ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗಡಿ ಅಂಚಿನಲ್ಲಿ ಹಾದು ಹೋಗಿರುವ ಭೀಮಾ 15 ದಿನಗಳಿಂದ ಬತ್ತಿದ ಪರಿಣಾಮ ಭೀಮಾ ತೀರದ ಸುಮಾರು 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರುರಾಗಿತ್ತು. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಸೋಮವಾರ 6 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಸಾರ್ವಜನಿಕರು, ರೈತರು ಸಂತಸಗೊಂಡಿದ್ದಾರೆ.
ಭೀಮಾ ನದಿ ವ್ಯಾಪ್ತಿಯಲ್ಲಿರುವ ಎಂಟು ಬಾಂದಾರಗಳು ಬರಿದಾಗಿದ್ದವು. ಹತ್ತಾರು ಗ್ರಾಮಗಳಿಗೆ ಪೂರೈಕೆಯ ಮೂಲವಾಗಿದ್ದ ಭೀಮಾ ನದಿಯಲ್ಲಿ ನೀರು ಬರಿದಾಗಿರುವದರಿಂದ ಬಹುತೇಕ ಹಳ್ಳಿಗಳ ನೀರು ಪೂರೈಕೆ ಯೋಜನೆಯ ಘಟಕಗಳು ಸ್ಥಗಿತಗೊಂಡಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.
ಅತಿಯಾದ ಬಿಸಿಲಿನಿಂದ ಕೊಳೆವೆ ಬಾವಿ, ತೆರೆದ ಬಾವಿಗಳ ನೀರಿನ ಮಟ್ಟ ಕುಸಿದು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ರೈತರಿಗೆ ನೀರಿನ ಅಭಾವದಿಂದ ವಾಣಿಜ್ಯ ಬೆಳೆಗಳು ಒಣಗುವ ಭೀತಿ ಎದುರಾಗಿತ್ತು. ಚಡಚಣ ಪಟ್ಟಣಕ್ಕೆ ನೀರು ಪೂರೈಕೆಯ ಮುಖ್ಯ ಮೂಲಾಧಾರವಾಗಿದ್ದ ಭೀಮಾ ನದಿ ಬರಿದಾಗಿರುವದರಿಂದ ಪೂರೈಕೆಯಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಭಾರೀ ವ್ಯತ್ಯಯವಾಗಿ, ವಾರಕ್ಕೊಮ್ಮೆ ನೀರು ಪೂರೈಕೆ ಮಾಡುವ ಪರಿಸ್ಥಿತಿ ಉಂಟಾಗಿತ್ತು.
ಇದನ್ನೂ ಓದಿ ವಿಜಯಪುರ | ಉತ್ತರ ಕರ್ನಾಟಕದ ಜನತೆಗೆ ವಿಶ್ವಮಟ್ಟದ ವೈದ್ಯಕೀಯ ಸೇವೆ: ಸಚಿವ ಎಂ ಬಿ ಪಾಟೀಲ್
“ಪ್ರಸ್ತುತ ಭೀಮಾ ನದಿಗೆ ನಿರ್ಮಿಸಲಾದ ಬಹುತೇಕ ಬಾಂದಾರಗಳು ತುಂಬಿ ಹರಿಯುತ್ತಿವೆ. ಆದರೆ, ಈ ನೀರನ್ನು ಸಂಗ್ರಹಿಸಬೇಕಾದ ಗೇಟ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದು, ಇದರಿಂದ ಕೆಲವೇ ದಿನಗಳಲ್ಲಿ ಮತ್ತೆ ನದಿಯಲ್ಲಿ ನೀರು ಬತ್ತುವ ಸಾಧ್ಯತೆ ಇದೆ. ಕೂಡಲೇ ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಾಂದಾರ ಗೇಟ್‌ಗಳ ದುರಸ್ಥಿಗೆ ಕ್ರಮ ಕೈಗೊಂಡರೆ ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ತಡೆಹಾಕಬಹುದು” ಎಂಬುದು ರೈತರ ಮನವಿ.




