“ಫುಟ್‌ಬಾಲ್‌ನಲ್ಲಿ ತಂಡದ ಗಾತ್ರ ಮುಖ್ಯವಲ್ಲ” ಎಂದಿದ್ದಾರೆ ಕೇಪ್ ವೆರ್ಡ್ ಮುಖ್ಯಕೋಚ್ ಬ್ರಿಟೊ. ಸಾಕರ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ಪುಟ್ಟ ದ್ವೀಪರಾಷ್ಟ್ರವೀಗ ನವತಾರೆಯಾಗಿ ಹೊಮ್ಮಿದೆ.
ಅವರು ಸೋತರು, ಆದರೆ ಅವರ ದೇಶವು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿತು. ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಸೋಲು ಕಂಡರೂ, ಅದು ಸೋಲಾಗಿರಲಿಲ್ಲ. ಯಾಕೆಂದರೆ ಅವರು ವಿರೋಚಿತವಾಗಿ ಹೋರಾಡಿದ್ದರು ಮತ್ತು ಫಿಫಾ ಫುಟ್‌ಬಾಲ್ ಚರಿತ್ರೆಯಲ್ಲಿ ಬಹುಕಾಲ ಉಳಿಯುವಂತಹ ಆಟವಾಡಿದ್ದರು. ಅಂಬೆಗಾಲು ಇಡುತ್ತಿರುವ ಅವರು, ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಅರ್ಜೆಂಟೀನಾವನ್ನು ನಡುಗಿಸಿಬಿಟ್ಟರು. ಮೆಸ್ಸಿಯಂತಹ ಸರ್ವಶ್ರೇಷ್ಠ ಆಟಗಾರ, ಆಕ್ರಮಣಕಾರಿ ಗೋಲ್‌ಕೀಪರ್ ಮಾರ್ಟಿನೆಜ್ ಥರದ ಸಾಲುಸಾಲು ದೈತ್ಯರಿಗೆ ಚಳ್ಳೇಹಣ್ಣು ತಿನ್ನಿಸಿ, ಎರಡು ಗೋಲ್‌ಗಳನ್ನೂ ಭಾರಿಸಿದ್ದರು. ರೌಂಡ್ 32ರ ಹಂತದಲ್ಲೇ ಮನೆಗೆ ನಡೆಯಬೇಕಾದೀತು ಎಂಬ ಭಯವನ್ನು ಅರ್ಜೇಂಟೀನಾ ದೇಶಕ್ಕೆ ಹುಟ್ಟಿಸಿದ್ದ ಆ ತಂಡವು ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಸೋಲೊಪ್ಪಿಕೊಂಡಿತು. ಮೂರು ಬಾರಿ ಚಾಂಪಿಯನ್ ಆಗಿದ್ದ ಅರ್ಜೇಂಟೀನಾ ಏದುರಿಸು ಬಿಡುತ್ತಾ ಗೆಲುವು ದಾಖಲಿಸಿಕೊಂಡಿತು.
