ಉತ್ತರ ಕನ್ನಡ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಇನ್ನು ಎರಡುವರೆ ವರ್ಷಗಳು ಇರುವಾಗಲೇ ರಾಜಕೀಯ ದಾಳಗಳು ಉರುಳಲಾರಂಭಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತದ ಅಂತರದಿಂದ ಸೋಲನುಭವಿಸಿದ್ದ ಪ್ರಭಾವಿ ಲಿಂಗಾಯತ ನಾಯಕ, ಹಾಗೂ ಮಾಜಿ ಶಾಸಕ ವಿ.ಎಸ್. ಪಾಟಿಲ್ ಅವರ ಇತ್ತೀಚಿನ ಹೇಳಿಕೆಗಳು ಕ್ಷೇತ್ರದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ
ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ ವಿ.ಎಸ್. ಪಾಟೀಲ್, “ಕಾಂಗ್ರೆಸ್ ಪಕ್ಷವು ತಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಸಣ್ಣ ಪ್ರಮಾಣದ ಗುರುತಿಸುವಿಕೆ ಸಿಗುತ್ತಿದೆ. ಆದರೆ, ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಪ್ರಾಮುಖ್ಯತೆ ದೊರೆಯುತ್ತಿಲ್ಲ ಎಂಬುದು ನನಗೂ ಹಾಗೂ ನನ್ನ ಬೆಂಬಲಿಗರಿಗೂ ಅಸಮಾಧಾನ ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿಗಮ ಮಂಡಳಿ ಆಕಾಂಕ್ಷಿಯಲ್ಲ 2023ರ ಚುನಾವಣೆಯಲ್ಲೇ ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡುವಾಗ ‘ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಿಲ್ಲ’ ಎಂಬ ಷರತ್ತನ್ನು ಪಕ್ಷ ವಿಧಿಸಿತ್ತು. ಹೀಗಾಗಿ ತಾವು ಯಾವುದೇ ನಿಗಮ ಮಂಡಳಿ ಸ್ಥಾನದ ಆಕಾಂಕ್ಷಿಯಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಬಡ ರೋಗಿಗಳಿಂದ ಹಣ ವಸೂಲಿ ಆರೋಪ: ವೈದ್ಯರಿಗೆ ಶಾಸಕ ಆರ್.ವಿ. ದೇಶಪಾಂಡೆ ಖಡಕ್ ಸೂಚನೆ
ಇನ್ನು ಕೆ.ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿ, “ಹೆಚ್.ಎಂ. ನಾಯ್ಕ ಅವರು ವಯಸ್ಸಿನಲ್ಲಿ ಹಿರಿಯರು ಎನ್ನುವ ಕಾರಣಕ್ಕೆ ಅವರಿಗೆ ಅವಕಾಶ ನೀಡಿರಬಹುದು” ಎಂದು ಸಮಾಧಾನದ ಮಾತುಗಳನ್ನಾಡಿದ್ದರೂ, ಒಳಗೊಳಗೆ ಆಂತರಿಕ ಬೆಳವಣಿಗೆಗಳು ಅವರನ್ನು ಚಿಂತೆಗೀಡು ಮಾಡಿರುವುದು ಸುಳ್ಳಲ್ಲ.
ಕ್ಷೇತ್ರದ ಪ್ರಸಕ್ತ ರಾಜಕೀಯ ಚಿತ್ರಣ ಬದಲಾಗುತ್ತಿದೆ. ಬಿಜೆಪಿ ಮೂಲದ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ನತ್ತ ಒಲವು ತೋರುತ್ತಿರುವುದು ಮತ್ತು ಅವರ ಪುತ್ರ ವಿವೇಕ್ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಸೇರಿ ಸಕ್ರಿಯರಾಗಿರುವುದು ಪಾಟೀಲ್ ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಕಾರವಾರ | 61ನೇ ಫೆಮಿನಾ ಮಿಸ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿ!
ಮುಂದಿನ ದಿನಗಳಲ್ಲಿ ಶಿವರಾಮ ಹೆಬ್ಬಾರ್ ಅಥವಾ ಅವರ ಪುತ್ರ ಟಿಕೆಟ್ ಆಕಾಂಕ್ಷಿಗಳಾಗುವುದರಲ್ಲಿ ತಪ್ಪಿಲ್ಲ, ಆದರೆ ನಾನು ಕೂಡ ಪ್ರಬಲ ಆಕಾಂಕ್ಷಿ ಎನ್ನುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪಕ್ಷವು ಸರ್ವೇ ಆಧಾರದ ಮೇಲೆ ತಮಗೆ ಮನ್ನಣೆ ನೀಡಬೇಕು. ಒಂದು ವೇಳೆ ಹಾಗಾಗದಿದ್ದರೆ, ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಕಠಿಣ ತೀರ್ಮಾನ ಕೈಗೊಳ್ಳುವುದಾಗಿ ಹೇಳುವ ಮೂಲಕ ಹೈಕಮಾಂಡ್‌ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
2018ರಲ್ಲಿ ಬಿಜೆಪಿಯಿಂದ ಮತ್ತು 2023ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾಗಲೂ ಪಾಟೀಲ್ ಅವರು ಪಡೆದ ಮತಗಳು ಅವರ ವೈಯಕ್ತಿಕ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಂ ಹೆಬ್ಬಾರ್ ಅವರ ಪ್ರಭಾವಕ್ಕೆ ಟಕ್ಕರ್ ಕೊಡಬಲ್ಲ ಏಕೈಕ ನಾಯಕ ಎಂಬ ವರ್ಚಸ್ಸು ಇವರಿಗಿದೆ.
ಮುಂಬರುವ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ತಮ್ಮ ಬೆಂಬಲಿಗರಿಗೆ ಎಷ್ಟು ಟಿಕೆಟ್ ಕೊಡಿಸುತ್ತಾರೆ ಎಂಬುದರ ಮೇಲೆ ಪಾಟೀಲ್ ಅವರ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಾರೆಯಾಗಿ, ವಿ.ಎಸ್. ಪಾಟೀಲ್ ಅವರ ಈ ನಡೆ ಯಲ್ಲಾಪುರ ಕ್ಷೇತ್ರದ ರಾಜಕೀಯ ದಿಕ್ಸೂಚಿಯನ್ನು ಬದಲಿಸುವ ಮುನ್ಸೂಚನೆ ನೀಡುತ್ತಿದೆ.



