ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು, ಪ್ರಗತಿಪರ ಚಿಂತಕರನ್ನು, ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದ ಸಾಮಾನ್ಯ ಜನರನ್ನು, ಮಹಿಳಾಪರ ಹೋರಾಟಗಾರರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಮುಸ್ಲಿಮರೆಲ್ಲರನ್ನೂ ಸಾರಾಸಗಟಾಗಿ ದೇಶದ್ರೋಹಿಗಳು, ಪಾಕಿಸ್ತಾನ ಬೆಂಬಲಿಗರು, ಭಯೋತ್ಪಾದಕರು ಎಂದು ನಿಂದಿಸಲಾಗುತ್ತಿದೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಯವರ ಪ್ರಕಾರ ದೇಶದ್ರೋಹಿಗಳನ್ನು ಬೆಂಬಲಿಸುವ ಪಕ್ಷ!
“ಉಮರ್ ಖಾಲಿದ್ ರಾಷ್ಟ್ರೀಯವಾದಿ, ಗಾಂಧಿ ಹಂತಕ ಗೋಡ್ಸೆ ಸಹಚರ ಸಾವರ್ಕರ್ ಬೆಂಬಲಿಗರು ದೇಶದ್ರೋಹಿಗಳು” ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿಕೆಯ ವಿರುದ್ಧ ಸಂಘಪರಿವಾರ ಆಕ್ರೋಶ ಹೊರ ಹಾಕಿದೆ, ಪೊಲೀಸರಿಗೆ ದೂರು ನೀಡಿದೆ. ಅದರ ಬೆನ್ನಲ್ಲೇ ದೆಹಲಿಯ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ವ್ಯಕ್ತಿಯೋರ್ವರ ತಲೆ ಒಡೆದಿದ್ದ ಮೋದಿ ಅಭಿಮಾನಿ ಸ್ವತಂತ್ರ ಭಾರದ್ವಾಜ್‌ಗೆ ಹದಿನಾಲ್ಕು ದಿನಗಳ ಪೊಲೀಸ್ ಕಸ್ಟಡಿಯ ನಂತರ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ. ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ನಾನೇ ಎಂದು ಸ್ವಯಂ ಹೇಳಿಕೆ ಕೊಟ್ಟ ಆರೋಪಿಗೆ ಜಾಮೀನು ನೀಡಿ, ಆರು ವರ್ಷಗಳಿಂದ ಯಾವುದೇ ವಿಚಾರಣೆ ನಡೆಸದೇ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್‌ಗೆ ಜಾಮೀನು ನಿರಾಕರಣೆ ಮಾಡಿರುವ ಕೋರ್ಟ್‌ನ ಪಕ್ಷಪಾತಿ ಧೋರಣೆ ಭಾರೀ ಟೀಕೆಗೆ ಒಳಗಾಗಿದೆ.
ದೆಹಲಿಯ ಪ್ರತಿಷ್ಠಿತ ಜೆಎನ್‌ಯುನ ಪ್ರತಿಭಾವಂತ ವಿದ್ಯಾರ್ಥಿ ಉಮರ್ ಖಾಲಿದ್ ವಿದ್ಯಾರ್ಥಿ ಮುಖಂಡರಾಗಿ, ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟದ ಮುಂಚೂಣಿ ನಾಯಕರಾಗಿದ್ದರು. 