ಹೌದು, ಇದು ಕೇಪ್ ವೆರ್ಡ್ ಎಂಬ ಪುಟ್ಟ ದ್ವೀಪರಾಷ್ಟ್ರದ ಸಾಕರ್ ಯಶೋಗಾಥೆ. ಬಲಿಷ್ಠ ತಂಡವೊಂದಕ್ಕೆ ಅಭೂತಪೂರ್ವ ಪೈಪೋಟಿ ಕೊಟ್ಟಿದ್ದೇ ಕೇಪ್ ವೆರ್ಡ್‌ಗೆ ದೊಡ್ಡ ಹೆಮ್ಮೆ. ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿದ್ದ ಈ ತಂಡವು, ಅನಿರೀಕ್ಷಿತ ಸಾಧನೆ ಮಾಡಿ ನಾಕೌಟ್ ಹಂತವನ್ನು ತಲುಪಿತ್ತು. ಯುರೋಪಿಯನ್ ಚಾಂಪಿಯನ್ ಸ್ಪೇನ್ ವಿರುದ್ಧ ಕೇಪ್ ವೆರ್ಡ್ ಗೆಲ್ಲುವುದು ಅಸಾಧ್ಯವೆಂದು ಭಾವಿಸಲಾಗಿತ್ತು. ಆದರೆ ಆ ಪಂದ್ಯವನ್ನು 0-0 ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದು, ವಿಶ್ವಕಪ್ ಇತಿಹಾಸದ ದೊಡ್ಡ ಅಚ್ಚರಿಗಳಲ್ಲಿ ಒಂದೆಂದು ಬಣ್ಣಿಸಲಾಗಿದೆ. ನಂತರ ಉರುಗ್ವೆ ಮತ್ತು ಸೌದಿ ಅರೇಬಿಯಾ ವಿರುದ್ಧ ಡ್ರಾ ಸಾಧಿಸಿ, ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ನಾಕೌಟ್ ಹಂತಕ್ಕೆ ಕೇಪ್ ವೆರ್ಡ್ ಲಗ್ಗೆ ಇಟ್ಟಿತು. ಬಲಿಷ್ಠ ತಂಡಗಳನ್ನು ಎದುರು ಹಾಕಿಕೊಂಡು ಮೇಲೆ ಬಂದಿದ್ದ ಕೇಪ್ ವೆರ್ಡ್, ಈ ಸಲ ಮುಗ್ಗರಿಸುತ್ತದೆ ಎಂದೇ ಲೆಕ್ಕ ಹಾಕಲಾಗಿತ್ತು. ಆದರೆ ಈ ಪುಟ್ಟ ರಾಷ್ಟ್ರದ ಕೋಟೆಯನ್ನು ಬೇಧಿಸಿ, ಮೂರು ಗೋಲ್ ಭಾರಿಸುವಷ್ಟರಲ್ಲಿ ದೈತ್ಯ ಅರ್ಜೇಂಟೀನಾ ತಿನುಕಾಡಬೇಕಾಯಿತು.
ಅರ್ಜೆಂಟೀನಾ ಮತ್ತು ಕೇಪ್ ವೆರ್ಡ್ ತಂಡಗಳ ನಡುವಿನ ಪಂದ್ಯ ಎಂದರೆ ಹಾಲ್ಗೂಸಿನ ಮೇಲೆ ಬಲಶಾಲಿಯೊಬ್ಬನ ಪ್ರಹಾರ ಎಂದು ಭಾವಿಸಿದ್ದವರಿಗೆ ಅಚ್ಚರಿ ಕಾದಿತ್ತು. ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಕೇಪ್ ವೆರ್ಡ್ ತಂಡವು 90 ನಿಮಿಷಗಳವರೆಗೆ 1-1 ಗೋಲುಗಳ ಸಮಬಲದಲ್ಲಿ ಹಿಡಿದಿಟ್ಟುಕೊಂಡಿತ್ತು. ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನಾ 2-1 ಮುನ್ನಡೆ ಸಾಧಿಸಿತ್ತು. ಆದರೆ, 103ನೇ ನಿಮಿಷದಲ್ಲಿ ಕೇಪ್ ವೆರ್ಡ್ ಆಟಗಾರ ಸಿಡ್ನಿ ಲೋಪ್ಸ್ ಕಬ್ರಾಲ್ ಅದ್ಭುತ ಗೋಲು ಬಾರಿಸಿ 2-2 ಸಮಬಲ ತಂದರು. ಕ್ರೀಡಾಂಗಣದ ತುಂಬ ಕುಣಿದಾಡಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ತನ್ನ ಗೆಳತಿ ಜೇಲಿ ಡ ಕ್ರೂಜ್ ಅವರನ್ನು ಅಪ್ಪಿಕೊಂಡರು. ಲೋಪ್ಸ್ ಹೊಡೆದದ್ದು ಈ ಟೂರ್ನಿಯಲ್ಲೇ ಅತ್ಯುತ್ತಮ ಗೋಲ್ ಎಂದು ಕ್ರೀಡಾತಜ್ಞರು ಬಣ್ಣಿಸುತ್ತಿದ್ದಾರೆ. ದುರಾದೃಷ್ಟವಶಾತ್ 111ನೇ ನಿಮಿಷದಲ್ಲಿ ಅರ್ಜೆಂಟೀನಾದ ಕ್ರಿಸ್ಟಿಯನ್ ರೊಮೆರೊ ಗೋಲು ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಕೇಪ್ ವೆರ್ಡ್ ತಂಡ ಸೋತರೂ, ಸಾಕರ್ ಜಗತ್ತಿನಲ್ಲಿ ಹೊಸ ನಕ್ಷತ್ರವಾಗಿ ಹೊಮ್ಮಿದೆ.
