ಕೆಂಪೇಗೌಡ ನಿರ್ಮಿಸಿದ ಬೆಂಗಳೂರು ಎಲ್ಲಾಕ್ಷೇತ್ರದಲ್ಲಿಯೂ ಮುಂಚೂಣಿಯಲಿದ್ದು, ನಾಡಿನ ಭವಿಷ್ಯದ ದೃಷ್ಟಿಯಿಂದ ಹಾಗೂ ಮುಂದಿನ ಪೀಳಿಗೆಯ ಏಳಿಗೆಗಾಗಿ ಜಾರಿಗೆ ತಂದ ಹಲವು ಜನಪ್ರಿಯ ಯೋಜನೆಗಳಿಂದ ಇಂದು ಬೆಂಗಳೂರು ಇಡೀ ವಿಶ್ವದ ಗಮನವನ್ನು ಸೆಳೆದಿದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.
ಅವರು ಇಂದು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಇಂದಿನ ಪೀಳಿಗೆಗೆ ಕೆಂಪೇಗೌಡರ ಪರಿಶ್ರಮ ಹಾಗೂ ನಾಡು ಕಟ್ಟಿದ ಬಗೆಗೆ ತಿಳಿಸುವ ನಿಟ್ಟಿನಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದು, ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಬೆಂಗಳೂರಿನ ಇಂದಿನ ಅಭಿವೃದ್ಧಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ . ಕೇವಲ ಒಂದೇ ಜಾತಿಗೆ ಸೀಮಿತವಾಗಿರದೇ ಸರ್ವಧರ್ಮಿಯರನ್ನೂ ಸಮಾನವಾಗಿ ಕಾಣುತ್ತಿದ್ದ ಕೆಂಪೇಗೌಡರ ಆದರ್ಶಗಳು ನಮ್ಮೆಲ್ಲರಿಗೂ ಹಾಗೂ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಉಪನ್ಯಾಸಕ ದಯಾನಂದ ಡಿ ಕಿದಿಯೂರು, ಪ್ರಗತಿಪರ ಚಿಂತನೆಯನ್ನು ಹೊಂದಿದ್ದ ನಾಡಪ್ರಭು ಕೆಂಪೇಗೌಡರು. ಸಮಾಜದಲ್ಲಿದ್ದ ಪ್ರತಿಯೊಂದು ಜನಾಂಗದ ಕುಲಕಸುಬು ಹಾಗೂ ವೃತ್ತಿ ಆಧಾರಿತವಾಗಿ ಜನರ ಆರ್ಥಿಕ ಅಭಿವೃದ್ಧಿಗೆ ಅನೇಕ ಪೇಟೆಗಳನ್ನು ನಿರ್ಮಿಸಿದ್ದರು.ಅಪಾರವಾದ ಪರಿಸರ ಕಾಳಜಿಯನ್ನು ಹೊಂದಿದ್ದ ಕೆಂಪೇಗೌಡರು ಕೃಷಿ ಮತ್ತು ಕುಡಿಯುವ ನೀರಿಗಾಗಿ ಹಲವು ಕೆರೆಗಳ ನಿರ್ಮಾಣವನ್ನು ವೈಜ್ಞಾನಿಕವಾಗಿ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಉಡುಪಿ ಜಿಲ್ಲಾ ಒಕ್ಕಲಿಗ ಸೇವಾ ಸಂಘ ಉಡುಪಿ ಇದರ ಕಾರ್ಯದರ್ಶಿ ಹೇಮಾನಂದ ಹಲ್ದಡ್ಕ, ಉಡುಪಿ ಜಿಲ್ಲಾ ಒಕ್ಕಲಿಗ ಸೇವಾ ಸಂಘದ ಪದಾಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಿ ವಂದಿಸಿದರು.






