ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು; ಹಿಂದುತ್ವವೇ ಅಸ್ತ್ರ

Date:

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈಗ 2028ರ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಟಿ. ನರಸೀಪುರದ ಗಣೇಶೋತ್ಸವದಿಂದ ಹಿಡಿದು ಮೈಸೂರಿನ ಹಲವು ಧಾರ್ಮಿಕ–ಸಾಂಸ್ಕೃತಿಕ ವಿವಾದಗಳವರೆಗೆ ಮತ್ತೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಚಾಮರಾಜದ ಮಾಜಿ ಶಾಸಕ ಎಲ್. ನಾಗೇಂದ್ರರೊಂದಿಗೆ ಟಿಕೆಟ್ ಪೈಪೋಟಿಯೂ ಬಹಿರಂಗವಾಗಿದೆ.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರವನ್ನು ಎರಡು ಅವಧಿಗೆ ಪ್ರತಿನಿಧಿಸಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಕಳೆದೆರಡು ವರ್ಷಗಳಿಂದ ನಿರುದ್ಯೋಗಿಯಾಗಿದ್ದಾರೆ. ಬಿಜೆಪಿಯೊಳಗೆ ಗಮನಾರ್ಹ ಉದ್ಯೋಗ ಪಡೆಯಲು ಹವಣಿಸುತ್ತಿದ್ದಾರೆ. ಸದ್ಯ, ಮೈಸೂರಿನ ‘ಚಾಮರಾಜ’ ವಿಧಾನಸಭಾ ಕ್ಷೇತ್ರದ ಮೇಲೆ ಕಟ್ಟಿರುವ ಪ್ರತಾಪ್ ಸಿಂಹ ಬಿಜೆಪಿಯ ಹಳೇ/ಏಕೈಕ ಅಸ್ತ್ರ ಹಿಂದುತ್ವವನ್ನು ಮತ್ತೆ ಬಳಸಿಕೊಂಡು ಮುನ್ನೆಲೆಗೆ ಬರಲು ತವಕಿಸುತ್ತಿದ್ದಾರೆ. ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಕಾತುರದಲ್ಲಿದ್ದ ಪ್ರತಾಪ್ ಸಿಂಹಗೆ ಟಿ ನರಸೀಪುರದ ಗಣೇಶೋತ್ಸವವು ಮರಳುಗಾಡಿನ ‘ಒಯಾಸಿಸ್‌’ನಂತೆ ದಕ್ಕಿದೆ. ಟಿ ನರಸೀಪುರ ಹಬ್ಬವನ್ನು ವಿವಾದವಾಗಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಿರುದ್ಯೋಗಿ ಸಿಂಹ ಹೌಹಾರಿ, ಜಿಗಿದಿದ್ದಾರೆ.

- Advertisement -

ಅಂದಹಾಗೆ, ಪ್ರತಾಪ್ ಸಿಂಹ 2014 ಮತ್ತು 2019ರಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಸಂಸದರಾಗಿದ್ದರು. 2024ರಲ್ಲಿ ಮೂರನೇ ಬಾರಿಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರನ್ನು ಬಿಜೆಪಿ ಮೂಲೆಗೆ ದೂಡಿತು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತು. ಪ್ರತಾಪ್ ಸಿಂಹರನ್ನು ನಿರುದ್ಯೋಗಿಯನ್ನಾಗಿ ಮಾಡಿತು. ಬಳಿಕ, ರಾಜಕೀಯ ನೆಲೆಯ ಹುಟುಕಾಟದಲ್ಲಿದ್ದ ಪ್ರತಾಪ್ ಸಿಂಹ, ಇದೇ ವರ್ಷದ (2026) ಜನವರಿಯಲ್ಲಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವುದಾಗಿಯೂ, 2028ರ ವಿಧಾನಸಭಾ ಚುನಾವಣೆಯಲ್ಲಿ ‘ಚಾಮರಾಜ’ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿಯೂ ಘೋಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು:...

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ ನೆರವು ಅಗತ್ಯವಾಗುತ್ತದೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಸಮಗ್ರವಾಗಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳ...

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ,...

