ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಭೂಮಿ ಹಕ್ಕು ವೇದಿಕೆ ಹೇಳುವುದೇನು?

Date:

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ ಅಳವಡಿಸಿಕೊಂಡಿದೆ. ಇದರ ಆಧಾರದ ಮೇಲೆ ಕರ್ನಾಟಕದ 1502 ಗ್ರಾಮಗಳನ್ನು ESA ಎಂದು ಘೋಷಿಸಲು ಶಿಫಾರಸ್ಸು ಮಾಡಿದೆ”- ಇಂತಹ ಹಲವಾರು ತಕರಾರು ಅಂಶಗಳನ್ನು ಹೊಂದಿರುವ ಕಿರು ವರದಿಯನ್ನು ಇತ್ತೀಚೆಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಬಿಡುಗಡೆ ಮಾಡಿದೆ.

- Advertisement -

ಈ ವೇದಿಕೆಯೊಂದಿಗೆ ಹಲವು ವರ್ಷಗಳಿಂದ ಒಡನಾಡ ಹೊಂದಿದ್ದು, ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರು ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಕುರಿತ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಸೂಕ್ಷ್ಮ ವಲಯಕ್ಕೆ ಒಳಪಡುವ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಜನರಿಗೆ ತೊಂದರೆಯಾಗುವ, ಅವೈಜ್ಞಾನಿಕ ಅಂಶಗಳನ್ನು ಸಂಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಶಿಫಾರಸು ಪಟ್ಟಿ ತಯಾರಿಸಲಾಗಿತ್ತು. ಪಟ್ಟಿ ಬಿಡುಗಡೆ ಮಾಡಿದ ಬಳಿಕ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಲಾಯಿತು. ಭೌತಿಕ ಸಮೀಕ್ಷೆ ಮತ್ತು ಗ್ರಾಮ ಸಭೆ ನಿರ್ಣಯ ಮಾಡಲು ಆಗ್ರಹಿಸಲಾಯಿತು ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಅರಣ್ಯ ಭೂಮಿ ಹಕ್ಕು ವೇದಿಕೆ ವರದಿ ಹೇಳುವುದೇನು?

“ಕಸ್ತೂರಿ ರಂಗನ್‌ ಸಮಿತಿಯ ಸದಸ್ಯರು ಪಶ್ಚಿಮ ಘಟ್ಟದ ಹಳ್ಳಿಗಳಿಗೆ ಬೇಟಿ ನೀಡದೇ ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಯ ಪ್ರದೇಶವನ್ನು ಸಹಿತ ನೈಸರ್ಗಿಕ ಅರಣ್ಯ ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ” ಎಂಬುದು ಅರಣ್ಯ ಭೂಮಿ ಹಕ್ಕು ವೇದಿಕೆಯ ಆತಂಕ.

ESA 1
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಸ್ತೂರಿ ರಂಗನ್ ವರದಿಯಲ್ಲಿನ ಅವೈಜ್ಞಾನಿಕ ಅಂಶಗಳನ್ನು ಪಟ್ಟಿ ಮಾಡಿದ್ದು, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರಿಂದ ವರದಿ ಬಿಡುಗಡೆ ಮಾಡಿಸಲಾಗಿದೆ.

“ಪರಿಸರ ಸಂರಕ್ಷಣಾ ವಲಯಗಳ ಸುತ್ತಲಿನ 10 ಕಿ.ಮೀ. ಪ್ರದೇಶಗಳನ್ನು ಬಫರ್‌ ವಲಯವೆಂದು ಗುರುತಿಸಿರುವುದು, ವರದಿ ತಯಾರಿಸುವಾಗ ಜನಪ್ರತಿನಿಧಿಗಳನ್ನು, ಗ್ರಾಮ ಸಭೆಗಳನ್ನು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು ಅವೈಜ್ಞಾನಿಕ ವರದಿಗೆ ಕಾರಣ” ಎಂಬುದು ವೇದಿಕೆಯ ಗಂಭೀರ ಆರೋಪ.

