ ಆಡಳಿತ ನಡೆಸಿದ ಬಿಜೆಪಿ ಆಡಳಿತವೇ ಇಂದಿನ ಪರಿಸ್ಥಿತಿಗೆ ನೇರ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಅವರು ಸರ್ವಿಸ್ ಬಸ್ ಸ್ಟ್ಯಾಂಡ್‌ಗೆ ಭೇಟಿ ನೀಡಿ ಪ್ರಯಾಣಿಕರು ಹಾಗೂ ಸ್ಥಳೀಯ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರಸಭೆ ಆಯುಕ್ತರಿಗೆ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಸೂಚಿಸಿದ್ದಾರೆ ಎಂದು ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಸರ್ವಿಸ್ ಬಸ್ ಸ್ಟ್ಯಾಂಡ್‌ನಲ್ಲಿ ಇಂತಹ ಸಮಸ್ಯೆಗಳು ಉಂಟಾಗಿವೆ ಎಂದು ಅವರು ಆರೋಪಿಸಿದ್ದಾರೆ.







