ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ವರದಿಗೆ ತೆರಳಿದ್ದ ಪತ್ರಕರ್ತೆಯ ಮೇಲೆ ಪೊಲೀಸರು ನಡೆಸಿದ ಲೈಂಗಿಕ ಕಿರುಕುಳವನ್ನು ಕರ್ನಾಟಕ ಪತ್ರಕರ್ತೆಯರ ಸಂಘವು ಖಂಡಿಸಿದೆ.
ಈ ಬಗ್ಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರು ಆರ್. ಪೂರ್ಣಿಮಾ ಮತ್ತು ಕಾರ್ಯದರ್ಶಿ ಮಾಲತಿ ಭಟ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಘಟನೆಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘ ಬಲವಾಗಿ ಖಂಡಿಸುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ
“ಪತ್ರಕರ್ತೆಯೊಬ್ಬರನ್ನು ಪೊಲೀಸ್ ಅಧಿಕಾರಿಯೊಬ್ಬರು ಅನುಚಿತವಾಗಿ ಎಳೆದಾಡಿ, ಲೈಂಗಿಕ ಕಿರುಕುಳ ನೀಡಿರುವುದು ಅಕ್ಷಮ್ಯ. ಆ ಅಧಿಕಾರಿಯ ವಿರುದ್ಧ ದೂರು ದಾಖಲಿಸಲು ಹೋದ ಪತ್ರಕರ್ತೆಯನ್ನು ಪೊಲೀಸರು ಗಂಟೆಗಟ್ಟಲೇ ಕಾಯಿಸಿ, ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿ, ಆಕೆಯನ್ನೇ ವಶಕ್ಕೆ ಪಡೆದಿರುವುದು ಖಂಡನೀಯ. ಕೂಡಲೇ ಆ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಸಂಘ ಒತ್ತಾಯಿಸಿದೆ.

ಅಧಿಕೃತವಾದ ಗುರುತುಪತ್ರಗಳನ್ನು ಹೊಂದಿದ್ದ ಸ್ವತಂತ್ರ ಮಾಧ್ಯಮಗಳು ಹಾಗೂ ಡಿಜಿಟಲ್ ಮಾಧ್ಯಮದ ಪತ್ರಕರ್ತರೊಂದಿಗೆ ಪೊಲೀಸರು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರ ಜೊತೆ ಕೆಲ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸರ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪತ್ರಕರ್ತೆಯರ ಸಂಘ ಹೇಳಿದೆ.
ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಕಳೆದ ತಿಂಗಳು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವರದಿಗಾಗಿ ತೆರಳಿದ್ದ ಪತ್ರಕರ್ತಯರ ಮೇಲೂ ಪೊಲೀಸರು ಇದೇ ರೀತಿಯ ಹಲ್ಲೆ ನಡೆಸಿದ್ದರು. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಕರ್ನಾಟಕ ಪತ್ರಕರ್ತೆಯರ ಸಂಘ ವಿಷಾದ ವ್ಯಕ್ತಪಡಿಸಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.




