ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳು ಕಾರವಾರ ಮತ್ತು ಮುರುಡೇಶ್ವರದಲ್ಲಿ ನಡೆಸುತ್ತಿರುವ ಕೆಫೆಗಳು ಈಗಾಗಲೇ ₹44 ಲಕ್ಷಕ್ಕೂ ಅಧಿಕ ವ್ಯವಹಾರ ನಡೆಸಿ ಯಶಸ್ಸು ಕಂಡಿವೆ.
ಗ್ರಾಮೀಣ ಮಹಿಳೆಯರಿಗೆ ಸ್ವಂತ ಉದ್ಯಮ ಕಲ್ಪಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ‘ಅಕ್ಕ ಕೆಫೆ’ ಯೋಜನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ನಡೆಸುತ್ತಿರುವ ಈ ಕೆಫೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿವೆ. ಕಾರವಾರ ಮತ್ತು ಮುರುಡೇಶ್ವರದಲ್ಲಿ ಈಗಾಗಲೇ ಆರಂಭವಾಗಿರುವ ಎರಡು ಅಕ್ಕ ಕೆಫೆಗಳು ಒಟ್ಟು ಸುಮಾರು ₹44 ಲಕ್ಷದಷ್ಟು ವ್ಯವಹಾರ ನಡೆಸಿದ್ದು, ಜಿಲ್ಲೆಯ ಇತರ ತಾಲೂಕುಗಳಿಗೂ ಯೋಜನೆ ವಿಸ್ತರಣೆಯಾಗುತ್ತಿದೆ.
ಗ್ರಾಮೀಣ ಮಹಿಳೆಯರು ಕೇವಲ ಉದ್ಯೋಗ ಹುಡುಕುವವರಾಗದೆ, ಸ್ವಂತ ಉದ್ಯಮ ನಡೆಸುವವರಾಗಬೇಕು ಎಂಬ ಉದ್ದೇಶದಿಂದ ಅಕ್ಕ ಕೆಫೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಆಹಾರ ತಯಾರಿಕೆ, ಮಾರಾಟ, ಗ್ರಾಹಕರೊಂದಿಗೆ ವ್ಯವಹರಿಸುವುದು, ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ಉದ್ಯಮ ನಡೆಸಲು ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಆದಾಯದ ಅವಕಾಶ ದೊರೆಯುವುದರ ಜೊತೆಗೆ ಸ್ವಂತ ಉದ್ಯಮವನ್ನು ಮುನ್ನಡೆಸುವ ಆತ್ಮವಿಶ್ವಾಸವೂ ಹೆಚ್ಚುತ್ತಿದೆ.
ಎರಡು ಕೆಫೆಗಳಿಂದ ₹44 ಲಕ್ಷ ವ್ಯವಹಾರ:
ಕಾರವಾರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಡವಾಡದ ಶ್ರೀ ಸಿದ್ಧಿ ವಿನಾಯಕ ಮಹಿಳಾ ಸ್ವಸಹಾಯ ಗುಂಪಿನ ವತಿಯಿಂದ 2025ರ ಜುಲೈನಲ್ಲಿ ಅಕ್ಕ ಕೆಫೆ ಆರಂಭಿಸಲಾಯಿತು. ಆರಂಭವಾದ ದಿನದಿಂದ ಈವರೆಗೆ ಕೆಫೆಯು ಸುಮಾರು ₹26 ಲಕ್ಷದಷ್ಟು ವ್ಯವಹಾರ ನಡೆಸಿದೆ.
ಅದೇ ರೀತಿ, ಮುರುಡೇಶ್ವರದಲ್ಲಿ ಶ್ರೀ ಮಹಾ ಮುರುಡೇಶ್ವರ ಸ್ವಸಹಾಯ ಗುಂಪಿನ ವತಿಯಿಂದ 2025ರ ಅಕ್ಟೋಬರ್‌ನಲ್ಲಿ ಅಕ್ಕ ಕೆಫೆ ಆರಂಭಿಸಲಾಯಿತು. ಈ ಕೆಫೆಯೂ ಈವರೆಗೆ ಸುಮಾರು ₹18 ಲಕ್ಷದಷ್ಟು ವ್ಯವಹಾರ ನಡೆಸಿದೆ. ಎರಡೂ ಕೆಫೆಗಳು ಒಟ್ಟು ಸುಮಾರು ₹44 ಲಕ್ಷದಷ್ಟು ವ್ಯವಹಾರ ನಡೆಸಿರುವುದು ಮಹಿಳಾ ಸ್ವಸಹಾಯ ಗುಂಪುಗಳ ಉದ್ಯಮಶೀಲತೆಗೆ ಸಾಕ್ಷಿಯಾಗಿದೆ.