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು ಈ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಜಾಪ್ರಭುತ್ವದ ಅತ್ಯುನ್ನತ ಪೀಠದಲ್ಲಿರುವ ಅವರು, ತಮ್ಮ ಸ್ವಕ್ಷೇತ್ರದ ಈ ದಶಕದ ಸಮಸ್ಯೆಗೆ ತಕ್ಷಣ...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

ಖಾಲಿ ಇದೆಯೇ ಚಾಮರಾಜ ಕ್ಷೇತ್ರ?

ಚಾಮರಾಜ ಕ್ಷೇತ್ರವನ್ನು ಪ್ರತಾಪ್ ಸಿಂಹ ಆಯ್ಕೆ ಮಾಡಿಕೊಂಡಿದ್ದರೂ, ಆ ಕ್ಷೇತ್ರದ ಜಾಗ ಖಾಲಿ ಇಲ್ಲವೆಂದು ಅಲ್ಲಿನ ಬಿಜೆಪಿ ಮಾಜಿ ಶಾಸಕ, ಪಕ್ಷದ ಮೈಸೂರು ನಗರಾಧ್ಯಕ್ಷ ಎಲ್. ನಾಗೇಂದ್ರ ಹೇಳಿದ್ದಾರೆ. ನಾಗೇಂದ್ರ ಅವರು2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ಹರೀಶ್ ಗೌಡ ವಿರುದ್ಧ 4,094 ಮತಗಳ ಅಂತರದಿಂದ ಸೋತಿದ್ದರು. ಮುಂದಿನ ಚುನಾವಣೆಯಲ್ಲೂ ತಾವೇ ಬಿಜೆಪಿಯ ಅಭ್ಯರ್ಥಿ ಎಂದು ಅವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ, ‘ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ನಾಗೇಂದ್ರ ಹೇಳಿದ್ದಾರೆ.

ಆದಾಗ್ಯೂ, ಜನವರಿಯಿಂದ ನಾಗೇಂದ್ರ ಮತ್ತು ಪ್ರತಾಪ್ ಸಿಂಹ ನಡುವೆ ಚಾಮರಾಜ ಕ್ಷೇತ್ರದ ಟಿಕೆಟ್‌ ಹಣಾಹಣಿ ಆಗ್ಗಾಗ್ಗೆ ಮುನ್ನೆಲೆಗೆ ಬರುತ್ತಿದೆ. ಮುಂದುವರೆದಿದೆ. ಅಂತಹ ತಿಕ್ಕಾಟವು ಕಳೆದ ವಾರ, ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಟಿ. ನರಸೀಪುರದಲ್ಲಿ ನಡೆದ ಹಿಂದುತ್ವ ಪ್ರಚೋದನಾಕಾರಿ ಪ್ರತಿಭಟನೆ ಸಂದರ್ಭದಲ್ಲಿ ಬಹಿರಂಗಗೊಂಡಿವೆ. ಈ ವೇಳೆ, ಅವರಿಬ್ಬರೂ ಮಾತಿನ ಚಕಮಕಿ ಮತ್ತು ನೂಕಾಟ ನಡೆಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿವೆ.

ಈ ತಿಕ್ಕಾಟಗಳ ನಡುವೆ, ಬಿಜೆಪಿ ಹೈಕಮಾಂಡ್‌ನ ಗಮನ ಸೆಳೆಯಲು ಪ್ರತಾಪ್ ಸಿಂಹ ಹಿಂದುತ್ವದ ಮೊರೆಹೋಗಿದ್ದಾರೆ.

ಪ್ರತಾಪ್ ಸಿಂಹ ಮತ್ತು ಕೋಮುರಾಜಕಾರಣ

ಈ ಮಾಜಿ ಸಂಸದ ತನ್ನ ರಾಜಕೀಯಕ್ಕೆ ಪ್ರಚೋದಕಾರಿ ಹಿಂದುತ್ವವನ್ನೇ ಆಶ್ರಯಿಸಿರುವುದು ಇದೇ ಮೊದಲೇನೂ ಅಲ್ಲ. ಈತ ಸಂಸದರಾಗಿದ್ದ ಮೊದಲ ಅವಧಿಯಿಂದಲೇ ಟಿಪ್ಪು ಸುಲ್ತಾನ್, ಹನುಮ ಜಯಂತಿ, ಮಸೀದಿ ಸಂಕೇತಗಳು ಹಾಗೂ ಮಹಿಷ ದಸರಾ ಮುಂತಾದ ವಿವಾದಗಳನ್ನು ಸೃಷ್ಟಿಸಿ, ಗಮನ ಸೆಳೆದಿದ್ದರು.

