ವಾಣಿಜ್ಯ ಅಡುಗೆ ಅನಿಲ ಮತ್ತು ಜೀವ ರಕ್ಷಕ ಔಷಧಿಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಎಸ್‌ಯುಸಿಐ(ಕಮ್ಯುನಿಸ್ಟ್) ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ ಖಂಡನೆ ವ್ಯಕ್ತಪಡಿಸಿದ್ದು, ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಖಂಡನೆ ವ್ಯಕ್ತಪಡಿಸಿರುವ ಅವರು, “ಕೇಂದ್ರದ ಬಿಜೆಪಿ ಸರ್ಕಾರವು ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ದೇಶದ ಜನರನ್ನು ರಕ್ಷಿಸುವ ಬದಲು, 19 ಕೆಜಿ ತೂಕದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇವಲ 25 ದಿನಗಳ ಅಂತರದಲ್ಲಿ ಮತ್ತೆ 218 ರೂಪಾಯಿಗಳಷ್ಟು ಹೆಚ್ಚಿಸಿದೆ. ಏಪ್ರಿಲ್ 1ರಿಂದ ಇದರ ಮಾರುಕಟ್ಟೆ ಬೆಲೆ 2,208 ರೂಪಾಯಿ ಆಗಿದೆ. ಇದಕ್ಕೂ ಮುನ್ನ, ಕೇವಲ 25 ದಿನಗಳ ಹಿಂದೆಯಷ್ಟೇ ಬಿಜೆಪಿ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 60 ರೂಪಾಯಿ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50 ರೂಪಾಯಿಗಳಷ್ಟು ಹೆಚ್ಚಿಸಿತ್ತು. ಇವೆಲ್ಲದರ ಜತೆಗೆ, ಸರ್ಕಾರವು ಸುಮಾರು 700 ರಿಂದ 900 ರೂ. ಔಷಧಿಗಳ ಬೆಲೆಯನ್ನೂ ಹೆಚ್ಚಿಸಿದೆ. ಇದು ಸಂಕಷ್ಟದಲ್ಲಿರುವ ಜನರಿಗೆ ದೊಡ್ಡ ಹೊಡೆತ ನೀಡಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನೀರು-ಒಳಚರಂಡಿ ಕರ ಹೆಚ್ಚಳ ರದ್ದುಪಡಿಸುವಂತೆ ಪ್ರತಿಭಟನೆ ನಡೆಸಿದ ಎಸ್‌ಯುಸಿಐ(ಸಿ)
“ಬಹುತೇಕ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯ ಹೊರೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿರುವಾಗ, ಈ ಹೆಚ್ಚಳವು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ. ಇದು ಬಿಜೆಪಿ ಸರ್ಕಾರದ ಜನವಿರೋಧಿ ಗುಣವನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಈ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲು ಜನರು ಮುಂದೆ ಬಂದು ತಮ್ಮ ಪ್ರತಿಭಟನೆಯ ಧ್ವನಿಯನ್ನು ಎತ್ತಬೇಕು” ಎಂದು ಎಸ್‌ಯುಸಿಐ(ಸಿ) ವಿಜಯಪುರ ಜಿಲ್ಲಾ ಸಮಿತಿಯ ಪರವಾಗಿ ಕರೆ ನೀಡಿದರು.