ಕೇಪ್ ವೆರ್ಡ್ (ರಿಪಬ್ಲಿಕ್ ಆಫ್ ಕಬೊ ವೆರ್ಡ್) ಎಂಬುದು ಆಫ್ರಿಕಾದ ಪಶ್ಚಿಮ ಕರಾವಳಿಯಿಂದ ಸುಮಾರು 450 ಕಿ.ಮೀ ದೂರದಲ್ಲಿರುವ 10 ದ್ವೀಪಗಳ ಒಂದು ಪುಟ್ಟ ದೇಶ. 1456ರಲ್ಲಿ ಪೋರ್ಚುಗೀಸರು ಈ ದ್ವೀಪಗಳನ್ನು ಕಂಡುಹಿಡಿದಾಗ ಅಲ್ಲಿ ಯಾರೂ ಇರಲಿಲ್ಲ. ನಂತರ ಆಫ್ರಿಕನ್ ಮತ್ತು ಯುರೋಪಿಯನ್ ಮೂಲದ ಜನರು ಬಂದು ನೆಲೆಸತೊಡಗಿದರು. ನಾಗರಿಕತೆಯ ಜೊತೆಜೊತೆಗೆ ಗುಲಾಮಗಿರಿಯೂ ಇಲ್ಲಿ ಬೆಳೆಯಿತು. ದೀರ್ಘಕಾಲ ಪೋರ್ಚುಗಲ್‌ನ ಆಳ್ವಿಕೆಯಲ್ಲಿದ್ದ ಕೇಪ್ ವೆರ್ಡ್, 1975ರಲ್ಲಿ ಸ್ವಾತಂತ್ರ್ಯ ಪಡೆಯಿತು. 1991ರಿಂದ ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಜೋಸ್ ಮಾರಿಯಾ ನೆವ್ಸ್ ಅವರು ಈಗ ಈ ದೇಶದ ಅಧ್ಯಕ್ಷರಾಗಿದ್ದಾರೆ. ಇಲ್ಲಿನ ಅಧಿಕೃತ ಭಾಷೆ ಪೋರ್ಚುಗೀಸ್, ಜೊತೆಗೆ ಇಲ್ಲಿನ ಜನರು ‘ಕ್ರಿಯೋಲೋ’ ಎಂಬ ಭಾಷೆಯನ್ನೂ ಮಾತನಾಡುತ್ತಾರೆ.

ಕೇಪ್ ವೆರ್ಡ್ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಸಣ್ಣ ದೇಶಗಳಲ್ಲಿ ಒಂದು. ಇಲ್ಲಿನ ಜನಸಂಖ್ಯೆ 5 ಲಕ್ಷಕ್ಕಿಂತ ಸ್ವಲ್ಪ ಹೆಚ್ಚಿದೆಯಷ್ಟೇ. ಆದರೆ ಅಲ್ಲಿನ ಹವಾಮಾನ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ, ಸುಮಾರು 10 ಲಕ್ಷಕ್ಕೂ ಹೆಚ್ಚು ಕೇಪ್ ವೆರ್ಡ್ ಮೂಲದವರು ವಿದೇಶಗಳಲ್ಲಿ (ಅಮೆರಿಕ, ಯುರೋಪ್, ಸೆನೆಗಲ್) ವಾಸಿಸುತ್ತಿದ್ದಾರೆ. ಈ ಬಾರಿ ವಿಶ್ವಕಪ್ ಆಡಿದ ತಂಡದಲ್ಲಿದ್ದ 26 ಜನರಲ್ಲಿ 14 ಆಟಗಾರರು ಬೇರೆ ಬೇರೆ ದೇಶಗಳಿಂದ ಬಂದವರಾಗಿದ್ದರು.
