ಪುದುಚೇರಿಯ ತಟ್ಟಂಚಾವಡಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ (AINRC) ಅಭ್ಯರ್ಥಿ ಅಶೋಕ್ ಆನಂದ್ ಅವರು ಜಯ ಸಾಧಿಸಿದ್ದಾರೆ. ಅಶೋಕ್ ಆನಂದ್ ಅವರ ಈ ಗೆಲುವಿನಿಂದಾಗಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ AINRC ತನ್ನ ಪ್ರಾಬಲ್ಯದ ಕ್ಷೇತ್ರವನ್ನು ಉಳಿಸಿಕೊಂಡಂತಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಅಶೋಕ್ ಆನಂದ್ ಅವರು ತಮ್ಮ ಸಮೀಪದ ಸ್ಪರ್ಧಿ, ಕಾಂಗ್ರೆಸ್‌ನ ಇ. ವಿನಾಯಗಂ ಅವರ ವಿರುದ್ಧ 8,482 ಮತಗಳ ಅಂತರದಿಂದ ಗೆದ್ದಿದ್ದಾರೆ. ಅಶೋಕ್ ಆನಂದ್ (AINRC) 13,358 ಮತಗಳು, ಇ. ವಿನಾಯಗಂ (ಕಾಂಗ್ರೆಸ್) 4,876 ಮತಗಳು ಮತ್ತು ಕೆ. ಸೇತು (ಡಿಎಂಕೆ) 2,664 ಮತಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ: ನಂದಿಗ್ರಾಮ, ನಗಾಂವ್ ಫಲಿತಾಂಶದತ್ತ ಎಲ್ಲರ ಚಿತ್ತ
ಪುದುಚೇರಿಯ ತಟ್ಟಂಚಾವಡಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲು ಮುಖ್ಯ ಕಾರಣ ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ನೀಡಿರುವುದು. ಇತ್ತೀಚೆಗೆ ನಡೆದಿದ್ದ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ (AINRC) ಮುಖ್ಯಸ್ಥ ಎನ್. ರಂಗಸಾಮಿ ಅವರು ‘ತಟ್ಟಂಚಾವಡಿ’ ಮತ್ತು ‘ಮಂಗಲಂ’ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಜಯಗಳಿಸಿದ್ದರು.
ರಂಗಸಾಮಿ ಅವರು ಮಂಗಲಂ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಂಡು, ತಟ್ಟಂಚಾವಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ ತಟ್ಟಂಚಾವಡಿ ಉಪಚುನಾವಣೆ ನಡೆದಿತ್ತು. ಶೇಕಡ 80.81ರಷ್ಟು ಮತದಾನ ದಾಖಲಾಗಿತ್ತು.