“2015ರಲ್ಲಿ ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡ ನಿರ್ಣಯದ ಪ್ರಕಾರ ರಾಜ್ಯದಲ್ಲಿ 20,668 ಚದರ ಕಿಲೋಮೀಟರ್‌ ಸೂಕ್ಷ್ಮ ಪ್ರದೇಶವಿದ್ದು, ಅದರಲ್ಲಿ 16,632 ಚದರ ಕಿ.ಮೀ. ಪ್ರದೇಶವನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ. ಹೀಗಿರುವಾಗ ಹೆಚ್ಚಿನ ನಿರ್ಬಂಧ ಅಗತ್ಯ ಇಲ್ಲ ಎಂದು ರಾಜ್ಯ ಸರ್ಕಾರ ನಿಲುವು ಪ್ರಕಟಿಸಿದೆ. ಅದನ್ನು ಮೀರಿ ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸಬಾರದು” ಎಂದು ವೇದಿಕೆ ಆಗ್ರಹಿಸುತ್ತಿದೆ.

“ಕಸ್ತೂರಿ ರಂಗನ್ ವರದಿಯಲ್ಲಿ ಸಾಂಸ್ಕೃತಿಕ ಮತ್ತು ನೈಸರ್ಗಿಕ ಭೂಪ್ರದೇಶಗಳನ್ನು ತಪ್ಪಾಗಿ ವಿಂಗಡಿಸಲಾಗಿದೆ. ಶತಮಾನಗಳಿಂದ ಜನರು ವಾಸಿಸುತ್ತಿರುವ ಜನವಸತಿ ಪ್ರದೇಶಗಳು, ಕೃಷಿ ಭೂಮಿ ಮತ್ತು ಗ್ರಾಮೀಣ ಮೂಲಸೌಕರ್ಯಗಳನ್ನು ESA ವಲಯದೊಳಗೆ ಸೇರಿಸಲಾಗಿದೆ. ಏಲಕ್ಕಿ, ಕರಿಮೆಣಸು, ರಬ್ಬರ್, ಕಾಫಿ ಮತ್ತು ಗಾರ್ಸಿನಿಯಾ ತೋಟಗಳನ್ನು ಕಾಡುಗಳೆಂದು ತಪ್ಪಾಗಿ ಗ್ರಹಿಸಲಾಗಿದೆ. 100 ಕ್ಕಿಂತ ಕಡಿಮೆ ಜನಸಂಖ್ಯೆ ಸಾಂದ್ರತೆ ಹೊಂದಿರುವ ಪ್ರದೇಶಗಳನ್ನು ESA ಎಂದು ಪರಿಗಣಿಸಿರುವುದು ಅವೈಜ್ಞಾನಿಕ” ಎಂದು ವೇದಿಕೆ ವರದಿಯಲ್ಲಿ ತಿಳಿಸಿದೆ.

ರಾಜ್ಯದ 10 ಜಿಲ್ಲೆಗಳ 33 ತಾಲೂಕುಗಳ ಅಭಿಪ್ರಾಯ ಸಂಗ್ರಹಿಸಿ, ಅರಣ್ಯ ಹಾಗೂ ವನ್ಯಜೀವಿಧಾಮಗಳಂತಹ ಪ್ರದೇಶಗಳು ಈಗಾಗಲೇ ಇರುವುದರಿಂದ ಜನಜೀವನ, ಖಾಸಗಿ ಪ್ರದೇಶಗಳನ್ನು ಸೂಕ್ಷ್ಮ ವಲಯದಿಂದ ದೂರವಿಡಲು ಸೂಚಿಸಲಾಗಿತ್ತು. ಒಟ್ಟು ಸೂಕ್ಷ್ಮ ಪ್ರದೇಶ 20,668 ಚ.ಕಿ.ಮೀ. ಪೈಕಿ ಈಗಾಗಲೇ 16,632 ಚ.ಕಿ.ಮೀ. ಸಂರಕ್ಷಿತ ಅರಣ್ಯವೆಂದು ಘೋಷಿಸಲ್ಪಟ್ಟಿದೆ. ಈ ಹಂತದಲ್ಲಿ ಹೆಚ್ಚಿನ ನಿರ್ಬಂಧದ ಅವಶ್ಯಕತೆಯಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.

