ರಾಮನ ಹೆಸರಲ್ಲಿ ತನ್ನ ಕೋಟೆಯನ್ನೇ ಟೊಳ್ಳು ಮಾಡಿಕೊಂಡ ಆರ್‌ಎಸ್‌ಎಸ್‌

Date:

ಆರ್‌ಎಸ್ಎಸ್‌ ರಾಮನ ಹೆಸರನ್ನು ಬಳಸಿ ಜನರ ಭಾವನೆಗಳನ್ನು ಕೆರಳಿಸಿರಬಹುದು. ಆದರೆ ರಾಮನ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅದರ ಅಸಲಿ ಉದ್ದೇಶ ಈಗ ಬಹಿರಂಗವಾಗಿದೆ. ಸ್ವತಃ ರಾಮಮಂದಿರದ ದೇಣಿಗೆಯಲ್ಲೇ ಆರ್ಥಿಕ ಲೂಟಿ ನಡೆದಿರುವ ಕಟು ಸತ್ಯಗಳು ಹೊರಬೀಳುತ್ತಿದ್ದಂತೆ ಆರ್‌ಎಸ್ಎಸ್ ಧರಿಸಿದ್ದ ನೈತಿಕತೆಯ ಮುಖವಾಡ ಸಂಪೂರ್ಣವಾಗಿ ಕಳಚಿಬಿದ್ದಿದೆ.

ಒಬ್ಬ ಸರ್ವಾಧಿಕಾರಿ ಅಧಿಕಾರಕ್ಕೆ ಬಂದಾಗ ಆತನಿಗೆ ಮುಖವಾಡ ಅಗತ್ಯವಿರಲ್ಲ; ಆತ ನೈತಿಕತೆ ಅಥವಾ ಪ್ರಜಾಪ್ರಭುತ್ವದ ಬೆನ್ನಿಗೆ ನಿಲ್ಲುತ್ತೇನೆ ಎಂಬ ನಾಟಕವಾಡದೆ ನೇರವಾಗಿ ಸರ್ವಾಧಿಕಾರದ ಆಡಳಿತ ನಡೆಸಬಹುದು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಸರ್ವಾಧಿಕಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದರೂ ಇಂತಹ ರಾಜರೋಷದ ಆಡಳಿತ ನಡೆಸುವ ಅವಕಾಶ ಎಂದಿಗೂ ಸಿಕ್ಕಿಲ್ಲ. ಯಾಕೆಂದರೆ ಆರ್‌ಎಸ್‌ಎಸ್‌ ನಿರಂತರವಾಗಿ ತನ್ನದೇ ಆದ ಆಂತರಿಕ ವಿರೋಧಾಭಾಸಗಳ ನಡುವೆ ಬದುಕಬೇಕಾದ ಅನಿವಾರ್ಯತೆಯಲ್ಲಿದೆ.

- Advertisement -

ಆರ್‌ಎಸ್ಎಸ್‌ ಹೇಳುವುದಕ್ಕೂ, ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ತನ್ನನ್ನು ತಾನು ಪರಮ ನೈತಿಕ ಶಕ್ತಿಯೆಂದು ಬಿಂಬಿಸಿಕೊಳ್ಳುವ ಆರ್‌ಎಸ್‌ಎಸ್‌ ರಾಜಕೀಯದಲ್ಲಿ ಎಲ್ಲಾ ರೀತಿಯ ಅನೈತಿಕತೆಗಳನ್ನು ಆಚರಿಸುತಲ್ಲೇ ಇದೆ, ಅಷ್ಟು ಮಾತ್ರವಲ್ಲದೆ ಈ ಅನೈತಿಕತೆಯನ್ನು ಸಮರ್ಥಿಸಿಕೊಳ್ಳುತ್ತದೆ. ಪ್ರಜಾಪ್ರಭುತ್ವದ ರಕ್ಷಕನಂತೆ ನಟಿಸುತ್ತಲೇ, ಚುನಾಯಿತರಲ್ಲದ ವ್ಯಕ್ತಿಯ ಹಿಡಿತದಲ್ಲಿ (ಅಂದರೆ ಸರ್ವಾಧಿಕಾರಿಯ ಕೈಯಲ್ಲಿ) ಎಲ್ಲವೂ ಇರಬೇಕೆಂದು ಬಯಸುತ್ತದೆ. ಇಡೀ ಹಿಂದೂ ಸಮಾಜವನ್ನು ಒಂದುಗೂಡಿಸುವ ಮಾತನಾಡುತ್ತಲೇ, ಮತ್ತೊಂದೆಡೆ ಜಾತಿ ಪದ್ಧತಿಯನ್ನು ಜೀವಂತವಾಗಿಡಲು ಮತ್ತು ಅದನ್ನು ಬೆಳೆಸಲು ಶ್ರಮಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಇದನ್ನೂ ಓದಿ: ರಾಮಮಂದಿರ ಲೂಟಿ | ಎಎಪಿಯೇ ನಿಜವಾದ ಸನಾತನ ಪಕ್ಷ: ಅರವಿಂದ್ ಕೇಜ್ರಿವಾಲ್

ಅಷ್ಟೇ ಅಲ್ಲದೆ, ಹಿಂದೂ ಧರ್ಮದ ಏಕೈಕ ರಕ್ಷಕ ತಾನೇ ಎಂದುಕೊಳ್ಳುವ ಈ ಸಂಘಟನೆ, ತನ್ನದೇ ಕಾರ್ಯಕರ್ತರು ದೇವಸ್ಥಾನಗಳ ಕಾಣಿಕೆ ಮತ್ತು ದೇಣಿಗೆಗಳನ್ನು ಲೂಟಿ ಮಾಡುವುದನ್ನು ಮೂಕಪ್ರೇಕ್ಷಕನಾಗಿ ನೋಡುತ್ತದೆ. ದೇಶದಲ್ಲಿ ರಾಷ್ಟ್ರೀಯ ಏಕತೆಯನ್ನು ತರುತ್ತೇವೆ ಎಂದು ಭರವಸೆ ನೀಡುತ್ತಲೇ, ತನ್ನ ದ್ವೇಷದ ರಾಜಕಾರಣ ಮತ್ತು ಸಮಾಜವನ್ನು ಒಡೆಯುವ ಪ್ರಚಾರಗಳ ಮೂಲಕ ಅದೇ ರಾಷ್ಟ್ರೀಯ ಏಕತೆಯನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ.

