ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ವಾರಗಳಿಂದ ಆಡಳಿತ, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಬದುಕಿನಲ್ಲಿ ಧಾರ್ಮಿಕ ಗುರುತುಗಳನ್ನು ಕೇಂದ್ರವಾಗಿಟ್ಟುಕೊಂಡ ಹಲವು ವಿವಾದಗಳು ಒಂದರ ಹಿಂದೆ ಒಂದಾಗಿ ಕಾಣಿಸಿಕೊಳ್ಳುತ್ತಿವೆ. ಮುಸ್ಲಿಂ ಐಪಿಎಸ್ ಅಧಿಕಾರಿಯ ವರ್ಗಾವಣೆ, ಸುರೇಂದ್ರನಾಥ್ ಲಾ ಕಾಲೇಜಿನ ಮುಸ್ಲಿಂ ಉಪಪ್ರಾಂಶುಪಾಲೆಯ ಮೇಲೆ ರಾಜೀನಾಮೆಗೆ ಒತ್ತಡ ಮತ್ತು ಅವರ ಕಚೇರಿಯಲ್ಲಿ ನಡೆದ ‘ಗಂಗಾಜಲ ಶುದ್ಧೀಕರಣ’ ಹಾಗೂ ಕ್ರೈಸ್ತರ ಪ್ರಾರ್ಥನಾ ಸಭೆಗಳ ಮೇಲಿನ ದಾಳಿಗಳು ಬಂಗಾಳದಲ್ಲಿ ಕೋಮು ರಾಜಕಾರಣವು ಮಿತಿಮೀರಿದೆ ಎಂಬುದನ್ನು ತೋರಿಸುತ್ತವೆ.
ಖರಗಪುರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ 2021 ಬ್ಯಾಚ್‌ನ IPS ಅಧಿಕಾರಿ ಬುಶ್ರಾ ಬಾನೋ ಅವರನ್ನು ಸೆಪ್ಟೆಂಬರ್ 14ರಂದು ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ 4ನೇ ಬೆಟಾಲಿಯನ್‌ನ ಡೆಪ್ಯುಟಿ ಕಮಾಂಡೆಂಟ್ ಹುದ್ದೆಗೆ ವರ್ಗಾಯಿಸಲಾಗಿದೆ. “ಬಾನೋ ಅವರು ತಮ್ಮ ಯೂಟ್ಯೂಬ್ ವಿಡಿಯೋವೊಂದರಲ್ಲಿ ಅವರು ‘ಅಸ್ಸಲಾಮು ಅಲೈಕುಂ’ ಮತ್ತಿತರ ಸಾಂಪ್ರದಾಯಿಕ ಇಸ್ಲಾಮಿಕ್ ಪದಗಳನ್ನು ಬಳಸಿದ್ದಾರೆ. ಇದು ಸಂಘಟನೆಯು ಸರ್ಕಾರದ ತಟಸ್ಥತೆಗೆ ಧಕ್ಕೆ ಉಂಟುಮಾಡಿದೆ” ಎಂದು ‘ಹಿಂದು ಲೀಗಲ್ ಫಂಡ್’ ದೂರು ನೀಡಿತ್ತು. ಈ ದೂರು ಬಂದ ಕೆಲವೇ ಗಂಟೆಗಳಲ್ಲಿ ಬಾನೋ ಅವರನ್ನು ವರ್ಗಾವಣೆ ಮಾಡಲಾಯಿತು. ಸರ್ಕಾರದ ಈ ತ್ವರಿತ ಕ್ರಮದ ವಿರುದ್ಧ, ಹಿಂದು ಅಧಿಕಾರಿಗಳು ‘ದೇವರೇ ಕಾಪಾಡಪ್ಪ, ದೇವರು ಒಳ್ಳೆಯದು ಮಾಡಲಿ’ ಎಂದು ಪ್ರಾರ್ಥಿಸಿದರೆ, ಅವರನ್ನು ಸರ್ಕಾರ ವರ್ಗಾವಣೆ ಮಾಡುವುದೇ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ವಿವಾದ ಚರ್ಚೆಯಲ್ಲಿರುವ ಸಮಯದಲ್ಲೇ, ಕೋಲ್ಕತ್ತಾದ ಸುರೇಂದ್ರನಾಥ್ ಲಾ ಕಾಲೇಜಿನ ಉಪಪ್ರಾಂಶುಪಾಲೆ ಮೊಹಮ್ಮದಿ ತರನ್ನುಮ್ ಅವರು ರಾಜೀನಾಮೆ ನೀಡುವಂತೆ ಬಲವಂತದ ಒತ್ತಡ ಹೇರಲಾಗಿದೆ. ಮೊಹಮ್ಮದಿ ತರನ್ನುಮ್ ಅರು ಪರೀಕ್ಷೆಗೆ ಅಗತ್ಯವಿರುವ ಕನಿಷ್ಠ ಹಾಜರಾತಿ ನಿಯಮವನ್ನು ಇತ್ತೀಚೆಗೆ ಜಾರಿಗೆ ತಂದಿದ್ದರು. ಅದಕ್ಕಾಗಿ, ಅವರನ್ನು ವಿದ್ಯಾರ್ಥಿಗಳು ಸುಮಾರು 23 ಗಂಟೆಗಳ ಕಾಲ ಕಚೇರಿಯಲ್ಲೇ ಘೇರಾವ್ ಮಾಡಿ ಬಲವಂತವಾಗಿ ರಾಜೀನಾಮೆ ಪಡೆದರು.
