ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 6ರಂದು ರಾತ್ರಿ 7:45ರಿಂದ 10:15ರ ಮಧ್ಯೆ ಹೇರಾಡಿ ಗ್ರಾಮದ ನಿವಾಸಿ ಯಂ. ಮಂಜುನಾಥ ರಾವ್ (77) ಹಾಗೂ ಅವರ ಪತ್ನಿ ಬಾರಕೂರಿನಲ್ಲಿ ನಡೆದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ, ಕಳ್ಳರು ಮನೆಯ ಮುಂಭಾಗದ ಬಾಗಿಲು ಒಡೆದು ಒಳನುಗ್ಗಿದ್ದಾರೆ. ಬಳಿಕ ಬೆಡ್‌ರೂಮ್‌ನಲ್ಲಿದ್ದ ಗೋಡ್ರೇಜ್ ಅಲಮಾರಿಯನ್ನು ಒಡೆದು ಚಿನ್ನದ ಸರ-ಪೆಂಡೆಂಟ್ (47 ಗ್ರಾಂ), ಬಳೆಗಳು (32 ಗ್ರಾಂ), ಬೆಂಡೋಲೆಗಳು, ಉಂಗುರ ಸೇರಿದಂತೆ ವಿವಿಧ ಚಿನ್ನಾಭರಣಗಳು, 250 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ₹49,000 ನಗದು ಕಳವು ಮಾಡಲಾಗಿದೆ. ಒಟ್ಟು ಕಳವಾದ ಸೊತ್ತಿನ ಮೌಲ್ಯ ₹14,67,000 ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.
ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ ಹಾಗೂ ಪಿಎಸ್‌ಐ ಅಶೋಕ್ ಮಾಳಾಬಗಿ ನೇತೃತ್ವದ ತಂಡ ತನಿಖೆ ನಡೆಸಿ, ಆರೋಪಿಯಾದ ಬಾರಕೂರು ನಿವಾಸಿ ಪ್ರವೀಣ್ ಕುಮಾರ್ ಕೆ ಅವರನ್ನು ಬಂಧಿಸಿದೆ.
ಬಂಧಿತನಿಂದ ₹14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹7,500 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





