ಗೋಕರ್ಣದಲ್ಲಿ ವಾಯುಭಾರ ಕುಸಿತದ ಪರಿಣಾಮ ಶನಿವಾರ ಬಿಡದೇ ಸುರಿದ ಗಾಳಿ ಮಳೆಯಿಂದ ಹಲವು ಕಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ದಿನವಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಗಾಳಿಯ ರಭಸಕ್ಕೆ ಮನೆಗಳ ಚಾವಣಿಗಳು ಹಾರಿ ಹೋಗಿದ್ದು, ತಡದಿ, ಮೂಡಂಗಿ, ಗಂಗಾವಳಿ ಸಮುದ್ರ ತೀರಗಳಲ್ಲಿ ಅಲೆಗಳ ರಭಸವೂ ಜೋರಾಗಿತ್ತು.
ಅನೇಕ ಕಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೂ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ಸ್ಥಳೀಯರು ಮತ್ತು ಪ್ರವಾಸಿಗರು ತೊಂದರೆಗೆ ಸಿಲುಕಿದ್ದರು. ಸದ್ಯ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.




