ಸಾಮರಸ್ಯದ ಬದುಕು ಮತ್ತು ಒಗ್ಗಟ್ಟಿನ ಸಮಾಜವೇ ನಮ್ಮ ದೊಡ್ಡ ಶಕ್ತಿ ಹಾಗೂ ಗೌರವದ ಸಂಕೇತ. ಇಂದಿನ ಸಂದರ್ಭದಲ್ಲಿ ಸಾಮರಸ್ಯದ ಸಮಾಜ ನಿರ್ಮಾಣ ಅತ್ಯಂತ ಅಗತ್ಯವಾಗಿದ್ದು, ಈ ಕಾರ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತನ್ನ ಪ್ರಮುಖ ಧ್ಯೇಯವನ್ನಾಗಿ ಮಾಡಿಕೊಳ್ಳಬೇಕು ಎಂದು ರಾಜ್ಯ ವಕ್ಫ್, ಹಜ್, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಜತ ಸಂಭ್ರಮದ ಅಂಗವಾಗಿ ಉಡುಪಿ ನಗರದ ವಿ.ಕೆ. ಪ್ಯಾರಡೈಸ್ ಕಟ್ಟಡದಲ್ಲಿ ನೂತನ ಸ್ವಂತ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಕಮ್ಯುನಿಟಿಗೆ ಸಹಾಯ ಮಾಡಬೇಕೇ ಹೊರತು ಕಮ್ಯುನಲ್ ಆಗಬಾರದು. ಧಾರ್ಮಿಕ ನಂಬಿಕೆ ನಮ್ಮ ಮಣ್ಣಿನ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಪ್ರತಿಯೊಂದು ಧರ್ಮದ ಸಂದೇಶವನ್ನು ಗೌರವದಿಂದ ಸ್ವೀಕರಿಸಿ, ಇನ್ನೊಬ್ಬರ ಧರ್ಮವನ್ನು ಗೌರವಿಸುವುದರ ಜತೆಗೆ ಅವರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಸಮಾಜ ನಿರ್ಮಿಸುವ ಜವಾಬ್ದಾರಿಯನ್ನು ಮುಸ್ಲಿಮ್ ಒಕ್ಕೂಟ ವಹಿಸಿಕೊಳ್ಳಬೇಕು ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಸಮುದಾಯದ ಒಗ್ಗಟ್ಟು ನಮ್ಮ ದೊಡ್ಡ ಶಕ್ತಿಯಾಗಿದೆ. ಪ್ರೀತಿಯ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಎಲ್ಲರೂ ಮಾಡಬೇಕು. ಸಮುದಾಯದ ಏಕತೆಯೊಂದಿಗೆ ಇತರ ಸಮುದಾಯಗಳ ಜತೆ ಸೌಹಾರ್ದತೆ ಬೆಳೆಸುವ ಒಕ್ಕೂಟದ ಕಾರ್ಯ ಶ್ಲಾಘನೀಯ ಎಂದರು.

ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಸುಹೇಲ್ ಅಹ್ಮದ್ ಮರೂರು ಮಾತನಾಡಿ, ಸೌಹಾರ್ದ ಸಮಾಜ ನಿರ್ಮಾಣದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಮುಖ ಪಾತ್ರ ವಹಿಸುತ್ತಿದೆ. ಸಮುದಾಯವನ್ನು ಒಗ್ಗೂಡಿಸುವಲ್ಲಿ ಒಕ್ಕೂಟದ ಶ್ರಮ ಅಪಾರ. ಭಾರತ ಜಾತ್ಯತೀತ ಹಾಗೂ ಸೌಹಾರ್ದ ರಾಷ್ಟ್ರವಾಗಿ ಉಳಿಯಬೇಕಾದರೆ ಇಂತಹ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಅಧ್ಯಕ್ಷತೆ ವಹಿಸಿದ್ದರು. ನೂತನ ಸ್ವಂತ ಕಚೇರಿ ಸಮುದಾಯದ ಒಗ್ಗಟ್ಟು, ವಿಶ್ವಾಸ ಮತ್ತು ಭವಿಷ್ಯದ ಮೇಲಿನ ಬದ್ಧತೆಯ ಪ್ರತೀಕವಾಗಿದೆ. ಜಿಲ್ಲೆಯ ಪ್ರತಿಭಾವಂತ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಸಿವಿಲ್ ಸರ್ವಿಸ್ ಪರೀಕ್ಷೆಗಳ ತರಬೇತಿ ಮತ್ತು ಕೋಚಿಂಗ್ ನೀಡುವ ಯೋಜನೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಮುಂದಿನ ಚುನಾವಣೆಗೂ ಮುನ್ನ ಭರವಸೆಗಳನ್ನು ಈಡೇರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಒತ್ತಾಯಿಸಿದರು.

ಭಟ್ಕಳ ಮಜ್ಲಿಸ್ ಇ ಇಸ್ಲಾಹ್ ಓ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಸಹಬಾಳ್ವೆ ಕುಂದಾಪುರ ತಾಲೂಕು ಸಂಚಾಲಕ ರಾಮಕೃಷ್ಣ ಹೆರ್ಳೆ ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ ಮಾತನಾಡಿದರು.

ಈ ಸಂದರ್ಭದಲ್ಲಿ ವಿಕೆ ಗ್ರೂಪ್ ಹಾಗೂ ಕಟ್ಟಡದ ಮಾಲಕ ಕರುಣಾಕರ ಎಂ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ನಾವುಂದ, ಅಶ್ಫಕ್ ಕಾರ್ಕಳ, ಇಬ್ರಾಹಿಂ ಕೋಟ, ಹಿರಿಯ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್‌ಎಫ್ ಉಪಸ್ಥಿತರಿದ್ದರು.

ಉಡುಪಿ ಜಾಮೀಯ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ರಶೀದ್ ಉಮರಿ ಕುರಾನ್ ಪಠಿಸಿದರು. ಸಂಘಟನಾ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ವಂದಿಸಿದರು. ಎಸ್. ಮುನೀರ್ ಕಂಡ್ಲೂರು ಹಾಗೂ ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.