ಆರ್‌ಎಸ್ಎಸ್‌ನ ‘ಚಾಲ್, ಚರಿತ್ರ ಮತ್ತು ಚೇಹರಾ’ (ನಡತೆ, ಚಾರಿತ್ರ್ಯ ಮತ್ತು ಮುಖಭಾವ)

ಆರ್‌ಎಸ್‌ಎಸ್‌ನ ಬೋಧನೆಗಳಿಗೂ ಮತ್ತು ಅದು ನಡೆದುಕೊಳ್ಳುವ ರೀತಿಗೂ ಅಗಾಧ ವ್ಯತ್ಯಾಸವಿದೆ. ಸಂಘಟನೆಯ ಮೂಲ ವಿನ್ಯಾಸದಲ್ಲೇ ಇರುವ ಒಂದು ದೊಡ್ಡ ನ್ಯೂನತೆಯಿದೆ. ಆರಂಭದಲ್ಲಿ ಅಧಿಕಾರ ಹಿಡಿಯಲು ಈ ಇಬ್ಬಂದಿ ನಿಲುವು ಸಹಾಯ ಮಾಡಿರಬಹುದು. ಆದರೆ ಈಗ ಅದೇ ವಿರೋಧಾಭಾಸಗಳು ಸರ್ಕಾರಗಳ ಪತನಕ್ಕೆ ದಾರಿಯಾಗುತ್ತಿವೆ. ಅಧಿಕಾರ ವಿಸ್ತಾರಗೊಂಡಂತೆ ಈ ಆಂತರಿಕ ಕಟು ಸತ್ಯಗಳು ಮತ್ತಷ್ಟು ಸ್ಪಷ್ಟವಾಗಿ ಭಾಸವಾಗುತ್ತಿವೆ.

‘ಚಾಲ್, ಚರಿತ್ರ ಮತ್ತು ಚೇಹರಾ’ ಎಂಬ ತತ್ವಗಳ ಆಧಾರದ ಮೇಲೆಯೇ ಆರ್‌ಎಸ್ಎಸ್ ಹುಟ್ಟಿಕೊಂಡಿದ್ದು. ತನ್ನನ್ನು ತಾನು ತ್ಯಾಗ, ಪ್ರಾಮಾಣಿಕತೆ ಮತ್ತು ನೈತಿಕ ಮೇಲರಿಮೆಯನ್ನು ಪ್ರತಿಪಾದಿಸುವ ಸಂಘಟನೆ ಎಂದು ಬಿಂಬಿಸಿಕೊಂಡಿತು. ಆದರೆ, ಆರ್‌ಎಸ್ಎಸ್ ಬೆಳೆಸಿದ ರಾಜಕೀಯ ಪಕ್ಷ ಬಿಜೆಪಿ ಭ್ರಷ್ಟರನ್ನು ತನ್ನೊಳಗೆ ಸೇರಿಸಿಕೊಳ್ಳುವ ‘ವಾಷಿಂಗ್ ಮೆಷಿನ್’ ಕೆಲಸದಲ್ಲಿ ತೊಡಗಿಕೊಂಡಿದೆ. ಅಷ್ಟು ಮಾತ್ರವಲ್ಲದೆ ರಾಜಕೀಯ ಅನೈತಿಕತೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದೆ. ಈ ನೈತಿಕ ಕುಸಿತದ ವಿರುದ್ಧ ಆರ್‌ಎಸ್ಎಸ್‌ನ ಯಾವೊಬ್ಬ ನಾಯಕನೂ ಎಂದೂ ಆಕ್ಷೇಪವೆತ್ತಿಲ್ಲ!

ಅತಿ ದೊಡ್ಡ ದುರಂತವೆಂದರೆ, ಈ ಭ್ರಷ್ಟಾಚಾರದ ಕರಳು ಬಳ್ಳಿ ಈಗ ಆರ್‌ಎಸ್ಎಸ್ ಅತ್ಯಂತ ಪವಿತ್ರ ಎಂದು ಆರಾಧಿಸುವ ಧಾರ್ಮಿಕ ಕ್ಷೇತ್ರಗಳನ್ನೂ ಆವರಿಸಿದೆ. ರಾಮಮಂದಿರದ ದೇಣಿಗೆಯಿಂದ ಹಿಡಿದು ಬದರಿನಾಥ ಮತ್ತು ಮಹಾಕಾಳೇಶ್ವರ ದೇವಾಲಯಗಳ ಆರ್ಥಿಕ ನಿರ್ವಹಣೆಯವರೆಗೆ ದೊಡ್ಡ ಮಟ್ಟದ ಆರ್ಥಿಕ ಅಕ್ರಮಗಳು ಮತ್ತು ಕಳ್ಳತನದ ಆರೋಪಗಳು ಕೇಳಿಬರುತ್ತಿವೆ. ಆದರೆ ತನ್ನದೇ ಆದ ಕಾರ್ಯಕರ್ತರ ಉಸ್ತುವಾರಿಯಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಸಂಪತ್ತಿನ ಈ ವ್ಯವಸ್ಥಿತ ಲೂಟಿಯ ಬಗ್ಗೆ ಸಂಘಟನೆಯ ಒಳಗೆ ಯಾವುದೇ ನೈತಿಕ ಪಶ್ಚಾತ್ತಾಪವಾಗಲಿ ಅಥವಾ ಆಕ್ರೋಶವಾಗಲಿ ಕಾಣಿಸುತ್ತಿಲ್ಲ.

