ಭಾರತ ಉಳಿಸಿ ಸಂಕಲ್ಪ ಯಾತ್ರೆಯು ಮೂರು ಭಾಗಗಳಿಂದ ಚಲಿಸುತ್ತಿದ್ದು, ಭಾನುವಾರದಂದು ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಮತದಾರರನ್ನು ಜಾಗೃತ ಮಾಡಿ ಅಂಬೇಡ್ಕರ ಸರ್ಕಲ್‌ನಲ್ಲಿ ಸಮಾವೇಶಗೊಳ್ಳುತ್ತಿದೆ. ಭಾರತ ಉಳಿಸಿ ಸಂಕಲ್ಪ ಯಾತ್ರೆಯು ಸಮಾರೋಪ ಸಮಾರಂಭವು ಬೆಳಗಾವಿಯಲ್ಲಿ ನಡೆಯುತ್ತಿದ್ದು, ಒಂದು ಗಟ್ಟಿಯಾದ ಸಂದೇಶವನ್ನು ರವಾನೆ ಮಾಡಲು ಮತದಾರರು ಸಜ್ಜಾಗಿದ್ದಾರೆ ಎಂದು ಎದ್ದೇಳು ಕರ್ನಾಟಕ ರಾಜ್ಯ ಮುಖಂಡೆ ಸಿರಿಮನೆ ಮಲ್ಲಿಗೆ ತಿಳಿಸಿದರು.
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ಸರ್ಕಲ್‌ವರೆಗೆ ತೆರಳಿದ ʼದೇಶ ಉಳಿಸಿ ಸಂಕಲ್ಪ ಯಾತ್ರೆʼ ಸಮಾವೇಶದಲ್ಲಿ ಮಾತನಾಡಿದರು.
“ನಮ್ಮ ದೇಶ ಹಸುವಿನಿಂದ ಬಳಲುತ್ತಿರುವ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಪ್ರಥಮ ಸ್ಥಾನದಲ್ಲಿದೆ. ಅಂದರೆ ನಮ್ಮ ದೇಶದ ಜನಗಳ ಪರಿಸ್ಥಿತಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದಂತಹ ಪರಿಸ್ಥಿತಿ ಸುಮಾರು 37 ಕೋಟಿಗೆ ಏರಿಕೆಯಾಗಿದೆ. ಇದು ಕೇವಲ ಹತ್ತು ವರ್ಷಗಳಲ್ಲಿ. 2014ರ ಮುಂಚೆ 13 ಕೋಟಿ ಮಂದಿ ಜನಸಂಖ್ಯೆ ಹಸಿವಿನಿಂದ ಬಳಲುತ್ತಿದ್ದರು. ಆದರೆ, ಈಗ ಅದರ ದುಪ್ಪಟ್ಟಾಗಿದೆ” ಎಂದು ಆರೋಪಿಸಿದರು.
“ನಮ್ಮ ದೇಶದಲ್ಲಿ ಕೋಟಿ ಕೋಟಿ ಕುಳಗಳು ವಿಜೃಂಭಣೆಯಿಂದ ಮೆರೆಯುತ್ತಿದ್ದಾರೆ. ಆದರೆ ಒಪ್ಪತ್ತಿನ ಊಟಕ್ಕೆ ಗತಿ ಇಲ್ಲದಂತಹ ಜನಗಳೂ ಕೂಡ ನಮ್ಮ ದೇಶದಲ್ಲಿ ಬಹುಸಂಖ್ಯಾತರಿದ್ದಾರೆ. ನಮ್ಮ ದೇಶವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನೊಳಗೊಂಡಿರುವ ದೇಶ. ಇಲ್ಲಿ ಎಲ್ಲರಿಗೂ ಕೂಡ ಸಮಾನ ರೀತಿಯ ಹಕ್ಕುಗಳನ್ನು ಸಂವಿಧಾನ ಕೊಟ್ಟಿದೆ. ಸಂವಿಧಾನವನ್ನು ಬದಲು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರ ದುಡಿಯುವ ಜನಗಳಿಗೆ ನರಕ ಯಾತನೆ ಸೃಷ್ಟಿಸುತ್ತಿದೆ” ಎಂದು ದೂರಿದರು.