2020ರಲ್ಲಿ ಮೋದಿ ಸರ್ಕಾರ ಮುಸ್ಲಿಂ ತುಚ್ಛೀಕರಣದ ನೀತಿಯಾಗಿ ಎನ್‌ಆರ್‌ಸಿ ಜಾರಿಗೊಳಿಸಲು ಹೊರಟಾಗ ಸಹಜವಾಗಿಯೇ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿ ಮುಖಂಡರು ನೇತೃತ್ವ ವಹಿಸಿದ್ದರು. ಈ ಪ್ರತಿಭಟನೆಯನ್ನು ಕೆಡಿಸಲು, ಗಲಭೆ ಸೃಷ್ಟಿಸಲು ನೇರವಾಗಿ ಸಂಘಪರಿವಾರದ ಬೆಂಬಲಿಗರು ಪ್ರತಿಭಟನೆಯ ಒಳಗೆ ನುಗ್ಗಿದ್ದರು. ಸಂಘಿ ಯುವಕನೊಬ್ಬ ಶಾಹೀನ್‌ಬಾಗ್ ಪ್ರತಿಭಟನೆಯ ಸ್ಥಳದಲ್ಲಿ ಪಿಸ್ತೂಲು ತೋರಿಸಿ ಗುಂಡಿಕ್ಕುವ ಬೆದರಿಕೆಯೊಡ್ಡಿದ್ದ. ನೂರಾರು ಪೊಲೀಸರು ಆತನನ್ನು ಬಂಧಿಸದೇ ನಿಂತು ನೋಡುತ್ತಿದ್ದ ದೃಶ್ಯಗಳನ್ನು ದೇಶವೇ ನೋಡಿದೆ. ಅಂತಹ ಕ್ರಿಮಿನಲ್‌ಗಳನ್ನು ಸಮಾಜದಲ್ಲಿ ಆರಾಮವಾಗಿ ಇರಲು ಬಿಟ್ಟು ಉಮರ್ ಖಾಲೀದ್, ಶಾರ್ಜೀಲ್ ಇಮಾಮ್ ತರಹದ ಯುವ ನಾಯಕರನ್ನು ದೇಶದ್ರೋಹದ ಪ್ರಕರಣದಡಿ ಬಂಧಿಸಲಾಗಿದೆ. ಇವರ ಜೊತೆಗೆ ಬಂಧಿತರಾಗಿದ್ದ ಇನ್ನೂ ನಾಲ್ಕು ಮಂದಿಗೆ ಕಳೆದ ವರ್ಷ ಜಾಮೀನು ನೀಡಲಾಗಿದೆ.
ದೇಶದ್ರೋಹಿಗಳೆಂದರೆ ಯಾರು? ಈ ಪದ ಎರಡು ದಶಕಗಳ ಹಿಂದಿನವರೆಗೂ ಅಪರೂಪವಾಗಿ ಕೇಳಿಬರುತ್ತಿತ್ತು. ಭಯೋತ್ಪಾದಕರ ಜೊತೆಗೆ ನಂಟು ಹೊಂದಿದವರು, ಅವರಿಗೆ ನೆರವು ನೀಡಿದವರು, ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ವಿರೋಧಿ ರಾಷ್ಟ್ರಗಳಿಗೆ ನೀಡುವವರು ಹೀಗೆ ಗಂಭೀರ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾದವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತಿತ್ತು. ಕಾನೂನಾತ್ಮಕವಾಗಿ ಕೋರ್ಟ್ ಆರೋಪಿಯ ಕೃತ್ಯಕ್ಕೆ ಪೂರಕ ಸಾಕ್ಷ್ಯಾಧಾರ ಪರಿಶೀಲಿಸಿ ಅದು ಸಾಬೀತಾದ ನಂತರ ದೇಶದ್ರೋಹಿ ಎಂದು ಘೋಷಣೆ ಮಾಡಿ ಆತನಿಗೆ ಶಿಕ್ಷೆ ವಿಧಿಸಬೇಕು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು, ಪ್ರಗತಿಪರ ಚಿಂತಕರನ್ನು, ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದ ಸಾಮಾನ್ಯ ಜನರನ್ನು, ಮಹಿಳಾಪರ ಹೋರಾಟಗಾರರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತಿದೆ. ಮುಸ್ಲಿಮರೆಲ್ಲರನ್ನೂ ಸಾರಾಸಗಟಾಗಿ ದೇಶದ್ರೋಹಿಗಳು, ಪಾಕಿಸ್ತಾನ ಬೆಂಬಲಿಗರು, ಭಯೋತ್ಪಾದಕರು ಎಂದು ನಿಂದಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಬಿಂಬಿಸಲು ತಿರುಚಿದ ಆಡಿಯೋ, ವಿಡಿಯೋಗಳನ್ನು ಹರಿಯಬಿಡಲಾಗುತ್ತಿದೆ. ಮುಸ್ಲಿಮರೆಂದರೆ ಅಪಾಯಕಾರಿ ಜನ, ಬಾಂಬ್ ಹಾಕುವವರು ಎಂದು ಹಿಂದುತ್ವದ ಮದ ಏರಿಸಿಕೊಂಡವರು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದಾರೆ. ಜನಪರ ಹೋರಾಟಗಳಲ್ಲಿ ಭಾಗಿಯಾದ ಸಾಮಾನ್ಯ ಮುಸಲ್ಮಾನರನ್ನೂ ಗುರಿಯಾಗಿಸಿ ಇಲ್ಲ ಸಲ್ಲದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ವರ್ಷಗಳ ಕಾಲ ವಿಚಾರಣೆಯನ್ನೇ ನಡೆಸದೇ ಬಂಧಿಸಿಡಲಾಗುತ್ತಿದೆ. ಇಂತಹ ಹಲವು ಪ್ರಕರಣಗಳಲ್ಲಿ ಆರೋಪ ಸಾಬೀತಾಗದೇ ಬಿಡುಗಡೆಗೊಂಡ ಹತ್ತಾರು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.
ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲೊಂದು ಸಂವಿಧಾನ ಇದೆ. ಅದು ಈ ದೇಶದ ಪ್ರತಿ ಪ್ರಜೆಗೆ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ತನಗೆ ಇಷ್ಟ ಬಂದ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ, ಸಿದ್ಧಾಂತ, ಪಕ್ಷವನ್ನು ಬೆಂಬಲಿಸುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕನ್ನು ಕೊಟ್ಟಿದೆ. ಆ ಹಕ್ಕಿನ ಅಡಿಯಲ್ಲಿ ಈ ದೇಶದಲ್ಲಿ ದಿನವೂ ನೂರಾರು ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಅದೇ ರೀತಿ ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಹಕ್ಕುಗಳಿವೆ. ಬಿಜೆಪಿ ವಿಪಕ್ಷದಲ್ಲಿದ್ದಾಗ ಸರ್ಕಾರಗಳ ವಿರುದ್ಧ ಪ್ರತಿಭಟನೆ ಮಾಡಿಲ್ಲವೇ? ಆಗ ಮೋದಿ ಮತ್ತು ಅವರ ಬೆಂಬಲಿಗರನ್ನು ದೇಶದ್ರೋಹಿಗಳು ಎಂದು ಕರೆಯಲಾಗಿತ್ತೇ? ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿತ್ತೇ? ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಎರಡನೇ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪುಗೊಂಡಿರಲಿಲ್ಲವೇ? ಅದರ ಲಾಭವನ್ನು ಪಡೆದು ಅಧಿಕಾರಕ್ಕೆ ಬಂದ ಮೋದಿ ಮತ್ತವರ ಪರಿವಾರ ತಮ್ಮ ಸರ್ಕಾರದ ವಿರುದ್ಧ ಜನಾಂದೋಲವನ್ನು ಯಾಕೆ ಸಹಿಸುತ್ತಿಲ್ಲ?