ಶುಕ್ರವಾರ ಮುಖಾಮುಖಿಯಾಗಿದ್ದ ಕೇಪ್ ವೆರ್ಡ್ ಮತ್ತು ಅರ್ಜೆಂಟೀನಾ ದೇಶಗಳ ಸಾಕರ್ ಚರಿತ್ರೆಯು ಈ ಎರಡು ದೇಶಗಳ ನಡುವೆ ಇರುವ ಅಜಗಜಾಂತರ ವ್ಯತ್ಯಾಸವನ್ನು ಹೇಳುತ್ತಿತ್ತು. 1930ರಲ್ಲಿ ಅರ್ಜೆಂಟೀನಾ ಮೊದಲ ವಿಶ್ವಕಪ್ ಆಡಿದಾಗ, ಕೇಪ್ ವೆರ್ಡ್ ಇನ್ನೂ ಪೋರ್ಚುಗೀಸರ ವಸಾಹತು ರಾಷ್ಟ್ರವಾಗಿ ನರಳುತ್ತಿತ್ತು. ಅರ್ಜೆಂಟೀನಾ ದೇಶವು 1978, 1986 ಮತ್ತು 2022ರಲ್ಲಿ ಫಿಫಾ ಪ್ರಶಸ್ತಿ ಮುಡಿಗೇರಿಸಿಕೊಂಡ ದೇಶ. ಇದಲ್ಲದೆ 16 ಬಾರಿ ಕೋಪಾ ಅಮೇರಿಕಾ ಪ್ರಶಸ್ತಿಯನ್ನೂ ಗೆದ್ದಿದೆ. ಇಷ್ಟು ಬಲಿಷ್ಠ ತಂಡದ ಎದುರು ಇದ್ದ ಕೇಪ್ ವೆರ್ಡ್ ಸಾಕರ್ ಲೋಕದಲ್ಲಿ ಅಂಬೆಗಾಲಿಡುತ್ತಿರುವ ದೇಶವಾಗಿತ್ತು. 1982ರಲ್ಲಿ ಕೇಪ್ ವೆರ್ಡ್‌ನಲ್ಲಿ ಫುಟ್‌ಬಾಲ್ ಫೆಡರೇಷನ್ ಕಟ್ಟಲಾಯಿತು. 1986ರಲ್ಲಿ ಫಿಫಾ ಸದಸ್ಯತ್ವ ಸಿಕ್ಕಿತು. ಈ ಬಾರಿ 48 ತಂಡಗಳಿಗೆ ಅವಕಾಶ ನೀಡಿದ್ದರಿಂದ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಯಿತ್ತಷ್ಟೇ!
