ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದಲ್ಲಿ ಹಲವು ದಿನಗಳಿಂದ ಮುಂದುವರಿದಿದ್ದ ಅಸ್ಪೃಶ್ಯತೆ ಆಚರಣೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮಹತ್ವದ ಸಾಮರಸ್ಯ, ಶಾಂತಿ ಸಭೆ ನಡೆಯಿತು.
ಬಾಗೇವಾಡಿ ಪೊಲೀಸ್ ವೃತ್ತ ನಿರೀಕ್ಷಕ (ಸಿಪಿಐ) ದಾಶ್ಯಾಳ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮದಲ್ಲಿನ ವಿವಿಧ ಸಮುದಾಯಗಳ ಮುಖಂಡರು, ದಲಿತ ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ, ಗ್ರಾಮದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಸಹಬಾಳ್ವೆ ಕಾಪಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಪೊಲೀಸ್ ಅಧಿಕಾರಿಗಳು, “ಸಂವಿಧಾನವು ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರವಾಗಿದ್ದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವದಿಂದ ಬದುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಈ ವೇಳೆ ಗ್ರಾಮಸ್ಥರು ಹಳೆಯ ತಾರತಮ್ಯದ ಪದ್ಧತಿಗಳನ್ನು ತೊರೆದು ಎಲ್ಲ ಸಮುದಾಯದವರೊಂದಿಗೆ ಸಮಾನತೆ ಮತ್ತು ಸಹೋದರತ್ವದ ಮನೋಭಾವದಿಂದ ಬದುಕುವ ಕುರಿತು ಒಮ್ಮತ ವ್ಯಕ್ತಪಡಿಸಿದರು. ದಲಿತ ಯುವಕರ ಸಕ್ರಿಯ ಭಾಗವಹಿಸುವಿಕೆ ಹಾಗೂ ಗ್ರಾಮ ಹಿರಿಯರ ಸಕಾರಾತ್ಮಕ ಸ್ಪಂದನೆಯಿಂದ ಸಭೆ ಯಶಸ್ವಿಯಾಗಿ ನಡೆಯಿತು.
ಚಬನೂರ ಗ್ರಾಮದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸಲು ಪೊಲೀಸ್ ಇಲಾಖೆಯ ಈ ಮುಂದಾಳತ್ವ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆ ಮತ್ತಷ್ಟು ಬಲಗೊಳ್ಳುವ ವಿಶ್ವಾಸ ವ್ಯಕ್ತವಾಯಿತು.