ಈ ಗುಂಪುಗಳು ತಮ್ಮ ಕೆಫೆಗಳ ಮೂಲಕ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರ ಜೊತೆಗೆ ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಆಯೋಜಿಸಲಾದ ‘ಸರಸ್ ಮೇಳ’ಗಳಲ್ಲಿಯೂ ಭಾಗವಹಿಸಿವೆ. ಇದರಿಂದ ತಮ್ಮ ಉತ್ಪನ್ನಗಳನ್ನು ಹೆಚ್ಚಿನ ಜನರಿಗೆ ಪರಿಚಯಿಸಲು ಹಾಗೂ ಉದ್ಯಮದ ಬಗ್ಗೆ ಹೊಸ ಅನುಭವ ಪಡೆಯಲು ಅವಕಾಶ ದೊರೆತಿದೆ.
ತಿಂಗಳಿಗೆ ₹1 ಲಕ್ಷಕ್ಕೂ ಅಧಿಕ ಆದಾಯ:
ಅಕ್ಕ ಕೆಫೆ ಉದ್ಯಮದ ಕುರಿತು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮುರುಡೇಶ್ವರದ ಶ್ರೀ ಮಹಾ ಮುರುಡೇಶ್ವರ ಸ್ವಸಹಾಯ ಗುಂಪಿನ ಸದಸ್ಯೆ ಶ್ರೀಮತಿ ಕಲಾ, “ಅಕ್ಕ ಕೆಫೆ ಆರಂಭವಾದ ಬಳಿಕ ಗುಂಪಿನ ಮಹಿಳೆಯರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಐವರು ಸದಸ್ಯರ ತಂಡವಾಗಿ ಕೆಫೆ ನಡೆಸುತ್ತಿರುವ ಮಹಿಳೆಯರು ಆಹಾರ ತಯಾರಿಕೆ ಮತ್ತು ಮಾರಾಟದ ಜೊತೆಗೆ ಗ್ರಾಹಕರೊಂದಿಗೆ ಆತ್ಮವಿಶ್ವಾಸದಿಂದ ವ್ಯವಹರಿಸುವುದು, ಲೆಕ್ಕಪತ್ರ ನಿರ್ವಹಣೆ ಹಾಗೂ ಉದ್ಯಮವನ್ನು ವ್ಯವಸ್ಥಿತವಾಗಿ ನಡೆಸುವುದನ್ನು ಕಲಿತಿದ್ದಾರೆ. ಕೆಫೆಯಿಂದ ಪ್ರತಿ ತಿಂಗಳು ₹1 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದ್ದು, ಇದರಿಂದ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ನೆರವಾಗಿದೆ” ಅವರು ತಿಳಿಸಿದ್ದಾರೆ.
ಸ್ವಂತ ಆದಾಯ ಗಳಿಸುವುದರಿಂದ ಕುಟುಂಬದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಭವಿಷ್ಯಕ್ಕಾಗಿ ಹಣ ಉಳಿಸುವ ವಿಶ್ವಾಸವೂ ಮೂಡಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ, ಆತ್ಮವಿಶ್ವಾಸ ಹಾಗೂ ಸಮಾಜದಲ್ಲಿ ತಮ್ಮ ಮಾತಿಗೆ ಸಿಗುವ ಮೌಲ್ಯ ಹೆಚ್ಚಾಗಿದೆ. ಗ್ರಾಹಕರ ಮೆಚ್ಚುಗೆಯೂ ಉದ್ಯಮವನ್ನು ಇನ್ನಷ್ಟು ಉತ್ತಮವಾಗಿ ನಡೆಸಲು ಪ್ರೇರಣೆ ನೀಡುತ್ತಿದೆ ಎಂದು ಕಲಾ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಕೆಫೆಯ ಆದಾಯವನ್ನು ಹೆಚ್ಚಿಸಿ ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಭವಿಷ್ಯವನ್ನು ಭದ್ರಪಡಿಸುವುದರ ಜೊತೆಗೆ, ಇತರ ಗ್ರಾಮೀಣ ಮಹಿಳೆಯರೂ ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅಕ್ಕ ಕೆಫೆ ಪ್ರೇರಣೆಯಾಗಬೇಕು ಎಂಬುದು ಗುಂಪಿನ ಆಶಯವಾಗಿದೆ.