‘ಸ್ವದೇಶಿ ಮತ್ತು ಪ್ರಾಮಾಣಿಕತೆ’ ಸಿದ್ಧಾಂತದ ವೈಫಲ್ಯ

ಆರ್‌ಎಸ್ಎಸ್‌ನ ಇಬ್ಬಂದಿ ನೀತಿ ಕೇವಲ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ. ಈ ಇಬ್ಬಂದಿ ನೀತಿ ಆರ್ಥಿಕ ನೀತಿಗಳಲ್ಲೂ ಎದ್ದು ಕಾಣುತ್ತಿದೆ. ದಶಕಗಳ ಕಾಲ ಆರ್‌ಎಸ್ಎಸ್ ‘ಸ್ವದೇಶಿ’ ಜಪ ಮಾಡುತ್ತಾ, ವಿದೇಶಿ ಮತ್ತು ಏಕಸ್ವಾಮ್ಯ (monopoly) ಹೊಂದಿರುವ ಕಂಪನಿಗಳ ವಿರುದ್ಧ ದೇಶೀಯ ಸಣ್ಣ ಉದ್ಯಮಿಗಳ ಹಿತರಕ್ಷಣೆ ಮಾಡುವುದಾಗಿ ಹೇಳಿಕೊಳ್ಳುತ್ತಿತ್ತು. ಆದರೆ, ಪ್ರಸ್ತುತ ನಮ್ಮ ದೇಶ ಹಿಂದೆಂದೂ ಕಾಣದ ಮಟ್ಟದ ‘ಕ್ರೋನಿ ಕ್ಯಾಪಿಟಲಿಸಂ’ (ಆಪ್ತ ಬಂಡವಾಳಶಾಹಿ) ವ್ಯವಸ್ಥೆಯನ್ನು ಮೋದಿ ಸರ್ಕಾರ ಸೃಷ್ಟಿಸಿದೆ. ಸರ್ಕಾರಿ ಟೆಂಡರ್ ನಿಯಮಗಳನ್ನು ತಮಗೆ ಬೇಕಾದ ಆಪ್ತ ಉದ್ಯಮಿ ಗೆಳೆಯರಿಗೆ ಅನುಕೂಲವಾಗುವಂತೆ ಬದಲಾಯಿಸಲಾಗುತ್ತಿದೆ.

ದಿವಾಳಿತನ ಸಂಹಿತೆ (IBC) ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ (NCLT)ದಂತಹ ಸಂಸ್ಥೆಗಳನ್ನು ಬಳಸಿಕೊಂಡು, ಹೆಚ್ಚಾಗಿ ಹಿಂದೂ ಉದ್ಯಮಿಗಳದ್ದೇ ಆಗಿರುವ ಕಂಪನಿಗಳನ್ನು ವ್ಯವಸ್ಥಿತವಾಗಿ ವಶಪಡಿಸಿಕೊಂಡು ಕೆಲವು ಆಪ್ತ ಉದ್ಯಮಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ಸಂಘಟನೆಯ ಆಪ್ತ ಕಾರ್ಪೊರೇಟ್ ಮಿತ್ರರು ಮತ್ತು ಕಾರ್ಪೊರೇಟ್ ಉದ್ಯಮಿಗಳಾಗಿ ಬದಲಾಗಿರುವ ಬಾಬಾಗಳು ದೇಶದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಆತುರದಲ್ಲಿದ್ದಾರೆ. ಇನ್ನೊಂದೆಡೆ, ಸ್ವದೇಶಿ ಎಂಬ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಚೀನಾದಿಂದ ಉತ್ಪಾದನೆಗಳನ್ನು ಹೊರಗುತ್ತಿಗೆ (outsource) ಪಡೆಯಲಾಗುತ್ತಿದೆ ಮತ್ತು ಇದರ ಆಮದು ವ್ಯವಹಾರದಿಂದಲೂ ಆಪ್ತ ಗೆಳೆಯರೇ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಯಾವ ಮಟ್ಟಿಗೆ ಈ ‘ಕ್ರೋನಿ ಕ್ಯಾಪಿಟಲಿಸಂ’ ವಿಸ್ತರಿಸಿದೆ ಎಂದರೆ ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಟೆಂಡರ್ ಗೆಲ್ಲಬಹುದು ಎಂಬ ನಂಬಿಕೆಯನ್ನು ಸ್ವತಃ ಆರ್‌ಎಸ್ಎಸ್‌ನ ನಿಷ್ಠಾವಂತ ಕಾರ್ಯಕರ್ತರೇ ಕಳೆದುಕೊಂಡಿದ್ದಾರೆ. ಯಾರ ಹೆಸರಿನಲ್ಲಿ ಈ ಇಡೀ ಸಿದ್ಧಾಂತವನ್ನು ನಿರ್ಮಿಸಲಾಯಿತೋ, ಆ ಸಾಮಾನ್ಯ ಹಿಂದೂ ಅಂಗಡಿಕಾರರು ಮತ್ತು ಗುತ್ತಿಗೆದಾರರನ್ನು ಸಣ್ಣಪುಟ್ಟ ಕಾಂಟ್ರಾಕ್ಟ್‌ಗಳಿಂದಲೂ ಹೊರದಬ್ಬಲಾಗಿದೆ. ಟೆಂಡರ್ ಪ್ರಕ್ರಿಯೆಗಳು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ವಾದಿಸುವ ಧೈರ್ಯ ಈಗ ಬಿಜೆಪಿಯ ಕಟ್ಟಾ ಬೆಂಬಲಿಗರಿಗೂ ಇಲ್ಲದಂತಾಗಿದೆ.

ಇದನ್ನೂ ಓದಿ: ರಾಮಮಂದಿರ ಲೂಟಿ | ಪತ್ರಿಕಾಗೋಷ್ಠಿಗೆ ನಿರ್ಬಂಧ: 77 ವರ್ಷ ಹಳೆಯ ಸಮಿತಿಯ ಧ್ವನಿ ಹತ್ತಿಕ್ಕಲು ಯತ್ನ!

