ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಮುಂಬರುವ ಉಪಚುನಾವಣೆಗಾಗಿ ಟಿಎಂಸಿ ಪಕ್ಷದ ಹೆಸರು ಹಾಗೂ ಅದರ ಪ್ರಸಿದ್ಧ ‘ಹೂವು ಮತ್ತು ಹುಲ್ಲು’ (Flowers and Grass) ಗುರುತನ್ನು ಬಳಸದಂತೆ ಚುನಾವಣಾ ಆಯೋಗ ತಾತ್ಕಾಲಿಕ ತಡೆ (ಫ್ರೀಜ್) ನೀಡಿದೆ. ಈ ಮಧ್ಯಂತರ ಆದೇಶವನ್ನು ‘ತೀವ್ರವಾಗಿ ವಿರೋಧಿಸುತ್ತಲೇ’ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಹೊಸ ಹೆಸರು ಹಾಗೂ ಉಚಿತ ಚಿಹ್ನೆಗಳ ಆದ್ಯತಾ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ಅಕ್ಟೋಬರ್ 6ರಂದು ನಡೆಯಲಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ್ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಈ ಆದೇಶ ಹೊರಡಿಸಿದೆ. ಪಕ್ಷದ ಒಳಗಿನ ನಾಯಕತ್ವದ ಹಕ್ಕು ಪ್ರತಿಪಾದನೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಬಣ ಮತ್ತು ಎದುರಾಳಿ ಬಣಗಳ ನಡುವೆ ತೀವ್ರ ಕಲಹ ಏರ್ಪಟ್ಟಿದೆ. ಈ ವಿವಾದವು ‘ಪ್ಯಾರಾಗ್ರಾಫ್ 15’ ರ ಅಡಿಯಲ್ಲಿ ಅಂತಿಮ ಇತ್ಯರ್ಥವಾಗುವವರೆಗೆ ಎರಡೂ ಬಣಗಳು ಮೂಲ ಪಕ್ಷದ ಹೆಸರು ಅಥವಾ ಚಿಹ್ನೆಯನ್ನು ಬಳಸುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮಮತಾ ಬೆಂಬಲಕ್ಕೆ ಕಾಂಗ್ರೆಸ್: ಮೋದಿಗೆ ಇಸಿಯಿಂದ ‘ಬರ್ತ್‌ಡೇ ಗಿಫ್ಟ್’ ಎಂದ ವೇಣುಗೋಪಾಲ್
ಆಯೋಗದ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಪಡೆ, ಗುರುವಾರ ತಡರಾತ್ರಿ 11:36 ರ ಸುಮಾರಿಗೆ ಇಮೇಲ್ ಮೂಲಕ ತನ್ನ ಪರ್ಯಾಯ ಹೆಸರುಗಳು ಹಾಗೂ ಲಭ್ಯವಿರುವ ‘ಉಚಿತ ಚಿಹ್ನೆಗಳ’ ಪಟ್ಟಿಯನ್ನು ಆಯೋಗಕ್ಕೆ ಕಳುಹಿಸಿಕೊಟ್ಟಿದೆ. 1998ರಲ್ಲಿ ಪಕ್ಷ ಸ್ಥಾಪನೆಯಾದಂದಿನಿಂದ ಮಮತಾ ಬ್ಯಾನರ್ಜಿ ಕೈಯಿಂದ ಬಿಡಿಸಿದ್ದ ಈ ‘ಹೂವು-ಹುಲ್ಲು’ ಚಿಹ್ನೆಯು ಟಿಎಂಸಿಯ ಮೂಲ ಗುರುತಾಗಿತ್ತು.
ಪ್ರಸ್ತುತ ಉಪಚುನಾವಣೆಯ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ಈ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಆಯೋಗವು ಪರಿಶೀಲಿಸಿ ಎರಡೂ ಬಣಗಳಿಗೆ ಹೊಸ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡಲಿದೆ.