ಜಿಲ್ಲೆಯ ಇನ್ನಷ್ಟು ತಾಲೂಕುಗಳಿಗೆ ವಿಸ್ತರಣೆ:
ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಅಕ್ಕ ಕೆಫೆ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಹೊನ್ನಾವರ, ಕುಮಟಾ, ಯಲ್ಲಾಪುರ ಮತ್ತು ಶಿರಸಿ ತಾಲೂಕುಗಳಲ್ಲಿ ಅಕ್ಕ ಕೆಫೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಇದರಿಂದ ಈ ಭಾಗಗಳ ಮಹಿಳಾ ಸ್ವಸಹಾಯ ಗುಂಪುಗಳಿಗೂ ಉದ್ಯಮ ಆರಂಭಿಸಲು ಅವಕಾಶ ದೊರೆಯುವ ನಿರೀಕ್ಷೆಯಿದೆ.
ಇದಲ್ಲದೆ, ಕಾರವಾರದ ವೈದ್ಯಕೀಯ ಕಾಲೇಜು ಆವರಣ ಹಾಗೂ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಅಕ್ಕ ಕೆಫೆ ಆರಂಭಿಸುವ ಉದ್ದೇಶದಿಂದ ರಾಜ್ಯ ಅಭಿಯಾನ ಘಟಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಅನುಮತಿ ದೊರೆತು ಯೋಜನೆ ಕಾರ್ಯರೂಪಕ್ಕೆ ಬಂದರೆ ಇನ್ನಷ್ಟು ಮಹಿಳಾ ಸ್ವಸಹಾಯ ಗುಂಪುಗಳಿಗೆ ಆದಾಯ ಗಳಿಸುವ ಅವಕಾಶ ಸಿಗಲಿದೆ. ಸಾರ್ವಜನಿಕರಿಗೂ ಆಹಾರ ಸೇವೆ ಒದಗಿಸಲು ಸಾಧ್ಯವಾಗಲಿದೆ.
ಉದ್ಯೋಗದಿಂದ ಉದ್ಯಮದತ್ತ ಮಹಿಳೆಯರ ಹೆಜ್ಜೆ:
ಅಕ್ಕ ಕೆಫೆ ಯೋಜನೆಯು ಮಹಿಳೆಯರಿಗೆ ಆಹಾರ ಮಾರಾಟದ ಅವಕಾಶ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಉದ್ಯಮ ನಡೆಸುವ ಕೌಶಲ್ಯ, ಹಣಕಾಸಿನ ನಿರ್ವಹಣೆ, ಗ್ರಾಹಕರೊಂದಿಗೆ ವ್ಯವಹರಿಸುವ ಸಾಮರ್ಥ್ಯ ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಬೆಳೆಸಲು ನೆರವಾಗುತ್ತಿದೆ.
ಕಾರವಾರ ಮತ್ತು ಮುರುಡೇಶ್ವರದ ಕೆಫೆಗಳು ಈಗಾಗಲೇ ನಡೆಸಿರುವ ವ್ಯವಹಾರ ಹಾಗೂ ಮಹಿಳೆಯರಿಗೆ ದೊರೆತಿರುವ ಅನುಭವವು ಯೋಜನೆಯ ಮಹತ್ವವನ್ನು ತೋರಿಸುತ್ತದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಕೆಫೆಗಳು ಆರಂಭವಾದರೆ ಇನ್ನಷ್ಟು ಮಹಿಳೆಯರಿಗೆ ಸ್ವಂತ ಆದಾಯ ಗಳಿಸುವ ಅವಕಾಶ ಸಿಗಲಿದೆ. ಸ್ಥಳೀಯ ಆಹಾರ ಪದಾರ್ಥಗಳು ಮತ್ತು ಮಹಿಳೆಯರ ಶ್ರಮಕ್ಕೆ ಮಾರುಕಟ್ಟೆ ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೂ ಈ ಯೋಜನೆ ನೆರವಾಗುವ ನಿರೀಕ್ಷೆಯಿದೆ.
ಮಹಿಳೆಯರಿಗೆ ಉದ್ಯೋಗದ ಅವಕಾಶ ಕಲ್ಪಿಸುವುದರ ಜೊತೆಗೆ ಅವರನ್ನು ಉದ್ಯಮಿಗಳನ್ನಾಗಿ ಬೆಳೆಸುವ ಉದ್ದೇಶ ಹೊಂದಿರುವ ಅಕ್ಕ ಕೆಫೆ ಯೋಜನೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಪ್ರಯತ್ನ ಮತ್ತಷ್ಟು ಮಹಿಳೆಯರ ಬದುಕಿನಲ್ಲಿ ಬದಲಾವಣೆ ತಂದು, ಕುಟುಂಬದ ಆರ್ಥಿಕ ಭದ್ರತೆ ಮತ್ತು ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ನೆರವಾಗುವ ನಿರೀಕ್ಷೆಯಿದೆ.