ಅರಣ್ಯ ಸಂರಕ್ಷಣೆಯ ಹೆಸರಲ್ಲಿ ಒಕ್ಕಲೆಬ್ಬಿಸದಿರಿ: ಜಸ್ಟೀಸ್ ನಾಗಮೋಹನ ದಾಸ್

ಕಸ್ತೂರಿ ರಂಗನ್ ವರದಿಯ ಸಂಬಂಧ ‘ಈದಿನ ಡಾಟ್ ಕಾಮ್’ಗೆ ಪ್ರತಿಕ್ರಿಯಿಸಿದ ಜಸ್ಟೀಸ್ ಎಚ್. ಎನ್. ನಾಗಮೋಹನ ದಾಸ್ ಅವರು, ಅರಣ್ಯ ಸಂರಕ್ಷಣೆಯ ಹೆಸರಲ್ಲಿ ಜನರನ್ನು ಒಕ್ಕಲೆಬ್ಬಿಸಬಾರದು” ಎಂದು ಎಚ್ಚರಿಸಿದರು.

“ನಮ್ಮ ಸರ್ಕಾರಗಳು, ಅರಣ್ಯ ಉಳಿಸಬೇಕು ಎಂದು ತೋರಿಸುವ ಆಸಕ್ತಿ ಪ್ರಶಂಸನೀಯ. ಅದನ್ನ ಯಾರು ನಾವು ವಿರೋಧ ಮಾಡಬೇಕಾಗಿಲ್ಲ. ಪ್ರಕೃತಿಯ ನಿಯಮದ ಪ್ರಕಾರ, ಜಗತ್ತಿನಾದ್ಯಂತ, ಮೂರನೇ ಒಂದು ಭಾಗದಷ್ಟು ಯಾವಾಗಲೂ ಅರಣ್ಯ ಇರಬೇಕು. ಆದರೆ ಅನೇಕ ಕಾರಣಗಳಿಗಾಗಿ, ಭಾರತ ದೇಶದಲ್ಲಿ ಅರಣ್ಯವು ಶೇ. 22-23ಕ್ಕೆ ಇಳಿದಿದೆ. ಇದ್ದಿದ್ದನ್ನು ನಾವು ಕಳೆದುಕೊಳ್ಳಬಾರದು. ಅದನ್ನು ಉಳಿಸಿಕೊಳ್ಳಬೇಕು. ಅದರ ಜೊತೆಗೆ, ಕಾಡಿನ ವಿಸ್ತರಣೆನೂ ಮಾಡಬೇಕು. ಕಾಡುಗಳ್ಳರ ಹಾವಳಿ, ಕಾಡ್ಗಿಚ್ಚು, ಗಣಿಗಾರಿಕೆ- ಇವೇ ಕಾಡು ನಶಿಸಲು ಮೂಲ ಕಾರಣ. ಜೊತೆಗೆ ಮರಗಿಡಗಳಿಗೆ ಕಾಯಿಲೆಗಳು ತಗುಲಿ ನಾಶವಾಗುವುದೂ ಇದೆ. ಅರಣ್ಯಗಳಲ್ಲಿ ಹೈ ಟೆನ್ಶನ್ ವೈಯರ್ ಎಳೆಯುತ್ತಿದ್ದೇವೆ. ಅರಣ್ಯಗಳಲ್ಲಿ ಬೃಹತ್ತಾದ ಹೈವೇಗಳನ್ನ ಮಾಡುತ್ತಿದ್ದೇವೆ. ಬೃಹತ್ತಾದ ಅಣೆಕಟ್ಟುಗಳನ್ನ ಕಟ್ಟುತ್ತಿದ್ದೇವೆ. ಇವೆಲ್ಲವೂ ಕಾಡು ನಾಶವಾಗಲು ಕಾರಣ. ಕಾಡು ಕಡಿಮೆಯಾಗುತ್ತಿರುವುದಕ್ಕೆ ಅರಣ್ಯವಾಸಿಗಳ ಮೇಲೆ ಆರೋಪಿಸುವುದು ಸರಿಯಲ್ಲ. ಇಷ್ಟಾದರೂ ಕಾಡು ಉಳಿದಿದೆ ಅಂದರೆ, ಅದಕ್ಕೆ ಅರಣ್ಯವಾಸಿಗಳು ಕಾರಣ. ಹಾಗಾಗಿ ನಮ್ಮ ಅರಣ್ಯನ ಉಳಿಸಬೇಕು ಅಂದಾಗ, ಅಲ್ಲಿನ ಜನರನ್ನು ಉಳಿಸಬೇಕು. ಕಾಡಿನಲ್ಲಿ ನೂರಾರು ಸಾವಿರಾರು ವರ್ಷಗಳಿಂದ ಇರುವಂತಹ ಬುಡಕಟ್ಟು ಜನಾಂಗಳನ್ನು ಉಳಿಸಬೇಕು. ಇವರನ್ನು ಹೊರಗೆ ಹಾಕುವುದರಿಂದ ಕಾಡನ್ನು ಉಳಿಸಲು ಆಗುವುದಿಲ್ಲ” ಎಂದು ಹೇಳಿದರು.