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮಗಳು ಕೂಡಾ ಉಮರ್ ಖಾಲಿದ್, ಅಭಿಜೀತ್ ದೀಪ್ಕೆ, ನೇಹಾ ಬೋರಾ ತರಹದ ಯುವ ನಾಯಕರನ್ನು ಮುಲಾಜಿಲ್ಲದೇ ದೇಶದ್ರೋಹಿ ಎಂದು ಕರೆಯುತ್ತಿವೆ. ಇತ್ತೀಚೆಗೆ ಮೋದಿ ಸರ್ಕಾರದ ನೀಟ್ ಪರೀಕ್ಷಾ ಅಕ್ರಮ, ವಿದ್ಯಾರ್ಥಿಗಳ ಆತ್ಮಹತ್ಯೆಯ ನಂತರ ದೆಹಲಿಯಲ್ಲಿ ನಡೆದ ಪ್ರತಿಭಟನೆ ಆಯೋಜಿಸಿದ್ದ ಸಿಜೆಪಿ ಮುಖಂಡರು, ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಮಾತನಾಡಿದ ವಿದ್ಯಾರ್ಥಿ ಮುಖಂಡರ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ, ಮಸಿ ಎರಚಿದ್ದಾರೆ, ಅತ್ಯಾಚಾರ-ಕೊಲೆ ಬೆದರಿಕೆ ಒಡ್ಡಿದ್ದಾರೆ. ಮಾಧ್ಯಮಗಳು ಇಂತಹ ಕೃತ್ಯಗಳನ್ನು ಸಂಭ್ರಮಿಸಿವೆ. ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ನಿರಂತರವಾಗಿ “ಅಭಿಜೀತ್ ದೀಪ್ಕೆ ಮತ್ತು ಸಿಜೆಪಿ ವಕ್ತಾರರನ್ನು ದೇಶವಿರೋಧಿಗಳು, ವಿದೇಶಿ ಫಂಡ್ ಪಡೆದು ಮೋದಿ ಸರ್ಕಾರದ ವಿರುದ್ಧ ಪಿತೂರಿಯ ಭಾಗವಾಗಿ ಪ್ರತಿಭಟನೆ ನಡೆಸಿದ್ದಾರೆ” ಎಂದು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ನೀತಿಗಳು, ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದರೆ ಅದು ದೇಶದ್ರೋಹ ಎಂದಾದರೆ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳೂ ದೇಶದ್ರೋಹದ ಕೃತ್ಯದ ವ್ಯಾಪ್ತಿಗೆ ಬರುತ್ತದೆ ಅಲ್ಲವೇ?
ಇಡೀ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಧರ್ಮ, ಜಾತಿ ಮರೆತು ಭಾಗಿಯಾಗಿದ್ದಾಗ ಒಂದು ಸಿದ್ಧಾಂತದ ಬೆಂಬಲಿಗರು ಸ್ವಾತಂತ್ರ್ಯ ಹೋರಾಟಕ್ಕೆ ತನ್ನ ಬದುಕನ್ನೇ ಅರ್ಪಿಸಿ, ಇಡೀ ದೇಶವನ್ನು ಒಗ್ಗೂಡಿಸಿದ್ದ ಗಾಂಧಿಯನ್ನು ಕೊಲ್ಲುವ ಸಂಚು ರೂಪಿಸಿ ಯಶಸ್ವಿಯಾಗಿದ್ದರು.. ಅಂಥ ಸಿದ್ಧಾಂತದ ಬೆಂಬಲಿಗರು ಅವರ ವಿರೋಧಿಗಳನ್ನೇ ದೇಶದ್ರೋಹಿಗಳು ಎಂದು ಕರೆಯುತ್ತಿರುವುದು ಹಾಸ್ಯಾಸ್ಪದ. ಭಗತ್ ಸಿಂಗ್, ಚಂದ್ರಶೇಖರ್ ಆಝಾದ್ ತರಹದ ನೂರಾರು ಬಿಸಿ ರಕ್ತದ ಯುವಕರು ಬ್ರಿಟಿಷರ ಗುಂಡಿಗೆ ಹೆದರಲಿಲ್ಲ. ಈಗ ನಮ್ಮದೇ ಸರ್ಕಾರ ಉಮರ್ ಖಾಲಿದ್ ತರಹದ ಈ ಕಾಲದ ಬಿಸಿ ರಕ್ತದ ದೇಶಪ್ರೇಮಿ ಯುವಕರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿದೆ. ಉಮರ್ ಖಾಲಿದ್ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರವೊಂದು ಮಾಡಬೇಕಿರುವ ಆದ್ಯ ಕರ್ತವ್ಯ. ಪ್ರಶ್ನೆ ಕೇಳಿದವರನ್ನು ದೇಶದ್ರೋಹಿಗಳು ಎಂದು ಹೀಗಳೆಯುವುದು ತರವಲ್ಲ.




