ಮುಂಗಾರು ಮಳೆಯ ಮೇಲೆ ಭರವಸೆ ಇಟ್ಟು ಕೃಷಿ ಚಟುವಟಿಕೆಗೆ ಮುಂದಾಗಿದ್ದ ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಈ ಬಾರಿ ಮಳೆ ಕೈಕೊಟ್ಟಿದೆ. ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 58,546 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದರೂ, 43,078 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಪೂರ್ಣಗೊಂಡಿದೆ. ಅಂದರೆ ಒಟ್ಟು ಗುರಿಯ ಪೈಕಿ ಸುಮಾರು ಶೇ.74ರಷ್ಟು ಪ್ರದೇಶ ಮಾತ್ರ ಕೃಷಿ ಚಟುವಟಿಕೆಗೆ ಒಳಪಟ್ಟಿದೆ. ಇನ್ನೂ 15,468 ಹೆಕ್ಟೇರ್ ಪ್ರದೇಶ ಬಿತ್ತನೆಗೆ ಬಾಕಿ ಉಳಿದಿದೆ.
ಜಿಲ್ಲೆಯ ಪ್ರಮುಖ ಕೃಷಿ ಬೆಳೆಯಾದ ಭತ್ತಕ್ಕೂ ಮಳೆ ಕೊರತೆಯ ಬಿಸಿ ತಟ್ಟಿದೆ. ಭತ್ತಕ್ಕೆ 36,868 ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 22,907 ಹೆಕ್ಟೇರ್‌ನಲ್ಲಷ್ಟೇ ಪ್ರಗತಿ ಸಾಧಿಸಲಾಗಿದೆ. ಗುರಿಯೊಂದಿಗೆ ಹೋಲಿಸಿದರೆ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಪೂರ್ಣಗೊಂಡಿಲ್ಲ. ಇದರಿಂದ ಜಿಲ್ಲೆಯ ಸಾಂಪ್ರದಾಯಿಕ ಭತ್ತದ ಕೃಷಿಯ ವಿಸ್ತೀರ್ಣ ಮತ್ತಷ್ಟು ಕುಗ್ಗುವ ಸಾಧ್ಯತೆ ಎದುರಾಗಿದೆ.
ಘಟ್ಟ ಪ್ರದೇಶಕ್ಕೆ ಮಳೆ ಕೊರತೆ
ಕರಾವಳಿ ಮತ್ತು ಘಟ್ಟದ ಮೇಲಿನ ಪ್ರದೇಶಗಳಲ್ಲಿ ಮಳೆಯ ಸ್ವರೂಪದಲ್ಲಿಯೇ ವ್ಯತ್ಯಾಸ ಕಂಡುಬಂದಿದೆ. ಕರಾವಳಿ ಭಾಗದಲ್ಲಿ ಮಳೆ ದುರ್ಬಲವಾಗಿದ್ದರೂ ಕೆಲವು ಕಡೆ ನಾಟಿ ಕಾರ್ಯಕ್ಕೆ ಅಗತ್ಯವಾದಷ್ಟು ನೀರು ಲಭ್ಯವಾಗಿರುವುದರಿಂದ ರೈತರು ನೇರ ಬಿತ್ತನೆಗಿಂತ ನಾಟಿ ಪದ್ಧತಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಬಹುತೇಕ ಪ್ರದೇಶಗಳಲ್ಲಿ ನಾಟಿ ಕಾರ್ಯ ಮುಕ್ತಾಯದ ಹಂತ ತಲುಪಿದೆ.
ಆದರೆ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಸೇರಿದಂತೆ ಘಟ್ಟದ ಮೇಲಿನ ಹಲವು ತಾಲೂಕುಗಳಲ್ಲಿ ನಿರಂತರ ಮಳೆಯ ಕೊರತೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಆರಂಭದಲ್ಲಿ ಕೆಲ ದಿನ ಉತ್ತಮ ಮಳೆ ಬಂದ ಬಳಿಕ ವಾತಾವರಣ ಮತ್ತೆ ಒಣಗಿದ್ದು, ನಂತರ ಬಂದ ಮಳೆ ಕೂಡ ಕೃಷಿಗೆ ಬೇಕಾದಷ್ಟು ಸತತವಾಗಿರಲಿಲ್ಲ.