ಆಡಳಿತದಲ್ಲಿ ‘ಶುಚಿತಾ’ (ಪ್ರಾಮಾಣಿಕತೆ/ಸ್ವಚ್ಛತೆ) ತರುವುದಾಗಿ ಹೇಳಿಕೊಂಡಿದ್ದ ಆರ್‌ಎಸ್ಎಸ್, ಇಂದು ಭ್ರಷ್ಟ ವ್ಯವಸ್ಥೆಯ ಮುಂದಾಳತ್ವ ವಹಿಸಿದೆ. ವ್ಯಾಪಕ ಭ್ರಷ್ಟಾಚಾರದ ಕಾರಣದಿಂದಾಗಿ ಹೊಸ ಮೇಲ್ಸೇತುವೆಗಳು ಕುಸಿಯುತ್ತಿವೆ, ಎಕ್ಸ್‌ಪ್ರೆಸ್‌ವೇಗಳು ಬಿರುಕು ಬಿಡುತ್ತಿವೆ, ಹೊಸ ವಿಮಾನ ನಿಲ್ದಾಣಗಳು ಸೋರುತ್ತಿವೆ ಮತ್ತು ನೀರಿನ ಟ್ಯಾಂಕ್‌ಗಳು ಉರುಳುತ್ತಿವೆ. ಆದರೆ, ಶುಚಿತಾವನ್ನು ಪ್ರತಿಪಾದಿಸುತ್ತಿದ್ದ ಸಂಘಟನೆಯ ನಾಯಕರು ಈ ಎಲ್ಲಾ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಹೊಸ ವಾದಗಳನ್ನು ಹುಡುಕುವಲ್ಲಿ ಬ್ಯುಸಿಯಾಗಿದ್ದಾರೆ.

ಸೇವೆಯೇ ಪರಮ ಧರ್ಮ ಎಂಬ ಸಿದ್ಧಾಂತದ ಪತನ

ಆರ್‌ಎಸ್ಎಸ್ ತನಗಾಗಿ ನಿಗದಿಪಡಿಸಿಕೊಂಡಿದ್ದ ಮತ್ತೊಂದು ಪ್ರಮುಖ ಸಿದ್ಧಾಂತ ‘ಸೇವಾ ಪರಮೋ ಧರ್ಮ’ (ಸೇವೆಯೇ ಪರಮ ಧರ್ಮ). ಸಂಘಟನೆಯ ‘ಪ್ರಚಾರಕರು’ ಕೇವಲ ಕಡಲೆ-ಅವಲಕ್ಕಿ ತಿಂದುಕೊಂಡು ಕಡು ಸರಳತೆಯ, ಅವಿವಾಹಿತ ಸನ್ಯಾಸಿ ಮಾದರಿಯ ಜೀವನ ನಡೆಸುತ್ತಾರೆ ಎಂಬಂತೆ ಆರ್‌ಎಸ್‌ಎಸ್‌ ಬಿಂಬಿಸಿಕೊಂಡಿದೆ. ಈ ತಪಸ್ವಿಗಳಂತಹ ವ್ಯಕ್ತಿಗಳ ಶಕ್ತಿಯನ್ನು ಬಳಸಿಕೊಂಡು ಕೋಟ್ಯಂತರ ಭಾರತೀಯರ ಆಲೋಚನಾ ಕ್ರಮವನ್ನು (DNA) ಬದಲಾಯಿಸುವುದಾಗಿ, ಸಮಾಜದಲ್ಲಿ ಶಿಸ್ತು ಮತ್ತು ಕಠಿಣತೆಯನ್ನು ಮೂಡಿಸುವುದಾಗಿ ಆರ್‌ಎಸ್ಎಸ್ ಭರವಸೆ ನೀಡಿತ್ತು. ಆದರೆ, ಈ ಮಿಷನ್ ಇಂದು ಸಂಪೂರ್ಣವಾಗಿ ವಿಫಲವಾಗಿದೆ.

ಅಷ್ಟಕ್ಕೂ ಈ ವೈಫಲ್ಯಕ್ಕೆ ಪ್ರಚಾರಕರು ಕಾರಣರಲ್ಲ, ಬದಲಿಗೆ ಸ್ವತಃ ಆರ್‌ಎಸ್ಎಸ್ ಸಂಘಟನೆಯೇ ಕಾರಣ. ಆರ್‌ಎಸ್‌ಎಸ್‌ ತನ್ನ ಆಯ್ದ ಮೂರು ಸಾವಿರದಷ್ಟಿರುವ ಪ್ರಚಾರಕರ ಆಲೋಚನಾ ಕ್ರಮವನ್ನೇ ಬದಲಾಯಿಸಲು ಸಾಧ್ಯವಾಗಿಲ್ಲ. ಇನ್ನು ಎಲ್ಲ ಭಾರತೀಯರ ಆಲೋಚನಾ ಕ್ರಮವನ್ನು ಬದಲಾಯಿಸುವುದು ಹೇಗೆ?

ದಶಕಗಳ ಕಾಲ ಸರಳ ಜೀವನದ ತರಬೇತಿ ನೀಡಿದರೂ ಕೇವಲ ಕೆಲವು ವರ್ಷಗಳ ಅಧಿಕಾರದ ಸುಖದಿಂದಾಗಿ ಈ ಸರಳತೆಯೇ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಇಂದಿನ ಪ್ರಚಾರಕರು ಐಷಾರಾಮಿ ಜೀವನ, ಸೌಕರ್ಯಗಳು ಮತ್ತು ಅಧಿಕಾರದ ಸಾಮೀಪ್ಯಕ್ಕೆ ಒಗ್ಗಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರು ಪ್ರತಿಪಾದಿಸುತ್ತಿದ್ದ ಪ್ರಾಮಾಣಿಕತೆಯ ಬದ್ಧತೆಯೂ ಮರೆಯಾಗಿದೆ. ಇಂದು ಸಂಘಟನೆಯಲ್ಲಿ ಕಡು ಬಡತನದ, ಸರಳ ಜೀವನ ನಡೆಸುವ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಹುಡುಕುವುದು ಕೂಡ ಕಷ್ಟಸಾಧ್ಯ!

