ಜಾತಿ ವ್ಯವಸ್ಥೆಯ ತುತ್ತ ತುದಿಯಲ್ಲಿರುವ ಜಾತಿವಾದಿಗಳು ಜಾತಿ ವ್ಯವಸ್ಥೆಯ ಮಹಿಮೆಯನ್ನು ಕೊಂಡಾಡುತ್ತಾರೆ. ತಳಾತಳದಲ್ಲಿ ಅದರ ಒಜ್ಜೆ ಹೊತ್ತು ನಿಂತವರು ಕೂಡ ತಾವು ನಿಕೃಷ್ಟವೆಂದು ಬಗೆಯುವ ಮತ್ತೊಂದು ಜಾತಿ ತಮ್ಮ ಕೆಳಗೆ ಇದೆಯೆಂದು ತೃಪ್ತಿಪಡುತ್ತಾರೆ. ಹಲವು ಕ್ರಾಂತಿಗಳನ್ನು ಅರಗಿಸಿಕೊಂಡಿರುವ ವೈದಿಕ ವ್ಯವಸ್ಥೆ ಕಾಲ ಕಾಲಕ್ಕೆ ಮಾಡಿಕೊಂಡು ಬಂದಿರುವ ಪ್ರತಿಕ್ರಾಂತಿಗಳು ಮತ್ತು ರೂಪಿಸಿರುವ ಕರ್ಮಸಿದ್ಧಾಂತ ಈ ದುಷ್ಟ ವ್ಯವಸ್ಥೆಯ ಬೇರುಗಳನ್ನು ಗಟ್ಟಿ ಮಾಡಿವೆ
‘ನಿಮ್ಮ್ ಕೆಲ್ಸ ಏನು’ ಅಂತ ಹಳ್ಳಿಪ್ರದೇಶದ ಪೊಲೀಸಪ್ಪನನ್ನು ಕೇಳಿದರೆ, ‘ಶಾಂತಿಯನ್ನು ಕಾಪಾಡುವುದು’ ಎಂಬುದು ಆತನ ಉತ್ತರವಾಗಿರುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಶಾಂತಿಯನ್ನು ಕಾಪಾಡುವುದು ಎಂಬುದರ ಅರ್ಥ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ಎಂದೇ ಆಗಿರುತ್ತದೆ ದಲಿತರ ಆಶೋತ್ತರಗಳು ‘ಇಂತಹ ಶಾಂತಿ’ಯ ಭಂಗ ಎನಿಸಿಕೊಳ್ಳುತ್ತವೆ ಎನ್ನುತ್ತಾರೆ ಬರೆಹಗಾರ್ತಿ ಅರುಂಧತಿ ರಾಯ್. ಆದರೆ ನೀರು ಮುಟ್ಟುವುದು, ಗುಡಿಯನ್ನು ಪ್ರವೇಶಿಸುವುದು, ಹೊಟೆಲಿನಲ್ಲಿ ಸರಿಸಮಾನಾಗಿ ಕುಳಿತು ಉಣ್ಣುವುದು ಮುಂತಾದ ನಿತ್ಯದ ನಡೆಗಳು ದಲಿತರ ಆಶೋತ್ತರಗಳಲ್ಲ, ದಿನನಿತ್ಯದ ಅಸ್ತಿತ್ವದ ಅಗತ್ಯಗಳು.