2017ರ ಹುಣಸೂರು ಹನುಮ ಜಯಂತಿಯು ಅವರ ಪ್ರಚೋದನಾಕಾರಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ. ಆ ಸಮಯದಲ್ಲಿ, ಹನುಮ ಮೆರವಣಿಗೆಗೆ ಪೊಲೀಸರು ಮಾರ್ಗ ನಿಗದಿ ಮಾಡಿದ್ದರು. ಆದರೆ, ಅದನ್ನು ಒಪ್ಪದ ಪ್ರತಾಪ್ ಸಿಂಹ ಪೊಲೀಸ್ ಬ್ಯಾರಿಕೇಡ್ ಮೇಲೆ ಕಾರು ಚಲಾಯಿಸಿ, ದಾಂಧಲೆ ನಡೆಸಿದ್ದರು. ಅವರನ್ನು ಪೊಲೀಸರು ಬಂಧಿಸಿ, ಇಡೀ ಮೈಸೂರು ಸುತ್ತಿಸಿದ್ದರು.

ಅದೇ ಅವಧಿಯಲ್ಲಿ ಟಿಪ್ಪು ಜಯಂತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರತಾಪ್ ಸಿಂಹ, ಟಿಪ್ಪು ಸುಲ್ತಾನ್ ಮತ್ತು ಅಂದಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಠಿಣ ಮತ್ತು ಆಕ್ಷೇಪಾರ್ಹ ಭಾಷಾ ಬಳಕೆ ಮಾಡಿದ್ದರು.

ಅಂತೆಯೇ, 2022ರಲ್ಲಿ ಮೈಸೂರಿನ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್‌ಗಳನ್ನೂ ಪ್ರತಾಪ್ ಸಿಂಹ ವಿವಾದದ ಕೇಂದ್ರವಾಗಿಸಿದ್ದರು. ಅವು ಮಸೀದಿಯಂತಿವೆ ಎಂದಿದ್ದ ಪ್ರತಾಪ್ ಸಿಂಹ, ‘ಆ ಗೋಪುರಗಳನ್ನು ತೆಗೆದುಹಾಕದಿದ್ದರೆ ತಾವೇ ಕೆಡವುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ವಿಶೇಷವೆಂದರೆ, ಆ ಬಸ್ ಛಾವಣಿ ನಿರ್ಮಾಣವಾಗಿದ್ದದ್ದೇ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಅವರ ಕ್ಷೇತ್ರದಲ್ಲಿ. ಮಾತ್ರವಲ್ಲದೆ, ‘ಬಸ್‌ ಛಾವಣಿ ಮೇಲಿನ ಗೋಪುರವು ಮೈಸೂರು ಅರಮನೆಯ ವಾಸ್ತುಶೈಲಿಯಿಂದ ಪ್ರೇರಿತವಾಗಿದೆ’ ಎಂದು ಸ್ವತಃ ರಾಮದಾಸ್ ಹೇಳಿದ್ದರು. ಆದಾಗ್ಯೂ, ಬಸ್‌ ನಿಲ್ದಾಣದ ಛಾವಣಿಯಲ್ಲಿದ್ದ ಎರಡು ಗುಂಬಜ್‌ಗಳನ್ನು ತೆಗೆಯಲಾಯಿತು. ಆಗಲೂ, ರಾಮದಾಸ್ ಅವರು ಈ ವಿಚಾರಕ್ಕೆ ಅನಗತ್ಯವಾಗಿ ಧಾರ್ಮಿಕ ಬಣ್ಣ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಲೇಖನ ಓದಿದ್ದೀರಾ?: ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

