ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ ನೆರವು ಅಗತ್ಯವಾಗುತ್ತದೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಸಮಗ್ರವಾಗಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಮೇಲಿದೆ.
ಬೆಳಗಾವಿ ಜಿಲ್ಲೆಯ ಜನರ ಸಮಸ್ಯೆಗಳು, ರೈತರ ಸಂಕಷ್ಟ ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಬೇಕಾದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲೆಯ 18 ಶಾಸಕರ ಪೈಕಿ ಕೇವಲ ಐವರು ಶಾಸಕರು ಹಾಗೂ ಓರ್ವ ವಿಧಾನ ಪರಿಷತ್ ಸದಸ್ಯರು ಹಾಜರಾಗಿದ್ದು, 13 ಶಾಸಕರು ಗೈರಾಗಿರುವುದು ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.
ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಆಸೀಫ್ ಸೇರ್, ವಿಶ್ವಾಸ ವೈದ್ಯ ಹಾಗೂ ದುರ್ಯೋಧನ ಐಹೊಳೆ ಸಭೆಯಲ್ಲಿ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಕೂಡ ಉಪಸ್ಥಿತರಿದ್ದರು.
ಆದರೆ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಳರ್, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ಶಶಿಕಲಾ ಜೊಲ್ಲೆ, ಅಶೋಕ ಪಟ್ಟಣ, ವಿಠಲ ಹಲಗೇಕರ್, ಮಹೇಂದ್ರ ತಮ್ಮನ್ನವರ, ಅಭಯ ಪಾಟೀಲ, ರಾಜು ಕಾಗೆ ಹಾಗೂ ಗಣೇಶ ಹುಕ್ಕೇರಿ ಸಭೆಗೆ ಗೈರಾಗಿದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆ ರೈತರ ಆತಂಕವನ್ನು ಹೆಚ್ಚಿಸಿದೆ. ಜೂನ್ ತಿಂಗಳಲ್ಲಿ ಶೇ.29, ಜುಲೈನಲ್ಲಿ ಶೇ.12 ಹಾಗೂ ಆಗಸ್ಟ್‌ನಲ್ಲಿ ಶೇ.26ರಷ್ಟು ಮಳೆ ಕೊರತೆಯಾಗಿದೆ. ನಿರಂತರ ಮಳೆ ಕೊರತೆಯಿಂದ ಮಳೆ ಆಧಾರಿತ ಕೃಷಿ ಮೇಲೆ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ 1,25,943 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 1,10,986 , ಹೆಕ್ಟೆರ್ ನಲ್ಲಿ ಸೋಯಾ ಅವರೆ 55,094 ಹೆಕ್ಟೇರ್‌ನಲ್ಲಿ ಹೆಸರು, 17,214 ಹೆಕ್ಟೇರ್‌ನಲ್ಲಿ ಉದ್ದು, 14,101 ಹೆಕ್ಟೆರ್ ನಲ್ಲಿ ತೊಗರಿ 13,350 ಹೆಕ್ಟೇರ್‌ನಲ್ಲಿ ಶೇಂಗಾ ಹಾಗೂ 18,541 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಲಾಗಿದೆ. ಇದರ ಜತೆಗೆ 3,14,090 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.
ಇಷ್ಟು ದೊಡ್ಡ ಪ್ರಮಾಣದ ಕೃಷಿ ಪ್ರದೇಶವಿರುವ ಜಿಲ್ಲೆಯಲ್ಲಿ ಸತತ ಮಳೆ ಕೊರತೆ ಉಂಟಾಗಿರುವುದು ರೈತರ ಪಾಲಿಗೆ ಗಂಭೀರ ಆತಂಕವಾಗಿದೆ. ಹೆಸರು, ಉದ್ದು, ತೊಗರಿ, ಮೆಕ್ಕೆಜೋಳ, ಸೋಯಾ ಅವರೆ ಸೇರಿದಂತೆ ಹಲವು ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ ನೆರವು ಅಗತ್ಯವಾಗುತ್ತದೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಸಮಗ್ರವಾಗಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಜವಾಬ್ದಾರಿ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಮೇಲಿದೆ.