ಸಾಂಸ್ಥಿಕ ಒಪ್ಪಂದಗಳ ಭ್ರಷ್ಟ ವ್ಯವಸ್ಥೆ

ಸಮಾಜವನ್ನು ಶಿಸ್ತುಬದ್ಧಗೊಳಿಸಲು “ಕಾನೂನಿನ ಕಠಿಣ ಹಸ್ತ” (iron hand of law) ಇರಬೇಕೆಂದು ಆರ್‌ಎಸ್ಎಸ್ ಯಾವಾಗಲೂ ಪ್ರತಿಪಾದಿಸುತ್ತಿತ್ತು. ಆದರೆ, ಈಗ ಅಧಿಕಾರಕ್ಕೆ ಬಂದ ಮೇಲೆ ಅದೇ ಕಾನೂನಿನ ಆಡಳಿತವನ್ನು ವ್ಯವಸ್ಥಿತವಾಗಿ ಗಾಳಿಗೆ ತೂರುತ್ತಿದೆ. ದೇಶದ ಸ್ವಾಯತ್ತ ಸಂಸ್ಥೆಗಳು ಪ್ರಸ್ತುತ ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲಿದೆ. ಕಾನೂನು ಕೂಡ ತನ್ನದೇ ಆದ “ಆಪ್ತರಿಗೆ” ಮಾತ್ರ ಒಲವು ತೋರುತ್ತಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಸೃಷ್ಟಿಯಾಗುತ್ತಿರುವ ಪ್ರತಿಯೊಂದು ಹೊಸ ಸಂಸ್ಥೆಯೂ ದೇಶದ ಆಡಳಿತ ಸುಧಾರಣೆಗಿಂತ ಹೆಚ್ಚಾಗಿ, ತಮ್ಮದೇ ಆದ ಜನರಿಗೆ ಸರ್ಕಾರಿ ಒಪ್ಪಂದದ ಪೂರೈಕೆಗಾಗಿಯೇ ಸೃಷ್ಟಿಯಾಗಿರುವುದು.

ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA). ಇದನ್ನು ಸಂಸತ್ತಿಗೆ ಉತ್ತರದಾಯಿಯಾಗಿರುವ ಶಾಸನಬದ್ಧ ಸಂಸ್ಥೆಯಾಗಿ ರೂಪಿಸುವ ಬದಲಿಗೆ, ಕೇವಲ ಒಂದು ‘ಸೊಸೈಟಿ’ (society) ಯಾಗಿ ರಚಿಸಲಾಗಿದೆ. ಸಾರ್ವಜನಿಕ ಆಡಿಟಿಂಗ್ (ಲೆಕ್ಕ ಪರಿಶೋಧನೆ) ವ್ಯಾಪ್ತಿಯಿಂದಲೂ ಹೊರಗಿಡಲಾಗಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಕೆ, ಸಾಗಣಿಕೆ, ಪರೀಕ್ಷಾ ಕೇಂದ್ರಗಳ ಹಂಚಿಕೆ, ಮೌಲ್ಯಮಾಪನ ಮತ್ತು ದತ್ತಾಂಶ ನಿರ್ವಹಣೆಯಂತಹ ಪ್ರತಿಯೊಂದು ಪ್ರಮುಖ ಜವಾಬ್ದಾರಿಯನ್ನೂ ಗುತ್ತಿಗೆದಾರರಿಗೆ ನೀಡಲಾಗಿದೆ. ಇಂತಹ ಅತ್ಯಂತ ಸೂಕ್ಷ್ಮ ವಲಯದ ಕೆಲಸಗಳನ್ನು ಖಾಸಗೀಕರಣಗೊಳಿಸಿದ್ದರ ನೇರ ಪರಿಣಾಮವೇ ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ.

ಇದೇ ಮಾದರಿಯ ಖಾಸಗಿ ಒಪ್ಪಂದಗಳ ವ್ಯವಸ್ಥೆಯು ಎಥೆನಾಲ್ ಮಿಶ್ರಣದ ಆದೇಶಗಳು, ಫಾಸ್ಟ್‌ಟ್ಯಾಗ್ (FASTag) ವ್ಯವಸ್ಥೆಗಳು, ಇ-ರಿಕ್ಷಾ ಯೋಜನೆಗಳು, ಭಾರತೀಯ ಆಹಾರ ನಿಗಮದ (FCI) ಗೋದಾಮುಗಳ ಖಾಸಗೀಕರಣ ಮತ್ತು ವಿಮಾನ ನಿಲ್ದಾಣಗಳ ಹೂಡಿಕೆ ಹಿಂತೆಗೆತದಂತಹ (disinvestment) ಎಲ್ಲಾ ಕ್ಷೇತ್ರಗಳಲ್ಲೂ ಪುನರಾವರ್ತನೆಯಾಗುತ್ತಿದೆ. ಸರ್ಕಾರದ ಪ್ರತಿಯೊಂದು ಹೊಸ ನೀತಿಯೂ ಕೇವಲ ಆಪ್ತರಿಗೆ ಸಹಾಯ ಮಾಡುವ ದಾರಿಯಾಗಿ ಮಾರ್ಪಟ್ಟಿದೆ.

ವೈಜ್ಞಾನಿಕ ಮನೋಭಾವದ ಅಧಃಪತನ

ಆರ್‌ಎಸ್‌ಎಸ್‌ ಸಿದ್ಧಾಂತಗಳಲ್ಲಿ ‘ಬೌದ್ಧಿಕತೆ’ (intellect) ಎಂಬುದು ಒಂದು ಪ್ರಮುಖ ಪದ. ಆದರೆ, ಆಚರಣೆಯಲ್ಲಿ ಸಂಘಟನೆಯು ಜ್ಞಾನ ಮತ್ತು ವಿಜ್ಞಾನದ ವಿರುದ್ಧವೇ ಸಮರ ಸಾರಿದಂತಿದೆ. ಇಪ್ಪತ್ತನೇ ಶತಮಾನದ ಫ್ಯಾಸಿಸ್ಟ್ ರಾಷ್ಟ್ರಗಳು ಕೂಡ ಪ್ರಯೋಗಾಲಯಗಳ ಮೂಲಕ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದವು. ಆದರೆ ಆರ್‌ಎಸ್ಎಸ್ ದೇಶವನ್ನು ವೈಜ್ಞಾನಿಕ ಚಿಂತನೆಗಳಿಲ್ಲದ, ಕೇವಲ ಕಾಲ್ಪನಿಕ ಕಥೆಗಳಲ್ಲಿ ಬದುಕುವ ಸಮಾಜವನ್ನಾಗಿ ಪರಿವರ್ತಿಸುತ್ತಿದೆ. ಬೌದ್ಧಿಕತೆಯನ್ನು ಪ್ರತಿಪಾದಿಸುತ್ತಲೇ, “ಹಾರ್ವರ್ಡ್ ವರ್ಸಸ್ ಹಾರ್ಡ್ ವರ್ಕ್” ನಂತಹ ಹೇಳಿಕೆಗಳ ಮೂಲಕ ಅಜ್ಞಾನವನ್ನು ವೈಭವೀಕರಿಸಲಾಗುತ್ತಿದೆ. ಈ ಬೌದ್ಧಿಕ-ವಿರೋಧಿ ವಾತಾವರಣವು ಇಂದು ದೇಶದ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ವ್ಯಾಪಿಸಿದೆ.

