ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಿಂದ ಜನರು ನೌಕರಿ ಮತ್ತು ಜೀವನೋಪಾಯ ಅರಸಿ ನಗರಗಳಿಗೆ ವಲಸೆ ಹೋಗುತ್ತಿರುವುದು ಬಹುದೊಡ್ಡ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉತ್ತರಾಖಂಡ ಸರ್ಕಾರವೊಂದು ವಿನೂತನ ಯೋಜನೆಯನ್ನು ರೂಪಿಸುತ್ತಿದೆ. ಅದೇ ‘ವಾಣಿಜ್ಯ ರುದ್ರಾಕ್ಷಿ ಕೃಷಿ’ ಆಗಿದೆ.
2047ರ ‘ವಿಕಸಿತ ಭಾರತ’ ಹಾಗೂ ಉತ್ತರಾಖಂಡದ ವಿಷನ್ ಹೊತ್ತಿಗೆ ರಾಜ್ಯದಲ್ಲಿ ಬರೋಬ್ಬರಿ 1 ಕೋಟಿ (10 ಮಿಲಿಯನ್) ರುದ್ರಾಕ್ಷಿ ಮರಗಳನ್ನು ಬೆಳೆಸಿ, ಸುಮಾರು ಒಂದೂವರೆ ಲಕ್ಷ (1,50,000) ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ನೀಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ಆದರೆ ಇದರಿಂದಾಗಿ 1.5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯವೇ ಎಂಬ ಪ್ರಶ್ನೆ ಈಗ ಹುಟ್ಟಿದೆ.
ಇದನ್ನೂ ಓದಿ: ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ
ನೇಪಾಳ ಅಧ್ಯಯನದಿಂದ ಯೋಜನೆ
This video cannot be played in your browser. Open the video directly
ದೇಶಕ್ಕೆ ಅಗತ್ಯವಿರುವ ಶೇಕಡ 95ಕ್ಕೂ ಹೆಚ್ಚು ರುದ್ರಾಕ್ಷಿಗಳನ್ನು ನೇಪಾಳ ಮತ್ತು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕೋಟ್ಯಂತರ ರೂಪಾಯಿ ವಿದೇಶಕ್ಕೆ ಹರಿಯುತ್ತಿದೆ. ಈ ಆಮದು ಅವಲಂಬನೆ ತಪ್ಪಿಸಲು ಮತ್ತು ಉತ್ತರಾಖಂಡವನ್ನು ‘ಗ್ಲೋಬಲ್ ಹಿಮಾಲಯನ್ ರುದ್ರಾಕ್ಷಿ ಹಬ್’ ಮಾಡಲು ಸರ್ಕಾರ ನಿರ್ಧರಿಸಿದೆ. ಟೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ, ಕೃಷಿ ವಿಜ್ಞಾನಿ ಡಾ. ರಮೇಶ್ ಸಿಂಗ್ ಪಾಲ್ ಹಾಗೂ ರುದ್ರಾಕ್ಷಿ ತಜ್ಞ ಪ್ರಿನ್ಸ್ ಅಗರ್ವಾಲ್ ಅವರನ್ನೊಳಗೊಂಡ ನಿಯೋಗವು ನೇಪಾಳದ ‘ಭೋಜ್‌ಪುರ’ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿದೆ.
ನೇಪಾಳದಿಂದ ತಂದ ಮಣ್ಣು ಹಾಗೂ ಉತ್ತರಾಖಂಡದ ಗಡ್ವಾಲ್ (ಟೆಹ್ರಿ, ಪೌರಿ, ರುದ್ರಪ್ರಯಾಗ, ಡೆಹ್ರಾಡೂನ್, ಹರಿದ್ವಾರ) ಭಾಗದ ಮಣ್ಣನ್ನು ಪರೀಕ್ಷಿಸಿದಾಗ ಎರಡೂ ಕಡೆಯ ವಾತಾವರಣ, ಎತ್ತರ ಮತ್ತು ಮಣ್ಣಿನ ಗುಣಲಕ್ಷಣಗಳು ಒಂದೇ ರೀತಿಯಾಗಿರುವುದು ಕಂಡುಬಂದಿದೆ. ಜುಲೈ 2026ರಲ್ಲಿ ಈ ನಿಯೋಗವು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸುಮಾರು 200 ಪುಟಗಳ ವರದಿಯನ್ನು ಸಲ್ಲಿಸಿದ್ದು, ಸರ್ಕಾರ ಶೀಘ್ರದಲ್ಲೇ ಕಾರ್ಯತಂತ್ರ ನೀತಿಯನ್ನು ಪ್ರಕಟಿಸಲಿದೆ.