ಮುಂದುವರಿದು,  “ಇವತ್ತು ಕೂಡ, ಗಣಿಗಾರಿಕೆ ಹೆಚ್ಚು ನಡೆಯುವುದು ಕಾಡಿನಲ್ಲಿ! ಅದನ್ನ ನಿಯಂತ್ರಣ ಮಾಡೋದಕ್ಕೆ ನಾವೇನು ಕ್ರಮ ತಗೊಂಡಿದ್ದೀವಿ? ಈ ಹಿನ್ನೆಲೆಯಲ್ಲಿ  ಕಸ್ತೂರಿ ರಂಗನ್ ವರದಿಯನ್ನ ನಾವು ನೋಡಬೇಕು. ಈವರೆಗೆ ಈ ವರದಿ ಸಂಬಂಧ ಏಳು ಸಲ ಕೇಂದ್ರ ಸರ್ಕಾರ ನೋಟಿಫೈ ಮಾಡಿದೆ. ಅನೇಕ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಮುಖ್ಯವಾಗಿ, ಈ ವರದಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ- ಈ ರಾಜ್ಯಗಳಿಗೆ ಸಂಬಂಧಿಸಿದೆ. ಅತಿ ಹೆಚ್ಚು ಪರಿಣಾಮ ಬೀರೋದು ಕರ್ನಾಟಕದ ಮೇಲೆ! ಸುಮಾರು 1500 ಹಳ್ಳಿಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ನೂರಾರು ವರ್ಷಗಳಿಂದ ಸಾವಿರಾರು ವರ್ಷಗಳಿಂದ ಅರಣ್ಯವಾಸಿಗಳು, ಕೃಷಿ ಭೂಮಿಯನ್ನು ಹೊಂದಿದವರು ಇದ್ದಾರೆ. ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲೇ ಜೀವನ ಮಾಡುತ್ತಿದ್ದಾರೆ. ಈಗ ಆ ಜಾಗಗಳನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದರೆ, ಸಮಸ್ಯೆಯಾಗುತ್ತದೆ. ಜನರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ನೀವು ಹೇಳಿದರೂ, ಮೂಲಸೌಕರ್ಯಗಳು ಇಲ್ಲವಾಗುತ್ತವೆ. ಕರೆಂಟ್ ಇರೋಲ್ಲ. ಶಾಲೆ ಇರೋಲ್ಲ. ನೀರಿನ ವ್ಯವಸ್ಥೆ ಇರೋದಿಲ್ಲ. ಇವೆಲ್ಲವೂ ಬಂದ್ ಆಗುತ್ತವೆ. ಅವರನ್ನು ಒಕ್ಕಲೆಬ್ಬಿಸಲಾಗುತ್ತದೆ. ಹೀಗಾದಾಗ ಪುನರ್ವಸತಿ ಕಾರ್ಯಕ್ರಮವೇನು? ಈ ಜನರ ಅಭಿಪ್ರಾಯವನ್ನು ಕೇಳಬೇಕಲ್ಲವೇ?” ಎಂದು ಪ್ರಶ್ನಿಸುತ್ತಾರೆ.