ಮಳೆ ಕೈಕೊಟ್ಟ ಸಂದರ್ಭಗಳಲ್ಲಿ ಕೆಲ ರೈತರು ಪಂಪ್‌ಸೆಟ್ ಮೂಲಕ ಹೊಲಗಳಿಗೆ ನೀರು ಹಾಯಿಸಿ ಬಿತ್ತನೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಎಲ್ಲ ರೈತರೂ ನೀರಾವರಿ ಸೌಲಭ್ಯ ಹೊಂದಿರದ ಕಾರಣ ಮಳೆಯನ್ನೇ ಅವಲಂಬಿಸಿರುವ ಕೃಷಿ ಪ್ರದೇಶಗಳಲ್ಲಿ ಸಮಸ್ಯೆ ಗಂಭೀರವಾಗಿದೆ.
ಸಿದ್ದಾಪುರ, ಶಿರಸಿಯಲ್ಲಿ ಭತ್ತ ಬಿತ್ತನೆ ಕುಸಿತ
ಭತ್ತದ ಬಿತ್ತನೆಗೆ ಸಂಬಂಧಿಸಿದಂತೆ ಸಿದ್ದಾಪುರ ತಾಲೂಕಿನಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಶಿರಸಿಯಲ್ಲಿಯೂ ಒಟ್ಟು ಕೃಷಿ ಗುರಿಗೆ ಹೋಲಿಸಿದರೆ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.
ಜಿಲ್ಲೆಯ ಮಟ್ಟದಲ್ಲಿ ನೋಡಿದರೆ ಭತ್ತದ ಗುರಿ 36,868 ಹೆಕ್ಟೇರ್ ಇದ್ದು, ಸಾಧನೆ 22,907 ಹೆಕ್ಟೇರ್‌ಗೆ ಸೀಮಿತವಾಗಿದೆ. ಕಳೆದ ಹಲವು ವರ್ಷಗಳಿಂದಲೇ ಭತ್ತದ ಕೃಷಿ ಪ್ರದೇಶ ಹಂತ ಹಂತವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮಳೆ ಕೊರತೆ ಮತ್ತೊಂದು ಹೊಡೆತ ನೀಡುವ ಸಾಧ್ಯತೆ ಇದೆ.
ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಇಂದೂರದ ಯುವ ಕೃಷಿಕ ಅರುಣ ಸಪ್ಪಣ್ಣನವರ, “ಕಾಲಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಈ ಸಲ ಬಿತ್ತನೆ ಮಾಡೋದೇ ದೊಡ್ಡ ಸವಾಲಾಯ್ತು. ಗದ್ದೆಗಳಿಗೆ ನೀರಿಲ್ಲದೆ ಬಿತ್ತನೆ ಬೀಜ ಒಣಗಿ ಹೋಗುವಂತಾಗಿದೆ. ಕರಾವಳಿ ಭಾಗದಲ್ಲಿ ಹೇಗೋ ನಾಟಿ ಮುಗಿಸಿದರೂ, ಘಟ್ಟದ ಮೇಲಿನ ಕಡೆಗಳಲ್ಲಿ ಮಳೆ ಕೈಕೊಟ್ಟಿರೋದರಿಂದ ರೈತರು ಕಂಗಾಲಾಗಿದ್ದಾರೆ. ಕೈಯಲ್ಲಿ ದುಡ್ಡು ಹಾಕಿ ಮಾಡಿದ ಕೃಷಿ ಕೈಸೇರುತ್ತೋ ಇಲ್ಲವೋ ಅನ್ನೋ ಆತಂಕ ದಿನೇ ದಿನೇ ಜಾಸ್ತಿಯಾಗ್ತಿದೆ.” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆಯ ನಡುವೆಯೂ ಎಲ್ಲ ಬೆಳೆಗಳ ಪರಿಸ್ಥಿತಿ ಒಂದೇ ರೀತಿಯಾಗಿಲ್ಲ. ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ/ಕೃಷಿ ಚಟುವಟಿಕೆ ನಡೆದಿದೆ.
