ಮಾನವನಿಂದ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತಿಕ್ರಮಣದ ವಿರುದ್ಧ ಪ್ರಕೃತಿ ಕ್ಷಣಕ್ಷಣವೂ ಎಚ್ಚರಿಕೆ ನೀಡುತ್ತಿದೆಯಾದರೂ, ಸಮಾಜ ಅದನ್ನು ಇನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಶಿವಮೊಗ್ಗದ ಪರಿಸರ ಹೋರಾಟಗಾರ ಹಾಗೂ ಲೇಖಕ ಅಖಿಲೇಶ ಚಿಪ್ಪಳ್ಳಿ ಕಳವಳ ವ್ಯಕ್ತಪಡಿಸಿದರು.
ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಪ್ರೊ. ಮಾಧವ ಗಾಡ್ಗೀಳ್ ನೆನಪಿನಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಎರಡು ದಿನಗಳ ‘ಪರಿಸರ ಮತ್ತು ಶಿಕ್ಷಣ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟದ ಉಳಿವು ಮತ್ತು ಅಲ್ಲಿನ ಜೀವವೈವಿಧ್ಯತೆಯ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಉಂಟುಮಾಡುವ ಯೋಜನೆಗಳು ಪ್ರಕಟವಾಗುವಾಗಲೆಲ್ಲಾ ಹಾಗೂ ಪ್ರಕೃತಿ ದೌರ್ಜನ್ಯಗಳು ನಡೆಯುವಾಗಲೆಲ್ಲಾ ಗಾಡ್ಗೀಳ್ ಅವರ ಎಚ್ಚರಿಕೆಗಳು ನೆನಪಾಗುತ್ತವೆ ಎಂದು ಅವರು ಹೇಳಿದರು.
ಗಾಡ್ಗೀಳ್ ವರದಿಯನ್ನು ಆಧಾರವಾಗಿಟ್ಟುಕೊಂಡು ಅವರನ್ನು ಅವಹೇಳನಗೊಳಿಸುವ, ಅಪಪ್ರಚಾರ ನಡೆಸುವ ಕೆಲಸವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿರಂತರವಾಗಿ ಮಾಡಿದರು. ಅವರನ್ನು ಖಳನಾಯಕನಂತೆ ಚಿತ್ರಿಸಲು ಪ್ರಯತ್ನಿಸಲಾಯಿತು. ಆದರೆ 2018 ಮತ್ತು 2024ರಲ್ಲಿ ಕೇರಳದಲ್ಲಿ, 2018-19ರಲ್ಲಿ ಕೊಡಗಿನಲ್ಲಿ ಹಾಗೂ 2024ರಲ್ಲಿ ಅಂಕೋಲ ಮತ್ತು ಶಿರೂರು ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದ ದುರಂತಗಳು ನಮ್ಮ ಕಣ್ಣು ತೆರೆಸಬೇಕಾಗಿತ್ತು. ಇಷ್ಟಾದರೂ ನಾವು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈಗ ಶಿವಮೊಗ್ಗ ಜಿಲ್ಲೆಯ ಸಾಗರ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತ ಚರ್ಚೆಗಳು ಕೇಳಿಬರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ವಜ್ರಮುನಿ ಅವರು ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಮಾಧವ ಗಾಡ್ಗೀಳ್ ಅವರೊಂದಿಗಿನ ಒಡನಾಟದ ಸವಿನೆನಪುಗಳನ್ನು ಹಂಚಿಕೊಂಡರು. ರಾಜ್ಯ ಸಮಿತಿಯ ಸದಸ್ಯ ಹಾಗೂ ‘ಟೀಚರ್’ ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ ಗಾಂವಕರ್ ಆಶಯ ಭಾಷಣ ಮಾಡಿದರು.

ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷ ಹಾಗೂ ಖ್ಯಾತ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಚಿಂತಕಿ ಮಮತಾ ರೈ ಹಾಗೂ ಸಮಿತಿಯ ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಅಭಿಲಾಷಾ ಹಂದೆ ಉಪಸ್ಥಿತರಿದ್ದರು.
ಭಾರತ ಜ್ಞಾನ-ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ತೆಕ್ಕಟ್ಟೆ ವಂದಿಸಿದರು.