ಅತ್ಯಂತ ವಿಡಂಬನಾತ್ಮಕ ಸಂಗತಿಯೆಂದರೆ, ದೇಶದ ಸುವರ್ಣ ಭೂತಕಾಲವನ್ನು ಗುಣಗಾನ ಮಾಡುವ ಸಂಘಟನೆಯು, ಪ್ರಾಚೀನ ಭಾರತದ ನಿಜವಾದ ವೈಜ್ಞಾನಿಕ ಸಾಧನೆಗಳನ್ನು ಎಂದಿಗೂ ಜನಪ್ರಿಯಗೊಳಿಸಿಲ್ಲ. ಭಾರತದ ಹೆಮ್ಮೆಯ ವೈಜ್ಞಾನಿಕ ಪರಂಪರೆಗೆ ಸಾಕ್ಷಿಯಾಗಿರುವ ಆರ್ಯಭಟ, ವರಾಹಮಿಹಿರ, ಬ್ರಹ್ಮಗುಪ್ತ ಮತ್ತು ಭಾಸ್ಕರರಂತಹ ಮಹಾನ್ ಗಣಿತಜ್ಞ ಹಾಗೂ ಖಗೋಳಶಾಸ್ತ್ರಜ್ಞರ ಸಾಧನೆಗಳಿಗೆ ಇವರ ಪ್ರಚಾರದಲ್ಲಿ ಸ್ಥಾನವೇ ಸಿಕ್ಕಿಲ್ಲ. ಏಕೆಂದರೆ, ಈ ಪ್ರಾಚೀನ ವಿಜ್ಞಾನಿಗಳ ಸಾಧನೆಗಳು ವೈಚಾರಿಕ ಮತ್ತು ಪ್ರಾಯೋಗಿಕ ನೆಲೆಗಟ್ಟಿನ ಮೇಲೆ ನಿಂತಿದ್ದವೇ ಹೊರತು ಕಾಲ್ಪನಿಕ ಕಥೆಗಳ ಮೇಲಲ್ಲ.

‘ವಿಶ್ವಗುರು’ ಕಲ್ಪನೆ; ವಿದೇಶಾಂಗ ನೀತಿಯ ವೈಫಲ್ಯ

ಆರ್‌ಎಸ್ಎಸ್ ಪ್ರತಿಪಾದಿಸುವ ಅತ್ಯಂತ ‘ಭವ್ಯ’ವಾದ ಮುಖವಾಡ ಭಾರತವನ್ನು ಜಗತ್ತಿಗೆ ‘ವಿಶ್ವಗುರು’ (ಜಾಗತಿಕ ಮಹಾಶಕ್ತಿ) ಮಾಡುವುದು. ಆದರೆ, ಇದರ ವಾಸ್ತವವೇ ಬೇರೆ. ಕೇವಲ ಹೊರದೇಶಗಳಲ್ಲಿ ಭಾಷಣ ಬಿಗಿಯುವ ಮತ್ತು ವಿದೇಶಗಳಿಗೆ ಶರಣಾಗುವ ದುರ್ಬಲ ವಿದೇಶಾಂಗ ನೀತಿ ನಮ್ಮದಾಗಿದೆ.

ಎಷ್ಟೇ ಪ್ರಭಾವಿ ಎಂದು ಡಂಗುರ ಸಾರಿಕೊಂಡರೂ, ಆರ್‌ಎಸ್ಎಸ್ ಬೆಂಬಲಿತ ಸರ್ಕಾರಕ್ಕೆ ಅಮೆರಿಕ ಅಥವಾ ಚೀನಾದಂತಹ ಬಲಿಷ್ಠ ರಾಷ್ಟ್ರಗಳ ಮುಂದೆ ನೆಟ್ಟಗೆ ನಿಲ್ಲುವ ಧೈರ್ಯವಿಲ್ಲದಂತಾಗಿದೆ. ಅವರ ಆರ್ಥಿಕ ಸುಂಕಗಳು, ಅಪಮಾನಗಳು ಮತ್ತು ಗಡಿಭಾಗದ ಪ್ರಾದೇಶಿಕ ಆಕ್ರಮಣಗಳನ್ನು ಮೌನವಾಗಿ ನುಂಗುತ್ತಲೇ, “ನಾವೇನನ್ನೂ ಕಳೆದುಕೊಂಡಿಲ್ಲ” ಎಂದು ದೇಶದ ಜನರೆದುರು ಸುಳ್ಳು ವಾದ ಮಂಡಿಸುತ್ತಿದೆ.

ಅಮೆರಿಕ (ಡೊನಾಲ್ಡ್ ಟ್ರಂಪ್) ಕಣ್ಣು ಕೆಂಪು ಮಾಡಿದ ತಕ್ಷಣ, ಭಾರತದ ದಶಕಗಳ ಹಳೆಯ ಮಿತ್ರರಾಷ್ಟ್ರಗಳಾದ ಇರಾನ್ ಮತ್ತು ರಷ್ಯಾವನ್ನು ದೂರ ತಳ್ಳಲಾಯಿತು. ಆನಂತರ ಮತ್ತೆ ಅದೇ ದೇಶಗಳ ಬಳಿ ಮಣಿದು ಹೋಗಬೇಕಾದ ಸ್ಥಿತಿ ಎದುರಾಯಿತು. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ ಮುನ್ನಡೆಸುತ್ತೇವೆ ಎಂದು ಹೇಳಿಕೊಂಡಿದ್ದ ಒಂದು ಸಿದ್ಧಾಂತವು, ಇಂದು ಇಸ್ರೇಲ್ ದೇಶವನ್ನು ತನ್ನ ರಾಜಕೀಯ, ವ್ಯೂಹಾತ್ಮಕ ಮತ್ತು ತಾತ್ವಿಕ ‘ಗುರು’ ಎಂದು ಆರಾಧಿಸುವ ಮಟ್ಟಕ್ಕೆ ಬಂದು ತಲುಪಿದೆ.