ಮೆಕ್ಕೆಜೋಳಕ್ಕೆ 3,625 ಹೆಕ್ಟೇರ್ ಗುರಿ ಇದ್ದರೆ 5,521 ಹೆಕ್ಟೇರ್‌ನಲ್ಲಿ ಬಿತ್ತನೆ ದಾಖಲಾಗಿದೆ. ಕಬ್ಬಿಗೆ 13,216 ಹೆಕ್ಟೇರ್ ಗುರಿ ಇದ್ದು 14,630 ಹೆಕ್ಟೇರ್ ಪ್ರದೇಶದಲ್ಲಿ ಸಾಧನೆ ಕಂಡುಬಂದಿದೆ.
ಇದಕ್ಕೆ ವಿರುದ್ಧವಾಗಿ ಹತ್ತಿ ಮತ್ತು ಸೋಯಾಬೀನ್ ಬೆಳೆಗಳ ಸ್ಥಿತಿ ನಿರಾಶಾದಾಯಕವಾಗಿದೆ. ಹತ್ತಿಗೆ 135 ಹೆಕ್ಟೇರ್ ಗುರಿ ಇದ್ದರೂ ಕೇವಲ 10 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಸೋಯಾಬೀನ್‌ಗೆ 10 ಹೆಕ್ಟೇರ್ ಗುರಿ ಇದ್ದು ಅಷ್ಟೇ ಪ್ರಮಾಣದಲ್ಲಿ ಸಾಧನೆಯಾಗಿದೆ.
ತಾಲೂಕುವಾರು ಅಂಕಿ-ಅಂಶಗಳು
ಜಿಲ್ಲೆಯ ತಾಲೂಕುವಾರು ಕೃಷಿ ಪ್ರಗತಿಯಲ್ಲೂ ಮಳೆಯ ಅಸಮಾನತೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸಿದೆ. ಕಾರವಾರದಲ್ಲಿ 752 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, 692 ಹೆಕ್ಟೇರ್‌ನಲ್ಲಿ ಚಟುವಟಿಕೆ ನಡೆದಿದೆ. ಅಂಕೋಲಾದಲ್ಲಿ 3,152 ಹೆಕ್ಟೇರ್ ಗುರಿಗೆ 2,757 ಹೆಕ್ಟೇರ್, ಕುಮಟಾದಲ್ಲಿ 1,850 ಹೆಕ್ಟೇರ್ ಗುರಿಗೆ 1,602 ಹೆಕ್ಟೇರ್ ಹಾಗೂ ಹೊನ್ನಾವರದಲ್ಲಿ 1,100 ಹೆಕ್ಟೇರ್ ಗುರಿಗೆ 1,051 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಭಟ್ಕಳದಲ್ಲಿ 1,242 ಹೆಕ್ಟೇರ್ ಗುರಿಯ ಎದುರು 1,216 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದೆ.
ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಾತ್ರ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಶಿರಸಿಯಲ್ಲಿ 7,190 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇದ್ದರೂ ಜುಲೈ ಅಂತ್ಯದ ವೇಳೆಗೆ 1,033 ಹೆಕ್ಟೇರ್‌ನಲ್ಲಷ್ಟೇ ಸಾಧನೆಯಾಗಿದೆ. ಸಿದ್ದಾಪುರದಲ್ಲಿ 4,980 ಹೆಕ್ಟೇರ್ ಗುರಿಗೆ 1,622 ಹೆಕ್ಟೇರ್ ಹಾಗೂ ಯಲ್ಲಾಪುರದಲ್ಲಿ 2,410 ಹೆಕ್ಟೇರ್ ಗುರಿಗೆ 1,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ಜೋಯಿಡಾದಲ್ಲಂತೂ 3,160 ಹೆಕ್ಟೇರ್ ಗುರಿಗೆ ಕೇವಲ 430 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ನಡೆದಿದೆ.
