ಕೋಲಾರ: ಸ್ವಾತಂತ್ರ್ಯ ಬಂದಾಗಿನಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಮಾಡಿರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಇದಕ್ಕೆ ಪಕ್ಷಾತೀತವಾಗಿ ಬೆಂಬಲ ಕೊಟ್ಟಾಗ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು.
ಮಂಗಳವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಡಿ.ಅನುಷ ರವರ ಅಧ್ಯಕ್ಷತೆಯಲ್ಲಿ 2026-27 ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜಕೀಯ ಚುನಾವಣೆಗೆ ಸೀಮೀತವಾಗಿರಬೇಕು ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಈ ಭಾಗದಲ್ಲಿನ ಸರ್ಕಾರಿ ಜಾಗವನ್ನು ಉಳಿಸಿಕೊಳ್ಳುವ ಕೆಲಸ ಮಾಡಿದರೆ ಮುಂದೆ ಸರ್ಕಾರಿ ಕಛೇರಿಗಳ ಕಟ್ಟಡಗಳನ್ನು ಕಟ್ಟಲು ಸಾಧ್ಯವಾಗುತ್ತದೆ ಹೊಸ ಬಸ್ ನಿಲ್ದಾಣ ಹೊಸ ಕಛೇರಿ ಕಟ್ಟಡ ಮುನಿಸಿಪಲ್ ಮಾರುಕಟ್ಟೆ ನಗರ ಅರಣ್ಯೀಕರಣ ಉದ್ಯಾನವನ ಕೆರೆಗಳು ಹೊಸ ರಂಗಮಂದಿರ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿ ಅನುಮೋದನೆ ನೀಡಲಾಗಿದೆ ಇದನ್ನು ಜಾರಿ ಮಾಡಲು ಎಲ್ಲರೂ ಗಮನಿಸಿದರೆ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದರು.
ಈಗಾಗಲೇ ಕೋಲಾರ ನಗರದ ಹೊರಗೆ ರಿಂಗ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿ ಅನುದಾನ ಬಿಡುಗಡೆಯಾಗಿದೆ ಕೋಲಾರ- ದೇವನಹಳ್ಳಿ, ವೇಮಗಲ್-ಮಾಲೂರು ರಸ್ತೆ ಕಾಮಗಾರಿ ಆರು ತಿಂಗಳಲ್ಲಿ ಪ್ರಾರಂಭವಾಗುತ್ತದೆ ಇದಕ್ಕಾಗಿ 150 ಇಂಜಿನಿಯರ್ ಗಳು ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದ ಅವರು ವೇಮಗಲ್ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಾಗಿರುವ ಕಾರಣ ಜನಸಂಖ್ಯೆಯು ಹೆಚ್ಚಳವಾಗುತ್ತಿದೆ ಇದಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಕೈಗಾರಿಕೆಗಳಿಂದ ಕಡ್ಡಾಯವಾಗಿ ತೆರಿಗೆ ಪಾವತಿಸಿಕೊಳ್ಳಲು ಕ್ರಮ ವಹಿಸಬೇಕು ಎಂದರು.
ವೇಮಗಲ್ ಪಟ್ಟಣದಲ್ಲಿ ಬ್ಯಾನರ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಇದರಿಂದಾಗಿ ಆದಾಯವು ಸಿಗುತ್ತದೆ ಪಟ್ಟಣ ಪಂಚಾಯತಿಗೆ ವಿಶೇಷ ಅನುದಾನ ಪಡೆಯಲು ಪಕ್ಷಾತೀತವಾಗಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರನ್ನು ಕರೆಸಿ ಇಲ್ಲಿನ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲಾಗುವುದು ಕುರುಗಲ್ ಬಳಿ ಇರುವ 19 ನಿವೇಶನಗಳಲ್ಲಿ ಮಳಿಗೆಗಳನ್ನು ನಿರ್ಮಿಸಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಈಗ ಬಂದಿರುವ 27 ಕೋಟಿ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿಗೆ ಒತ್ತು ನೀಡುವಂತೆ ಸದಸ್ಯರಿಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವೇಮಗಲ್- ಕುರುಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಡಿ.ಅನುಷ ಮಾತನಾಡಿ ಅಭಿವೃದ್ಧಿಗಾಗಿ 2026-27 ನೇ ಸಾಲಿನ ಆಯವ್ಯಯದಲ್ಲಿ ಆಧ್ಯತೆ ನೀಡಲಾಗಿದ್ದು ಸುಮಾರು 35.27.942 ಲಕ್ಷದ ಉಳಿತಾಯದ ಬಜೆಟ್ ಮಂಡಿಸಲಾಗಿದೆ ಎಂದು ಸಭೆ ಮಾಹಿತಿ ನೀಡಿ ಸರ್ವಾನುಮತದಿಂದ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು.
ಇದನ್ನು ಓದಿದ್ದೀರಾ..? ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ
ಸಭೆಯಲ್ಲಿ ಸದಸ್ಯರು ಬಜೆಟ್ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷ ಸಿ.ಎಸ್ ವೆಂಕಟೇಶ್, ಮುಖ್ಯಾಧಿಕಾರಿ ವೆಂಕಟೇಶ್ ಸೇರಿದಂತೆ ಸದಸ್ಯರು ಇದ್ದರು.




