ಕಸ ವಿಲೇವಾರಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದರಿಂದ ಬಡಾವಣೆಯ ವಿವಿಧೆಡೆ ಕಸದ ರಾಶಿ ಹೆಚ್ಚುತ್ತಿದ್ದು, ದುರ್ವಾಸನೆ ಹಾಗೂ ಅಸ್ವಚ್ಛ ವಾತಾವರಣ ನಿರ್ಮಾಣವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಹಾ ಸಂಚಾಲಕ ಚನ್ನು ಕಟ್ಟಿಮನಿ ಆರೋಪಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 21ರ ಸಾಯಿ ಪಾರ್ಕ್ ಬಾಲಾಜಿ ಬಡಾವಣೆಯಲ್ಲಿ ಕಳೆದ ಹಲವು ದಿನಗಳಿಂದ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ನಿಯಮಿತವಾಗಿ ಬಾರದ ಹಿನ್ನೆಲೆಯಲ್ಲಿ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕಸ ಸಂಗ್ರಹ ವಾಹನ ಸಮಯಕ್ಕೆ ಬಾರದ ಕಾರಣ ಜನರು ಮನೆಯ ಕಸವನ್ನು ಎಲ್ಲೆಂದರಲ್ಲಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚುವ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ” ಎಂದು ತಿಳಿಸಿದ್ದಾರೆ.
ನಗರದ ಸ್ವಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಪ್ರಮುಖ ಜವಾಬ್ದಾರಿಯಾಗಿದ್ದು, ವಾರ್ಡ್ ಸಂಖ್ಯೆ 21ರ ನಿವಾಸಿಗಳಿಗೆ ಮೂಲಭೂತ ನಾಗರಿಕ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಕಸ ಸಂಗ್ರಹ ವಾಹನವನ್ನು ಪ್ರತಿದಿನ ನಿಯಮಿತವಾಗಿ ಕಳುಹಿಸಿ, ಸ್ವಚ್ಛತಾ ವ್ಯವಸ್ಥೆಯನ್ನು ಸುಧಾರಿಸುವಂತೆ ನಿವಾಸಿಗಳು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಬಡಾವಣೆಯಲ್ಲಿ ಸ್ವಚ್ಛತಾ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.