ಅವುಗಳು ಕೂಡ ‘ಶಾಂತಿ ಭಂಗ’ವಾಗಿ ಹೋಗಿವೆ! ಸಮಾಜದ ಒಡಲಿನ ರಕ್ತ ಕೆಟ್ಟು ಅದರ ಮೈಮೇಲೆದ್ದ ಹುಣ್ಣುಗಳು ಕೀವು ಕಾರುತ್ತಿರುವ ಲಕ್ಷಣಗಳಿವು. ಆದರೆ ನೂರಾರು ವರ್ಷಗಳಿಂದ ರಕ್ತ ಕೆಟ್ಟಿರುವ ಈ ಸಮಾಜ ಇನ್ನೂ ಜೀವಂತ ಇರುವುದೇ ‘ಜಾತಿವ್ಯವಸ್ಥೆ’ಯ ದಿಗ್ವಿಜಯ! ಅದರ ವಿಚಿತ್ರ ವೈಶಿಷ್ಟ್ಯ. ಈ ವ್ಯವಸ್ಥೆಯ ತುತ್ತ ತುದಿಯಲ್ಲಿರುವ ಜಾತಿವಾದಿಗಳು ಜಾತಿ ವ್ಯವಸ್ಥೆಯ ಮಹಿಮೆಯನ್ನು ಕೊಂಡಾಡುತ್ತಾರೆ. ತಳಾತಳದಲ್ಲಿ ಅದರ ಒಜ್ಜೆ ಹೊತ್ತು ನಿಂತವರು ಕೂಡ ತಾವು ನಿಕೃಷ್ಟವೆಂದು ಬಗೆಯುವ ಮತ್ತೊಂದು ಜಾತಿ ತಮ್ಮ ಕೆಳಗೆ ಇದೆಯೆಂದು ತೃಪ್ತಿಪಡುತ್ತಾರೆ. ಹಲವು ಕ್ರಾಂತಿಗಳನ್ನು ಅರಗಿಸಿಕೊಂಡು ವೈದಿಕ ವ್ಯವಸ್ಥೆ ಕಾಲ ಕಾಲಕ್ಕೆ ಮಾಡಿಕೊಂಡು ಬಂದಿರುವ ಪ್ರತಿಕ್ರಾಂತಿಗಳು ಮತ್ತು ಕರ್ಮಸಿದ್ಧಾಂತಗಳು ಈ ದುಷ್ಟ ವ್ಯವಸ್ಥೆಯ ಬೇರುಗಳನ್ನು ಗಟ್ಟಿ ಮಾಡುತ್ತ ಬಂದಿವೆ.
ಶೂದ್ರರು ಅಸ್ಪೃಶ್ಯರ ಮೇಲೆ ಸವಾರಿ ಮಾಡುವುದು ಈ ಜಾತಿ ವ್ಯವಸ್ಥೆಯ ದಿಗ್ವಿಜಯದ ಮತ್ತೊಂದು ಕರಾಳ ಮುಖ. ಪರಿಶಿಷ್ಟ ಪಂಗಡವೆಂದು ವರ್ಗೀಕರಿಸಲಾದವರು, ತಮ್ಮನ್ನೂ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಬೇಕೆಂದು ಚಳವಳಿ ನಡೆಸುವ ಹಿಂದುಳಿದ ವರ್ಗಗಳವರು ಅಸ್ಪೃಶ್ಯ ಮತ್ತು ಸ್ಪೃಶ್ಯ ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ಏನೆಂದು ಕರೆಯಬೇಕು?
ಬಿಸಿಲಿನ ಧಗೆಯಿಂದ ಬಾಯಾರಿಸಿದ್ದ ಮಾದಿಗ ಜಾತಿಯ ಯುವಕನೊಬ್ಬ ನಾಯಕ ಜಾತಿಯ ರೈತನಿಗೆ ಸೇರಿದ ಹೊಲಕ್ಕೆ ಹೋಗಿ ನೀರು ಕುಡಿದದ್ದೇ ಕಾರಣವಾಗಿ ಜಾತಿ ಗಲಭೆ ನಡೆದಿದೆ. ಓಣಿ ನುಗ್ಗಿ ಥಳಿಸಲಾಗಿದೆ. ಜಾತಿಯ ಹೆಸರೆತ್ತಿ ಅವಾಚ್ಯ ಪದಗಳ ಬಳಸಲಾಗಿದೆ. ಮಾದಿಗ ಜಾತಿಯ 15 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನೆನ್ನೆಯಷ್ಟೇ (ಮಾ.24) ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ಜರುಗಿದ ಪ್ರಕರಣವಿದು. ಕಳೆದ ವಾರವಷ್ಟೇ ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿ, ಕುರುಬ ನಾಯಕ ಹಾಗೂ ಮಾದಿಗ ಜಾತಿಗಳ ನಡುವೆ ತೀವ್ರ ಘರ್ಷಣೆಯಾಗಿತ್ತು.