‘ಟ್ರಾನ್ಸ್‌ಫರ್‌ಮಾರ್ಕ್ಟ್’ ವೆಬ್‌ಸೈಟ್ ಪ್ರಕಾರ, ಕೇಪ್ ವೆರ್ಡ್ ದೇಶದ ಇಡೀ ತಂಡದ ಮೌಲ್ಯ ಸುಮಾರು 46.8 ಮಿಲಿಯನ್ ಪೌಂಡ್ (₹491 ಕೋಟಿ). ಆದರೆ ಅರ್ಜೆಂಟೀನಾ ತಂಡದ ಮೌಲ್ಯ 693.7 ಮಿಲಿಯನ್ ಪೌಂಡ್ (₹7,284 ಕೋಟಿ). ದಕ್ಷಿಣ ಅಮೆರಿಕಾದಲ್ಲಿರುವ ವಿಶಾಲ ದೇಶ ಅರ್ಜೆಂಟೀನಾ. ಜನಸಂಖ್ಯೆ ಸುಮಾರು 4.6 ಕೋಟಿ. ಇದರ ಜಿಡಿಪಿ ಸುಮಾರು 683 ಬಿಲಿಯನ್ ಡಾಲರ್ (₹57 ಲಕ್ಷ ಕೋಟಿ). ಅಟ್ಲಾಂಟಿಕ್ ಸಾಗರದಲ್ಲಿರುವ ಕೇಪ್ ವೆರ್ಡ್ ಜಿಡಿಪಿ ಸುಮಾರು 3 ಬಿಲಿಯನ್ ಡಾಲರ್(₹25,000 ಕೋಟಿ). ಇಷ್ಟೊಂದು ವ್ಯತ್ಯಾಸ ಹೊಂದಿದ್ದ ಕೇಪ್ ವೆರ್ಡ್‌ನ ಜೊತೆಯಲ್ಲಿ ಇದ್ದದ್ದು ಅಚಲ ಆತ್ಮವಿಶ್ವಾಸ. ‘ಸೋತರೆ ನಷ್ಟವಿಲ್ಲ, ಗೆದ್ದರೆ ಕಿರೀಟ’ವೆಂಬ ಸ್ಪಷ್ಟತೆ. ಮುಗಿಲಾಗಿ ಎಂತಹದ್ದೇ ಗೋಡೆ ಭೇದಿಸಿದರೂ ಎದುರಾಳಿಗೆ ಅಡ್ಡಲಾಗಿ ನಿಂತ ಅಪ್ರತಿಮ ಗೋಲ್‌ಕೀಪರ್ ವೊಝಿನ್ಹಾ.
“ಫುಟ್‌ಬಾಲ್‌ನಲ್ಲಿ ತಂಡದ ಗಾತ್ರ ಮುಖ್ಯವಲ್ಲ” ಎನ್ನುತ್ತಾರೆ ಕೇಪ್ ವೆರ್ಡ್‌ನ ಮುಖ್ಯ ತರಬೇತುದಾರ ಬುಬಿಸ್ಟಾ ಬ್ರಿಟೊ. ಬಹುಶಃ ಈ ಮಾತನ್ನು ಸರ್ವಶ್ರೇಷ್ಠ ಆಟಗಾರ ಮೆಸ್ಸಿ ಕೂಡ ಅಲ್ಲಗಳೆಯಲಾರರು. ಕೊನೆಯ ಕ್ಷಣದಲ್ಲಿ ಕೇಪ್ ವೆರ್ಡ್ ತನ್ನ ಆಟವನ್ನು ಕೈಚೆಲ್ಲಿದಾಗ ಬಿಬಿಸಿ ರೇಡಿಯೊದಲ್ಲಿ ಮಾಜಿ ಸ್ಕಾಟ್ಲೆಂಡ್ ಆಟಗಾರ ಜೇಮ್ಸ್ ಮೆಕ್‌ಫಾಡೆನ್ ಹೀಗೆ ನುಡಿದರು: “ಕೇಪ್ ವೆರ್ಡ್ ಸೋತಿದೆ, ಆದರೆ ಅವರು ಗೆದ್ದಿದ್ದಾರೆ. ಧೈರ್ಯ, ಒಗ್ಗಟ್ಟು, ಏಕತೆ ತೋರಿದ್ದಾರೆ. ತಾವು ಯಾರು ಮತ್ತು ಏನು ಮಾಡಬಲ್ಲೆವು ಎಂಬ ಅಚಲ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ಈ ಟೂರ್ನಿಯ ಕಥೆ- ಕೇಪ್ ವೆರ್ಡ್. ಫುಟ್‌ಬಾಲ್ ತಂಡದಲ್ಲಿ ನೀವು ನೋಡಲು ಬಯಸುವುದು ಇದನ್ನೇ.”



