ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತ ಸೇರಿದಂತೆ ಸಂಭವಿಸಬಹುದಾದ ಅವಘಡಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿಯ ವಿವಿಧ ಅಪಾಯದ ಪ್ರದೇಶಗಳಲ್ಲಿ ಜುಲೈ 6ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ; ಯುವಕನಿಗೆ ಗಂಭೀರ ಗಾಯ
ನಿಷೇಧಿತ ಪ್ರದೇಶಗಳು ಹೀಗಿವೆ: ಕಾರವಾರ ತಾಲೂಕು (ರಾ.ಹೆ.-66): ಕಾರವಾರ ಲಂಡನ್ ಬ್ರಿಡ್ಜ್‌ನಿಂದ ಬಿನಾಗಾ ಸುರಂಗದ ಅಂತ್ಯದವರೆಗೆ ಎರಡೂ ಬದಿಯ ಚತುಷ್ಪಥ ಹೆದ್ದಾರಿ (750 ಮೀ.), ಅರ್ಗಾದ ಸಂಕ್ರುಭಾಗ ಘಟ್ಟದ ಎಡಬದಿ (100 ಮೀ.), ಅರ್ಗಾದ ಸಂಕ್ರುಬಾಗ್ ಜಿ.ಕೆ. ರಾಮ್ ಕ್ವಾರಿ ಸಮೀಪ (100 ಮೀ.)
ಅಂಕೋಲಾ ತಾಲೂಕು: ಶಿರೂರು ಗ್ರಾಮದಲ್ಲಿ ಐಆರ್‌ಬಿ ಗುಡ್ಡ ಕೊರೆದಿರುವ ಪ್ರದೇಶ (1 ಕಿ.ಮೀ.) ಬೆಳ್ಳೆನ್ ರೈಲ್ವೆ ಸೇತುವೆಯಿಂದ ಕುಮಟಾ ಕಡೆಗೆ (1 ಕಿ.ಮೀ.) ಹೊನ್ನಾವರ ತಾಲೂಕು (ರಾ.ಹೆ.-66 ಹಾಗೂ ರಾ.ಹೆ.-69): ಗುಣಗುಣಕೇರಿ (ಕ್ಲಾಸಿಕ್ ವೈನ್ ಶಾಪ್ ಎದುರು), ಪ್ರಮೀಳಾ ರೆಸ್ಟೋರೆಂಟ್ ಸಮೀಪಮೂಡಕಣಿ (ಖರ್ವಾ ಕ್ರಾಸ್) ಸೂಳೆಮೂರ್ಕಿ ಕ್ರಾಸ್ ಕರ್ಕಿನಾಕಾ ಪ್ರದೇಶ(ಮೇಲಿನ ಪ್ರತಿಯೊಂದು ಸ್ಥಳದಲ್ಲಿ 30 ಮೀಟರ್ ವ್ಯಾಪ್ತಿ).
ಕುಮಟಾ ತಾಲೂಕು: ದಿವಗಿ (200 ಮೀ.),ದುಂಡಕುಳಿ (200 ಮೀ.), ಶಿರಸಿ ತಾಲೂಕು (ರಾ.ಹೆ.-766ಇ): ವೆಂಕಟೇಶತೀರ್ಥ ತಿರುವು (100 ಮೀ.)ಮೊಸಳಗುಂಡಿ ಸೇತುವೆ (100 ಮೀ.)ಬಂಡಲ ಘಾಟ್–ಮುಂಗನ ರಸ್ತೆ ಕ್ರಾಸ್ (50 ಮೀ.) ದೇವಿಮನೆ ಕಲ್ಲುಹೊಳೆ (100 ಮೀ.)
ಮುಂಗಾರು ಅವಧಿಯಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದೆ, ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