2023ರಲ್ಲಿ ಮಹಿಷ ದಸರಾ ವಿಚಾರದಲ್ಲೂ ಪ್ರತಾಪ್ ಸಿಂಹ ವಿವಾದ ಸೃಷ್ಟಿಸಿದ್ದರು. ಮಹಿಷ ದಸರಾ ನಡೆಸುವವರ ವಿರುದ್ಧ ‘ಚಲೋ ಚಾಮುಂಡಿ ಬೆಟ್ಟ’ ಕಾರ್ಯಕ್ರಮ ಘೋಷಿಸಿದರು. ಪರಿಸ್ಥಿತಿ ಸಂಘರ್ಷಕ್ಕೆ ತಿರುಗುವ ಆತಂಕದಿಂದ ಪೊಲೀಸರು ಮಹಿಷ ದಸರಾ ಮತ್ತು ಪ್ರತಾಪ್ ಸಿಂಹ ನೇತೃತ್ವದ ಕಾರ್ಯಕ್ರಮ ಎರಡಕ್ಕೂ ನಿರ್ಬಂಧ ಹೇರಿದರು.

ಈ ಎಲ್ಲ ಘಟನೆಗಳಲ್ಲಿ ಪ್ರತಾಪ್ ಸಿಂಹರ ಸಾಮಾನ್ಯ ರಾಜಕೀಯ ಶೈಲಿ ಇತ್ತು. ಅದೇನೆಂದರೆ: ಧಾರ್ಮಿಕ ಅಥವಾ ಸಾಂಸ್ಕೃತಿಕ ಸಂಕೇತವೊಂದರ ಸುತ್ತ ವಿವಾದ ಸೃಷ್ಟಿಸುವುದು; ಆಡಳಿತ ಅಥವಾ ಪ್ರತಿಪಕ್ಷದೊಂದಿಗೆ ತೀವ್ರ ಮುಖಾಮುಖಿ ನಡೆಸುವುದು; ಹಿಂದುತ್ವದ ಪ್ರಭಾವಿ ಹೋರಾಟಗಾರನಾಗಿ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು.

ರಾಜಕೀಯ ನೆಲೆಗಾಗಿ ಟಿ ನರಸೀಪುರದ ಮೊರೆ ಹೋಗಿರುವ ಪ್ರತಾಪ್ ಸಿಂಹ

ಈಗ, ಇದೇ ಸಾಲಿಗೆ ಟಿ ನರಸೀಪುರವನ್ನು ಸೇರಿಸಿಕೊಳ್ಳಲು ಪ್ರತಾಪ್ ಸಿಂಹ ಹವಣಿಸುತ್ತಿದ್ದಾರೆ. ಕಳೆದ ವಾರ, ಟಿ. ನರಸೀಪುರದಲ್ಲಿ ಗಣೇಶೋತ್ಸವಕ್ಕೂ ಮುನ್ನ ಹಿಂದುತ್ವ ಗುಂಪುಗಳನ್ನು ಕರೆದು ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಅವರು ಶಾಂತಿ ಸಭೆ ನಡೆಸಿದ್ದರು. “ಮೆರವಣಿಗೆಗೆ ನಿಗದಿತ ಮಾರ್ಗ ಪಾಲಿಸಬೇಕು, ಮಸೀದಿ ಸಮೀಪ ಪಟಾಕಿ ಅಥವಾ ಉದ್ವಿಗ್ನತೆ ಸೃಷ್ಟಿಸುವ ಚಟುವಟಿಕೆ ನಡೆಯಬಾರದು” ಎಂದು ಇನ್ಸ್‌ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು. ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಎಚ್ಚರಿಕೆ ನೀಡಿದ ಧನಂಜಯ್ ವಿರುದ್ಧ ಬಿಜೆಪಿಗರು ಹಿಂದುತ್ವದ ಪರಾಕ್ರಮ ತೋರಲು ಮುಂದಾದರು. ಧನಂಜಯ್ ಅವರ ಅಮಾನತಿಗೆ ಆಗ್ರಹಿಸಿ ಭಾನುವಾರ (2026 ಸೆಪ್ಟೆಂಬರ್ 12) ವಿಪಕ್ಷ ನಾಯಕ ಆರ್ ಅಶೋಕ್ ನೇತ್ವತ್ವದಲ್ಲಿ ಬಿಜೆಪಿಗರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಇ ಪ್ರತಾಪ್ ಸಿಂಹ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇದು ಅವರು ಬಿಜೆಪಿ ಹೈಕಮಾಂಡ್‌ನ ಗಮನ ಸೆಳೆಯುವ ತಂತ್ರವಾಗಿ ಕಾಣುತ್ತಿತ್ತು.