ನೂರು ವರ್ಷಗಳ ಹಿಂದಿನ ಈ ಪ್ರಕರಣಗಳನ್ನು ಗಮನಿಸೋಣ- 1923ರ ಫೆಬ್ರವರಿಯಲ್ಲಿ ಆಗ್ರಾ ಜಿಲ್ಲೆಯ ಚಮ್ಮಾರನೊಬ್ಬ ವಿಷ್ಣುವಿನ ಚಿತ್ರಪಟವನ್ನು ಪೂಜಿಸುತ್ತಿದ್ದಾಗಲೇ ಸಿಕ್ಕಿಬಿದ್ದ. ದೇವರನ್ನು ಒಲಿಸಿಕೊಳ್ಳಲು ಮಾಡಿದ ಪ್ರಯತ್ನಕ್ಕಾಗಿ ಆತನನ್ನು ಥಳಿಸಲಾಯಿತು. 1931ರ ಮೇ- ಬರೋಡ ಸಂಸ್ಥಾನದ ಪಡ್ರಸ್ ನ ಅಸ್ಪೃಶ್ಯ ಹೆಣ್ಣುಮಗಳೊಬ್ಬಳ ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ಬೆಂಕಿ ಇಕ್ಕಲಾಯಿತು. ಆಕೆ ಕ್ರೂರ ಹಲ್ಲೆಗೆ ಗುರಿಯಾದಳು. ತನ್ನ ಮಗುವನ್ನು ಗ್ರಾಮದ ಪ್ರಾಥಮಿಕ ಶಾಲೆಗೆ ಕಳಿಸಿದ್ದೇ ಆಕೆ ಮಾಡಿದ್ದ ಮಹಾಪರಾಧ!
1931ರ ಅಕ್ಟೋಬರ್- ಗಢವಾಲ್ ಜಿಲ್ಲೆಯ ಹರಗಾಂವ್ ನಲ್ಲಿ ಪಲ್ಲಕ್ಕಿ ಏರಿದ್ದ ಮದುಮಗನ ಸಹಿತ ದಿಬ್ಬಣವನ್ನು ಥಳಿಸಲಾಯಿತು. ಗಡಗಡ ನಡುಗಿಸುವ ಚಳಿಯಲ್ಲಿ ಇಪ್ಪತ್ತನಾಲ್ಕು ತಾಸುಗಳ ಕಾಲ ನಡುರಸ್ತೆಯಲ್ಲೇ ಉಪವಾಸ ಕೆಡವಲಾಯಿತು. 1932ರ ಫೆಬ್ರವರಿ- ಪಂಜಾಬಿನ ಪುಲ್ ಬಾಜ್ವಾನಿನಲ್ಲಿ ರಜಪೂತರು ಬಳಸುತ್ತಿದ್ದ ಬಾವಿಯಿಂದ ನೀರು ಕುಡಿದ ಅಸ್ಪೃಶ್ಯನನ್ನು ಆತನ ಮೈ ರಕ್ತಸಿಕ್ತ ಆಗುವ ತನಕ ಬಡಿದರು ಆ ಸಮುದಾಯದ ಮಹಿಳೆಯರು.
1932ರ ಏಪ್ರಿಲ್- ಬರೋಡ ಸಂಸ್ಥಾನದ ನವಾಗಾಂವ್ ಗ್ರಾಮದಲ್ಲಿ ಅಸ್ಪೃಶ್ಯ ರೈತರ ಹುಲ್ಲಿನ ಬಣವೆಗಳಿಗೆ ಬೆಂಕಿ ಇಕ್ಕಲಾಯಿತು. ಅವರ ಬಾವಿ ನೀರಿಗೆ ಸೀಮೆ ಎಣ್ಣೆ ಸುರಿಯಲಾಯಿತು. ಅವರ ಮನೆಗಳನ್ನೂ ಸುಡುವ ಪ್ರಯತ್ನ ನಡೆಯಿತು. ಸವರ್ಣೀಯರ ಮಕ್ಕಳು ಓದುತ್ತಿದ್ದ ಶಾಲೆಗೆ ತಮ್ಮ ಮಕ್ಕಳನ್ನೂ ಸೇರಿಸುವ ಅನುಮತಿ ಪಡೆದದ್ದು ಅವರ ತಪ್ಪಾಗಿತ್ತು. 1936ರ ಡಿಸೆಂಬರ್- ಕಲ್ಲೀಕೋಟೆ ಜಿಲ್ಲೆಯ ಕಾಲಡಿ ಗ್ರಾಮದಲ್ಲಿ ಮುಳುಗುತ್ತಿದ್ದ ಮಗುವೊಂದರ ಪ್ರಾಣ ಕಾಪಾಡಲು ಅಸ್ಪೃಶ್ಯನೊಬ್ಬ ಬಾವಿಗೆ ಧುಮುಕಿದ್ದ. ಮಗುವಿನ ಜೀವ ಉಳಿಸಿದ ನಂತರವೂ ಬಾವಿಯ ನೀರನ್ನು ಮಲಿನಗೊಳಿಸಿದನೆಂದು ಆತನನ್ನು ಥಳಿಸಲಾಯಿತು, ಮನಬಂದಂತೆ ನಿಂದಿಸಲಾಯಿತು.