ರಾಮದುರ್ಗ ರೈತರ ಆಕ್ರೋಶ
ರಾಮದುರ್ಗ ಕ್ಷೇತ್ರದಲ್ಲಿಯೂ ಮಳೆ ಕೊರತೆಯಿಂದ ಹೆಸರು, ಗೋವಿನಜೋಳ ಹಾಗೂ ತೊಗರಿ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ ಎಂಬುದು ರೈತರ ಅಳಲು. ಮಳೆ ಕೈಕೊಟ್ಟಿರುವುದರಿಂದ ಬೆಳೆ ನಷ್ಟದ ಆತಂಕದಲ್ಲಿರುವ ರೈತರು ಪರಿಹಾರ ಹಾಗೂ ಬೆಳೆ ವಿಮೆಯ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆಗೆ ರಾಮದುರ್ಗ ತಾಲೂಕಿನ ರೈತ ಕರಿಯಪ್ಪ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, “ರಾಮದುರ್ಗದಲ್ಲಿ ಮಳೆ ಸರಿಯಾಗಿ ಆಗಿಲ್ಲ. ಹೆಸರು, ಗೋವಿನಜೋಳ, ತೊಗರಿ ಬೆಳೆಗಳು ಸರಿಯಾಗಿ ಬಂದಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರು ಬೆಂಗಳೂರಿನಲ್ಲೇ ಇರುತ್ತಾರೆ, ಜಿಲ್ಲೆಯ ಜನರ ಸಮಸ್ಯೆ ಚರ್ಚೆಯಾಗುವ ಕೆಡಿಪಿ ಸಭೆಗೂ ಬರಲಿಲ್ಲ. ನಮ್ಮ ಸಮಸ್ಯೆಯನ್ನು ಯಾರು ಅಧಿಕಾರಿಗಳ ಮುಂದೆ ಹೇಳಬೇಕು? ರೈತರ ಕಷ್ಟ ಶಾಸಕರಿಗೆ ಕಾಣಿಸುವುದಿಲ್ಲವೇ?” ಎಂದು ಪ್ರಶ್ನಿಸಿದರು.
ಮತ್ತೊಬ್ಬ ರೈತ ಸಿದ್ದಪ್ಪ ಮಾತನಾಡಿ, “ರೈತರು ಹೊಲದಲ್ಲಿ ಬೆವರು ಸುರಿಸಿ ಬೆಳೆ ಬೆಳೆಯುತ್ತಾರೆ. ಮಳೆ ಕೈಕೊಟ್ಟರೆ ಎಲ್ಲವೂ ಹಾಳಾಗುತ್ತದೆ. ಈಗ ನಮ್ಮ ಬೆಳೆಗಳ ಸ್ಥಿತಿ ನೋಡಿದರೆ ಆತಂಕವಾಗುತ್ತದೆ. ಬೆಳೆ ಪರಿಹಾರ, ವಿಮೆ ಹಾಗೂ ನೀರಿನ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಶ್ನೆ ಕೇಳಬೇಕಾಗಿತ್ತು. ಆದರೆ ನಮ್ಮ ಕ್ಷೇತ್ರದ ಶಾಸಕರು ಸಭೆಗೆ ಬರದೇ ಇದ್ದರೆ ರೈತರ ಧ್ವನಿ ಸರ್ಕಾರಕ್ಕೆ ಹೇಗೆ ತಲುಪುತ್ತದೆ? ಬೆಂಗಳೂರಿನಲ್ಲಿ ಕುಳಿತುಕೊಳ್ಳುವುದಕ್ಕಿಂತ ರೈತರ ನಡುವೆ ಬಂದು ಅವರ ಸಮಸ್ಯೆ ಕೇಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಡಿಪಿ ಸಭೆ ಏಕೆ ಮುಖ್ಯ?