ನಿಜವಾದ ಸಮಸ್ಯೆ ಇರುವುದೆಲ್ಲಿ?

ಸದ್ಯ ಆರ್‌ಎಸ್ಎಸ್ ಸಂಪೂರ್ಣವಾಗಿ ತನ್ನದೇ ತಂತ್ರದಲ್ಲಿ ಸಿಕ್ಕಿಬಿದ್ದಿದೆ. ಮಾಧ್ಯಮಗಳು ಮತ್ತು ಮತ್ತು ವ್ಯವಸ್ಥಿತ ದ್ವೇಷದ ಪ್ರಚಾರಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೂ ಬಹುಪಾಲು ಭಾರತೀಯರು ಇಂದಿಗೂ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ತಿರಸ್ಕರಿಸುತ್ತಲೇ ಇದ್ದಾರೆ. ದೇಶದ ಐದನೇ ಒಂದು ಭಾಗದಷ್ಟಿರುವ ಅಲ್ಪಸಂಖ್ಯಾತರನ್ನು ಪಕ್ಕಕ್ಕಿಟ್ಟರೂ, ಇಂದಿಗೂ ಪ್ರತಿ ಇಬ್ಬರು ಹಿಂದೂಗಳಲ್ಲಿ ಒಬ್ಬರು ಈ ಸಿದ್ಧಾಂತಕ್ಕೆ ತಮ್ಮ ಮತವನ್ನು ಹಾಕುತ್ತಿಲ್ಲ. ಕಳೆದ ಹನ್ನೆರಡು ವರ್ಷಗಳ ದ್ವೇಷದ ರಾಜಕಾರಣದಿಂದ ಧ್ರುವೀಕರಣಗೊಳ್ಳದ ಜನರು, ಮುಂದಿನ ದಿನಗಳಲ್ಲೂ ಧ್ರುವೀಕರಣಗೊಳ್ಳುವ ಸಾಧ್ಯತೆ ಕಡಿಮೆ. ಇನ್ನು ಬಿಜೆಪಿಗೆ ಮತ ನೀಡುವ ಎಲ್ಲರೂ ಆರ್‌ಎಸ್‌ಎಸ್‌ನ ಈ ವಿಭಜನಕಾರಿ ದೃಷ್ಟಿಕೋನವನ್ನು ಒಪ್ಪಿದ್ದಾರೆ ಎಂದರ್ಥವಲ್ಲ. ಜನರು ಬೇರೆ ಬೇರೆ ವೈಯಕ್ತಿಕ ಕಾರಣಗಳಿಗಾಗಿಯೂ ಮತ ಚಲಾಯಿಸುತ್ತಾರೆ.

ಇದೇ ಆರ್‌ಎಸ್ಎಸ್ ಎದುರಿಸುತ್ತಿರುವ ನಿಜವಾದ ಸಮಸ್ಯೆ. ದೇಶ ಇಂದಿಗೂ ತನ್ನ ಪ್ರಜಾಪ್ರಭುತ್ವದ ಆಶಯಗಳು, ಸಹಿಷ್ಣುತೆ, ಬಹುಸಂಸ್ಕೃತಿ ಮತ್ತು ಬಹುಧರ್ಮೀಯ ಚೌಕಟ್ಟನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ. ಇಲ್ಲಿನ ಬಹುಸಂಖ್ಯಾತ ಸಮಾಜವು “ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ” ಎಂಬ ಸಂಕುಚಿತ ಕಲ್ಪನೆಯನ್ನು ಒಪ್ಪಲು ಸಿದ್ಧವಿಲ್ಲ. ಈ ಕಾರಣದಿಂದಾಗಿಯೇ ಆರ್‌ಎಸ್ಎಸ್ ಎಂದಿಗೂ ತನ್ನ ಅಸಲಿ ಮುಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ.

ಒಬ್ಬ ಸರ್ವಾಧಿಕಾರಿಯು ಯಾವುದೇ ಮುಖವಾಡವಿಲ್ಲದೆ ನೇರವಾಗಿ ಆಡಳಿತ ನಡೆಸಬಹುದು. ಆದರೆ ಆರ್‌ಎಸ್ಎಸ್ ತನಗೆ ಹೊಂದಿಕೆಯಾಗದ ಆ ನೈತಿಕತೆಯ ಮುಖವಾಡವನ್ನು ಬಲವಂತವಾಗಿ ಧರಿಸಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಬಿಜೆಪಿಗೆ ಸೇರುತ್ತಿರುವ ಭ್ರಷ್ಟ ನಾಯಕರು, ಅಕ್ರಮ ಟೆಂಡರ್‌ಗಳು, ಪ್ರಶ್ನೆಪತ್ರಿಕೆ ಸೋರಿಕೆಗಳು, ಪ್ರಚಾರಕರ ಐಷಾರಾಮಿ ಜೀವನ ಮತ್ತು ನಾಶವಾಗುತ್ತಿರುವ ಪ್ರಕೃತಿ— ಇವೆಲ್ಲವೂ ಆಡುವುದು ಒಂದು ಮಾಡುವುದು ಇನ್ನೊಂದು ಎಂಬ ಆರ್‌ಎಸ್‌ಎಸ್‌ನ ಒಳಗಿನೊಳ್ಳಿರುವ ಪೊಳ್ಳುತನವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಅವರ ‘ಕಥ್ನಿ’ (ಹೇಳಿಕೆ) ಮತ್ತು ‘ಕರ್ನಿ’ (ನಡಾವಳಿ) ನಡುವಿನ ಕಂದಕವು ಮುಚ್ಚಿಡಲು ಸಾಧ್ಯವಿಲ್ಲದಷ್ಟು ಕಣ್ಣಿಗೆ ರಾಚುತ್ತಿದೆ.