1938ರ ನವೆಂಬರ್- ಸಂಯುಕ್ತ ಪ್ರಾಂತ್ಯಗಳ ಕೊಹಾನ ಗ್ರಾಮದ ಠಾಕೂರರ ಹೊಲಮನೆಗಳಲ್ಲಿ ಜಾಟವ ಅಸ್ಪೃಶ್ಯರು ಬಿಟ್ಟಿ ಚಾಕರಿ ಮಾಡಲು ನಿರಾಕರಿಸಿದರು. ಅಸ್ಪೃಶ್ಯರ ಬಾವಿ ನೀರಿಗೆ ಮನುಷ್ಯ ಮಲವನ್ನು ಸುರಿಯುವಂತೆ ಕಸ ಗುಡಿಸುವವನೊಬ್ಬನಿಗೆ ತಾಕೀತು ಮಾಡುತ್ತಾರೆ ಠಾಕೂರರು. ಮಲ ಸುರಿಯದಂತೆ ತಡೆದ ಅಸ್ಪೃಶ್ಯರನ್ನು ಲಾಠಿಯಿಂದ ಬಡಿದು ಅವರ ಮನೆಗೆ ಬೆಂಕಿ ಇಟ್ಟು ಸುಡುತ್ತಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರ ರಾಜಕಾರಣದಲ್ಲಿ ಮುಸ್ಲಿಮರು ಎಲ್ಲಿದ್ದಾರೆ?
ಮೇಲಿನ ಈ ಎಲ್ಲ ಘಟನೆಗಳನ್ನು ದಾಖಲಿಸಿರುವವರು ಖುದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು. 1920ರಿಂದ ಇಂತಹ ಅನೇಕ ಘಟನೆಗಳನ್ನು ಅಂದಿನ ಬಾಂಬೆ ಸಮಾಚಾರ್, ಟೈಮ್ಸ್ ಆಫ್ ಇಂಡಿಯಾ, ತೇಜ್ (ನವದೆಹಲಿ), ಪ್ರತಾಪ್, ದಿ ಹಿಂದೂ (ಚೆನ್ನೈ), ಮಿಲಾಪ್ (ಲಾಹೋರ್), ಹಿಂದುಸ್ತಾನ್ ಟೈಮ್ಸ್ ಹಾಗೂ ಗಾಂಧೀಜಿ ಸಂಪಾದಕತ್ವದ ಯಂಗ್ ಇಂಡಿಯಾ ಪತ್ರಿಕೆಗಳಿಂದ ಸಂಗ್ರಹಿಸಿದ್ದರು.
ಈ ಘಟನೆಗಳಿಂದ ಇಸವಿಗಳನ್ನು ಅಳಿಸಿಕೊಂಡು ಓದಿದರೆ…ಇವೆಲ್ಲವೂ ಸಮಕಾಲೀನ ‘ಭವ್ಯ’ ಭಾರತದ ಕಟುವಾಸ್ತವಗಳೇ ಆಗಿವೆ ಅಲ್ಲವೇ? ಹಾಗಾದರೆ ಕಳೆದ ನೂರು ವರ್ಷಗಳಲ್ಲಿ ಈ ದೇಶದ ಅಸ್ಪೃಶ್ಯರ ಬದುಕುಗಳಲ್ಲಿ ಬದಲಾಗಿರುವುದಾದರೂ ಏನು ಮತ್ತು ಎಷ್ಟು?
ಕೇವಲ ಮೀಡಿಯಾದಲ್ಲಿ ವರದಿಯಾಗಿರುವ ಕೆಲವೇ ಪ್ರಕರಣಗಳು ಬೆಳಕು ಕಾಣುತ್ತವೆ. ಇದು ಜಲರಾಶಿಯಲ್ಲಿ ಮುಳುಗಿರುವ ಅಪಾರ ಗಾತ್ರದ ನೀರ್ಗಲ್ಲಿನ ತುತ್ತ ತುದಿ ಮಾತ್ರ. ಅಸ್ಪೃಶ್ಯರ ಮೇಲಿನ ದೌರ್ಜನ್ಯದ ಹಿಮಪರ್ವತವೇ ನೀರಿನಡಿ ಕಣ್ಣುಮರೆಸಿಕೊಂಡಿರುತ್ತಲಿದೆ. ಅದು ಅಂದು ಅಂಬೇಡ್ಕರ್ ಗಮನಿಸಿದ ಭಾರತದಲ್ಲೂ ಸತ್ಯ, ಅವರು ನಿರ್ಗಮಿಸಿರುವ ಇಂದಿನ ಭಾರತದಲ್ಲೂ ನಿತ್ಯ.
