ಸ್ವಂತ ಉದ್ಯೋಗ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸು. ಆ ಕನಸಿಗೆ ಹೊಸಪೇಟೆಯ ʼಸಖಿʼ ಸಂಸ್ಥೆ ಮುನ್ನುಡಿ ಬರೆದಿದೆ. ಮಹಿಳೆಯರು ಗೌರವ, ಘನತೆಯ ಬದುಕು ರೂಪಿಸಿಕೊಳ್ಳಲು ಭರವಸೆಯ ಬೆಳಕಾಗಿ ನಿಂತಿದೆ.
ಎಚ್ ಪಿ ಇ ಹಾಗೂ ಜುನಿಪರ್ ನೆಟ್ವರ್ಕ್ ಸಂಸ್ಥೆಯ ಸಹಯೋಗದಲ್ಲಿ ಸಖಿ ಸಂಸ್ಥೆಯು ಹೊಸಪೇಟೆಯಲ್ಲಿ ʼಸ್ವಾವಲಂಬಿ ಜೀವನಕ್ಕೆ ಅಡಿಪಾಯʼ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರ ಹಾಗೂ ಬ್ಯೂಟಿ ಪಾರ್ಲರ್ ಕಿಟ್‌ಗಳನ್ನು ವಿತರಿಸಲಾಯಿತು. ಪಿ ಕೆ ಹಳ್ಳಿ, ಕಾರಿಗನೂರು ಸೇರಿದಂತೆ ಹೊಸಪೇಟೆ ತಾಲೂಕಿನ ವಿವಿಧ ಹಳ್ಳಿಗಳ 300 ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಹಾಗೂ 20 ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಕಿಟ್‌ಗಳನ್ನು ವಿತರಿಸಲಾಯಿತು.
ಈ ಮೂಲಕ ಸಖಿ ಅವರ ಬದುಕಿಗೆ ಹೊಸ ಚೈತನ್ಯ ತುಂಬಿದೆ. ಈಗಾಗಲೇ ಸಖಿ ಸಂಸ್ಥೆಯ ಸಹಯೋಗದಲ್ಲಿ ಹಲವು ವರ್ಷಗಳಿಂದ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದ್ದು, ಇಲ್ಲಿಯವರೆಗೆ 1,100 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡಲಾಗಿದೆ. ಈ ಮೂಲಕ ಮನೆಗೆಲಸಕ್ಕೆ ಸೀಮಿತವಾಗಿದ್ದ ಮಹಿಳೆಯರಿಗೆ ಸ್ವಾವಲಂಬಿ ಬದುಕಿನ ಭರವಸೆ ನೀಡಿದೆ.
ಮಹಿಳೆಯರು ಸೂಜಿ ದಾರದಿಂದ ಹೊಲಿಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಲಿಂಗಬೇಧ, ಅಪೌಷ್ಟಿಕತೆ, ಮಾನಸಿಕ ಅನಾರೋಗ್ಯ, ನಿರುದ್ಯೋಗ, ವಲಸೆ, ಆರ್ಥಿಕ ಸಂಕಷ್ಟ, ಬಡತನ, ಕೌಟುಂಬಿಕ ಹಿಂಸೆ, ಕೀಳರಿಮೆ ಹಾಗೂ ಅವಕಾಶ ವಂಚಿತ ಘೋಷಗಳ ಫಲಕಗಳನ್ನು ಪ್ರದರ್ಶಿಸಿ ಸಾಮಾಜಿಕ ಅಸಮಾನತೆಗಳನ್ನು ಮೆಟ್ಟಿ ನಿಲ್ಲುವ ಸಂದೇಶ ಸಾರಲಾಯಿತು. ಬಳಿಕ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಯಿತು. ಜುನಿಪರ್ ನೆಟ್ವರ್ಕ್ ಸಂಸ್ಥೆಯ ಮುತ್ತುಕುಮಾರ್, ಸಖಿ ಸಂಸ್ಥೆಯ ನಿರ್ದೇಶಕರಾದ ಡಾ. ಎಂ ಭಾಗ್ಯಲಕ್ಷ್ಮೀ ಸೇರಿದಂತೆ ಹಲವರು ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಬ್ಯೂಟಿ ಪಾರ್ಲರ್ ಕಿಟ್ ವಿತರಿಸಿದರು.
ಹೊಲಿಗೆ ಯಂತ್ರ ಹಾಗೂ ಬ್ಯೂಟಿ ಪಾರ್ಲರ್ ಕಿಟ್ ಪಡೆದು ಮಾತನಾಡಿದ ಫಲಾನುಭವಿಗಳು “ಸಖಿ ಸಂಸ್ಥೆ ಕೊಡಮಾಡಿದ ಈ ಉಪಕರಣಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ದಿನನಿತ್ಯ 400 ರಿಂದ 500 ರೂಪಾಯಿ ದುಡಿಯುತ್ತೇವೆ. ʼಸಖಿʼ ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಮುನ್ನುಡಿ ಬರೆದಿದೆ. ಯಾರನ್ನೂ ಅವಲಂಬಿಸದೆ ಸ್ವಂತ ದುಡಿಮೆಯಲ್ಲಿ ಬದುಕುತ್ತೇವೆ” ಎಂದು ಸಂತಸ ವ್ಯಕ್ತಪಡಿಸಿದರು.