ರುದ್ರಾಕ್ಷಿ ಕೃಷಿಯ ದೀರ್ಘ ಮಾಹಿತಿ
ರುದ್ರಾಕ್ಷಿ ಕೇವಲ ಧಾರ್ಮಿಕ ಮಹತ್ವದ ಮರವಷ್ಟೇ ಅಲ್ಲ, ಕೃಷಿ-ಅರಣ್ಯಿಕವಾಗಿ ಭಾರಿ ಮೌಲ್ಯವುಳ್ಳ ಬೆಳೆಯಾಗಿದೆ. ಪೌರಿ, ಟೆಹ್ರಿ, ರುದ್ರಪ್ರಯಾಗ, ಚಮೋಲಿ, ಅಲ್ಮೋರಾ ಮತ್ತು ಬಾಗೇಶ್ವರ ಜಿಲ್ಲೆಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ರುದ್ರಾಕ್ಷಿ ಸಸಿ ನೆಟ್ಟ ನಂತರ 6 ರಿಂದ 8 ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ ಹಾಗೂ 10ನೇ ವರ್ಷಕ್ಕೆ ಪೂರ್ಣ ಪ್ರಮಾಣದ ಇಳುವರಿ ನೀಡುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಔಷಧೀಯ ಹಾಗೂ ಧಾರ್ಮಿಕ ಕಾರಣಕ್ಕೆ ರುದ್ರಾಕ್ಷಿಗೆ ಭಾರಿ ಬೇಡಿಕೆಯಿದೆ. ವಿಶೇಷವಾಗಿ ಗಡ್ವಾಲ್ ಹಿಮಾಲಯದ ರುದ್ರಾಕ್ಷಿಗಳಿಗೆ ಜಾಗತಿಕವಾಗಿ ಹೆಚ್ಚಿನ ಮೌಲ್ಯವಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ; ಬಂಗಾರದ ಉಂಗುರ ಕದ್ದು ಪರಾರಿಯಾದ ನಕಲಿ ನಾಗಾಸಾಧು
1.5 ಲಕ್ಷ ಮಂದಿಗೆ ಉದ್ಯೋಗ ಮತ್ತು ವಲಸೆ ತಡೆ ಸಾಧ್ಯವೇ?
ವರದಿಯ ಪ್ರಕಾರ, 10,000 ಹೆಕ್ಟೇರ್ ಪ್ರದೇಶದಲ್ಲಿ 1 ಕೋಟಿ ಮರಗಳನ್ನು ಹಂತ-ಹಂತವಾಗಿ ಬೆಳೆಸುವ ಯೋಜನೆ ಇದಾಗಿದೆ. ಸುಮಾರು 50,000ದಿಂದ 70,000 ರೈತ ಕುಟುಂಬಗಳು ನೇರವಾಗಿ ಈ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಸಸಿ ನೆಡುವುದು, ಮರಗಳ ನಿರ್ವಹಣೆ, ಕಟಾವು, ರುದ್ರಾಕ್ಷಿ ಕಾಳುಗಳ ಸಂಸ್ಕರಣೆ, ಶ್ರೇಣೀಕರಣ, ಮಾಲೆಗಳ ತಯಾರಿಕೆ, ಮೌಲ್ಯವರ್ಧನೆ, ರಫ್ತು ಮತ್ತು ಧಾರ್ಮಿಕ ಪ್ರವಾಸೋದ್ಯಮದ ಮೂಲಕ 1,50,000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ವರದಿ ಅಂದಾಜಿಸಿದೆ.