ಕೆಡಿಪಿ ಸಭೆ ಕೇವಲ ಅಧಿಕಾರಿಗಳ ಪ್ರಗತಿ ಪರಿಶೀಲನೆಗೆ ಸೀಮಿತವಾದ ಸಭೆಯಲ್ಲ. ವಿವಿಧ ಇಲಾಖೆಗಳ ಕಾರ್ಯವೈಖರಿ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತು ನೇರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇದು ಪ್ರಮುಖ ವೇದಿಕೆಯಾಗಿದೆ.
ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಆತಂಕ ಇರುವಾಗ ರೈತರ ಸಮಸ್ಯೆಗಳು, ಕುಡಿಯುವ ನೀರು, ನೀರಾವರಿ, ಬೆಳೆ ವಿಮೆ ಹಾಗೂ ಪರಿಹಾರದ ವಿಚಾರಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕಾಗಿತ್ತು. ಹಾಜರಾದ ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಆದರೆ 13 ಶಾಸಕರು ಗೈರಾಗಿರುವುದರಿಂದ ಅವರ ಕ್ಷೇತ್ರಗಳ ಜನರ ಸಮಸ್ಯೆಗಳು ಸಭೆಯಲ್ಲಿ ಯಾವ ಮಟ್ಟಿಗೆ ಪ್ರಸ್ತಾಪವಾಗಿವೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಜನಪ್ರತಿನಿಧಿಗಳ ಜವಾಬ್ದಾರಿ
ಜನರ ಮತದಿಂದ ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಬೇಕಾದ ಜವಾಬ್ದಾರಿ ಹೊಂದಿದ್ದಾರೆ. ರೈತರು ಸಂಕಷ್ಟದಲ್ಲಿರುವಾಗ ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರಕ್ಕೆ ಒತ್ತಾಯಿಸುವುದು ಅವರ ಕರ್ತವ್ಯದ ಭಾಗವಾಗಿದೆ.
ಬೆಳೆ ಹಾನಿಯ ಅಂಕಿ-ಅಂಶಗಳು, ಮಳೆ ಕೊರತೆಯ ಪ್ರಮಾಣ ಹಾಗೂ ರೈತರ ಸಂಕಷ್ಟ ಕಣ್ಣೆದುರಿಗಿರುವಾಗ ಕೆಡಿಪಿ ಸಭೆಯಂತಹ ವೇದಿಕೆಗಳನ್ನು ಜನರ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳುವುದು ಅಗತ್ಯ.
ಜನರ ಮತದಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಇಡುವ ಜವಾಬ್ದಾರಿ ಇದೆ. ರೈತರು ಮಳೆ ಕೊರತೆಯಿಂದ ಬೆಳೆ ನಷ್ಟದ ಆತಂಕದಲ್ಲಿರುವಾಗ ಅವರ ಪರವಾಗಿ ಧ್ವನಿ ಎತ್ತುವುದು ಅತ್ಯಂತ ಅಗತ್ಯ.
ಸಭೆಗೆ ಗೈರಾಗುವುದರಿಂದ ಜನರ ಸಮಸ್ಯೆಗಳು ಮುಗಿಯುವುದಿಲ್ಲ. ಜನರ ಸಮಸ್ಯೆ ಚರ್ಚೆಯಾಗುವ ವೇದಿಕೆಯಲ್ಲಿ ಜನಪ್ರತಿನಿಧಿಗಳ ಧ್ವನಿ ಕೇಳಿಸಬೇಕು. ರೈತರ ಹೊಲದಲ್ಲಿ ಬೆಳೆ ಒಣಗುತ್ತಿರುವಾಗ, ಅವರ ನೋವು ಸರ್ಕಾರದ ಕಿವಿಗೆ ತಲುಪಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಜನರ ಸಂಕಷ್ಟದ ಸಮಯದಲ್ಲಿ ಜನರ ಪರ ನಿಲ್ಲುವುವರೆ ನಿಜವಾದ ಜನಪ್ರತಿಧಿಯಾಗುತ್ತಾರೆ.