ಆದಾಗ್ಯೂ, ಇದೇ ಪ್ರತಿಭಟನೆ ವೇಳೆ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ, ಪ್ರತಾಪ್ ಸಿಂಹ ಮತ್ತು ನಾಗೇಂದ್ರ ನಡುವೆ ಬಹಿರಂಗ ಮಾತಿನ ಚಕಮಕಿ ಮತ್ತು ನೂಕಾಟ ಕಂಡುಬಂದಿದೆ. ಇದು ಪೊಲೀಸ್ ಅಧಿಕಾರಿ ವಿರುದ್ಧ ಬಿಜೆಪಿ ಒಗ್ಗಟ್ಟಾಗಿ ಹೋರಾಡಬೇಕಿದ್ದ ವೇದಿಕೆಯಲ್ಲೂ ಚಾಮರಾಜ ಟಿಕೆಟ್‌ನ ಒಳಪೈಪೋಟಿಯನ್ನು ಬಹಿರಂಗಗೊಳಿಸಿದೆ.

ಪ್ರತಾಪ್ ಸಿಂಹರದ್ದು ಧರ್ಮದ ಹೋರಾಟವಲ್ಲ; ಕ್ಷೇತ್ರಕ್ಕಾಗಿನ ಹೋರಾಟ

ಹುಣಸೂರಿನ ಹನುಮ ಜಯಂತಿಯಿಂದ ಮೈಸೂರಿನ ಗುಂಬಜ್ ವಿವಾದದವರೆಗೆ, ಮಹಿಷ ದಸರೆಯಿಂದ ಟಿ. ನರಸೀಪುರ ಗಣೇಶೋತ್ಸವದವರೆಗೆ ಪ್ರತಾಪ್ ಸಿಂಹರ ರಾಜಕೀಯದಲ್ಲಿ ಧಾರ್ಮಿಕ ಗುರುತುಗಳನ್ನು ಬಿಟ್ಟು ಬೇರೇನೂ ಇಲ್ಲ. ಎರಡು ಬಾರಿ ಸಂಸದರಾದರೂ ಮೈಸೂರು-ಕೊಡಗು ಕ್ಷೇತ್ರದಲ್ಲಿ ಅವರ ಕೊಡುಗೆಗಳೇನೂ ಎದ್ದು ಕಾಣುವಂತಿರಲಿಲ್ಲ. ಹೀಗಿರುವಾಗ, ಪ್ರತಾಪ್ ಸಿಂಹಗೆ ‘ರಾಜಕೀಯ ದೃಶ್ಯಮಾನತೆ ಉಳಿಸಿಕೊಳ್ಳುವುದು’ ದೊಡ್ಡ ಸವಾಲಾಗಿದೆ. ಅದಕ್ಕಾಗಿ, ಸೌಹಾರ್ದತೆ ಪರಂಪರೆ ಹೊಂದಿರುವ ಮೈಸೂರಿನಲ್ಲಿ ಬಿಜೆಪಿಯೊಳಗೆ ನೆಲೆ ಉಳಿಸಿಕೊಳ್ಳಲು ವಿಭಿನ್ನ ವೇದಿಕೆಯ ಅಗತ್ಯವಿದೆ. ಪ್ರತಾಪ್ ಸಿಂಹಗೆ ರಾಜಕೀಯವಾಗಿ ಅತ್ಯಂತ ಪರಿಚಿತವಾದ ಏಕೈಕ ಅಸ್ತ್ರ ಹಿಂದುತ್ವ ಮತ್ತು ಕೋಮು ಪ್ರಚೋದನೆ. ಅದನ್ನೇ ಬಳಸಿಕೊಂಡು ಮೈಸೂರು ಜಿಲ್ಲೆಯ ಭಾಗವೇ ಆಗಿರುವ ಟಿ ನರಸೀಪುರಕ್ಕೆ ಪ್ರತಾಪ್ ಸಿಂಹ ನುಗ್ಗಿದ್ದಾರೆ. ಮೋದಿ-ಶಾ ಜೋಡಿಯ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.