ಭಾರತದ ಜನತಂತ್ರವೆಂದರೆ, ನಾರುತ್ತಿರುವ ತಿಪ್ಪೆಯನ್ನು ಸಾರಿಸಿ ಅದರ ಮೇಲೆ ಬಿಡಿಸಲಾದ ರಂಗೋಲಿ. ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಸಾಮಾಜಿಕ ಜನತಂತ್ರದ ತಳಹದಿ ಇಲ್ಲದ ರಾಜಕೀಯ ಜನತಂತ್ರ ಬಹುಕಾಲ ಬಾಳಲಾರದು ಎಂಬುದು ಬಾಬಾಸಾಹೇಬರು ನೀಡಿದ್ದ ಎಚ್ಚರಿಕೆ. ಈ ಎಚ್ಚರಿಕೆಯು ಕಾಲ ಉರುಳಿದಂತೆ ಹೆಚ್ಚು ಹೆಚ್ಚು ಗಾಢ ಸತ್ಯವಾಗಿ ಹರಳುಗಟ್ಟಿದೆ.
‘ಸಾಧಾರಣ ಹಿಂದುವಿನ ಪ್ರಕಾರ ಅಸ್ಪೃಶ್ಯನೊಬ್ಬ ಮಾನವ ಸಹವಾಸಕ್ಕೂ ಯೋಗ್ಯನಲ್ಲ. ಕೇಡನ್ನು ಹೊತ್ತು ತಿರುಗುತ್ತಿರುವವನು ಅಸ್ಪೃಶ್ಯ. ಅವನು ಮನುಷ್ಯನೇ ಅಲ್ಲ. ಅವನನ್ನು ದೂರ ಇರಿಸಬೇಕು. ಇಂತಹ ರೂಢಿಯನ್ನು ಪ್ರಶ್ನಿಸಿದ್ದೇ ಆದರೆ ‘ಸಾಮಾನ್ಯ ಅಹಿಂಸಾವಾದಿ ಹಿಂದುವು’ ‘ತೀವ್ರ ಹಿಂಸೆಯ ಪ್ರಯೋಗಕ್ಕೆ ಹಿಂದೆಮುಂದೆ ನೋಡುವುದಿಲ್ಲ’. ‘ಯಥಾಸ್ಥಿತಿಯನ್ನು ಕಾಪಾಡಲು ಅವನು ಯಾವ ಕ್ರೌರ್ಯಕ್ಕೂ ಸಿದ್ಧನಾಗುತ್ತಾನೆ’ ಎನ್ನುತ್ತಾರೆ ಬಾಬಾಸಾಹೇಬರು.
ಉಚ್ಚ-ನೀಚ ಜಾತಿವರ್ಗಗಳ ನಡುವಿನ ಭೇದಭಾವದ ಪೂರ್ವಗ್ರಹಗಳು ವಿಶೇಷವಾಗಿ ಭಾರತೀಯ ಸಮಾಜದಲ್ಲಿ ಅತ್ಯಂತ ಕ್ರೂರ ಮತ್ತು ಆಳ. ಸಾವಿರ ಸಾವಿರ ಉದಾಹರಣೆಗಳಿವೆ. ಮನಸ್ಮೃತಿಯು ಭಾರತೀಯ ಸಮಾಜದ ಮಾನಸಿಕಲೋಕದಿಂದ ಈಗಲೂ ಮರೆಯಾಗಿಲ್ಲ. ಬದಲಿಗೆ ಹೊಸ ಹೊಸ ರೂಪಗಳನ್ನು ಧರಿಸಿ ಧಗಧಗಿಸಿದೆ.