ಇದನ್ನೂ ಓದಿರಿ: ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

“ಸೂಕ್ಷ್ಮ ಪ್ರದೇಶದಿಂದ ಯಾವುದನ್ನು ಹೊರತುಪಡಿಸಬೇಕು, ಯಾವುದನ್ನು ಹೊರತುಪಡಿಸಬಾರದು ಎಂಬುದನ್ನು ಭೌತಿಕ ಪರಿಶೀಲನೆಯಿಂದ ತಿಳಿದುಕೊಳ್ಳಬೇಕಲ್ಲವೇ?  ಹೀಗಾಗಿ ಭೌತಿಕ ಸಮೀಕ್ಷೆಯಾಗಬೇಕು. ಇದನ್ನು ಕೇರಳದಲ್ಲಿ ಮಾಡಿದ್ದಾರೆ. ಕರ್ನಾಟಕದಲ್ಲಿ ಯಾಕೆ ಮಾಡಬಾರದು? ಉನ್ನತ ಮಟ್ಟದ ಸಮಿತಿ ಮಾಡಿ, ಈ ಕಸ್ತೂರಿ ರಂಗನ್ ವರದಿಯಲ್ಲಿ ಏನಿದೆ ಅಂತ ಸಾಮಾನ್ಯ ಜನರಿಗೆ ತಿಳಿಪಡಿಸುವಂತಹ ಒಂದು ಅಧ್ಯಯನವನ್ನು ಕೇರಳದಲ್ಲಿ ನಡೆಸಿದ್ದಾರೆ. ಆ ಅಧ್ಯಯನದ, ಸಾರಾಂಶವನ್ನ ಪುಸ್ತಕಗಳ ರೂಪದಲ್ಲಿ, ಸಣ್ಣ ಪುಸ್ತಕಗಳ ರೂಪದಲ್ಲಿ,  ಜನರ ಮಧ್ಯೆ ಬಿಟ್ಟಿದ್ದಾರೆ. ಅಲ್ಲಿನ ಜನ ವರದಿ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡುತ್ತಿದ್ದಾರೆ. ಇದರಿಂದ, ನಾವು ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದಕ್ಕೆ ಮಹತ್ವ ಕೊಡಬೇಕು ಅಂತ ತಿಳಿಯುತ್ತದೆ” ಎಂದು ಅಭಿಪ್ರಾಯಪಟ್ಟರು.

“ಕಸ್ತೂರಿ ರಂಗನ್ ವರದಿಯಲ್ಲಿ ಇರುವುದೆಲ್ಲವೂ ಕೆಟ್ಟದ್ದಲ್ಲ. ಗಣಿಗಾರಿಕೆ ಬಗ್ಗೆ  ಇರುವ ಅಂಶಗಳನ್ನು ಕಡೆಗಣಿಸಬೇಕಿಲ್ಲ. ಬೃಹತ್ತಾದ ಅಣೆಕಟ್ಟುಗಳ ಬಗ್ಗೆ ಇರುವ ಪ್ರಸ್ತಾಪಗಳಿಗೆ ತಕರಾರು ತೆಗೆಯಬೇಕಿಲ್ಲ” ಎಂದು ಸ್ಪಷ್ಟಪಡಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂದಿಗ್ರಾಮ ಉಪಚುನಾವಣೆ: ಮಮತಾ ಬೆಂಬಲ ಘೋಷಿಸಿದ ಗಂಟೆಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಬಂಧನ!

ಪಶ್ಚಿಮ ಬಂಗಾಳದ ಅತ್ಯಂತ ಹೈ-ಪ್ರೊಫೈಲ್ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ...

ಬೀದರ್‌ | ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಅರ್ಜಿ ಆಹ್ವಾನ

ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಯಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ಧಮ್ಮ ಚಕ್ರ ಪ್ರವರ್ತನ...

ಚಿಕ್ಕಮಗಳೂರು | ಸಿಎಂ ಭೇಟಿ ಹಿನ್ನೆಲೆ: ಸಂಚಾರ ಮಾರ್ಗ ಬದಲಾವಣೆ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಗೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾ‌ರ್...

ಅರಣ್ಯ ಸಂರಕ್ಷಣೆ ಹೆಸರಲ್ಲಿ ಜನರ ಬದುಕು ಬಲಿ ಕೊಡಬೇಡಿ: ಕಸ್ತೂರಿರಂಗನ್ ವರದಿ ವಿರುದ್ಧ ಕರವೇ ಆಕ್ರೋಶ

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ. ಆದರೆ ಪರಿಸರ ಸಂರಕ್ಷಣೆಯ...