ಆದಾಗ್ಯೂ, ಪ್ರತಾಪ್ ಸಿಂಹಗೆ ದಾರಿ ಬಿಟ್ಟು ಹಿಂದೆ ಸರಿಯುವ ವ್ಯಕ್ತಿ ನಾಗೇಂದ್ರ ಅಲ್ಲ. ನಾಗೇಂದ್ರ ಕೂಡ ಕ್ಷೇತ್ರದಲ್ಲಿ ತನ್ನದೇ ಪ್ರಭಾವ ಹೊಂದಿರುವ ಮಾಜಿ ಶಾಸಕ. ಆದರೂ, ಎರಡು ಬಾರಿ ಸಂಸದರಾಗಿದ್ದ, ರಾಜ್ಯಮಟ್ಟದ ಪರಿಚಯವಿರುವ ಹಾಗೂ ಕೋಮು ರಾಜಕಾರಣದ ಮೂಲಕ ಮಾಧ್ಯಮಗಳ ಗಮನ ಸೆಳೆಯುವ ಪ್ರತಾಪ್ ಸಿಂಹರನ್ನು ಸಂಪೂರ್ಣವಾಗಿ ಸೈಡ್‌ಲೈನ್ ಮಾಡುವುದೂ ಸುಲಭವಲ್ಲ. ಹೀಗಾಗಿಯೇ, ನಾಗೇಂದ್ರ ಕೂಡ ಕೋಮು ರಾಜಕಾರಣದಲ್ಲಿ ತೊಡಗಿಕೊಳ್ಳಲು ಎದುರು ನೋಡುತ್ತಿದ್ದಾರೆ. ಟಿ ನರಸೀಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ನಡುವಿನ ಪೈಪೋಟಿ ಈಗ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು: ರೈತರ ಸಮಸ್ಯೆಗಳಿಗೆ ಧ್ವನಿ ಯಾರು?

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ...

ಮಮತಾ ಬೆಂಬಲಕ್ಕೆ ಕಾಂಗ್ರೆಸ್: ಮೋದಿಗೆ ಇಸಿಯಿಂದ ‘ಬರ್ತ್‌ಡೇ ಗಿಫ್ಟ್’ ಎಂದ ವೇಣುಗೋಪಾಲ್

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಂತರಿಕ ಭಿನ್ನಮತದ ಹಿನ್ನೆಲೆಯಲ್ಲಿ, ಮುಂಬರುವ...

ಬೆಂಗಳೂರು ಸಂಚಾರ ನರಕ: 4 ಕಿ.ಮೀ. ದೂರದ ಮನೆ ತಲುಪಲು 2.5 ಗಂಟೆ ರಸ್ತೆಯಲ್ಲೇ ಕಳೆದ ವಿದ್ಯಾರ್ಥಿಗಳು

ಬೆಂಗಳೂರಿನಲ್ಲಿರುವ ರಾಜ್ಯ ಹೆದ್ದಾರಿ-35ರ (SH-35) ವರ್ತೂರು-ಗುಂಜೂರು ಮಾರ್ಗದಲ್ಲಿ ಸಂಚರಿಸುವ ನೂರಾರು ಶಾಲಾ...

ಅಮೆರಿಕದಿಂದ ಯುದ್ಧಾಪರಾಧ, ಇರಾನ್‌ನಿಂದ ನರಮೇಧ: ವಿಶ್ವಸಂಸ್ಥೆ ವರದಿ ಬಹಿರಂಗ

ಇರಾನ್‌ನಲ್ಲಿ 177ಕ್ಕೂ ಹೆಚ್ಚು ನಾಗರಿಕರನ್ನು ಬಲಿಪಡೆದ ಎರಡು ಪ್ರತ್ಯೇಕ ಕ್ಷಿಪಣಿ ದಾಳಿಗಳಲ್ಲಿ...