ಹಿಂದೂಗಳು ಜಾತಿಪದ್ಧತಿಗೆ ಅಂಟಿಕೊಂಡಿರುವುದು ಜಾತಿಯ ಪರಿಕಲ್ಪನೆಯನ್ನು ಅವರ ತಲೆಯಲ್ಲಿ ತುರುಕಿರುವ ಧರ್ಮದಿಂದಾಗಿಯೇ ವಿನಾ ಅವರು ಕೆಟ್ಟವರು ಅಥವಾ ಅಮಾನವೀಯರು ಎಂದೇನೂ ಅಲ್ಲ. ಹೀಗಾಗಿ ನಾವು ಎದುರಿಸಬೇಕಿರುವ ವೈರಿ, ಜಾತಿಗ್ರಸ್ತ ಧರ್ಮವನ್ನು ಬೋಧಿಸುವ ಶಾಸ್ತ್ರಗಳೇ ವಿನಾ ಜಾತಿಯನ್ನು ಅನುಸರಿಸುವ ಜನ ಅಲ್ಲ. ಮನುಸಂಹಿತೆಯು ಶೂದ್ರರನ್ನು ಏಣಿಶ್ರೇಣಿ ವ್ಯವಸ್ಥೆಯ ಪಾತಾಳಕ್ಕೆ ತುಳಿದಿದೆ. ಸಮಾಜದ ಒಂದು ವರ್ಗವನ್ನು ಸಾವಿರಾರು ವರ್ಷಗಳ ಕಾಲ ಬಡತನ ಶೋಷಣೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿಸಿದೆ ಎಂಬುದು ಬಾಬಾಸಾಹೇಬರ ಆಲೋಚನೆಯ ಮೂಸೆಯಲ್ಲಿ ಹರಳುಗಟ್ಟಿದ ಸತ್ಯ.
“ರಾಜ್ಯದ 101 ಪರಿಶಿಷ್ಟ ಜಾತಿಗಳ ಶೇ.75ರಷ್ಟು ಜನ ಒಂದಲ್ಲ ಒಂದು ಬಗೆಯ ಅಸ್ಪೃಶ್ಯತೆಗೆ ಈಗಲೂ ಗುರಿಯಾಗುತ್ತಿವೆ”. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ನೀಡಿರುವ ವರದಿಯು ಈ ಕಟು ಸತ್ಯ ನುಡಿದಿದೆ.
“ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟರು ಮತ್ತು ಅವರ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಪರಿಶಿಷ್ಟರ ಸಾಮೂಹಿಕ ಹತ್ಯೆ ಮತ್ತು ಅವರಿಗೆ ಹೇಲು ತಿನ್ನಿಸುವ ಪ್ರಕರಣಗಳೂ ಏರುಮುಖವಾಗಿವೆ. ಸುಮಾರು 15 ಜಾತಿಗಳು ‘ಹೆಚ್ಚು ಸಾಮಾಜಿಕ ತಾರತಮ್ಯ’ಕ್ಕೆ, 28 ಜಾತಿಗಳು ‘ಮಧ್ಯಮ ಹಂತದ ತಾರತಮ್ಯ’ಕ್ಕೆ ಹಾಗೂ 38 ಜಾತಿಗಳು ‘ಕಡಿಮೆ ತಾರತಮ್ಯ’ಕ್ಕೆ ಗುರಿಯಾಗಿವೆ. 22 ಜಾತಿಗಳು ಇಂತಹ ತಾರತಮ್ಯವನ್ನು ಎದುರಿಸಿಲ್ಲ” ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಜಾತಿ ಎಲ್ಲಿದೆ? ಅಸ್ಪೃಶ್ಯತೆ ಎಂಬುದು ಹಳೆಯ ಕತೆ, ಮೀಸಲಾತಿಯನ್ನು ಅಂತ್ಯಗೊಳಿಸಿ ಎಂದೆಲ್ಲ ಬೊಬ್ಬೆಯಿಡುವ ಬಾಯಿಬಡುಕ ಬಲಿಷ್ಠರು ತಮ್ಮ ಅಂತಸ್ಸಾಕ್ಷಿಯನ್ನು ತಡವಿ ನೋಡಿಕೊಳ್ಳಬೇಕಿರುವ ಕಟು ಸತ್ಯವಿದು. ಅವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ತಮ್ಮ ಆತ್ಮಸಾಕ್ಷಿಯನ್ನೇ ಕೊಂದು ಹಾಕಿಕೊಂಡಿರುವವರು ಇವರು. ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ಅಸ್ಪೃಶ್ಯರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ ನಡೆಸುತ್ತಿರಲಿಲ್ಲ. ಜೀವಂತ ಸುಡುತ್ತಿರಲಿಲ್ಲ. ಕುದುರೆ ಏರಿದರೆ, ಮೀಸೆ ತಿರುವಿದರೆ, ಉತ್ತಮ ಉಡುಪು ತೊಟ್ಟರೆ, ಅಂಬೇಡ್ಕರ್ ರಿಂಗ್ ಟೋನ್ ಇಟ್ಟುಕೊಂಡರೆ ಕೊಂದು ಹಾಕುತ್ತಿರಲಿಲ್ಲ.




