ಇಂಗಾಲದ ಹೊರಸೂಸುವಿಕೆಗೆ (Carbon emissions) ಸಂಬಂಧಿಸಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಗಾಗ್ಗೆ ಅನ್ಯಾಯವಾಗಿ ದೂಷಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ಭಾರತಕ್ಕೆ ಹೋಲಿಸಿದರೆ ಅಭಿವೃದ್ಧಿ ಹೊಂದಿದ ದೇಶಗಳೇ ಆರು ಪಟ್ಟು ಹೆಚ್ಚು ತಲಾ ಇಂಗಾಲವನ್ನು ಹೊರಸೂಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಪರಿಸರ ತಜ್ಞರು, ಕಾನೂನು ತಜ್ಞರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಪ್ರಧಾನಿ ಪರಿಸರ ಸಂರಕ್ಷಣೆಯಲ್ಲಿ ಭಾರತದ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಜಾಗತಿಕ ಸರಾಸರಿಗಿಂತ ಭಾರತದ ಪಾಲು ಕಡಿಮೆ:
“ಇಂಗಾಲ ಹೊರಸೂಸುವಿಕೆ ವಿಚಾರದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸಲಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಐತಿಹಾಸಿಕ ಸತ್ಯವೇನೆಂದರೆ, ಇಂದಿಗೂ ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದ ತಲಾ ಇಂಗಾಲ ಹೊರಸೂಸುವಿಕೆಯ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಿದೆ” ಎಂದು ಅವರು ಅಂಕಿ-ಅಂಶಗಳ ಸಮೇತ ಸ್ಪಷ್ಟಪಡಿಸಿದರು.
ಭಾರತಕ್ಕೆ ಹೋಲಿಸಿದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಆರು ಪಟ್ಟು ಹೆಚ್ಚು ಇಂಗಾಲವನ್ನು ಹೊರಸೂಸುತ್ತಿವೆ. ನವದೆಹಲಿಯು ಜಾಗತಿಕ ವೇದಿಕೆಗಳಲ್ಲಿ ಈ ಸತ್ಯವನ್ನು ಬಲವಾಗಿ ಪ್ರತಿಪಾದಿಸುತ್ತಲೇ ಬಂದಿದೆ. “ಪ್ರತಿಯೊಬ್ಬ ಭಾರತೀಯನಿಗೂ ನಾನು ಹೇಳುವುದೇನೆಂದರೆ, ನೀವೂ ಸಹ ಈ ವಾಸ್ತವವನ್ನು ಎಲ್ಲೆಡೆ ಬಲವಾಗಿ ಹೇಳಿ” ಎಂದು ಅವರು ಕರೆ ನೀಡಿದರು.
ಇದೇ ವೇಳೆ ಅಸಮಾಧಾನವೊಂದನ್ನು ಹೊರಹಾಕಿದ ಪ್ರಧಾನಿಯವರು, “ನಾವು ಪರಮಾಣು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೆತ್ತಿಕೊಂಡಾಗಲೆಲ್ಲಾ, ಪರಿಸರದ ಬಗ್ಗೆ ಸದಾ ಮಾತನಾಡುವ ಕೆಲವರು ಆ ಯೋಜನೆಗಳನ್ನು ತಡೆಯಲು ನೇರವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
”ಇದು ನವ ಭಾರತದ ಶಕ್ತಿ. ಪಳೆಯುಳಿಕೇತರ ಇಂಧನ ಬಳಕೆ, ಸೌರಶಕ್ತಿ ಸಾಮರ್ಥ್ಯ ಹೆಚ್ಚಳ ಮತ್ತು ಇಂಗಾಲ ಹೊರಸೂಸುವಿಕೆ ನಿಯಂತ್ರಣ… ಹೀಗೆ ಪರಿಸರ ಸಂರಕ್ಷಣೆಯ ಪ್ರತಿಯೊಂದು ಮಾನದಂಡಗಳಲ್ಲೂ ಭಾರತ ತೋರಿರುವ ಅದ್ಭುತ ಸಾಧನೆ ಇಂದು ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ” ಎಂದು ಪ್ರಧಾನಿ ಮೋದಿ ತಿಳಿಸಿದರು.
ಮೋದಿಗೆ ನೆಟ್ಟಿಗರ ಪ್ರಶ್ನೆಗಳ ಸುರಿಮಳೆ:
ಒಂದೆಡೆ ಪ್ರಧಾನಿಯವರು ಜಾಗತಿಕ ವೇದಿಕೆಗಳಲ್ಲಿನ ಪರಿಸರ ಸಂರಕ್ಷಣೆಯ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಯುಮಾಲಿನ್ಯ ಮಿತಿಮೀರಿ ಜನಸಾಮಾನ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರ ಜೊತೆಗೆ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ಬೃಹತ್ ಪ್ರಮಾಣದಲ್ಲಿ ಅರಣ್ಯ ನಾಶ ಎಗ್ಗಿಲ್ಲದೆ ಸಾಗುತ್ತಿದೆ. ‘ಪರಿಸರ ನಾಶದ ಈ ವಾಸ್ತವ ಹಾಗೂ ಗಂಭೀರ ಸಮಸ್ಯೆಗಳನ್ನು ತಡೆಯಲು ಮತ್ತು ಹಸಿರು ಉಳಿಸಲು ಸರ್ಕಾರ ಈವರೆಗೆ ಯಾವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ?’ ಎಂದು ನೆಟ್ಟಿಗರು ಕಟುವಾಗಿ ಪ್ರಶ್ನಿಸುತ್ತಿದ್ದಾರೆ.