ಈ ಲೇಖನ ಓದಿದ್ದೀರಾ?: ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ
ಮಾತ್ರವಲ್ಲ, ತರನ್ನುಮ್ ಕಾಲೇಜಿನಿಂದ ಹೊರಬಂದ ನಂತರ, ಕೆಲ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಪುಂಡರು ಅವರ ಕಚೇರಿಯಲ್ಲಿ ಧೂಪ ಹಚ್ಚಿ, ಗಂಗಾಜಲ ಸಿಂಪಡಿಸಿ ‘ಶುದ್ಧೀಕರಣ’ ನಡೆಸಿ, ಕೋಮುದ್ವೇಷ ಮೆರೆದರು. ಹಿಂದುತ್ವವಾದಿ ಎಪಿವಿಪಿ ಪುಂಡರು ನಡೆಸಿದ ದಾಂಧಲೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ, ಕಾಲೇಜು ಆಡಳಿತವು ತರನ್ನುಮ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದೆ. ಅವರು ಹುದ್ದೆಯಲ್ಲಿ ಮುಂದುವರೆಯುವಂತೆ ಮಾಡಿದೆ.
ಈ ವಿವಾದಗಳ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರವು 247 ಸರ್ಕಾರಿ ಅನುದಾನಿತ ಕಾಲೇಜುಗಳ ಆಡಳಿತ ಮಂಡಳಿಗಳ ಅಧ್ಯಕ್ಷರಾಗಿ ಬಿಜೆಪಿ ನಾಯಕರನ್ನು ನೇಮಿಸಿದೆ. ಇದು ಕಾಲೇಜುಗಳ ಸ್ವಾಯತ್ತತೆಯ ಮೇಲಿನ ರಾಜಕೀಯ ಪ್ರಭಾವದ ಕುರಿತು ಆತಂಕ ಮೂಡಿಸಿದೆ.
ಜೊತೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ವೇಳೆ ಹಿರಿಯ ಮುಸ್ಲಿಂ ಅಧಿಕಾರಿಗಳನ್ನು ಪ್ರೋಟೋಕಾಲ್ ಕರ್ತವ್ಯಗಳಿಂದ ಹೊರಗಿಡಲಾಗಿದೆ ಎಂದು ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಗೆ ದೂರು ನೀಡಿದ್ದಾರೆ.
ಕೇವಲ ಮುಸ್ಲಿಂ ಸಮುದಾಯ ಮಾತ್ರವಲ್ಲದೆ, ಹೌರಾ ಮತ್ತು ಇತರ ಜಿಲ್ಲೆಗಳಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ಮತ್ತು ಚರ್ಚ್‌ಗಳ ಮೇಲೆಯೂ ದಾಳಿ ನಡೆದಿವೆ ಎಂದು ವರದಿಗಳಾಗಿವೆ.
2026ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು, ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ನಂತರದ ನಾಲ್ಕು ತಿಂಗಳಲ್ಲಿ ಕೋಮು ರಾಜಕಾರಣದ ಸರಣಿ ವಿವಾದಗಳು ವರದಿಯಾಗಿವೆ. ದಿನನಿತ್ಯ ಕೋಮುದ್ವೇಷದ ಕೃತ್ಯಗಳು ನಡೆಯುತ್ತಲೇ ಇವೆ.