ಬೆಟ್ಟದ ಜಮೀನುಗಳಲ್ಲಿ ಕಾಡುಪ್ರಾಣಿಗಳ ಕಾಟದಿಂದಾಗಿ ಸಾಂಪ್ರದಾಯಿಕ ಕೃಷಿ ಬಿಟ್ಟು ಜನ ನಗರ ಸೇರುತ್ತಿದ್ದಾರೆ. ಆದರೆ ರುದ್ರಾಕ್ಷಿ ಮರಗಳಿಗೆ ಪ್ರಾಣಿಗಳಿಂದ ಹೆಚ್ಚಿನ ಹಾನಿಯಾಗುವುದಿಲ್ಲ. ಹೀಗಾಗಿ ಖಾಲಿ ಬಿದ್ದಿರುವ ಗುಡ್ಡಗಾಡು ಜಮೀನುಗಳಲ್ಲಿ ಇದು ಸುಸ್ಥಿರ ಆದಾಯ ನೀಡಲಿದ್ದು, ವಲಸೆಗೆ ಬ್ರೇಕ್ ಹಾಕಬಹುದು.
ಆದರೆ 1.5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯವೇ?
ಈ ಯೋಜನೆ ಕೇಳಲು ಆಕರ್ಷಕವಾಗಿದ್ದರೂ, ವಿಪಕ್ಷಗಳು ಹಾಗೂ ಕೆಲವು ಕೃಷಿ ವಿಜ್ಞಾನಿಗಳು ಪ್ರಮುಖ ಸವಾಲುಗಳನ್ನು ಎತ್ತಿಹಿಡಿದಿದ್ದಾರೆ. ರುದ್ರಾಕ್ಷಿ ಮರ ಫಲ ನೀಡಲು 6ರಿಂದ 8 ವರ್ಷ ಬೇಕು. ಅಲ್ಲಿಯವರೆಗೆ ರೈತರಿಗೆ ಆದಾಯ ಹೇಗೆ? ಈ ಮಧ್ಯಂತರ ಅವಧಿಯಲ್ಲಿ ಸರ್ಕಾರ ನೀಡುವ ಸಬ್ಸಿಡಿ ಅಥವಾ ಜೀವನಾಧಾರ ಯೋಜನೆಗಳೇನು ಎಂದು ವಿಪಕ್ಷಗಳು ಪ್ರಶ್ನಿಸಿವೆ.
ರುದ್ರಾಕ್ಷಿಯಂತೆಯೇ ಕಾಣುವ ‘ಭದ್ರಾಕ್ಷಿ’ ತಳಿಗಳಿರುತ್ತವೆ. ಕಾಯಿ ಬಿಡುವವರೆಗೂ ತಳಿ ಗುರುತಿಸುವುದು ಕಷ್ಟ. ಕಳಪೆ ಸಸಿಗಳನ್ನು ವಿತರಿಸಿದರೆ ರೈತರು ಸತತ 7 ವರ್ಷಗಳ ಶ್ರಮ ವ್ಯರ್ಥವಾಗುತ್ತದೆ. ಜಿ.ಬಿ. ಪಂತ್ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ಹವಾಮಾನ ಸರಿಯಿದ್ದರೂ ಎತ್ತರ ಮತ್ತು ಸ್ಥಳೀಯ ಉಷ್ಣಾಂಶ ಬದಲಾದರೆ ರುದ್ರಾಕ್ಷಿಯ ಗುಣಮಟ್ಟ ಕಡಿಮೆಯಾಗುವ ಅಪಾಯವಿದೆ. ವಿಪಕ್ಷಗಳು “ಸರ್ಕಾರವು ಮೂಲಭೂತ ಸೌಕರ್ಯ, ಆಸ್ಪತ್ರೆ ಹಾಗೂ ಶಾಲೆಗಳನ್ನು ಅಭಿವೃದ್ಧಿಪಡಿಸದೆ ಇಂತಹ ಧಾರ್ಮಿಕ ಭರವಸೆಗಳ ಮೂಲಕ ವಲಸೆ ಸಮಸ್ಯೆಯನ್ನು ಮರೆಮಾಚಲು ಯತ್ನಿಸುತ್ತಿದೆ” ಎಂದು ಟೀಕಿಸಿವೆ.





