ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಉಡುಪಿ ಜಿಲ್ಲಾ ಆಸ್ಪತ್ರೆಗೆ ಹಳೆಯ ವೈದ್ಯಕೀಯ ಪರಿಕರಗಳು ಹಾಗೂ ಹಳೆಯ ಸಿಬ್ಬಂದಿಗಳನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಕ್ಟೋಬರ್ 20ರಂದು ಆಸ್ಪತ್ರೆಯ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಐದು ಅಂತಸ್ತಿನ 250 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಕಾರ್ಯಾರಂಭ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಳೆಯ ಆಸ್ಪತ್ರೆಯಲ್ಲಿರುವ ವೈದ್ಯಕೀಯ ಉಪಕರಣಗಳು, ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಅಗತ್ಯವಿರುವ ಹಳೆಯ ಯಂತ್ರೋಪಕರಣಗಳು, ಹಾಸಿಗೆಗಳು ಹಾಗೂ ಶಸ್ತ್ರಚಿಕಿತ್ಸಾ ಸಾಮಗ್ರಿಗಳನ್ನು ನೂತನ ಆಸ್ಪತ್ರೆಗೆ ಸ್ಥಳಾಂತರಿಸುವ ಕ್ರಮಕ್ಕೆ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿತು. ಹೊಸ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಬೇಕು. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮೇಲೆ ಹೆಚ್ಚುವರಿ ಒತ್ತಡ ಹೇರಬಾರದು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯ ಬಳಿಕ ಸಂಘಟನೆಯ ಮುಖಂಡರು ಜಿಲ್ಲಾ ಆಸ್ಪತ್ರೆಗೆ ತೆರಳಿ, ಆರ್‌ಎಂಒ ಹಾಗೂ ಉಪ ವೈದ್ಯಾಧಿಕಾರಿ ಡಾ. ವಾಸುದೇವ ಎಸ್. ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೊಸ ಆಸ್ಪತ್ರೆಗೆ ಹೊಸ ಉಪಕರಣಗಳನ್ನು ಅಳವಡಿಸಿ: ಫ್ರ್ಯಾಂಕಿ ಡಿಸೋಜ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ, ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಆಸ್ಪತ್ರೆಯಲ್ಲಿ ಹಳೆಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ತರಾತುರಿಯಲ್ಲಿ ಉದ್ಘಾಟನೆ ಮಾಡುವುದು ಸರಿಯಲ್ಲ ಎಂದರು. ಸರ್ಕಾರ ಈಗಾಗಲೇ ಒಂಬತ್ತು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ನೂತನ ವೈದ್ಯಕೀಯ ಉಪಕರಣಗಳನ್ನು ಅಳವಡಿಸಬೇಕು. ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿದ ಬಳಿಕವೇ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಸುಬ್ರಮಣ್ಯ ನಗರ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸಿ, ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ ಬಳಿಕವೇ ಉದ್ಘಾಟನೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಪು ಘಟಕದ ಅಧ್ಯಕ್ಷ ನಿತೀನ್ ಕುಮಾರ್ ಶೆಟ್ಟಿ ಮಾತನಾಡಿ, 250 ಹಾಸಿಗೆಗಳ ಸಾಮರ್ಥ್ಯದ ಐದು ಅಂತಸ್ತಿನ ಆಸ್ಪತ್ರೆಗೆ ಹಳೆಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸುವುದು ಹಾಗೂ ಹೊಸ ಸಿಬ್ಬಂದಿಯನ್ನು ನೇಮಕ ಮಾಡದೆ ಹಳೆಯ ಸಿಬ್ಬಂದಿಯನ್ನೇ ನಿಯೋಜಿಸುವ ಕ್ರಮವನ್ನು ವಿರೋಧಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಿರ್ಮಲ ಮೆಂಡನ್ ಹಾಗೂ ಶ್ಯಾಮಲ ಅವರು ಮಾತನಾಡಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ ಆಸ್ಪತ್ರೆಯನ್ನು ತರಾತುರಿಯಲ್ಲಿ ಉದ್ಘಾಟಿಸುವ ಕ್ರಮವನ್ನು ವಿರೋಧಿಸಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ತುಳುನಾಡ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ್, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವಿತ್ರ, ಸಂಘಟನಾ ಕಾರ್ಯದರ್ಶಿ ನಿರ್ಮಲ ಮೆಂಡನ್, ಜೊತೆ ಕಾರ್ಯದರ್ಶಿ ವನಿತಾ, ಜಿಲ್ಲಾ ಉಪಾಧ್ಯಕ್ಷೆ ಗಾಯತ್ರಿ, ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಟ, ಬೈರಂಪಳ್ಳಿ ಘಟಕದ ಉಪಾಧ್ಯಕ್ಷ ಗುಣಕರ ಹಾಲಕ್ಕಿ ಸೇರಿದಂತೆ ಉದಯ್, ರವಿ, ರಮೇಶ್, ಸಂತೋಷ್ ಭಂಡಾರಿ, ಗುಲಾಬಿ ಕೋಟ್ಯಾನ್, ಹರಿಣಾಕ್ಷಿ, ರಾಜಶ್ರೀ, ಉಷಾ ಸೋಮಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.