ಇದಕ್ಕೆ ಹೋಲಿಸಿದರೆ ಮುಂಡಗೋಡ ಮತ್ತು ಹಳಿಯಾಳ ತಾಲೂಕುಗಳಲ್ಲಿ ಕೃಷಿ ಚಟುವಟಿಕೆ ಉತ್ತಮವಾಗಿದೆ. ಮುಂಡಗೋಡದಲ್ಲಿ 10,610 ಹೆಕ್ಟೇರ್ ಗುರಿಗೆ 9,790 ಹೆಕ್ಟೇರ್ ಹಾಗೂ ಹಳಿಯಾಳದಲ್ಲಿ 21,380 ಹೆಕ್ಟೇರ್ ಗುರಿಗೆ 20,595 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ. ದಾಂಡೇಲಿಯಲ್ಲಿ 720 ಹೆಕ್ಟೇರ್ ಗುರಿಗೆ 700 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಪೂರ್ಣಗೊಂಡಿದೆ.
ಒಟ್ಟಾರೆ ಜಿಲ್ಲೆಯ 58,546 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದ ವೇಳೆಗೆ 43,078 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಹೀಗಾಗಿ 15,468 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಇನ್ನೂ ಬಾಕಿ ಉಳಿದಿದೆ. ಮಳೆಯ ಪ್ರಮಾಣ ಸುಧಾರಿಸಿದರೆ ಉಳಿದ ಪ್ರದೇಶದಲ್ಲೂ ಬಿತ್ತನೆ ಚುರುಕುಗೊಳ್ಳುವ ನಿರೀಕ್ಷೆ ಕೃಷಿ ಇಲಾಖೆಯಲ್ಲಿದೆ.
ತೋಟಗಾರಿಕೆ ಬೆಳೆಗೂ ಮಳೆಯ ಹೊಡೆತ
ಕಡಿಮೆ ಮಳೆಯ ನಡುವೆಯೇ ಕೆಲ ಸಂದರ್ಭಗಳಲ್ಲಿ ಸುರಿದ ಭಾರಿ ಮಳೆ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟುಮಾಡಿದೆ. ಅಂಕೋಲಾ ತಾಲೂಕಿನಲ್ಲಿ ತೆಂಗಿನ ಬೆಳೆ ಹಾನಿಯಾಗಿದ್ದರೆ, ಹೊನ್ನಾವರದಲ್ಲಿ ತೆಂಗು ಹಾಗೂ ಅಡಕೆ ಬೆಳೆಗಳಿಗೆ ಹಾನಿಯಾಗಿದೆ.
ಆದರೆ ಜಿಲ್ಲೆಯ ಕೃಷಿ ಇಲಾಖೆಯ ಲಭ್ಯ ಮಾಹಿತಿ ಪ್ರಕಾರ, ವ್ಯಾಪಕ ಪ್ರಮಾಣದ ಬೆಳೆ ನಷ್ಟಕ್ಕಿಂತಲೂ ಸದ್ಯ ರೈತರನ್ನು ಕಾಡುತ್ತಿರುವ ಪ್ರಮುಖ ಆತಂಕ ಮಳೆಯ ಕೊರತೆಯೇ ಆಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಮತ್ತಷ್ಟು ಕುಸಿದರೆ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಉತ್ತರ ಕನ್ನಡದಲ್ಲಿ ಸಾಮಾನ್ಯವಾಗಿ ಆಗಸ್ಟ್ ತಿಂಗಳು ಮಳೆಯ ದೃಷ್ಟಿಯಿಂದ ಮಹತ್ವದ ಅವಧಿ. ಈ ಸಮಯದಲ್ಲಿ ಉತ್ತಮ ಮಳೆ ಬಂದರೆ ಬಾಕಿ ಇರುವ ಕೃಷಿ ಚಟುವಟಿಕೆಗಳಿಗೆ ವೇಗ ಸಿಗುವ ನಿರೀಕ್ಷೆ ಇರುತ್ತದೆ. ಆದರೆ ಈ ಬಾರಿ ಮಳೆಯ ವರ್ತನೆ ರೈತರ ನಿರೀಕ್ಷೆಗೆ ತಕ್ಕಂತೆ ಇಲ್ಲ.
ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಆಗಸ್ಟ್ ಮೂರನೇ ವಾರದವರೆಗೂ ನಡೆಯುವ ಹಿನ್ನೆಲೆಯಲ್ಲಿ ಇನ್ನೂ ಕೆಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಅವಕಾಶವಿದೆ. ಸದ್ಯ ಮಳೆಯ ಪ್ರಮಾಣ ಸುಧಾರಿಸಿದರೆ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿ ಇಲಾಖೆ ಕೂಡ ಒಟ್ಟಾರೆ ಗುರಿಯ ಶೇ.90ರಿಂದ 95ರಷ್ಟು ಸಾಧನೆ ಆಗುವ ನಿರೀಕ್ಷೆ ಹೊಂದಿದೆ.
ಆದರೆ ಮಳೆ ಮತ್ತೆ ಕೈಕೊಟ್ಟರೆ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೂ ನೀರಿನ ಕೊರತೆ ಎದುರಾಗಬಹುದು. ಹೀಗಾಗಿ ಉಳಿದ ಮುಂಗಾರು ಅವಧಿಯಲ್ಲಿ ಸುರಿಯುವ ಮಳೆಯೇ ಜಿಲ್ಲೆಯ ಕೃಷಿಯ ಮುಂದಿನ ಚಿತ್ರಣವನ್ನು ನಿರ್ಧರಿಸಲಿದೆ.
ಕೃಷಿಯ ಮೇಲೆ ಬಿದ್ದ ಮಳೆ ಕೊರತೆಯ ಕರಿ ನೆರಳು
58,546 ಹೆಕ್ಟೇರ್ – ಜಿಲ್ಲೆಯ ಮುಂಗಾರು ಬಿತ್ತನೆ ಗುರಿ
43,078 ಹೆಕ್ಟೇರ್ – ಜುಲೈ ಅಂತ್ಯದವರೆಗೆ ಸಾಧನೆ
15,468 ಹೆಕ್ಟೇರ್ – ಇನ್ನೂ ಬಿತ್ತನೆಗೆ ಬಾಕಿ
36,868 ಹೆಕ್ಟೇರ್ – ಭತ್ತದ ಬಿತ್ತನೆ ಗುರಿ
22,907 ಹೆಕ್ಟೇರ್ – ಭತ್ತದ ಸಾಧನೆ
14 ಸಾವಿರಕ್ಕೂ ಅಧಿಕ ಹೆಕ್ಟೇರ್ – ಭತ್ತ ಬಿತ್ತನೆಗೆ ಬಾಕಿ ಇರುವ ಪ್ರದೇಶ
ಶೇ.73.6 – ಜಿಲ್ಲೆಯ ಒಟ್ಟಾರೆ ಬಿತ್ತನೆ ಸಾಧನೆ
ಮಳೆಯ ಕೊರತೆಯಿಂದ ಜಿಲ್ಲೆಯ ಕೃಷಿ ಚಟುವಟಿಕೆ ಅಸಮಾನಗೊಂಡಿದೆ. ಹಳಿಯಾಳ, ಮುಂಡಗೋಡದಂತಹ ಪ್ರದೇಶಗಳಲ್ಲಿ ಬಿತ್ತನೆ ಬಹುತೇಕ ಗುರಿಯ ಹತ್ತಿರ ತಲುಪಿದ್ದರೆ, ಶಿರಸಿ, ಜೋಯಿಡಾ ಮತ್ತು ಸಿದ್ದಾಪುರದಲ್ಲಿ ದೊಡ್ಡ ಪ್ರಮಾಣದ ಅಂತರ ಕಂಡುಬರುತ್ತಿದೆ.



