ಅಂಕೋಲಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ವರದರಾಜ್ ಹೋಟೆಲ್ ಸಮೀಪ ನಡೆದಿದೆ.
ಕಾರವಾರದಿಂದ ಉಡುಪಿ ಕಡೆಗೆ ಸಚಿವ ಯು.ಟಿ. ಖಾದರ್ ಅವರನ್ನು ಎಸ್ಕಾರ್ಟ್ ಮಾಡಿಕೊಂಡು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ತಕ್ಷಣ ಸಚಿವ ಯು.ಟಿ. ಖಾದರ್ ಅವರು ಮಾನವೀಯತೆ ಮೆರೆದು ಗಾಯಾಳುವಿನ ನೆರವಿಗೆ ಧಾವಿಸಿ, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಂಡರು.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ನಾಡಬಾಂಬ್ ಪ್ರಕರಣ ಭೇದಿಸಿದ ಪೋಲಿಸರು; ಮೂವರು ಬಂಧನ, ಜೀವಂತ ಬಾಂಬ್ ವಶ
ಅಪಘಾತದಲ್ಲಿ ಅಂಕೋಲ ತಾಲೂಕಿನ ಅಲಗೇರಿ ಗ್ರಾಮದ ನಿವಾಸಿ ಸಂದೀಪ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರ ತಲೆಗೆ ಪೆಟ್ಟಾಗಿದೆ. ಅವರನ್ನು ಅಂಕೋಲ ಪಟ್ಟಣದ ಆರ್ಯ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