‘ಪ್ರಭು ಶ್ರೀರಾಮ’ -ಆರ್‌ಎಸ್ಎಸ್‌ನ ಆಂತರಿಕ ಪತನ

ಆರ್‌ಎಸ್‌ಎಸ್‌ ತನ್ನ ಇಡೀ ಸಿದ್ಧಾಂತ ಮತ್ತು ತನ್ನ ಸಾಮ್ರಾಜ್ಯವನ್ನು ಪ್ರಭು ಶ್ರೀರಾಮನ ಹೆಸರಿನಲ್ಲೇ ನಿರ್ಮಿಸಿಕೊಂಡಿದೆ. ಮಹಾತ್ಮಾ ಗಾಂಧೀಜಿಯವರ ನೇತೃತ್ವದ ಕಾಂಗ್ರೆಸ್ ಕೂಡ ‘ರಾಮರಾಜ್ಯ’ದ ಬಗ್ಗೆ ಮಾತನಾಡಿತ್ತು. ‘ರಘುಪತಿ ರಾಘವ ರಾಜಾರಾಮ್’ ಗಾಂಧೀಜಿಯವರ ಪ್ರಾರ್ಥನಾ ಸಭೆಗಳ ಗೀತೆಯಾಗಿತ್ತು. ಭಾರತದ ಸಂವಿಧಾನದ ಮೂಲ ಪ್ರತಿಯಲ್ಲೂ ರಾಮ-ಸೀತೆಯರ ಚಿತ್ರವಿದೆ. ಆದರೆ, ಗಾಂಧಿ ಮತ್ತು ಕಾಂಗ್ರೆಸ್‌ಗೆ ರಾಮ ಎಂಬುದು ನೈತಿಕತೆಯ ಸಂಕೇತವಾಗಿದ್ದನೇ ಹೊರತು, ಆರ್‌ಎಸ್ಎಸ್ ಬಿಂಬಿಸಿದಂತೆ ಎಂದಿಗೂ ಯುದ್ಧದ ಘೋಷಣೆಯಾಗಲಿ ಅಥವಾ ಪ್ರತಿಕಾರದ ಸಂಕೇತವಾಗಲಿ ಆಗಿರಲಿಲ್ಲ.

ಆರ್‌ಎಸ್ಎಸ್‌ ರಾಮನ ಹೆಸರನ್ನು ಬಳಸಿ ಜನರ ಭಾವನೆಗಳನ್ನು ಕೆರಳಿಸಿರಬಹುದು. ಆದರೆ ರಾಮನ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅದರ ಅಸಲಿ ಉದ್ದೇಶ ಈಗ ಬಹಿರಂಗವಾಗಿದೆ. ಸ್ವತಃ ರಾಮಮಂದಿರದ ದೇಣಿಗೆಯಲ್ಲೇ ಆರ್ಥಿಕ ಲೂಟಿ ನಡೆದಿರುವ ಕಟು ಸತ್ಯಗಳು ಹೊರಬೀಳುತ್ತಿದ್ದಂತೆ ಆರ್‌ಎಸ್ಎಸ್ ಧರಿಸಿದ್ದ ನೈತಿಕತೆಯ ಮುಖವಾಡ ಸಂಪೂರ್ಣವಾಗಿ ಕಳಚಿಬಿದ್ದಿದೆ. ಶ್ರೀರಾಮನನ್ನು ನಿಜವಾಗಿ ಆರಾಧಿಸುವ ಭಕ್ತರನ್ನು ಈ ಭ್ರಷ್ಟಾಚಾರ ದಿಗ್ಭ್ರಮೆಗೊಳಿಸಿದೆ. ಆರ್‌ಎಸ್ಎಸ್ ಇನ್ನು ಮುಂದೆ ತಾನು ಆರಾಧಿಸುವ ದೇವರ ನಿಜವಾದ ‘ಸೇವಕ’ನಾಗಿ ಉಳಿದಿಲ್ಲ ಎಂಬುದು ಶ್ರೀರಾಮ ಭಕ್ತರಿಗೆ ಸ್ಪಷ್ಟವಾಗಿದೆ.

ನಿಧಾನಗತಿಯಲ್ಲಿ ಆದ ಸಾಂಸ್ಥಿಕ ಮತ್ತು ನೈತಿಕ ಪತನದಿಂದ ಹೊರಬರಲು ಆರ್‌ಎಸ್‌ಎಸ್‌ಗೆ ಯಾವುದೇ ಸುಳ್ಳು ಪ್ರಚಾರಗಳು ಸಹಾಯ ಮಾಡದು. ಒಂದು ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ ಮತ್ತೆ ಹೊಸದಾಗಿ ಕಟ್ಟಿಕೊಳ್ಳಬಹುದು. ಆದರೆ ಸಿದ್ಧಾಂತದ ಒಳಗಿರುವ ಇಂತಹ ವಿರೋಧಾಭಾಸಗಳು ದಿನಕಳೆದಂತೆ ಮತ್ತಷ್ಟು ಆಳವಾಗುತ್ತಾ ಹೋಗುತ್ತವೆ. ಸದ್ಯಕ್ಕೆ ಆರ್‌ಎಸ್ಎಸ್ ಎಂಬ ಕೋಟೆ ಹೊರನೋಟಕ್ಕೆ ಭದ್ರವಾಗಿ ಕಾಣಿಸುತ್ತಿದ್ದರೂ, ಅದರ ಬೋಧನೆ ಮತ್ತು ಆಚರಣೆಗಳ ನಡುವಿನ ಅಜಗಜಾಂತರ ವ್ಯತ್ಯಾಸದಿಂದಾಗಿ ಆರ್‌ಎಸ್‌ಎಸ್‌ ಕೋಟೆ ಒಳಗಿನಿಂದಲೇ ಪೊಳ್ಳಾಗುತ್ತಿದೆ.

ಮೂಲ: ದಿ ವೈರ್, ಗುರುದೀಪ್ ಸಿಂಗ್ ಸಪ್ಪಲ್ ಲೇಖನ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆ: ಬಸ್ ಕಂಡಕ್ಟರ್ ಆಗಿ ಟಿಕೆಟ್ ನೀಡಿದ ಸಿಎಂ ವಿಜಯ್

ತಮಿಳುನಾಡು ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯನ್ನು...