“ದೇಶದ ಸಂಪತ್ತು ಬಂಡವಾಳಿಗಾರ ಕೈಯಲ್ಲಿ ಸೇರುತ್ತಿದೆ. ನಮ್ಮ ತೆರಿಗೆ ಹಣ ನಯಾ ಪೈಸೆ ಸಿಗುತ್ತಿಲ್ಲ. ಇದು ಈ ದೇಶದ ದುರಂತ. ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ಎಲ್ಲ ಚಟುವಟಿಕೆಗಳನ್ನು ಸರ್ಕಾರ ನಡೆಸುತ್ತಿದೆ” ಎಂದು ಆರೋಪಿಸಿದರು.
ಎದ್ದೇಳು ಕರ್ನಾಟಕ ಇನ್ನೋರ್ವ ರಾಜ್ಯ ಮುಖಂಡ ಯೂಸಫ್ ಕನ್ನಿ ಮಾತನಾಡಿ, “ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿಯು ಭ್ರಷ್ಟಾಚಾರ ಮುಕ್ತ ಘೋಷವಾಕ್ಯದಡಿ ಅಧಿಕಾರದ ಗದ್ದುಗೆ ಏರಿ ಹತ್ತು ವರ್ಷ ಮುಗಿಯಿತು. ಆದರೆ ಭ್ರಷ್ಟಾಚಾರ ಮುಕ್ತವಾಗುವುದರ ಬದಲು ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ಬೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆ ಮಾಡಿದರು. ಆದರೆ ಮಣಿಪುರ್‌ನಂತಹ ಹಿಂಸಾತ್ಮಕ ಕೃತ್ಯಗಳನ್ನು ಗಮನಿಸಿದರೆ ಸರ್ಕಾರ ಘೋಷಣೆಗಷ್ಟೇ ಸೀಮಿತವಾಗಿದೆ ಎಂಬುದು ಸತ್ಯ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಪ್ರೀತಂ ಗೌಡ ಆಪ್ತರಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
ಎಂ ಆರ್ ಬ್ಯಾರಿ ಅಕ್ರಂ ಮಾಶಾಳಕರ, ಎದ್ದೇಳು ಕರ್ನಾಟಕ ಜಿಲ್ಲಾ ಕೋ ಆರ್ಡಿನೇಟರ್ ಮಹಮ್ಮದ್ ಅಬ್ದುಲ್ ಖದೀರ್, ವಕೀಲೆ ವಿದ್ಯಾವತಿ ಅಂಕಲಗಿ, ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫಯಾಜ್ ಕಲಾದಗಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ, ಒಡಲದಿನಿ ಮಹಿಳಾ ಒಕ್ಕೂಟ ಜಿಲ್ಲಾ ಮುಖಂಡೆ ಭುವನೇಶ್ವರಿ ಕಾಂಬಳೆ, ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಲಕ್ಷ್ಮಣ್ ಮಂಡಲಗಿರಿ, ರಜಿಯಾ ಮೋಬಿನ್, ಜಮಾತ್ ಇಸ್ಲಾಂ ತಾನಿಕಾ ಅಧ್ಯಕ್ಷ ಇಮಾಮ್ ಸಾಬ್ ಹುಲಿಕಟ್ಟಿ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು, ಕಾಂಗ್ರೆಸ್‌ನ ಯುವಜನ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ, ಮಾನವ ಬಂಧುತ್ವ ವೇದಿಕೆಯ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಂಚಾಲಕರಾದ ಕಾಶೀನಾಥ ಕಟ್ಟಿಮನಿ, ದಸ್ತಗಿರಿ ಹುಲಿಕಟ್ಟಿ ಸೇರಿದಂತೆ ಇತರರು ಇದ್ದರು.